‘ರವಿಕೆ ಪ್ರಸಂಗ’ ರಿವ್ಯೂ: ಅವಿವಾಹಿತ ಹೆಣ್ಣಿನ ಹಾಡು-ಪಾಡು

Date:

’ರವಿಕೆ ಪ್ರಸಂಗ’ವಂತೆ. ಓಹ್, ಹೆಸರು ನೋಡಿದರೆ ಇದ್ಯಾವುದೋ ರತಿ ರಹಸ್ಯವೆಂದು ಭಾವಿಸುವವರೇ ಹೆಚ್ಚು. ನಮ್ಮ ಆಧುನಿಕ ಜಗತ್ತು ’ರವಿಕೆ/ಕುಪ್ಪಸ’ ಇತ್ಯಾದಿಗಳಿಗೆ ಲೈಂಗಿಕತೆಯ ಲೇಪ ಹಚ್ಚಿರುವುದರಿಂದ ಸಹಜ ಭಾಷೆಯೂ ಅಸಹಜವಾಗಿ ಕಾಣಿಸುತ್ತದೆ. ಲೈಂಗಿಕ ಶಿಕ್ಷಣದ ಕೊರತೆಯೂ ಇದರಲ್ಲಿ ಇದೆ, ಬಿಡಿ. ಆದರೆ ಇದು ಎ ಸರ್ಟಿಫಿಕೇಟ್ ಸಿನಿಮಾವಂತೂ ಅಲ್ಲ. ಮನೆ ಮಂದಿಯೆಲ್ಲ ಕೂತು ನೋಡಬಹುದಾದ, ಉತ್ತಮ ಕಥಾ ಹಂದರ ಹೊಂದಿರುವ ಸಹ್ಯ ಸಿನಿಮಾ.

ಸೀಮಿತ ವರ್ಗವನ್ನಷ್ಟೇ ಸೆಳೆಯುವ ಕಲಾತ್ಮಕತೆ ಹೆಸರಿನ ಪೇಲವ ಸಿನಿಮಾಗಳು ಮತ್ತು ಲಾಜಿಕ್‌ಗಳಿಲ್ಲದ ಮನರಂಜನಾ ಸಿನಿಮಾಗಳ ನಡುವೆ – ಎರಡನ್ನೂ ಹದವಾಗಿ ಬೆರೆಸಿ ಕಥೆಗೆ ಆದ್ಯತೆ ಕೊಟ್ಟ ಮಾದರಿಗಳು ಹುಟ್ಟಿಕೊಂಡವು. ಇದನ್ನು ‘ಬ್ರಿಡ್ಜ್‌ ಸಿನಿಮಾ’ ಎಂದು ಕರೆದುಕೊಂಡಿದ್ದೇವೆ. ಮಲಯಾಳಂ ಚಿತ್ರರಂಗ ಕಳೆದ ಒಂದು ದಶಕದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದು ಈ ಮಾದರಿಯ ಸಿನಿಮಾಗಳ ಮೂಲಕವೇ. ಕನ್ನಡದಲ್ಲೂ ಇತ್ತೀಚಿನ ವರ್ಷಗಳಲ್ಲಿ ಈ ಬ್ರಿಡ್ಜ್‌ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಅದರ ಮುಂದುವರಿದ ಭಾಗವಾಗಿ ’ರವಿಕೆ ಪ್ರಸಂಗ’ ತೆರೆಕಂಡಿದೆ.

