ಅಂಗಾಗ ದಾನ, ರಕ್ತದಾನದಂತೆ ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್ ಆಸ್ಪತ್ರೆಗೆ ತಾಯಂದಿರಿಂದ ಎದೆ ಹಾಲು ದಾನವಾಗುತ್ತಿದೆ. ಎದೆ ಹಾಲು ಶೇಖರಿಸಿಡುವುದಾದದರು ಹೇಗೆ? ಯಾರಿಗೆ ಪ್ರಯೋಜನ? ಎಂಬುದರ ಮಾಹಿತಿ ಇಲ್ಲಿದೆ…
2022 ಮಾರ್ಚ್ 8 ರಿಂದ ಇಲ್ಲಿಯವರೆಗೂ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಎದೆ ಹಾಲು ಶೇಖರಣೆ ಘಟಕದಿಂದ 158 ಲೀಟರ್ ಮತ್ತು 364 ಮಿ.ಲೀ ಎದೆ ಹಾಲನ್ನು ಸಂಗ್ರಹಿಸಿಸಲಾಗಿದೆ. ಈವರೆಗೆ 886 ಶಿಶುಗಳಿಗೆ 101 ಲೀಟರ್ ವಿತರಿಸಿದೆ. ಅದರಲ್ಲಿ 300 ಅವಧಿಪೂರ್ವ ಶಿಶುಗಳಿಗೆ ಎದೆ ಹಾಲು ವಿತರಣೆಯಾಗಿದೆ.
ಶಿಶುಗಳಿಗೆ ತಾಯಿ ಹಾಲು ಶ್ರೇಷ್ಠ ಮತ್ತು ಅಮೃತವಿದ್ದಂತೆ. ಮಗು ಜನಿಸಿದ ತಕ್ಷಣ ಉತ್ಪತ್ತಿಯಾಗುವ ‘ಕೊಲಸ್ಟ್ರಮ್‘ ಮಗುವಿನ ಬೆಳವಣಿಗೆಯಲ್ಲಿ ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ತಾಯಿಯ ಹಾಲಿನ ಬದಲಾಗಿ, ಶಿಶುವಿಗೆ ಯಾವುದೇ ಆಹಾರ ಯೋಗ್ಯವಲ್ಲ.
ಆರು ತಿಂಗಳು ಎದೆ ಹಾಲು ಶೇಖರಣೆ
ತಾಯಿಯ ಎದೆಯಲ್ಲಿ ಉತ್ಪತ್ತಿಯಾಗುವ ಹಾಲನ್ನೆಲ್ಲಾ ಮಕ್ಕಳು ಕುಡಿಯುವುದಿಲ್ಲ. ಮಗು ಅಗತ್ಯವಿರುವಷ್ಟು ಹಾಲನ್ನು ಕುಡಿದು ಉಳಿಯುವ ಹಾಲನ್ನು ತಾಯಂದಿರು ವ್ಯರ್ಥವಾಗಿ ಹೊರಹಾಕುತ್ತಾರೆ. ಅಂತಹ ತಾಯಂದಿರಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ. ಬದಲಾದ ಜೀವನಶೈಲಿ, ಆಹಾರದ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಂದ ತಾಯಂದಿರಿಗೆ ಹಾಲಿನ ಕೊರತೆ ಇರಬಹುದು. ಅನಾಥ ಶಿಶುಗಳಿಗೆ, ಅವಧಿ ಪೂರ್ವ ಜನಿಸಿದ ಶಿಶುವಿಗೆ ಬೇರೊಬ್ಬ ತಾಯಿಯ ಹಾಲನ್ನು ಪಡೆದು ನೀಡಲಾಗುತ್ತದೆ. ಸಂಗ್ರಹಿಸಿದ ಎದೆಹಾಲು ಆರು ತಿಂಗಳು ವ್ಯವಸ್ಥಿತವಾಗಿ ವಿಧಿ ವಿಜ್ಞಾನಗಳನ್ನು ಅನುಸರಿಸಿ ಶೇಖರಿಸಲಾಗುತ್ತದೆ.
