ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವುದಕ್ಕಾಗಿ ‘ಡಿಜಿಟಲ್ ಜಾಹೀರಾತು’ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ‘ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024’ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾರ್ತಾ ಇಲಾಖೆ ಆದೇಶಿಸಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಗಳು ಹೆಚ್ಚು ಪ್ರಚಲಿತವಾಗಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರದ ಜಾಹೀರಾತು ಪ್ರಕಟಿತವಾದಲ್ಲಿ ಸರ್ಕಾರದ ಜಾಹೀರಾತುಗಳು ಯುವ ಸಮೂಹವನ್ನು ತಲುಪಲು ಸಹಕಾರಿಯಾಗುವುದರಿಂದ ಡಿಜಿಟಲ್ ಮಾಧ್ಯಮಗಳು ಇತ್ತೀಚೆಗೆ ಸರ್ಕಾರದ ಜಾಹೀರಾತು ಕೋರಿ ವಾರ್ತಾ ಇಲಾಖೆಗೆ ಸಾಕಷ್ಟು ಮನವಿ ಸಲ್ಲಿಸಿದ್ದವು.
ಡಿಜಿಟಲ್ ಮಾಧ್ಯಮಗಳಿಗೆ ಇಲಾಖೆಯಿಂದ ಜಾಹೀರಾತು ದರ ನಿಗದಿಯಾಗಿಲ್ಲದ ಕಾರಣ ಸರ್ಕಾರದ ಜಾಹೀರಾತುಗಳನ್ನು ಬಿಡುಗಡೆ ಮಾಡಲು ಇಷ್ಟು ದಿನ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಡಿ.ಎ.ವಿ.ಪಿ ಸಿದ್ಧಪಡಿಸಿರುವ ನೀತಿಯನ್ನು ಪರಿಗಣನೆಗೆ ತೆಗೆದುಕೊಂಡು ಅದೇ ಮಾದರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಡಿಜಿಟಲ್ ಪಾಲಿಸಿಯನ್ನು ಸಿದ್ಧಪಡಿಸಿ, ಸದರಿ ನಿಯಮಗಳಿಗೆ ಸರ್ಕಾರದ ಅನುಮೋದನೆ ನೀಡಿ ಆದೇಶ ಹೊರಡಿಸುವಂತೆ ಕೋರಲಾಗಿತ್ತು.
ಮಾಧ್ಯಮದ ವ್ಯಾಪ್ತಿ ಬದಲಾಗಿದ್ದು, ಅಂತರ್ಜಾಲ, ಖಾಸಗಿ ಕಂಪ್ಯೂಟರ್, ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಫೋನ್‌ಗಳ ಮುಖಾಂತರ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವುದರಿಂದ ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವುದಕ್ಕಾಗಿ ‘ಡಿಜಿಟಲ್ ಜಾಹೀರಾತು’ ವ್ಯವಸ್ಥೆ ಜಾರಿಗೆ ‘ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024’ಅನ್ನು ತಕ್ಷಣದಿಂದ ಜಾರಿಗೆ ತರಲು ವಾರ್ತಾ ಇಲಾಖೆ ಆದೇಶಿಸಿದೆ.
ಡಿಜಿಟಲ್ ಜಾಹೀರಾತು ಏಜೆನ್ಸಿಗೆ ಅರ್ಹತೆ ಏನು?
ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾವರ್ಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಏಜೆನ್ಸಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು. ಏಜೆನ್ಸಿಯು ಎಂಪ್ಯಾನೆಲ್ ಮಾಡಿದ ಡಿಜಿಟಲ್ ಘಟಕಗಳಲ್ಲಿ ಮಾತ್ರ ಜಾಹೀರಾತು ನೀಡತಕ್ಕದ್ದು.
ಏಜೆನ್ಸಿಯು ಕಡ್ಡಾಯವಾಗಿ ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು – ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಪಾಲುದಾರಿಕೆ, ಲಿಮಿಟೆಡ್ ಲಯಾಬಿಲಿಟಿ ಪಾಲುದಾರಿಕೆ.
ಕನಿಷ್ಠ ಎರಡು ವರ್ಷವಾಗಿರಬೇಕು.
ಮಾನ್ಯವಾದ ಜಿಎಸ್‌ಟಿ ನೋಂದಣಿ ಇರಬೇಕು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಇರಬೇಕು.
ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಕುರಿತು ಆಳವಾದ ಜ್ಞಾನವಿರಬೇಕು.
ಸರ್ಕಾರಗಳಿಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಜಾಹೀರಾತು ನೀಡಲು ಗೂಗಲ್ ಮತ್ತು / ಅಥವಾ ಮೆಟಾ ಅಥವಾ ತತ್ಸಮಾನ ಡಿಜಿಟಲ್ ಮಾಧ್ಯಮ ಸಂಸ್ಥೆಯೊಂದಿಗೆ ಜೊತೆಗೆ ಮಾನ್ಯವಾದ ಒಪ್ಪಂದ/ಒಡಂಬಡಿಕೆ ಹೊಂದಿರಬೇಕು.
ತಮ್ಮ ಪ್ಲಾಟ್‌ಫಾರ್ಮ್ ಗಳಲ್ಲಿ ಸರ್ಕಾರಿ ಪ್ರಚಾರ ಮಾಡಲು ಮತ್ತು/ಅಥವಾ ಮೆಟಾ ಅಥವಾ ತತ್ಸಮಾನ ಡಿಜಿಟಲ್ ಮಾಧ್ಯಮ ಸಂಸ್ಥೆಯಿಂದ ಅನುಮತಿ ಇರಬೇಕು.