ಸಣ್ಣ ಎಳೆಯನ್ನಿಟ್ಟುಕೊಂಡು ಅದರ ಸುತ್ತ ಕಥಾ ಹಂದರವನ್ನು ಹೆಣೆಯುವುದು, ಸುರಳಿ ಸುರಳಿಯಾಗಿ ಬೇರೆ ಪದರಗಳನ್ನು ಬಿಚ್ಚುವುದು ಕಥನಾ ತಂತ್ರಗಾರಿಕೆಯೂ ಹೌದು. ಮಲಯಾಳಂನ ’ಡ್ರೈವಿಂಗ್ ಲೈಸೆನ್ಸ್‌’ ಸಿನಿಮಾ ಅದಕ್ಕೊಂದು ಅದ್ಭುತ ಸಿನಿಮಾ. ಕಮರ್ಷಿಯಲ್‌ ಎಲಿಮೆಂಟ್‌ಗಳೊಂದಿಗೆ ’ಡ್ರೈವಿಂಗ್ ಲೈಸೆನ್ಸ್‌’ ಸುತ್ತ ತೆರೆದುಕೊಳ್ಳುವ ಅಲ್ಲಿನ ಕಥೆ ಮನುಷ್ಯನೊಳಗಿನ ಹುಸಿ ಮೇಲರಿಮೆ, ಅಭಿಮಾನ, ಸಣ್ಣತನ ಎಲ್ಲವನ್ನೂ ಬಿಚ್ಚಿಟ್ಟಿತ್ತು. ಅಂತಹದ್ದೇ ಕಥೆ ’ರವಿಕೆ ಪ್ರಸಂಗ’.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಂತೋಷ್ ಕೊಡಂಕೇರಿ ಅವರು ನಿರ್ದೇಶಿಸಿರುವ ’ರವಿಕೆ ಪ್ರಸಂಗ’- ರವಿಕೆಯ ನೆಪದಲ್ಲಿ ಮನುಷ್ಯನ ತೊಳಲಾಟ, ಮದುವೆಯ ಸುತ್ತಲಿನ ಜಂಜಾಟ, ದೇಹದ ಕಾರಣಕ್ಕೆ ಅನುಭವಿಸುವ ಅವಮಾನ, ಕಿರಿಕಿರಿ, ಬಾಡಿ ಶೇಮಿಂಗ್‌ ಇದೆಲ್ಲವನ್ನೂ ನವಿರು ಹಾಸ್ಯ ಮತ್ತು ಚಿಂತನೆಯ ಎರಕಕ್ಕೆ ಹಾಕಿ ಮೂಡಿ ಬಂದಿದೆ.

ಬೋಳುತಲೆ ಮತ್ತು ಸಣಕಲು ಗಂಡಸಿನ ಕಥೆಯನ್ನು ಒಳಗೊಂಡಿದ್ದ ’ಒಂದು ಮೊಟ್ಟೆಯ ಕಥೆ’ ಸಿನಿಮಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿತ್ತು. ರವಿಕೆ ಪ್ರಸಂಗ ಹೆಣ್ಣೊಬ್ಬಳ ಸುತ್ತ ನಡೆಯುವ ಅಂತಹದ್ದೇ ಸಿನಿಮಾವಾದರೂ ನಿರೂಪಣೆಯಿಂದ ಖಂಡಿತವಾಗಿಯೂ ಭಿನ್ನವಾಗಿ ನಿಂತಿದೆ. ರವಿಕೆಗೂ ದೇಹಕ್ಕೂ ಆ ದೇಹದ ಕಾರಣಕ್ಕೆ ವಿಳಂಬವಾಗುತ್ತಿರುವ ವಿವಾಹಕ್ಕೂ ವಿವಾಹದ ಸುತ್ತ ಉಂಟಾಗುವ ಕೌಟುಂಬಿಕ ಒತ್ತಡ- ಹೀಗೆ ಒಂದೊರಳಗೊಂದು ಬೆರೆತು ಕಥೆ ಸಾಗುತ್ತದೆ. ರವಿಕೆ ಒಂದು ನೆಪವೂ ಹೌದು, ಕಥೆ ಸಾಗಲು ಕೇಂದ್ರ ಬಿಂದುವೂ ಹೌದು. ರವಿಕೆ ಸಣ್ಣ ವಿಷಯ ಬಿಡಿ ಎಂದುಕೊಂಡರೆ ಸಣ್ಣದಾಗಿ ಕಾಣುತ್ತದೆ, ಆದರೆ ಕುಪ್ಪಸದೊಳಗೆ ಅವಿತಿರುವ ತೊಳಲಾಟಗಳನ್ನು ತೆರೆದು ನೋಡಿದರೆ ಈ ರವಿಕೆ ಸಣ್ಣ ವಿಷಯವೂ ಅಲ್ಲ, ಇದು ಕೇವಲ ಕುಪ್ಪಸದ ಕಥೆಯೂ ಅಲ್ಲ. ಈ ಕಾರಣಕ್ಕೆ ’ರವಿಕೆ ಪ್ರಸಂಗ’ ವಿಶಿಷ್ಟ ಪ್ರಯೋಗ.

