ಪಠ್ಯಪುಸ್ತಕಗಳಲ್ಲಿ ಸಂವಿಧಾನದ ‘ಪೀಠಿಕೆ’ ಕೈಬಿಟ್ಟ ಮೋದಿ ಸರ್ಕಾರ; ಮನುವಾದಿಗಳ ಪೈಶಾಚಿಕ ಕೃತ್ಯ

Date:

Advertisements

ಶಾಲಾ ಮಕ್ಕಳಿಗಾಗಿ ವಿತರಿಸಲು ನ್ಯಾಷನಲ್ ಕೌನ್ಸಿಲ್ ಆಫ್‌ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಸಿದ್ದಪಡಿಸುವ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪೀಠಿಕೆಯನ್ನು ತೆಗೆದುಹಾಕಲಾಗಿದೆ. ಈ ನಿಲುವಿನ ಹಿಂದೆ, ಸಂವಿಧಾನದ ಆಶಯ, ಉದ್ದೇಶ ಮತ್ತು ತತ್ವಗಳ ಬಗ್ಗೆ ವಿದ್ಯಾರ್ಥಿಗಳು ಕಲಿಯುವುದನ್ನು ಮತ್ತು ಅರ್ಥೈಸಿಕೊಳ್ಳುವುದನ್ನು ತಡೆಯುವ ಮೋದಿ ಸರ್ಕಾರದ ದುರುದ್ದೇಶವಿದೆ ಎಂಬ ಮಾತುಗಳು ದೇಶಾದ್ಯಂತ ಕೇಳಿಬರುತ್ತಿವೆ.

ಮೋದಿ ಸರ್ಕಾರವು ಸಂವಿಧಾನದ ‘ಪ್ರಸ್ತಾವನೆ’ಯ ವಿಚಾರದಲ್ಲಿ ಪದೇ-ಪದೇ ಆಟ ಆಡುತ್ತಿದೆ. ಕೇಂದ್ರ ಸರ್ಕಾರದ ಇಂತಹ ನಿರ್ಧಾರಗಳು, ನಡೆಗಳು ದೇಶವನ್ನು ಆತಂಕ ಮತ್ತು ಅನುಮಾನಕ್ಕೀಡುಮಾಡುತ್ತಿದೆ. 2015ರಲ್ಲಿ 66ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಮೋದಿ ಸರ್ಕಾರವು ದೇಶದಾದ್ಯಂತ ಹಲವಾರು ಪತ್ರಿಕೆಗಳಿಗೆ ‘ಪ್ರಸ್ತಾವನೆ’ಯ ಜಾಹೀರಾತು ನೀಡಿತ್ತು. ದುರಂತವೆಂದರೆ, ಅದರಲ್ಲಿ, ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕೈಬಿಟ್ಟಿತ್ತು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

image 9 2

ವಿರೋಧಾಭಾಸವೆಂದರೆ, ಅದೇ ಜಾಹೀರಾತಿನಲ್ಲಿ ಮೋದಿಯವರ ಒಂದು ಉಲ್ಲೇಖವೂ ಇತ್ತು. ಅದು, ”ಭಾರತ ಸರ್ಕಾರಕ್ಕೆ ಒಂದೇ ಒಂದು ಪವಿತ್ರ ಗ್ರಂಥವಿದೆ. ಅದೇ ಸಂವಿಧಾನ. ಭಾರತ ಸರ್ಕಾರವು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಲಾಗಿತ್ತು. ಆದರೆ, ‘ಪೀಠಿಕೆ’ಯಲ್ಲಿ ‘ಜಾತ್ಯಾತೀತ’ ಮತ್ತು ‘ಸಮಾಜವಾದಿ’ ಪದವನ್ನು ಕೈಬಿಟ್ಟು, ತನ್ನ ಕೋಮುವಾದಿ ಧೋರಣೆಯನ್ನು ಪ್ರದರ್ಶಿಸಿತ್ತು. ಈ ಎರಡೂ ಪದಗಳನ್ನು, 1976 ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ‘ಪ್ರಸ್ತಾವನೆ’ಗೆ ಸೇರಿಸಲಾಗಿತ್ತು. ಆ ಪದಗಳನ್ನು ಕೋಮುವಾದಿ ಬಿಜೆಪಿ ಸರ್ಕಾರ ತೆಗೆದು, ”ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿ ರೂಪಿಸಲು ಗಂಭೀರವಾಗಿ ನಿರ್ಧರಿಸಿದ್ದೇವೆ” ಎಂದು ಜಾಹೀರಾತು ನೀಡಿತ್ತು.

