ಬಿಜೆಪಿ ನಾಯಕರು ಸಾರ್ವಜನಿಕ ಭಾಷಣಗಳಲ್ಲಿ, ಸಂಘದ ಸಭೆಗಳಲ್ಲಿ ಧರ್ಮದ ಅಮಲೇರಿಸುವ, ದ್ವೇಷ ಬಿತ್ತುವ ಭಾಷಣ ಬಿಗಿಯುತ್ತಾರೆ. ಕಂಡವರ ಮಕ್ಕಳ ಕೈಗೆ ತಲವಾರ್ ಕೊಟ್ಟು ಅವರನ್ನು ರಸ್ತೆಗಿಳಿಸುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಅರ್ಹತೆ, ಯೋಗ್ಯತೆ, ಅನುಭವ ಮತ್ತು ಆಡಳಿತಾತ್ಮಕ ದಕ್ಷತೆ ಇಲ್ಲದಿದ್ದರೂ, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವಂತೆ ನೋಡಿಕೊಳ್ಳುತ್ತಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜಯ್ ಶಾ ಅವರ ವಯಸ್ಸು ಈಗ ಕೇವಲ 35. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಜಯ್ ಶಾ, ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂಬುದನ್ನು ದೇಶ-ವಿದೇಶದ ಸುದ್ದಿ ಮಾಧ್ಯಮಗಳೆಲ್ಲ ಹಾಡಿ ಹೊಗಳುತ್ತಿವೆ.
ಅಷ್ಟೇ ಅಲ್ಲ, ಈ ಹಿಂದೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್‍ಗಳೆಂಬ ಭಾರತೀಯರು ಮುನ್ನಡೆಸಿದ ಸಂಸ್ಥೆಯ ಪ್ರತಿಷ್ಠಿತ ಹುದ್ದೆಯಲ್ಲಿ ಐದನೇ ಭಾರತೀಯನಾಗಿ ಜಯ್ ಶಾ ಕೂರಲಿದ್ದಾರೆ ಎಂದು ಸಂಭ್ರಮಿಸುತ್ತಿವೆ.
ಇದು ನಿಜಕ್ಕೂ ಭಾರತೀಯ ನಿರುದ್ಯೋಗಿ ಯುವ ಜನತೆಯನ್ನು ಅವಮಾನಿಸುವ ಸುದ್ದಿ ಮತ್ತು ಸಂಗತಿ.
ಏಕೆ ಗೊತ್ತೇ… 1988ರಲ್ಲಿ ಜನಿಸಿದ ಜಯ್ ಶಾ, ಪದವಿ ಮುಗಿಸಿದ್ದರೋ ಇಲ್ಲವೋ; ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನದಲ್ಲಿ ಮಂಡಿ ಗಾಯ ಮಾಡಿಕೊಂಡು ಕ್ರಿಕೆಟ್ ಆಡಿದ್ದರೋ ಇಲ್ಲವೋ; ಕೇವಲ 21ರ ಹರೆಯದಲ್ಲಿಯೇ ಪ್ರತಿಷ್ಠಿತ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುವ ಅರ್ಹತೆ, ಯೋಗ್ಯತೆ, ಅನುಭವ ಮತ್ತು ಆಡಳಿತಾತ್ಮಕ ದಕ್ಷತೆ ಗಳಿಸಿಕೊಂಡುಬಿಟ್ಟಿದ್ದರು!
ಅದಕ್ಕೆ ಕಾರಣ ಜಯ್ ಶಾ ಅವರ ಅಪ್ಪ ಅಮಿತ್ ಶಾ. ಜೈನ ಮಾರ್ವಾಡಿಯಾದ ಅಮಿತ್ ಶಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಗುಜರಾತಿನ ಸಹಕಾರ ಮತ್ತು ಕ್ರಿಕೆಟ್ ಕ್ಷೇತ್ರಗಳನ್ನು ಕೈವಶ ಮಾಡಿಕೊಂಡಿದ್ದರು. ಏಕೆಂದರೆ ಎರಡೂ ಕ್ಷೇತ್ರಗಳಲ್ಲಿ ಅಪಾರ ಹಣದ ಹರಿವಿತ್ತು. ಯಾರಿಗೂ ಹೆಚ್ಚಿಗೆ ತಿಳಿಯದ ಕ್ಷೇತ್ರಗಳಾಗಿತ್ತು. ಜೊತೆಗೆ ರಾಜಕಾರಣವೂ ಜೊತೆಗೂಡಿತ್ತು.