ಕಥಾ ನಾಯಕಿ ದಡೂತಿ, ಆದರೆ ಒಂದು ರೀತಿ ಮುಗ್ಧಳು ಹೌದು. ನೋಡುವ ಜಗತ್ತು ತನ್ನನ್ನು ಹೇಗೆ ಭಾವಿಸುತ್ತದೆ ಎಂಬ ಅರಿವು ಆಕೆಗಿದೆ. ದೇಹದ ತೂಕ ಇಳಿಸಬೇಕೆಂಬ ಪ್ರಯೋಗಕ್ಕೂ ಇಳಿಯುತ್ತಾಳೆ. ಲೋಕ ಯಾವುದನ್ನು ಸುಂದರ ಎಂದು ಕಲ್ಪಿಸಿಕೊಂಡಿದೆಯೋ ಅದಕ್ಕೆ ಅವಳೂ ಮಾರು ಹೋಗಿದ್ದಾಳೆ. ತನ್ನ ಮದುವೆಯಾಗಬೇಕಿರುವ ಹುಡುಗ ಸುರದ್ಫ್ರೂಪಿ ಆಗಿರಬೇಕೆಂಬ ಕನಸುಗಳಿವೆ. “ಆದರೆ ನೀನು ಇಷ್ಟಪಟ್ಟರೆ ಸಾಕೇ, ನಿನ್ನನ್ನೂ ಇಷ್ಟಪಡಬೇಕಲ್ಲವೇ?” ಎಂಬ ಕುಹಕಗಳಿಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ. ಎನ್‌ಆರ್‌ಐ ಗಂಡೊಬ್ಬನನ್ನು ಇಂಪ್ರೆಸ್ ಮಾಡಲು ಹೋಗುವ ಆಕೆ ’ಸ್ಲೀವ್ ಲೆಸ್‌’ ಬ್ಲೌಸ್ ತೊಡಬೇಕೆಂಬ ಭ್ರಮೆಗೆ ಬಿದ್ದು, ಒತ್ತಡಕ್ಕೆ ಸಿಲುಕಿ ಏನೆಲ್ಲ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾಳೆ ಎಂಬುದನ್ನು ’ರವಿಕೆ ಪ್ರಸಂಗ’ವಾಗಿ ಕಟ್ಟಿಕೊಡಲಾಗಿದೆ.

ಹೆಣ್ಣು ತೊಡುವ ಬಟ್ಟೆಯ ಕಾರಣಕ್ಕೆ ಅವಳನ್ನು ಹೀಯಾಳಿಸುವ ಮನಸ್ಥಿತಿಗಳಿಗೂ ಇಲ್ಲಿ ಪಾಠ ಹೇಳಲಾಗಿದೆ. ಸ್ಲೀವ್ ಲೆಸ್‌ ಬ್ಲೌಸ್‌ ವಾಸ್ತವದಲ್ಲಿ ಬೆತ್ತಲಾಗಿಸುವುದು ಜನರ ವಿಕೃತತೆಯನ್ನಷ್ಟೇ ಎಂಬುದನ್ನು ಸೂಚ್ಯವಾಗಿ ದಾಟಿಸುವ ಸಂಭಾಷಣೆ, ದೃಶ್ಯಗಳು ಸಿನಿಮಾದಲ್ಲಿ ಸಶಕ್ತವಾಗಿ ಮೂಡಿಬಂದಿವೆ. ಕೋರ್ಟ್ ರೂಮ್ ದೃಶ್ಯಗಳು ವಾಚ್ಯವಾಗುತ್ತಿವೆ ಎನ್ನುವಷ್ಟರಲ್ಲಿ ದೃಶ್ಯಗಳಿಗೆ ಒತ್ತು ಕೊಡಬೇಕೆಂಬ ಎಚ್ಚರಿಕೆ ನಿರ್ದೇಶಕರಿಗೆ ಖಂಡಿತ ಇದೆ.