Advertisements

2015ರ ಆ ಜಾಹೀರಾತಿನಲ್ಲಿ ಪ್ರಕಟವಾದ ಛಾಯಾಚಿತ್ರವು ಭಾರತದ ಧಾರ್ಮಿಕ ಬಹುತ್ವವನ್ನು ಪ್ರತಿನಿಧಿಸುವ ಬದಲು ಹಿಂದು ಧಾರ್ಮಿಕತೆಗೆ ಸೀಮಿತವಾಗಿತ್ತು. ಅದರಲ್ಲಿ, ಬುಡಕಟ್ಟು ಜೀವನಕ್ಕೆ ಸಂಬಂಧಿಸಿದ ವೈಶಿಷ್ಟ್ಯಗಳು, ಪೇಟ ಧರಿಸುವ ಸಿಖ್ ಹಾಗೂ ಟೋಪಿ ಧರಿಸುವ ಮುಸ್ಲಿಮರನ್ನು ಬಿಟ್ಟುಬಿಡಲಾಗಿತ್ತು. ಬಹುತ್ವವನ್ನು ಕಡೆಗಣಿಸಿ, ಹಿಂದುತ್ವವನ್ನು ಪ್ರತಿಪಾದಿಸಿತ್ತು.

image 9 3

ಆಗ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ‘ಪೀಠಿಕೆ’ಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಇಟ್ಟುಕೊಳ್ಳಬೇಕೇ ಎಂದು ಚರ್ಚಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಬಿಜೆಪಿ ಸರ್ಕಾರದ ಧೋರಣೆಯಲ್ಲಿ ಸಮರ್ಥಿಸಿಕೊಂಡಿದ್ದರು.

2023ರ ಸೆಪ್ಟೆಂಬರ್‌ನಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆಯ ಸಮಯದಲ್ಲಿ ಸಂವಿಧಾನದ ಪ್ರತಿಗಳನ್ನು ಸಂಸತ್ತಿನ ಸದಸ್ಯರಿಗೆ ವಿತರಿಸಿದಾಗಲೂ ‘ಪೀಠಿಕೆ’ಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಕೈಬಿಟ್ಟು, ಮತ್ತೆ ಸಂವಿಧಾನದ ಮೇಲಿನ ತನ್ನ ದಾಳಿಯನ್ನು ಪುನರಾವರ್ತಿಸಿತ್ತು. ಆಗ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ‘ಹೊಸ ಸಂಸತ್ತಿನ ಮೊದಲ ಅಧಿವೇಶನವನ್ನು ಗುರುತಿಸಲು ಸಂಸದರಿಗೆ ಹಂಚಲಾದ ಸಂವಿಧಾನದ ಪ್ರತಿಗಳಲ್ಲಿನ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳಿಲ್ಲ’ ಎಂದು ಆರೋಪಿಸಿದ್ದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ‘ಸಂವಿಧಾನದ ಮೂಲ ಪ್ರತಿಯನ್ನು ನೀಡಿರಬಹುದು’ ಎಂದು ಹೇಳುವ ಮೂಲಕ ಚರ್ಚೆಗೆ ತಿಪ್ಪೆ ಸಾರಿಸುವ ಕೆಲಸ ಮಾಡಿದರು.

ಆದಾಗ್ಯೂ, ಚೌಧರಿ, ”ಬಿಜೆಪಿಗರು ನಮಗೆ ಮೂಲ ಸಂವಿಧಾನದ ಪ್ರತಿಗಳನ್ನೇ ನೀಡಿದ್ದಾರೆ ಎಂದು ಹೇಳಬಹುದು. ಆದರೂ, ಇದರ ಹಿಂದೆ ಉದ್ದೇಶಪೂರ್ವಕ ಅಜೆಂಡಾ ಇದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.

ರಾಹುಲ್ ಸಂವಿಧಾನ

ಇದೆಲ್ಲದರ ನಡುವೆ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ‘ಸಂವಿಧಾನದ ಉಳಿವು’ ಚುನಾವಣಾ ವಿಷಯವಾಗಿ ಭಾರೀ ಚರ್ಚೆಯಲ್ಲಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮೆಲ್ಲ ಬಹುತೆಕ ಭಾಷಣಗಳಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡಿರುತ್ತಿದ್ದರು. ಸಂವಿಧಾನವು ಚುನಾವಣಾ ವಿಷಯವಾದಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ತಮ್ಮ ಸರ್ಕಾರವು ಜಾತ್ಯತೀತತೆಯ ಆದರ್ಶಕ್ಕೆ ಬದ್ದವಾಗಿರುತ್ತದೆ. ಬಿಜೆಪಿ 400+ ಲೋಕಸಭಾ ಸ್ಥಾನಗಳನ್ನು ಪಡೆದ ನಂತರವೂ ಮೋದಿ ಸರ್ಕಾರ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಪದವನ್ನು ತೆಗೆದುಹಾಕುವುದಿಲ್ಲ’ ಎಂದು ಹೇಳಿಕೆ ನೀಡಿದರು.

