ಆಗಸ್ಟ್ 9 ರಂದು, ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆ ಹಿಜಾಬ್, ಬುರ್ಖಾ, ನಖಾಬ್, ಬ್ಯಾಡ್ಜ್ ಕ್ಯಾಪ್ ಸೇರಿದಂತೆ ಕೆಲವು ಪರಿಕರಗಳನ್ನು ಧರಿಸುವುದನ್ನು ನಿಷೇಧಿಸುವ ಆದೇಶವನ್ನು ಭಾಗಶಃ ತಡೆಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಭಾರತದ ಎಲ್ಲ ನಾಗರಿಕರಿಗೆ ಖಾತರಿಪಡಿಸಿದ ಸಮಾನತೆಗೆ ಅವಕಾಶ ನೀಡಿತು. ಹಿಜಾಬ್, ಬುರ್ಖಾ ನಿಷೇಧಿಸಿ ಕೋಮುವಾದಿ ಮನಸ್ಥಿತಿಯ ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್ ಜಿ ಆಚಾರ್ಯ ಮತ್ತು ಡಿ ಕೆ ಮರಾಠೆ ಕಾಲೇಜು ಹೊರಡಿಸಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಪರಾಕಿ ನೀಡಿದೆ.
ಕಾಲೇಜಿನ ಆದೇಶವನ್ನು ಪ್ರಶ್ನಿಸುವುದರ ಜೊತೆ ತಮ್ಮ ಆಯ್ಕೆಯ ವಸ್ತ್ರಗಳನ್ನು ಧರಿಸಲು ಅವಕಾಶ ಕಲ್ಪಿಸಬೇಕೆಂದು ಈ ಕಾಲೇಜಿನ 9 ವಿದ್ಯಾರ್ಥಿನಿಯರು ನ್ಯಾಯಾಲಯದ ಮೊರೆ ಹೋಗಿದ್ದರು. ಕಾಲೇಜಿನ ಪರವಾಗಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ವಿದ್ಯಾರ್ಥಿನಿಯರಿಗೆ ಹಿನ್ನಡೆಯುಂಟಾಗಿತ್ತು. ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಮೇಲ್ಮನವಿಯ ವಿಚಾರಣೆ ನಡೆಸಿದ ಸಂಜೀವ್ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ, “ತಿಲಕ ಧರಿಸಿದ ವಿದ್ಯಾರ್ಥಿಯನ್ನು ಕಾಲೇಜಿಗೆ ಪ್ರವೇಶಿಸುವುದನ್ನು ತಡೆಯುತ್ತೀರಾ? ಸ್ವಾತಂತ್ರ್ಯ ಬಂದು ಎಷ್ಟೋ ವರ್ಷಗಳಾದ ನಂತರ ಇದನ್ನೆಲ್ಲಾ ಹೇಳುತ್ತಿರುವುದು ದುರದೃಷ್ಟಕರ. ವಿದ್ಯಾರ್ಥಿಯು ಬಿಂದಿಯನ್ನು ಧರಿಸಿದರೆ ನೀವು ಅವರ ಪ್ರವೇಶವನ್ನು ನಿಲ್ಲಿಸುತ್ತೀರಾ? ಆಕೆ ಏನು ಧರಿಸಬೇಕೆಂದು ನಿರ್ಧರಿಸಲು ವಿದ್ಯಾರ್ಥಿನಿಗೆ ಸ್ವತಂತ್ರ ನೀಡಬೇಕಲ್ಲವೆ? ಕಾಲೇಜು ಆವರಣವನ್ನು ರಾಜಕೀಯ ಹಾಗೂ ಧಾರ್ಮಿಕ ಕಾರ್ಯಾಚರಣೆಯ ಮೈದಾನವಾಗಿಸಲು ಯಾರಿಗೂ ಅವಕಾಶ ನೀಡಬಾರದು” ಎಂಬಂತಹ ಕಠಿಣ ಪದಗಳಲ್ಲಿ ಕಾಲೇಜಿನ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಿದೆ.