ಇಲ್ಲಿನ ಪ್ರಮುಖ ಪಾತ್ರ ಸಾನ್ವಿ ಫೆಮಿನಿಸ್ಟ್ ಖಂಡಿತ ಅಲ್ಲ. ಮಧ್ಯಮವರ್ಗದ ಕುಟುಂಬವೊಂದರ ಸಾಮಾನ್ಯ ಹೆಣ್ಣುಮಗಳು. ಆಕೆ ದೇಹದ ಕಾರಣಕ್ಕೆ ಕೀಳರಿಮೆ ಅನುಭವಿಸುವ ರೀತಿಯಲ್ಲಿ ಪಾತ್ರವನ್ನು ನಿರ್ವಹಿಸದೆ ಇರುವುದು ಇಲ್ಲಿನ ಹೆಚ್ಚುಗಾರಿಕೆ.

ಒಂದು ಮೊಟ್ಟೆಯ ಕತೆಯಲ್ಲಿ ಕಾಣುವ ಅತಿಯಾದ ಕೀಳರಿಮೆ, ಅಸೂಯೆ ಇಲ್ಲಿನ ಸಾನ್ವಿ ಪಾತ್ರದಲ್ಲಿ ಕಾಣುವುದಿಲ್ಲ. ಅಂತಹ ಜಾಡಿಗೆ ಬೀಳುವ ಸಾಧ್ಯತೆಗಳಿಂದ ಪಾರಾಗುವ ರೀತಿಯಲ್ಲಿ ಪಾತ್ರವನ್ನು ಮುಗ್ಧ, ತುಂಟಾಟದ ಪರಿಧಿಗೆ ಎಳೆಯಲಾಗಿದೆ. ಹೀಗಾಗಿ ಕಥೆ ಸರಾಗವಾಗಿ ಸಾಗುತ್ತದೆ.

ಸಣ್ಣ ಘಟನೆಯೊಂದು ಕೋರ್ಟ್ ಮೆಟ್ಟಿಲೇರಿ, ದೊಡ್ಡ ಸುದ್ದಿಯಾದಾಗ ಸಾಮರಸ್ಯದ ಪಾಠವನ್ನು ಕಥಾನಾಯಕಿ ಸಾನ್ವಿಗೆ ಮುಸ್ಲಿಂ ಆಟೋ ಡ್ರೈವರ್‌ ಲತೀಫ ಹೇಳುತ್ತಾನೆ. ತನ್ನದೇ ಜೀವನದ ಅನುಭವದ ಮೂಲಕ ಆತ ತಿಳಿಹೇಳುವುದನ್ನು ಇಲ್ಲಿ ಗಮನಿಸಬೇಕು. ಸಾಮರಸ್ಯದ ಪಾಠವನ್ನು ಲತೀಫ್ ಮೂಲಕ ದಾಟಿಸುವಲ್ಲಿ ನಿರ್ದೇಶಕರ ಸೂಕ್ಷ್ಮತೆ ಅರ್ಥವಾಗುತ್ತದೆ. ಇದು ಇಂಡಿಯಾದ ವಾಸ್ತವ ಬದುಕು. “ನಿತ್ಯವೂ ಒಬ್ಬರನ್ನೊಬ್ಬರು ನೋಡುತ್ತಾ ಬದುಕಬೇಕು, ಯಾವುದೋ ಒಂದು ಘಟನೆಯಿಂದ ಸಂಬಂಧ, ಪ್ರೀತಿ, ಸ್ನೇಹಗಳು ಹಾಳಾಗಲು ಸಾಧ್ಯವೇ?” ಎನ್ನುವ ಲತೀಫ ಎರಡು ದೃಶ್ಯಗಳಷ್ಟೇ ಕಾಣಿಸಿಕೊಂಡರೂ ಉದ್ದೇಶಪೂರ್ವಕವಾಗಿ ಈ ಪಾತ್ರವನ್ನು ಕಟ್ಟಲಾಗಿದೆ ಎನಿಸುತ್ತದೆ. ಆದರೆ ಈ ಪಾತ್ರ ಕಥೆಗೆ ಪೂರಕವಾಗಿದೆ.

