ಗೌರಿ-ಗಣೇಶ ಮೂರ್ತಿಗಳನ್ನು ಕೂರಿಸುವುದು ಹಿಂದೂಗಳಲ್ಲಿ ರೂಢಿಗತವಾಗಿ ನಡೆದು ಬಂದಿದೆ. ಪಿಓಪಿಯಿಂದ ಮಾಡಿದ ಮೂರ್ತಿಯನ್ನು ಕೂರಿಸುವುದು ಪರಿಸರಕ್ಕೆ ಮಾರಕ. ಪರಿಸರ ಇಲಾಖೆ ಬೀದಿಗಿಳಿದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೆಆರ್‌ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ ಒತ್ತಾಯಿಸಿದರು.
ರಾಮನಗರ ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್‌ಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ತಡೆಯಿಲ್ಲದೆ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನಧಿಕೃತ ಮೂರ್ತಿಯ ಮಾರಾಟವನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಹಾಗೂ ರಾಸಾಯನಿಕ ಬಣ್ಣಗಳನ್ನು ಹಚ್ಚಿದ ಗೌರಿ-ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕ. ಇವುಗಳನ್ನು ಕೆರೆ ಕಟ್ಟೆಗಳಲ್ಲಿ ಬಿಡುವುದು ಚಲಚರಗಳ ಮೇಲೆ ಪರಿಣಾಮ ಬೀರಲಿದೆ. ಮಾರಾಟಗಾರರ ಮೇಲೆ ಕ್ರಮ ಕೈಗೊಂಡು ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಲು ಅನುವು ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಆಡಳಿತಗಳಿಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಕೂರಿಸಲು ಮತ್ತು ವಿಸರ್ಜಿಸಲು ಅನುಮತಿ ನೀಡಬೇಕು. ಅನಧಿಕೃತ ಪಿಓಪಿ ಮೂರ್ತಿಯನ್ನು ಕೂರಿಸುವ ಆಯೋಜಕರ ಎದುರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಜಿಲ್ಲಾ ಪರಿಸರ ಅಧಿಕಾರಿ ಸಿ ಆರ್ ಮಂಜುನಾಥ್, ನಾವು ಪರಿಸರಕ್ಕೆ ಮಾರಕವಾದ ನಿಷೇಧಿತ ವಸ್ತುಗಳಿಂದ ತಯಾರಿಸಿದ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಕೂರಿಸಲು ಹಾಗೂ ವಿಸರ್ಜಿಸಲು ಉತ್ತೇಜನ ನೀಡುವುದಿಲ್ಲ. ಇದರ ಬಗ್ಗೆ ನಗರಸಭೆಯ ಕಸ ಎತ್ತುವ ವಾಹನಗಳಲ್ಲಿ ಜಾಗೃತಿ ಪ್ರಚಾರ ಮಾಡಲಾಗುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸದಾ ಜಾತಿಯ ಕುರಿತೇ ಚರ್ಚಿಸುವುದರಲ್ಲಿ ಒಂದು ಅಪಾಯವಿದೆ | thangalaan
ಯಾವುದೇ ಸ್ಥಳಗಳಲ್ಲಿ ಈ ನಿಷೇಧಿತ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಕೂರಿಸಿರುವುದು ಕಂಡು ಬಂದರೆ ಸಾರ್ವಜನಿಕರು ನನ್ನ ಮೊಬೈಲ್ ಸಂಖ್ಯೆ 9845367378 ಕ್ಕೆ ಕರೆ ಮಾಡಿ ತಿಳಿಸಿದರೆ, ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.