ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ಶೀಘ್ರವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳಮಿಸಲಾತಿಯನ್ನು ಜಾರಿಗೊಳಿಸಬೇಕು, ಎಸ್.ಸಿ.ಪಿ – ಟಿ.ಎಸ್.ಪಿ ಅನುದಾನದ ದುರ್ಬಳಕೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮೊಳಕಾಲ್ಮೂರು ಘಟಕದ ಮುಖಂಡರು ಮಂಗಳವಾರ ತಮಟೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಡಿಎಸ್ಎಸ್ ಕಾರ್ಯಕರ್ತರು ಒಳ ಮೀಸಲಾತಿ ಜಾರಿ ಮತ್ತು ಇತರೆ ಹಕ್ಕೊತ್ತಾಯಗಳಿಗಾಗಿ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಸಂಸ ಮುಖಂಡ ಶ್ರೀನಿವಾಸ್, 30-40 ವರ್ಷಗಳಿಂದ ಹೋರಾಟ ನಡೆದಿದ್ದರೂ ಯಾವುದೇ ಸರ್ಕಾರಗಳು ಒಳ ಮೀಸಲಾತಿಯ ಪರವಾಗಿ ನಿರ್ಧಾರ ತೆಗೆದುಕೊಂಡು ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಈಗ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಕೊಡುವ ಅಧಿಕಾರವನ್ನು ನೀಡಿದ್ದು, ನಾನು ದಲಿತರ ಪರ, ಶೋಷಿತರ ಪರ ಎನ್ನುವ ಸಿದ್ದರಾಮಯ್ಯ ಸರ್ಕಾರ ಕೂಡಲೇ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಮೊಳಕಾಲ್ಮೂರು ತಾಲೂಕು ಅತ್ಯಂತ ಹಿಂದುಳಿದ ಬಯಲು ಸೀಮೆ ಪ್ರದೇಶವಾಗಿದ್ದು, ಇದುವರೆಗೂ ಯಾವುದೇ ಕೈಗಾರಿಕೆಗಳು ಅಭಿವೃದ್ಧಿಯಾಗಿಲ್ಲ. ಉದ್ಯೋಗ ಸೃಷ್ಟಿಯ ವಿಚಾರವಾಗಿ ಜನಪ್ರತಿನಿಧಿಗಳು ಜಾಣಮೌನ ತಾಳಿದ್ದಾರೆ. ಇದರಿಂದ ಜನ ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಿದ್ದಾರೆ. ಸಾಲ ಮಾಡಿ ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಆದ ಕಾರಣ ಸರ್ಕಾರ ಮತ್ತು ಜನಪ್ರತಿನಿಧಿಗಳು ಶಾಸಕರು, ಸಂಸದರು ಮತ್ತು ಸಚಿವರು ಗಮನಹರಿಸಿ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ತಾಲೂಕಿನ ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕು. ಮೊಳಕಾಲ್ಮುರು ತಾಲೂಕಿನ ರೈತರಿಗೆ ನೀರನ್ನು ಕೊಡುವ, ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ತುರ್ತಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಪರಮೇಶ್ ಮಾತನಾಡಿ, ಚುನಾವಣೆಗೆ ಮುಂಚೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ನಮ್ಮಿಂದ ಮತ ಪಡೆದ ಸಿದ್ದರಾಮಯ್ಯ ಸರ್ಕಾರ ಒಂದುವರೆ ವರ್ಷಗಳಾದರೂ ಒಳ ಮೀಸಲಾತಿ ಬಗ್ಗೆ ತುಟಿ ಬಿಚ್ಚಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂವಿಧಾನ ಪೀಠ ರಾಜ್ಯ ಸರ್ಕಾರಗಳಿಗೆ ಚಾಟಿ ಬೀಸಿದ್ದು, ರಾಜ್ಯಗಳು ಒಳ ಮೀಸಲಾತಿಯನ್ನು ಜಾರಿಗೊಳಿಸಬಹುದು ಎಂದು ವಿವೇಚನಾ ಅಧಿಕಾರವನ್ನು ನೀಡಿದರೂ ಕೂಡ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಂದು ಅವರಿವರ ಮೇಲೆ ಆರೋಪ ಮಾಡುತ್ತ ಕಾಲ ತಳ್ಳುತ್ತಿದ್ದಾರೆ. ಈ ಕೂಡಲೇ ಒಳ ಮೀಸಲಾತಿಯ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಇದರ ಉಗ್ರ ಹೋರಾಟ ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ನೀವು “ಸದಾಶಿವ ಆಯೋಗದ ವರದಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ತಾಲೂಕು ಸಂಚಾಲಕ ಚಿಕ್ಕೋಬನಳ್ಳಿ ಕರಿಬಸಪ್ಪ ಮಾತನಾಡಿ ದಲಿತರ ಪರ, ಅಹಿಂದ ವರ್ಗಗಳ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಕಾಲತಳ್ಳದೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುಧಾನ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳ ಅನುದಾನಕ್ಕೆ ಬಳಸದೆ ದುರ್ಬಳಕೆಯಾಗುತ್ತಿದ್ದು ಅದನ್ನು ತಡೆಗಟ್ಟಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೂಡ ಈ ಹಣ ದುರ್ಬಳಕೆಯಾಗುತ್ತಿದ್ದು, ಕೂಡಲೇ ಈ ಹಣ ದುರ್ಬಳಕೆ ಆಗುವುದನ್ನು ತಡೆಗಟ್ಟಬೇಕು. ಅದೇ ವರ್ಗಗಳ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಹಾಗೂ ಇತ್ತೀಚೆಗೆ ಕ್ಷೌರಿಕರೊಬ್ಬನಿಂದ ಕೊಲೆಯಾದ ದಲಿತ ಯುವಕನ ಮನೆಯವರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಮತ್ತು ಈ ರೀತಿಯ ಪ್ರಕರಣಗಳ ವಿಚಾರಣೆಗೆ ಎಸ್ಐಟಿ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸದಾ ಜಾತಿಯ ಕುರಿತೇ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ | thangalaan
ತಮಟೆ ಪ್ರತಿಭಟನೆಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಬಸಪ್ಪ,ಹನುಮಂತ, ಸೋಮಶೇಖರ, ತಿಪ್ಪೇ ಸ್ವಾಮಿ, ಶೇಖರಪ್ಪ, ಬಸವರಾಜು, ಕಾಡಪ್ಪ, ಅಂಜಿನಪ್ಪ, ಚಂದ್ರಪ್ಪ, ನಾಗರಾಜ್ ಎರ್ರಿಸ್ವಾಮಿ, ಸಿದ್ದಣ್ಣ, ಮರಿಸ್ವಾಮಿ ನಾಗಸಮುದ್ರ, ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಚಂದ್ರಪ್ಪ, ಆನಂದ, ಅಶೋಕ್, ಶಿವಣ್ಣ ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.