ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ದಲಿತ ಎಂಬ ಕಾರಣಕ್ಕೆ ಕ್ಷೌರ ಮಾಡಲು ನಿರಾಕರಿಸಿ ಕೊಲೆ ಮಾಡಿದ ಘಟನೆಯನ್ನು ಖಂಡನೀಯ ಎಂದು ದಲಿತ ಸೇನೆ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ತಿಳಿಸಿದ್ದಾರೆ.
ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಬಂಡಿಹಾಳನನ್ನು ಕ್ಷೌರಿಕ ಮುದುಕಪ್ಪ, ನೀನು ಹರಿಜನ ಇದ್ದೀಯಾ. ನಿನಗೆ ಕ್ಷೌರ ಮಾಡುವುದಿಲ್ಲ ಅಂತ ತಕರಾರು ಮಾಡಿ ಕೊನೆಗೆ ಕಟಿಂಗ್ ಮಾಡುವ ಕತ್ತರಿಯಿಂದ ಹೊಟ್ಟೆಗೆ ಬಲವಾಗಿ ತಿವಿದು ಕೊಲೆ ಮಾಡಿದ್ದಾನೆ. 21 ನೇ ಶತಮಾನದಲ್ಲೂ ಕೂಡ ಅಸ್ಪೃಶ್ಯತೆ ಆಚರಿಸಲಾಗುತ್ತದೆ ಎಂದರೆ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ತಿಳಿಸಿದರು.
ಈ ಘಟನೆಯ ನೇರ ಹೊಣೆ ಸರಕಾರ ಮತ್ತು ಅಧಿಕಾರಿಗಳದ್ದು. ಅಧಿಕಾರಿಗಳ ಬೇಜವಬ್ದಾರಿತನದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕೊಪ್ಪಳ ಜಿಲ್ಲೆಯ ಡಿ.ಸಿ.ಎಸ್.ಪಿ.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಯಲಬುರ್ಗಾ ತಾಲೂಕಿನ ಶಾಸಕರು, ತಹಶೀಲ್ದಾರರು ನೇರ ಹೊಣೆ ಹೊರಬೇಕು. ಇವರೆಲ್ಲರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಬೇಕು. ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು. ಕುಟುಂಬದಲ್ಲಿನ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕೆಂದು ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ರೀಲ್ಸ್ ಹುಚ್ಚು: ಬೈಕ್ನ ಮೂಲಕ ಯುವತಿಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದವ ಈಗ ಪೊಲೀಸರ ಅತಿಥಿ!
ಕೊಪ್ಪಳ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತದೆ. ಇದನ್ನೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಅಲ್ಲಿನ ಸರಕಾರಿ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಈ ಘಟನೆ ಬಗ್ಗೆ ವಿಚಾರ ಮಾಡಿ ದಲಿತ ಸೇನೆ ರಾಜ್ಯ ಅಧ್ಯಕ್ಷರಾದ ಹಣಮಂತ ಯಳಸಂಗಿ ಅವರ ನೇತೃತ್ವದಲ್ಲಿ ಕೊಲೆಯಾದ ಯಮನೂರಪ್ಪ ಕುಟುಂಬಕ್ಕೆ ಭೇಟಿಯಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ ತಿಳಿಸಿದ್ದಾರೆ.
