ಚರಂಡಿ ಸ್ವಚ್ಛತೆ ಕಾಮಗಾರಿಗೆ ಮೀಸಲಿಟ್ಟ 15ನೇ ಹಣಕಾಸಿನಲ್ಲಿ ಅವ್ಯವಹಾರ ನಡೆದಿದ್ದು, ಚರಂಡಿ ಸ್ವಚ್ಛತೆ ಕಾಮಗಾರಿ ಮಾಡದೆ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಹಣ್ಣಿಕೇರಾ ಗ್ರಾಮದ ಮುಖಂಡ ಕೋರಿಸಿದ್ದ ಗಂಜಿ ಆರೋಪ ವ್ಯಕ್ತಪಡಿಸಿದ್ದಾರೆ.
ಅವ್ಯವಸ್ಥೆಯಲ್ಲಿರುವ ಚರಂಡಿಗಳನ್ನು ಕಂಡು ಸಾಮಾಜಿಕ ಹೊರಾಟಗಾರ ಬಸವರಾಜ ಹೂಗರ ಮಾಧ್ಯಮಗಳಿಗೆ ತಿಳಿಸಿದ್ದು, “ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಣ್ಣಿಕೇರಾ ಗ್ರಾಮ ಸೇರಿದಂತೆ ಮೂರು ತಾಂಡಾಗಳಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ಮಾಡಲು 15ನೇ ಹಣಕಾಸಿನಲ್ಲಿ ಅನುದಾನ ಮೀಸಲಿಡಲಾಗಿತ್ತು. ಆದರೆ ಗ್ರಾಮದಲ್ಲಿ ಮತ್ತು ತಾಂಡಾಗಳಲ್ಲಿ ಯಾವುದೇ ಸ್ವಚ್ಛತೆ ಕಾರ್ಯ ಮಾಡಿಲ್ಲ. ಬದಲಿಗೆ ಮೀಸಲಿಟ್ಟ ಅನುದಾನವನ್ನು ಸರ್ಕಾರಕ್ಕೆ ಸಮಂಜಸವಲ್ಲದ ದಾಖಲೆ ನೀಡಿ ಹಣ ಬಿಡುಗಡೆ ಮಾಡಿಕೊಂಡು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಗ್ರಾಮದಲ್ಲಿ ಸುಮಾರು 25ಕ್ಕಿಂತ ಹೆಚ್ಚು ಜನರು ಡೆಂಘೀ, ಮಲೇರಿಯಾಗಳಿಗೆ ಒಳಗಾಗಿರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದ್ದು, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದೆ. ಇತಂಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ ಸ್ವಚ್ಛತೆ ಕಾರ್ಯ ಮಾಡದೆ, ಬೋಗಸ್ ಬಿಲ್ ತೋರಿಸಿ ಸರ್ಕಾರದ ಹಣವನ್ನು ಲಪಟಾಯಿಸಿದ್ದಾರೆ” ಎಂದರು.

“ನಾಲ್ಕು ವರ್ಷಗಳ ಹಿಂದೆ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಹೆಣ್ಣುಮಕ್ಕಳ ಸಾಮೂಹಿಕ ಶೌಚಾಲಯದ ಕಟ್ಟಡವನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ತೆಗೆದುಕೊಂಡರೂ ಕೂಡ ಈವರೆಗೆ ಪಂಚಾಯಿತಿಯವರು ಶೌಚಾಲಯಕ್ಕೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಶೌಚಾಲಯದ ತುಂಬಾ ಗಿಡಗಂಟಿ ಬೆಳೆದಿದ್ದು, ಹಾಳು ಕೊಂಪೆಯಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀತಾ ಕಟ್ಟಿಮನಿಯವರು, ವ್ಯವಹಾರದಲ್ಲಿ ಏನೋ ತಪ್ಪಾಗಿದೆ. ಇನ್ನುಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆಂದು ಅಸಮಂಜಸ ಉತ್ತರ ನೀಡಿರುವುದು, ಇವರೂ ಕೂಡಾ ಭ್ರಷ್ಟಚಾರದಲ್ಲಿ ಪಾಲ್ಗೊಂಡಿದ್ದಾರೆಂಬ ಅನುಮಾನ ವ್ಯಕ್ತವಾಗುತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಶಾಲಾ ವಾಹನಕ್ಕೆ ಲಾರಿ ಢಿಕ್ಕಿ ; ಹಲವು ಮಕ್ಕಳಿಗೆ ಗಾಯ
“ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ್ ರಾಠೋಡ್ ಅವರು ಅಧ್ಯಕ್ಷನನ್ನು ಸಂಪರ್ಕಿಸಿದಾಗ, ʼ15ನೇ ಹಣಕಾಸಿನಲ್ಲಿ ಅದೇನೋ ಆಗಿದೆ. ನೀನು ಏನು ಮಾಡ್ಕೊಳ್ತಿಯೋ ಮಾಡಿಕೋʼ ಎಂದು ಏಕವಚನದಲ್ಲಿ ಸಂಬೋಧನೆ ಮಾಡಿದರು. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗೆ ಅಗೌರವದ ಮಾತುಗಳನ್ನಾಡಿದ್ದು, ಇಂತಹವರಿಂದಲೇ ಗ್ರಾಮಗಳ ಅಭಿವೃಧ್ದಿ ಕುಂಠಿತವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ವಾಲೆಂಟಿಯರ್ : ಅನಂತನಾಗ ದೇಶಪಾಂಡೆ
