ಸರಕಾರಿ ಶಾಲೆಗಳು ದಿನಕ್ಕೊಂದರಂತೆ ಮುಚ್ಚುತ್ತಿರುವ ಹೊತ್ತಲ್ಲಿ ಚಿಕ್ಕಮಂಡ್ಯ ಶಾಲೆಯ ಮತ್ತು ಅಲ್ಲಿನ ಶಿಕ್ಷಕರ ಈ ಸಾಧನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಇತ್ತೀಚೆಗೆ ಹಳೆಬೂದನೂರು ಗ್ರಾಮದಲ್ಲಿ ನಡೆದ ಮಂಡ್ಯ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯ ಹೆಣ್ಣು ಮಕ್ಕಳ ಸಾಧನೆ ಅಚ್ಚರಿ ಮೂಡಿಸಿದೆ. ಅಥ್ಲೆಟಿಕ್ಸ್‌ನ ಓಟದ ಅಷ್ಟೂ ಪ್ರಕಾರದಲ್ಲಿ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. 100 ಮೀಟರ್ ಓಟದಿಂದ 3000 ಓಟದವರೆಗೂ ಜೊತೆಗೆ ರಿಲೆ, ನಡಿಗೆ ಹಾಗು ಖೊಖೊ ಆಟದಲ್ಲೂ ಮೊದಲ ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಚಿಕ್ಕಮಂಡ್ಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಎನ್. ದೇವರಾಜು ಮಾತನಾಡಿ, “ನಾವು ಬಂದಾಗ ಆಟದ ಮೈದಾನ ಇರಲಿಲ್ಲ. ಗಿಡ ಗಂಟಿಗಳು ಬೆಳೆದುಕೊಂಡು ಹಳ್ಳವಾಗಿತ್ತು. ಕಬಡ್ಡಿಗೆ ಮಾತ್ರ ಮನ್ನಣೆ ಇತ್ತು. ಎಲ್ಲರ ಸಹಕಾರ ಪಡೆದು ಆಟದ ಮೈದಾನ ಅಭಿವೃದ್ಧಿ ಪಡಿಸಿದೆವು. ಓಟದ ಸ್ಪರ್ಧೆಗಳಲ್ಲಿ ಪ್ರೋತ್ಸಾಹ, ನಿರಂತರ ಶ್ರಮಕ್ಕೆ ಗೆಲುವು ಸಿಕ್ಕಿದೆ. ಇದೇ ರೀತಿ ಮುಂದುವರಿದರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇದೆ” ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಚಂದನ್ ಮಾತನಾಡಿ, “ನಾನು ಬಂದಾಗ ಮೈದಾನ ಸಮತಟ್ಟಾಗಿ ಇರಲಿಲ್ಲ. ತಿಪ್ಪೆ ಹಾಕಿ ಗುಂಡಿಯಾಗಿತ್ತು. ಚರಂಡಿ ನೀರು, ಮಳೆ ನೀರು ಶಾಲ ಅಂಗಳಕ್ಕೆ ನುಗ್ಗುತ್ತಿತ್ತು. ಈಗ ಟ್ರ್ಯಾಕ್ ಆಗಿದೆ. ಖೊಖೊ, ಕಬಡ್ಡಿ ಕೋರ್ಟ್ ಆಗಿದೆ. ಮೊದಲು ಪೋಷಕರ ಜೊತೆ ಮಾತನಾಡಿ ಮನವರಿಕೆ ಮಾಡಿದೆವು. ನಂತರ ಹೆಣ್ಣು ಮಕ್ಕಳಿಗೆ ಕ್ರೀಡೆಯ ಪ್ರಯೋಜನ ಬಗ್ಗೆ ತಿಳಿಸಿಕೊಟ್ಟ ಮೇಲೆ ಭಾಗವಹಿಸುವಿಕೆ ಹೆಚ್ಚಾಯ್ತು. ಈ ಸಾಲಿನಲ್ಲಿ ಇಲಾಖೆ ನಡೆಸಿದ ಅಷ್ಟೂ ಈವೆಂಟುಗಳಲ್ಲಿ ಭಾಗವಹಿಸಿ ಒಂದಲ್ಲ ಒಂದು ಬಹುಮಾನ ಪಡೆದಿದ್ದಾರೆ. ನಮ್ಮ ಇಬ್ಬರು ಹೆಣ್ಣು ಮಕ್ಕಳು ಜಂಟಿ ಚಾಂಪಿಯನ್ ಶಿಪ್ ಗಳಿಸಿದ್ದಾರೆ” ಎಂದರು.

ಮಂಡ್ಯ ಗ್ರಾಮಾಂತರ ಪಂಚಾಯತಿ ಪಿಡಿಒ ಸುನಿಲ್ ಮಾತನಾಡಿ, “ನಮ್ಮ ವ್ಯಾಪ್ತಿಯಲ್ಲಿರುವ ಚಿಕ್ಕಮಂಡ್ಯ ಪ್ರೌಢಶಾಲೆಗೆ 2022ನೇ ಸಾಲಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪೂರೈಸಿದ್ದೇವೆ. ಪಂಚಾಯಿತಿ ಅನುದಾನದಲ್ಲಿ 2% ಅನುದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಬಳಸಲು ಅವಕಾಶ ಇದೆ. ಚಿಕ್ಕಮಂಡ್ಯ ಶಾಲೆಯವರ ಬೇಡಿಕೆಯಂತೆ ಮೈದಾನದ ಅಭಿವೃದ್ಧಿ ಆಗಬೇಕಿದೆ. ಮನರೇಗಾ ಯೋಜನೆಯಡಿ ಓಟದ ಟ್ರ್ಯಾಕ್ ಹಾಗೂ ಇನ್ನಿತರ ಆಟದ ಕೋರ್ಟ್‌ಗಳನ್ನು ಶುರು ಮಾಡಿದ್ದೇವೆ. ಸದಸ್ಯರ ಸಹಕಾರದೊಂದಿಗೆ ಆದಷ್ಟು ಬೇಗ ಕೆಲಸ ಮುಗಿಸಿ ಹಸ್ತಾಂತರಿಸುತ್ತೇವೆ” ಎಂದರು.
ಈ ಶಾಲೆಯಲ್ಲಿ ಬಹುತೇಕ ಬಡವರು, ಕೂಲಿಕಾರ್ಮಿಕರ, ದಲಿತರ ಮಕ್ಕಳೇ ಹೆಚ್ಚಾಗಿದ್ದಾರೆ. ಈ ಸಾಧನೆ ಹೀಗೆ ಮುಂದುವರಿದರೆ ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ಈ ಮಕ್ಕಳೂ ಓಡಬಹುದು. ಅನುಮಾನ ಬೇಡ ಎನ್ನುವುದು ಸಹ ಶಿಕ್ಷಕರ, ಎಸ್‌ಡಿಎಂಸಿ ಸದಸ್ಯರು ಹಾಗೂ ಊರ ಜನರ ಒಕ್ಕೊರಲ ಅನಿಸಿಕೆ.
