ಮಹಿಳೆಯರು ಒಕ್ಕೂಟ ಮತ್ತು ನಾಡ ಆಳಿಕೆಗಳ ವಿವಿಧ ಯೋಜನೆಗಳ ಉಪಯೋಗ ಪಡೆದು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಮಂಡ್ಯ ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸೀಫ್ ಹೇಳಿದರು.
ಮಂಡ್ಯ ಜಿಲ್ಲೆಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮೃದ್ಧಿ ಸಂತೃಪ್ತಿ ಮಹಿಳಾ ಉದ್ಯಮಿಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸೆಲ್ಕೋ ಸಂಸ್ಥೆಯಲ್ಲಿ ಸಿಗುವ ಉಪಕರಣಗಳನ್ನು ಬಳಸಿಕೊಂಡು, ಮಹಿಳೆಯರು ತಮ್ಮ ಸ್ವಂತ ಉದ್ಯಮಗಳನ್ನು ಆರಂಭಿಸಬಹುದು. ಬದುಕನ್ನು ಸ್ವಾವಲಂಬಿಯಾಗಿಸಲು ಸರ್ಕಾರದ ನೆರವು ಬಳಸಿಕೊಳ್ಳಿ. ಅನೇಕ ಹೆಣ್ಣುಮಕ್ಕಳು ತಮ್ಮ ಬದುಕಿನಲ್ಲಿ ಆರ್ಥಿಕ, ಮಾನಸಿಕ ಮತ್ತು ಸಾಮಾಜಿಕ ಅಡಚಣೆಯೊಂದಿಗೆ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮಹಿಳೆಯರಿಗೆ ಸಕಾರಾತ್ಮಕ ಕಣ್ಣೋಟ ಮತ್ತು ಸ್ವಾವಲಂಬಿ ಬದುಕಿನ ಶೈಲಿಯನ್ನು ಬೆಳೆಸುವ ಅವಶ್ಯಕತೆ ಇದೆ. ಈ ವಿಶೇಷ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿದೆ” ಎಂದು ಹೇಳಿದರು.
“ಮಹಿಳೆಯರು ತಮ್ಮ ಜೀವನದ ಘಟ್ಟವನ್ನು ಸುಧಾರಿಸಲು ಆಳಿಕೆಯ ಹಲವು ಯೋಜನೆಗಳನ್ನು ಒದಗಿಸಿದೆ. ಈ ಯೋಜನೆಗಳನ್ನು ಬಳಸಿಕೊಂಡು, ಮಹಿಳೆಯರು ತಮ್ಮ ಬದುಕಲ್ಲಿ ದೊಡ್ಡ ಸಾಧನೆಗಳನ್ನು ಮಾಡಬಹುದು” ಎಂದು ಮಹಿಳೆಯರಿಗೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದ ವಿಶೇಷ ವಕ್ತಾರ ಮತ್ತು ಸೆಲ್ಕೋ ಸಂಸ್ಥೆಯ ಡಿಜಿಎಮ್ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಸೆಲ್ಕೋ ಸಂಸ್ಥೆಯಲ್ಲಿ ಸಿಗುವ ಉದ್ಯೋಗದ ಉಪಕರಣಗಳ ಕುರಿತು ಮಾಹಿತಿ ನೀಡಿದರು. ಸೆಲ್ಕೋ ಸಂಸ್ಥೆಯಲ್ಲಿ ಸಿಗುವ ಉಪಕರಣಗಳು ಹೈನುಗಾರಿಕೆ, ಕೃಷಿ, ಆಹಾರ ಸಂಸ್ಕರಣೆ ಮತ್ತು ಜೀವನೋಪಾಯ ಘಟಕಗಳಲ್ಲಿ ಉದ್ಯೋಗ ಸೃಷ್ಟಿಸಲು ಸಹಾಯವಾಗುತ್ತವೆ. ಮಹಿಳೆಯರು ಈ ಉಪಕರಣಗಳನ್ನು ಬಳಸಿಕೊಂಡು ತಮ್ಮ ಉದ್ಯಮವನ್ನು ಆರಂಭಿಸಬಹುದು ಮತ್ತು ತಮ್ಮ ಬದುಕನ್ನು ಸುಧಾರಿಸಬಹುದು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನೈತಿಕತೆಯೇ ಸ್ವಾತಂತ್ರ್ಯ ಘೋಷ ವಾಕ್ಯದಡಿ ಸೆ.1ರಿಂದ 30ರವರೆಗೆ ರಾಷ್ಟ್ರವ್ಯಾಪಿ ಅಭಿಯಾನ
ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಮಂಡ್ಯ ಎನ್‌ಆರ್‌ಎಲ್‌ಎಂ ಯೋಜನಾ ನಿರ್ದೇಶಕ ಸಂಜೀವಪ್ಪ ಕೆ ಪಿ, ಜಿಲ್ಲಾ ನಬಾರ್ಡ್ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ ಬಿ ವಿ, ಜಿಲ್ಲಾ ನಲ್ಮ್ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗಾನಂದ ಆರ್, ಜಂಟಿ ಕೃಷಿ ನಿರ್ದೇಶಕ ಅಶೋಕ್ ವಿ ಎಸ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಸಲೀಮ್ ರಾಜು, ಪಿಎಂ ಯೋಜನೆ ಅಶ್ವಿನ್ ಕುಮಾರ್ ಹೆಚ್ ವಿ, ಮಂಡ್ಯ ಶಾಖೆ ಸೆಲ್ಕೋ ಮ್ಯಾನೇಜರ್ ಅಭಿಲಾಷ್ ಎಚ್ ಎನ್ ಸೇರಿದಂತೆ ಇತರರು ಇದ್ದರು.