ಅಂತಹ ಕ್ರಿಕೆಟ್ ಸಂಸ್ಥೆಯ ಆಯಕಟ್ಟಿನ ಸ್ಥಾನದಲ್ಲಿ ಆಗಲೇ, 2009ರಲ್ಲೇ, ಜಯ್ ಶಾರನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಶುರುವಾದ ಅವರ ಹುದ್ದೆಯಿಂದ ಹುದ್ದೆಗಿನ ಜಿಗಿತ, ಐಸಿಸಿ ಅಧ್ಯಕ್ಷ ಸ್ಥಾನದವರೆಗೂ ಬಂದು ನಿಂತಿದೆ.
ಒಂದು ವಿಷಯ ಕುರಿತು ಧಂ ಕಟ್ಟಿ ಮಾತನಾಡದ, ಆಟ ಆಡಿದ ಕುರುಹೂ ಇಲ್ಲದ ಜಯ್ ಶಾ ಎಂಬ ಮೊದ್ಮಣಿ ಅಲಂಕರಿಸಿರುವ ಹುದ್ದೆಗಳತ್ತ ಒಮ್ಮೆ ಕಣ್ಣಾಡಿಸಿದರೆ, ನಿರುದ್ಯೋಗಿಗಳು ತಲೆ ತಿರುಗಿ ಬೀಳದೆ ಇದ್ದರೆ ಕೇಳಿ!
2009ರಲ್ಲಿ ಅಹಮದಾಬಾದ್‌ನ ಸೆಂಟ್ರಲ್ ಬೋರ್ಡ್ ಆಫ್ ಕ್ರಿಕೆಟ್‌ನ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ. ಆನಂತರ 2013ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ. ಅದೇ ಸಮಯದಲ್ಲಿ ಜಿಸಿಎ ಅಧ್ಯಕ್ಷರಾಗಿದ್ದ ಅವರ ತಂದೆ ಅಮಿತ್ ಶಾ ಅವರೊಂದಿಗೆ ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಾಣದ ಮೇಲ್ವಿಚಾರಣೆ. 2015ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಗಳ ಸದಸ್ಯ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭವಿಷ್ಯದ CEC ಸಭೆಗಳಿಗೆ ಪ್ರತಿನಿಧಿಯಾಗಿ ಆಯ್ಕೆ. 2019ರಲ್ಲಿ GCA ಜಂಟಿ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದು, ಬಿಸಿಸಿಐ ಕಾರ್ಯದರ್ಶಿ. 2021ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರನ್ನಾಗಿ ನೇಮಕ. 2022ರಲ್ಲಿ ICC ಮಂಡಳಿಯ ಸದಸ್ಯ ಪ್ರತಿನಿಧಿಯಾಗಿ ನೇಮಕ. 2022ರಲ್ಲಿ BCCI ಕಾರ್ಯದರ್ಶಿಯಾಗಿ ಮರು ಆಯ್ಕೆ. 2022ರಲ್ಲಿ ICCಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆ. 2024ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಮರು ಆಯ್ಕೆ. ಈಗ, 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ.
ಇದು ಕೇವಲ 15 ವರ್ಷಗಳ ಅಂತರದಲ್ಲಿ 12 ಪ್ರತಿಷ್ಠಿತ ಹುದ್ದೆಗಳನ್ನು ಅಮಿತ್ ಶಾ ಅವರ ಮಗ ಜಯ್ ಶಾ ಅಲಂಕರಿಸಿರುವ ಸಣ್ಣ ಸ್ಯಾಂಪಲ್.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ, 2014ರಿಂದ 2024ರವರೆಗಿನ ಹತ್ತು ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಎಲ್ಲೆ ಮೀರಿದೆ. ಅದರಲ್ಲೂ ವಿದ್ಯಾವಂತ ಯುವಸಮೂಹದಲ್ಲಿನ ನಿರುದ್ಯೋಗ ಪ್ರಮಾಣ ಏರುಗತಿಯಲ್ಲಿದೆ. ಜೊತೆಗೆ ದೇಶದಲ್ಲಿ ನಿರುದ್ಯೋಗಿಗಳ ಪೈಕಿ ಶೇ. 