ಬಿಜೆಪಿಯ ಉನ್ನತ ನಾಯಕರು ‘ಜಾತ್ಯತೀತತೆ’ಯ ಬಗ್ಗೆ ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಸಮಯದಲ್ಲೇ, ಎನ್‌ಸಿಇಆರ್‌ಟಿ ಪುಸ್ತಕಗಳಿಂದ ಪೀಠಿಕೆಯನ್ನು ಕೈಬಿಡಲಾಗಿದೆ. ಇದು ಶಿಕ್ಷಣ ಪಡೆಯವ ಎಳೆ ಮಕ್ಕಳಲ್ಲಿ ಸಾಂವಿಧಾನಿಕ ನೈತಿಕತೆಯನ್ನು ತುಂಬುವ ಬಗ್ಗೆ ಮೋದಿ ಆಡಳಿತವು ಗಂಭೀರವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಅಂದಹಾಗೆ, 2020ರಲ್ಲಿ ಮೋದಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ದೇಶಾದ್ಯಂತ ನಡೆದ ಆಂದೋಲನದಲ್ಲಿ ಸಂವಿಧಾನದ ಪೀಠಿಕೆಯು ಕೇಂದ್ರ ಬಿಂದುವಾಗಿತ್ತು. ಜನರು ತಮ್ಮ ನಂಬಿಕೆಗಳು ಮತ್ತು ಭಾಷೆಗಳನ್ನು ಲೆಕ್ಕಿಸದೆ ತಾವೆಲ್ಲರೂ ಸಮಾನ ನಾಗರಿಕರೆಂದು ಮೋದಿ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಲು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ‘ಪೀಠಿಕೆ’ಯನ್ನು ಓದುತ್ತಿದ್ದರು. ಆ ಸಾಮೂಹಿಕ ಓದು ಭಾರತದ ಯಾವುದೇ ಧಾರ್ಮಿಕ ಪಂಥವನ್ನು ನಿರ್ಧರಿಸದೆ ಪೌರತ್ವದ ಕಲ್ಪನೆಯನ್ನು ಎತ್ತಿಹಿಡಿಯಲು ಅಗಾಧವಾದ ಉತ್ತೇಜನ ನೀಡಿತು.

ಸಂವಿಧಾನದ ‘ಜಾತ್ಯತೀತತೆ’ಗೆ ಸಿಎಎ ವ್ಯತಿರಿಕ್ತವಾಗಿದೆ. ಇದು ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಹಿಂದುಗಳು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಹಾಗೂ ಪಾರ್ಸಿಗಳಿಗೆ ಮಾತ್ರ ಭಾರತೀಯ ಪೌರತ್ವವನ್ನು ನೀಡುವುದಾಗಿ ಹೇಳುತ್ತದೆ ಮತ್ತು ಮುಸ್ಲಿಮರು ಹಾಗೂ ಶ್ರೀಲಂಕಾದ ತಮಿಳರನ್ನು ಪೌರತ್ವದಿಂದ ಹೊರಗಿಟ್ಟಿದೆ. ಈ ಕಾಯ್ದೆಯು ಸಂವಿಧಾನದ ಆಶಯಕ್ಕೆ ವಿರುದ್ಧವೂ, ಜಾತ್ಯತೀತತೆಗೆ ಧಕ್ಕೆಯನ್ನೂ ಉಂಟುಮಾಡುತ್ತದೆ ಎಂದು ಇಡೀ ದೇಶಾದ್ಯಂತ ಎಲ್ಲ ಜಾತಿ-ಧರ್ಮಗಳ ಜನರು ಬೀದಿಗಳಿದು ಹೋರಾಟ ನಡೆಸಿದ್ದು.

