ರಸ್ತೆಯಲ್ಲಿ ಹೆಣ್ಣು ಮಕ್ಕಳು ಹಾಗೂ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿರುವ ವೇಳೆಯಲ್ಲಿ ರೀಲ್ಸ್ ಹುಚ್ಚಾಟಕ್ಕಾಗಿ ಬೈಕ್‌ನಲ್ಲಿ ಜೋರಾಗಿ ಸೌಂಡ್ ಮಾಡುತ್ತ ಜನರಿಗೆ ಭಯ ಉಂಟು ಮಾಡುತ್ತಿದ್ದ ಯುವಕ ಈಗ ಪೊಲೀಸರ ಅತಿಥಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಂಧಿತ ಯುವಕನನ್ನು ಸಚಿನ್ ಎಂದು ಗುರುತಿಸಲಾಗಿದೆ. ಈತ ರೀಲ್ಸ್‌ಗಾಗಿ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತ ಜನ ಹೆಣ್ಣು ಮಕ್ಕಳು ಇರುವ ಸ್ಥಳದಲ್ಲಿ ಬೈಕ್‌ನಿಂದ ಜೋರಾಗಿ ಸೌಂಡ್ ಮಾಡುತ್ತ ಜನರಿಗೆ ಭಯ ಉಂಟಾಗುವಂತೆ ಮತ್ತು ಪ್ರಾಣಿಗಳನ್ನು ಪ್ರಚೋದಿಸುವ ರೀತಿಯಲ್ಲಿ ಚಲಾಯಿಸುತ್ತಿದ್ದ. ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿತ್ತು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ಸೂಚನೆಯ ಮೇರೆಗೆ ಹುಬ್ಬಳ್ಳಿ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಯುವಕನನ್ನು ಬಂಧಿಸಲಾಗಿದೆ.
ಅಲ್ಲದೇ, ಬೈಕ್ ಸೀಝ್ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಆರೋಪಿ ಯುವಕನ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿತನು ಕೆಟಿಎಂ ಹಾಗೂ ಬೆನೆಲ್ಲಿ ಎಂಬ ಎರಡು ಬೈಕ್ ಗಳನ್ನು ಬಳಸಿ ರೀಲ್ಸ್ ಮಾಡಿದ್ದು, ಬೆನೆಲ್ಲಿ ಬೈಕ್ ಈಗಾಗಲೇ ಮಾರಾಟ ಮಾಡಿದ್ದಾನೆ. ಕೆಟಿಎಂ ಬೈಕನ್ನು ಸೀಝ್ ಮಾಡಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಯುವಕ ಸಚಿನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದಾಗಿ ವರದಿಯಾಗಿದೆ.
ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಲು ಮನವಿ
ಈ ಬಗ್ಗೆ ಹೇಳಿಕೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದಾರೆ.
“ಬೈಕ್ ಸೇರಿದಂತೆ ದ್ವಿಚಕ್ರ ವಾಹನ ಬಳಸುತ್ತಿರುವ ತಮ್ಮ ಮಕ್ಕಳಲ್ಲಿ ಹೆಲ್ಮೆಟ್ ಧರಿಸುವಂತೆ, ತ್ರಿಬಲ್ ರೈಡ್ ಮಾಡದಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಲು ತಿಳಿಸಬೇಕು. ಆ ಮೂಲಕ ಇಂತಹ ಘಟನೆಗಳಲ್ಲಿ ಸಿಲುಕದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
“ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಮತ್ತಿತರ ವಿಷಯಗಳ ಕುರಿತು ಪ್ರಚೋದನಕಾರಿ, ದ್ವೇಷಪೂರಿತ ವಿಡಿಯೋ, ಪೋಸ್ಟ್-ಕಾಮೆಂಟ್ ಗಳನ್ನು ಹಾಕುವ ಅವುಗಳನ್ನ ಶೇರ್ ಮಾಡಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹಾಳುಗೆಡುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಇದೇ ವೇಳೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