83ರಷ್ಟು ಪಾಲು ಯುವಸಮೂಹದ್ದೇ ಆಗಿದೆ ಎಂಬ ಆತಂಕಕಾರಿ ಅಂಕಿ ಅಂಶಗಳನ್ನು ವರದಿಯೊಂದು ಬಹಿರಂಗಪಡಿಸಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದ ಮೋದಿ, ಮೌನಕ್ಕೆ ಜಾರಿದ್ದಾರೆ. ಒಂದು ಸಣ್ಣ ಸರ್ಕಾರಿ ಕೆಲಸಕ್ಕೂ ಸಾವಿರಾರು ಜನ ಕ್ಯೂ ನಿಲ್ಲುವ, ನಿಟ್ಟುಸಿರುಬಿಡುವ, ಹೊಡೆದಾಡುವ ದೃಶ್ಯ ಸಾಮಾನ್ಯವಾಗಿದೆ. ಆದರೆ, ಅಧಿಕಾರಸ್ಥರ ಮಕ್ಕಳು- ಅದರಲ್ಲೂ ಒಬ್ಬನೇ ಒಂದಲ್ಲ, ಎರಡಲ್ಲ ಹನ್ನೆರಡು ಹುದ್ದೆಗಳನ್ನು ಅಲಂಕರಿಸುತ್ತಾನೆ. ಇದು ನಿರುದ್ಯೋಗಿ ಪದವೀಧರರಿಗೆ ಮಾಡುವ ಮೋಸವಲ್ಲವೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ
ಅಮಿತ್ ಶಾ ಎಂಬ ಗುಜರಾತಿನ ಮಾರ್ವಾಡಿ, ಇಂದು ರಾಷ್ಟ್ರದ ಗೌರವಾನ್ವಿತ ಗೃಹ ಸಚಿವ. ಇವರಿಗೆ ಈಗ 59 ವರ್ಷ. ಒಂದು ಕಾಲದಲ್ಲಿ ಈತ ಗುಜರಾತಿನ ಪಿವಿಸಿ ಪೈಪ್ ವ್ಯಾಪಾರಸ್ಥ ಮತ್ತು ಶೇರ್ ಬ್ರೋಕರ್. ಆರೆಸೆಸ್ ಸೇರಿ, ಮೋದಿಯೊಂದಿಗೆ ಬಿಜೆಪಿಗೆ ಬಂದು ರಾಜಕಾರಣಕ್ಕಿಳಿದವರು. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಸಚಿವ ಸಂಪುಟದಲ್ಲಿ 10 ಖಾತೆಗಳನ್ನು ನಿರ್ವಹಿಸಿದವರು. ಆಗ ನಡೆದ ನರಮೇಧದಲ್ಲಿ, ಅದರಲ್ಲೂ ಸೋಹ್ರಾಬುದ್ದೀನ್, ಇಶ್ರತ್ ಜಹಾನ್, ಹರೇನ್ ಪಾಂಡ್ಯರ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ, ರಾಜ್ಯ ಪೊಲೀಸರಿಗೆ ಆದೇಶ ನೀಡಿ ಹಲವರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಯಲ್ಲಿ ಸಿಲುಕಿದವರು. ಸಿಬಿಐ ತನಿಖೆ ಕೈಗೆತ್ತಿಕೊಂಡು ಅಮಿತ್ ಶಾರನ್ನು ಮುಖ್ಯ ಆರೋಪಿಯನ್ನಾಗಿಸಿ ಜುಲೈ 25, 2010ರಂದು ಬಂಧಿಸಿ, ಮೂರು ತಿಂಗಳು ಜೈಲಿಗೂ ಹಾಕಿತ್ತು.
ಇಂತಹ ಇತಿಹಾಸ ಹೊಂದಿರುವ ಅಮಿತ್ ಶಾ, ಈಗ ಕೇಂದ್ರದ ಗೃಹ ಸಚಿವ. ಅವರ ಮುದ್ದುಮಗ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ.
ಸಂಘಪರಿವಾರ ಮತ್ತು ಬಿಜೆಪಿ ನಾಯಕರು ಸಾರ್ವಜನಿಕ ಭಾಷಣಗಳಲ್ಲಿ, ಸಂಘದ ಸಭೆಗಳಲ್ಲಿ ಧರ್ಮದ ಅಮಲೇರಿಸುವ, ದ್ವೇಷ ಬಿತ್ತುವ ಭಾಷಣ ಬಿಗಿಯುತ್ತಾರೆ. ಕಂಡವರ ಮಕ್ಕಳ ಕೈಗೆ ತಲವಾರ್ ಕೊಟ್ಟು ಅವರನ್ನು ರಸ್ತೆಗಿಳಿಸಿ ದೊಂಬಿ ಎಬ್ಬಿಸುತ್ತಾರೆ. ಪೊಲೀಸರ ಲಾಠಿ ಏಟು ತಿಂದು, ಕೋರ್ಟು-ಕಚೇರಿ ಅಲೆಯುವಂತೆ ಮಾಡುತ್ತಾರೆ. ಓದಿದ ಪದವೀಧರರು ಉದ್ಯೋಗ ಕೇಳಿದರೆ, ಪಕೋಡ ಮಾರಿ ಅನ್ನುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಅರ್ಹತೆ, ಯೋಗ್ಯತೆ, ಅನುಭವ ಮತ್ತು ಆಡಳಿತಾತ್ಮಕ ದಕ್ಷತೆ ಇಲ್ಲದಿದ್ದರೂ, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವಂತೆ ನೋಡಿಕೊಳ್ಳುತ್ತಾರೆ… ಇದು ಬಿಜೆಪಿ ಭಾರತ!?

ಲೇಖಕ, ಪತ್ರಕರ್ತ