ದೇಶಾದ್ಯಂತ ನಡೆಯುತ್ತಿದ್ದ ಹೋರಾಟ, ಪ್ರತಿಭಟನಾ ಸಭೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದ ಜನರು, ಸಂವಿಧಾನದ ‘ಪೀಠಿಕೆ’ಯನ್ನು ಓದುವ ಮೂಲಕ, ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ’ವನ್ನು ಎತ್ತಿಹಿಡಿಯುವ ಸಂವಿಧಾನದ ಮಾರ್ಗದರ್ಶಿ ಮೌಲ್ಯಗಳು ಮತ್ತು ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣತಂತ್ರ’ದ ಆಶಯಗಳನ್ನು ಒತ್ತಿಹೇಳುತ್ತಿದ್ದರು. ಪೀಠಿಕೆಯ ಪ್ರತಿಯೊಂದು ಪದವೂ ಬಿಜೆಪಯ ಹಿಂದುತ್ವಕ್ಕೆ ಸವಾಲಾಗಿವೆ.

image 9 4

ಭಾರತದ ಸಂವಿಧಾನವು ದೇಶದ ಜನರು ಸಮಾನ ನಾಗರಿಕರಾಗಿ ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಜನ ಚಳವಳಿಯ ಆಧಾರವಾಗಿದೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ವಂಚಿನೆ ಮತ್ತು ಬಹಿಷ್ಕಾರಕ್ಕೊಳಗಾದವರು ತಮ್ಮ ಹಕ್ಕುಗಳನ್ನು ಪಡೆಯಲು ಸಂವಿಧಾನದ ಪೀಠಿಕೆ ಹಿಡಿದು ಹೋರಾಟ ನಡೆಸುತ್ತಿರುವುದು ಮೋದಿ ಆಡಳಿತದ ಸಂಪೂರ್ಣ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ದೇಶದ ಜನರು ತಮ್ಮ ಜೀವಾಳ ಎಂದೇ ನಂಬಿರುವ ಸಂವಿಧಾನವನ್ನು ಬದಲಿಸುವ, ತಿದ್ದುಪಡಿ ಮಾಡುವ ಹೇಳಿಕೆಗಳನ್ನು ಬಿಜೆಪಿ ನಾಯಕರು ಆಗ್ಗಾಗ್ಗೆ ಹೇಳುತ್ತಲೇ ಇದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತರುತ್ತಾರೆ ಎಂಬ ಚರ್ಚೆ ಇಡೀ ದೇಶಾದ್ಯಂತ ಹಬ್ಬಿಕೊಂಡಿತ್ತು. ಚುನಾವಣೆಯು ಸಂವಿಧಾನದ ಅಳಿವು – ಉಳಿವಿನ ಪ್ರಶ್ನೆಯಾಗಿ ಮಾರ್ಪಟ್ಟಿತ್ತು. ಪರಿಣಾಮವಾಗಿ, ಮೋದಿ ನೇತೃತ್ವದ ಬಿಜೆಪಿ ಲೋಕಸಭೆಯಲ್ಲಿ ಕನಿಷ್ಠ ಬಹುಮತವನ್ನೂ ಪಡೆಯಲಾಗದ ದುಸ್ಥಿತಿಗೆ ಕುಸಿಯಿತು.

‘ಜಟ್ಟಿ ಜಾರಿ ಮಣ್ಣಿಗೆ ಬಿದ್ರೂ, ಮೀಸೆ ಮಣ್ಣಾಗಿಲ್ಲ’ ಅನ್ನುವಂತೆ ಮೋದಿ-ಶಾ ಮತ್ತು ಬಿಜೆಪಿ ಎನ್‌ಡಿಎ ಮಿತ್ರಪಕ್ಷಗಳ ದಯೆಯಿಂದ ಸರ್ಕಾರ ರಚಿಸಿದ್ದರೂ, ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಲು ಯತ್ನಿಸುತ್ತಲೇ ಇವೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಡುವ ಮೂಲಕ ತನ್ನ ಸರ್ವಾಧಿಕಾರಿ ಮತ್ತು ಸಂವಿಧಾನ ವಿರೋಧಿ ಧೋರಣೆಯನ್ನು ಪ್ರತಿಧ್ವನಿಸುತ್ತಿದೆ. ಆದರೆ, ದೇಶದ ಜನರು ಸಂವಿಧಾನವನ್ನು ಅಪ್ಪಿಕೊಂಡಿದ್ದಾರೆ. ಅವರಿಂದ ಸಂವಿಧಾನವನ್ನು ಕಿತ್ತುಕೊಳ್ಳಲಾಗಲೀ, ಬೇರ್ಪಡಿಸಲಾಗಲೀ ಸಾಧ್ಯವಿಲ್ಲ ಎಂಬುದನ್ನು ಮೋದಿ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X