ಹೆಣ್ಣಿನ ಜೀವನ ಮದುವೆಯಷ್ಟೇ ಎಂದು ಭಾವಿಸುವ ಭಾರತೀಯ ಸಮಾಜದ ಮಿತಿಗೂ ಒಂದಿಷ್ಟು ಸಾಣೆ ಹಿಡಿಯುವ ಕೆಲಸವನ್ನು ಈ ಸಿನಿಮಾ ಮಾಡಿದೆ.

ಕೋರ್ಟ್ ರೂಮ್‌ ದೃಶ್ಯವೊಂದರಲ್ಲಿ ಲಾಯರ್‌ ಪಾತ್ರಧಾರಿ ನ್ಯಾಯಾಧೀಶರ ಮೇಲೆ ಕೂಗಾಡುವುದು ಅತಿ ಎನಿಸುತ್ತದೆ. ಇದನ್ನು ಸ್ವಲ್ಪ ಎಚ್ಚರಿಕೆಯಿಂದ ನಿಭಾಯಿಸಬಹುದಿತ್ತು. ಹೆಣ್ಣಿಗೆ ದೇಹ ಸೌಂದರ್ಯದ ಕಾನ್ಶಿಯಸ್‌ ಮುಖ್ಯವೆಂಬ ಭ್ರಮೆಯನ್ನು ಒಡೆಯುವುದಕ್ಕೆ ಇನ್ನೊಂದಿಷ್ಟು ಸ್ಪೇಸ್‌ ನೀಡಬೇಕಿತ್ತು ಅನಿಸುತ್ತದೆ. ಕೆಲವು ಮಿತಿಗಳ ನಡುವೆಯೂ ’ರವಿಕೆ ಪ್ರಸಂಗ’ ಉತ್ತಮ ಪ್ರಯತ್ನವಂತೂ ಹೌದು.

ನ್ಯಾಯಾಧೀಶೆಯ ಪಾತ್ರದಲ್ಲಿ ಸುಮನ್ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ’ಸಾನ್ವಿ’ ಪಾತ್ರಕ್ಕೆ ಗೀತಾ ಭಾರತಿ ಭಟ್ ಜೀವ ತುಂಬಿದ್ದಾರೆ. ರಾಕೇಶ್ ಮಯ್ಯ, ಹನುಮಂತೇಗೌಡ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್‌, ಸಂಪತ್ ಮೈತ್ರೇಯ, ಪ್ರವೀಣ್ ಅಥರ್ವ ಮೊದಲಾದವರು ತಾರಾಗಣದಲ್ಲಿದ್ದಾರೆ. ಅಂದಹಾಗೆ ಈ ಸಿನಿಮಾದ ಕಥೆಯನ್ನು ಬರೆದಿರುವವರು ಪಾವನಾ ಸಂತೋಷ್. ಇವರು ನಿರ್ದೇಶಕ ಸಂತೋಷ್‌ ಅವರ ಪತ್ನಿ. ಗಂಡ- ಹೆಂಡತಿ ಸೇರಿಕೊಂಡು ಉತ್ತಮವಾದ ರವಿಕೆಯನ್ನು ಹೊಲಿದಿದ್ದಾರೆ ಎನ್ನಬಹುದು.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...