ಕಾಲೇಜಿನ ನಿರ್ಧಾರ ಮಹಿಳೆಯರ ಸಬಲೀಕರಣದ ವಿರುದ್ಧವಿದೆ. ಧರ್ಮವನ್ನು ಸೂಚಿಸುವ ಯಾವುದೇ ಉಡುಪು ಧರಿಸಬಾರದು ಎನ್ನುವುದಾದರೆ, ವಿದ್ಯಾರ್ಥಿಗಳ ಹೆಸರು ಗಮನಿಸಿದರೆ ಅವರು ಯಾವ ಧರ್ಮದವರು ಎಂದು ತಿಳಿಯುತ್ತದೆಯಲ್ಲವೆ? ಹಾಗಾಗಿ, ಅಂಥ ನಿಯಮ ಹೇರಬೇಡಿ ಎಂದು ಸುಪ್ರೀಂ ಕೋರ್ಟ್ ಕಾಲೇಜಿಗೆ ಎಚ್ಚರಿಕೆಯನ್ನು ಸಹ ನೀಡಿದೆ. ಅಲ್ಲದೆ ಮತ್ತೊಂದು ಧರ್ಮದವರು ಕೇಸರಿ, ಶಲ್ಯ ಮುಂತಾದ ಧರ್ಮಾಧಾರಿತ ವಸ್ತ್ರಗಳನ್ನು ತೊಟ್ಟು ಬರುವ ಆತಂಕದ ವಿದ್ಯಮಾನಗಳಿಗೂ ಸಂದೇಶ ನೀಡಿದ್ದು, ಈ ಆದೇಶವನ್ನು ಯಾರೊಬ್ಬರು ದುರ್ಬಳಕೆ ಮಾಡಿಕೊಳ್ಳಬಾರದು. ಸಂವಿಧಾನವು ಧರ್ಮ, ಜನಾಂಗ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ. ಸಮಾನತೆಯ ಹಾದಿಯಲ್ಲಿ ಸಮಾಜ ಮುನ್ನಡೆಯಬೇಕು ಎಂದು ಮಹತ್ವದ ಸಂದೇಶವನ್ನು ಸಾರಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಅವಾಂತರ ಮತ್ತು ಅಧಿಕಾರಸ್ಥರ ಆತುರ
ಕಳೆದ ಒಂದು ದಶಕದಲ್ಲಿ, ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಒಂದು ಧರ್ಮದ ವಿರುದ್ಧದ ಆಹಾರ ಪದ್ಧತಿ (ಗೋಮಾಂಸ ನಿಷೇಧ) ಮತ್ತು ಉಡುಪುಗಳ ವಿಷಯದಲ್ಲಿ ಮೂಲಭೂತ ಸ್ವಾತಂತ್ರ್ಯಗಳು ಮತ್ತು ಸಮಾನತೆಗಳನ್ನು ತಗ್ಗಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಿವೆ. ಆದರೆ ಹೆಚ್ಚು ವಿವಾದವಾಗಿ ಮಾರ್ಪಟ್ಟಿದ್ದು 2022ರಲ್ಲಿ ಕರ್ನಾಟಕದಲ್ಲಿ. ಉಡುಪಿಯ ಶಾಲೆಯೊಂದರಲ್ಲಿ ಸಮವಸ್ತ್ರದ ಹೆಸರಲ್ಲೇ ಹಿಜಾಬ್ ನಿರ್ಬಂಧ ವಿಧಿಸಲು ಶುರು ಮಾಡಲಾಗಿತ್ತು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕಿನ ಪರವಾಗಿ ನಿಲ್ಲುವ ಬದಲು ಸಂಘ ಪರಿವಾರದ ಅಜೆಂಡಾವನ್ನು ಬೆಂಬಲಿಸಿ ಹಿಜಾಬ್ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ವಿದ್ಯಾರ್ಥಿನಿಯರನ್ನು ಕಾಲೇಜುಗಳಿಂದ ಹೊರ ಹಾಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನವನ್ನು ಹರಾಜು ಹಾಕಿತ್ತು. ತಮ್ಮ ತಮ್ಮ ನಡುವೆಯೇ ಬುಸುಗುಟ್ಟುತ್ತಿದ್ದ ಹಲವು ಬಿಜೆಪಿ ನಾಯಕರು ಹಿಜಾಬ್ ವಿರುದ್ಧ ಕೀಳುಮಟ್ಟದಲ್ಲಿ ಬಹಿರಂಗವಾಗಿ ಹೇಳಿಕೆ ನೀಡುವುದಕ್ಕೆ ಶುರು ಮಾಡಿದರು. ಕೆಲವು ಬಿಜೆಪಿ ನಾಯಕರುಗಳು ಹಿಜಾಬ್ ಧರಿಸಿದವರನ್ನು ಭಯೋತ್ಪಾದಕರು ಎಂದು ಸಂಬೊಧಿಸುವ ನೀಚ ಕೃತ್ಯಕ್ಕೂ ಕೈಹಾಕಿದರು. ಬಿಜೆಪಿ ಸರ್ಕಾರದ ಈ ನಿರ್ಧಾರ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ಕರ್ನಾಟಕಕ್ಕೆ ಕಳಂಕ ತಂದಿತ್ತು.
