ಕಿರುತೆರೆ ಹಾಗೂ ಸಿನಿಮಾದ ಹಿರಿಯ ನಟಿ ಪದ್ಮಜಾ ರಾವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎಂಟನೇ ಜೆಎಂಎಫ್ಸಿ ನ್ಯಾಯಾಲಯವು ಪದ್ಮಜಾ ರಾವ್ ಅವರಿಗೆ 40.20 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಈ ದಂಡ ಕಟ್ಟಲು ವಿಫಲರಾದರೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
2021ರಲ್ಲಿ ತುಳು ಚಿತ್ರ ನಿರ್ದೇಶಕ, ನಟ ವೀರೇಂದ್ರ ಶೆಟ್ಟಿ ಕಾವೂರು ಅವರು ನಟಿ ಪದ್ಮಜಾ ರಾವ್ ತನ್ನಿಂದ 41 ಲಕ್ಷ ರೂ. ಹಣ ಪಡೆದು, ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.
ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಹಂತ ಹಂತವಾಗಿ 41 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಈ ಸಾಲದ ಭದ್ರತೆಗಾಗಿ 40 ಲಕ್ಷ ರೂಪಾಯಿಯ ಚೆಕ್ ನೀಡಿದ್ದರು.
ಇದನ್ನು ಓದಿದ್ದೀರಾ? ‘ರವಿಕೆ ಪ್ರಸಂಗ’ ರಿವ್ಯೂ: ಅವಿವಾಹಿತ ಹೆಣ್ಣಿನ ಹಾಡು-ಪಾಡು
ಪದ್ಮಜಾ ರಾವ್ ಅವರು ಸಾಲ ಹಿಂತಿರುಗಿಸಿದ ಕಾರಣ ವೀರೇಂದ್ರ ಅವರು ಆ ಚೆಕ್ ಮೂಲಕ ಹಣ ಪಡೆಯಲು ಮುಂದಾಗಿದ್ದಾರೆ. ಆದರೆ ಬ್ಯಾಂಕ್ನಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ವೀರೇಂದ್ರ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಪದ್ಮಜಾ ರಾವ್ ಅವರು “ನಾನು ಯಾವುದೇ ಸಾಲ ಪಡೆದಿಲ್ಲ. ಚೆಕ್ ಅನ್ನು ಕೂಡಾ ನೀಡಿಲ್ಲ. ನನ್ನ ಮನೆಯಿಂದ ಚೆಕ್ ಕಳವು ಮಾಡಿ ಪೋರ್ಜರಿ ಮಾಡಲಾಗಿದೆ” ಎಂದು ಹೇಳಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ನಟಿ ಪದ್ಮಜಾ ರಾವ್ ಅವರಿಗೆ 40.20 ಲಕ್ಷ ರೂ. ದಂಡ ಅಥವಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 40.20 ಲಕ್ಷ ರೂಪಾಯಿಯಲ್ಲಿ 40.17 ಲಕ್ಷ ರೂಪಾಯಿಯನ್ನು ದೂರುದಾರ ವೀರೇಂದ್ರ ಶೆಟ್ಟಿ ಅವರಿಗೆ ಹಾಗೂ ಉಳಿದ ಮೂರು ಸಾವಿರವನ್ನು ರಾಜ್ಯದ ಬೊಕ್ಕಸಕ್ಕೆ ತುಂಬಲು ನ್ಯಾಯಾಲಯ ತಿಳಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