ಪ್ರಸ್ತುತ ಮುಂಬೈ ಕಾಲೇಜಿನ ಸುತ್ತೋಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ಕರ್ನಾಟಕದಲ್ಲೂ ಹಿಜಾಬ್ ಹೆಸರಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜವ್ಯವೆಸಗಿದವರಿಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಮುಖಭಂಗವಾಗಿದ್ದು, ಆದೇಶದಿಂದ ಕಲಿಯಬೇಕಾದದ್ದು ಏನೆಂಬುದು ಸ್ಪಷ್ಟವಾಗಿದೆ.
ರಾಜ್ಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದರೂ ಸುಪ್ರೀಂ ಕೋರ್ಟ್‌ಗೆ ಪ್ರಕರಣ ದಾಖಲಾಗಿ ದ್ವಿಸದಸ್ಯ ಪೀಠದಿಂದ ವಿಭಜಿತ ತೀರ್ಪು ಪ್ರಕಟವಾಯಿತು. ಹಿಜಾಬ್ ವಿಷಯ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ. ನಿರ್ದಿಷ್ಟ ಪ್ರಕರಣದಲ್ಲಿ ಒಂದೇ ರೀತಿಯಲ್ಲಿ ನಿರ್ಧರಿಸಲು ಪೀಠಕ್ಕೆ ಸಾಧ್ಯವಾಗದಿದ್ದಾಗ ಭಿನ್ನಮತದ ತೀರ್ಪು ಹೊರ ಬರುತ್ತದೆ. ಪೀಠದಲ್ಲಿ ಸಮಸಂಖ್ಯೆಯ ನ್ಯಾಯಮೂರ್ತಿಗಳಿದ್ದಾಗ ಹೀಗಾಗುವುದು ಸಾಮಾನ್ಯ. ಅದಕ್ಕಾಗಿಯೇ, ತ್ರಿಸದಸ್ಯ ಪೀಠ, ಐವರು ಅಥವಾ ಅದಕ್ಕಿಂತ ಹೆಚ್ಚಿನ ನ್ಯಾಯಮೂರ್ತಿಗಳಿರುವ ಪೀಠಗಳನ್ನು ರಚಿಸಲಾಗುತ್ತದೆ.
ಉತ್ತರ ಪ್ರದೇಶ ಸೇರಿ ಹಲವು ಕಡೆ ನಡೆದಿರುವ ಘಟನೆ
ಮಹಾರಾಷ್ಟ್ರದ ಕಾಲೇಜುಗಳ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಒಂದು ವಾರದ ಹಿಂದೆ, ಇದೇ ರೀತಿಯ ನಿಷೇಧದ ವಿರುದ್ಧ ಪ್ರತಿಭಟಿಸಿ ಸುಮಾರು 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದಕ್ಕೆ ಹಿಜಾಬ್ ಧರಿಸಿ ಬಂದಿದ್ದರು. ಕಾಲೇಜು ಪ್ರವೇಶ ನಿರಾಕರಿಸಿದ ನಂತರ ಅವರು ಮನೆಗೆ ತೆರಳಬೇಕಾಯಿತು. ಹಿಜಾಬ್ ಧರಿಸುವುದು ಶಾಲಾ ವಸ್ತ್ರಸಂಹಿತೆಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದೇ ರೀತಿಯ ಘಟನೆ ಹಲವು ಕಡೆಗಳಲ್ಲಿ ಈ ಹಿಂದೆಯೂ ನಡೆದಿದೆ, ನಡೆಯುತ್ತಲೇ ಇರುತ್ತವೆ.
ಕೇಂದ್ರವು ಒಳಗೊಂಡಂತೆ ದೇಶದ ಹಲವು ರಾಜ್ಯಗಳಲ್ಲಿ ಕೋಮು ಮನಸ್ಥಿತಿಯುಳ್ಳವರು ಅಧಿಕಾರ ನಡೆಸುತ್ತಿರುವ ಕಾರಣ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಶಾಲಾ ಕಾಲೇಜುಗಳ ನಿರ್ಧಾರವು ಯುವಜನರ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಗಳಿಂದ ಶಾಶ್ವತ ಉತ್ತರ ದೊರೆಯುವುದು ದೂರದ ಮಾತಾಗಿದೆ. ನ್ಯಾಯಾಂಗವೇ ಇದನ್ನು ಸರಿಪಡಿಸಿ ಸಮಾಜವನ್ನು ಮೇಲೆತ್ತುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.