ಫಾರ್ಮುಲಾ ಫೀಡ್ ಮುಕ್ತ
“ಅನಾಥ ಮಕ್ಕಳು ಸೇರಿದಂತೆ ಎದೆ ಹಾಲು ಕೊರತೆ ಇರುವ ತಾಯಂದಿರ ಮಕ್ಕಳಿಗೆ ಹಸು ಹಾಲು ಅಥವಾ ವೈದ್ಯರು ನಿಯೋಜಿಸುವ ‘ಫಾರ್ಮುಲಾ ಫೀಡ್ ಪೌಡರ್’ಗಳನ್ನು ನೀಡಲಾಗುತ್ತಿತ್ತು. ಇದರಿಂದ ಮಕ್ಕಳಿಗೆ ಪೌಷ್ಠಿಕಾಂಶ ಸಿಕ್ಕರೂ, ಅದು ಯೋಗ್ಯವಾಗಿರುತ್ತಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಅನೇಕ ತಾಯಂದಿರು ಎದೆ ಹಾಲನ್ನು ಶೇಖರಿಸಿ ಫ್ರಿಜ್ನಲ್ಲಿಟ್ಟು ಮಕ್ಕಳಿಗೆ ನೀಡುತ್ತಿದ್ದರು. ಇದನ್ನು ಗಮನಿಸಿ, ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಕೂಡ ಇಂತಹ ಯೋಜನೆ ಜಾರಿಯಾಗಬೇಕು ಎಂದು ಚಿಂತಿಸಿ ಕಾರ್ಯ ರೂಪಕ್ಕೆ ತರಲಾಯಿತು. ಇದೀಗ ವಾಣಿ ವಿಲಾಸ ಆಸ್ಪತ್ರೆಯು ಎರಡು ತಿಂಗಳಿನಿಂದ ‘ಫಾರ್ಮುಲಾ ಫೀಡ್’ ಮುಕ್ತವಾಗಿದೆ,” ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಅಧೀಕ್ಷಕಿ ವೈದ್ಯೆ ಸವಿತಾ ಈದಿನ.ಕಾಮ್ನೊಂದಿಗೆ ಮಾತನಾಡಿದರು.
ಎದೆ ಹಾಲು ದಾನ ಮಾಡಲು ಈ ನಿಯಮ ಕಡ್ಡಾಯ!
ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಹೊಂದಿರುವ ತಾಯಿಯರೆಲ್ಲ ಹಾಲನ್ನು ದಾನ ನೀಡಲಾಗುವುದಿಲ್ಲ. ಎಚ್ಐವಿ ಸೋಂಕು, ಜ್ವರ ಅಥವಾ ಇನ್ನಿತರ ಗಂಭೀರ ಸಮಸ್ಯೆಗೆ ಒಳಗಾಗಿದ್ದರೆ ಹಾಲನ್ನು ದಾನವಾಗಿ ಕೊಡುವಂತಿಲ್ಲ. ತಾಯಂದಿರ ರಕ್ತವನ್ನು ಪರೀಕ್ಷಿಸಿ ತಾಯಿಯ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡ ನಂತರ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹಾಲನ್ನು ಸಂಗ್ರಹಿಸಲಾಗುತ್ತದೆ. ಇತ್ತೀಚೆಗೆ ಮಹಿಳೆಯರು ಜಾಗೃತರಾಗಿದ್ದಾರೆ. ಕೆಲವರು ತಾವೇ ಹಾಲು ಸಂಗ್ರಹಿಸಿ ವಾಣಿ ವಿಲಾಸ ಅಸ್ಪತ್ರೆಗೆ ಕಳುಹಿಸುತ್ತಾರೆ. ಅಂತಹ ಹಾಲನ್ನು ಸಂಸ್ಥೆಯವರು ಮತ್ತೊಮ್ಮೆ ಪರೀಕ್ಷಿಸಿ, ಶಿಶು ಕುಡಿಯಲು ಯೋಗ್ಯವೇ ಎಂಬುದನ್ನು ಖಚಿತಪಡಿಸಿಕೊಂಡು ನೀಡಲಾಗುತ್ತದೆ.
“ಎದೆಹಾಲನ್ನು ನೀಡುವ ತಾಯಂದಿರಿಗೆ ಆಸ್ಪತ್ರೆಯಿಂದ ಯಾವುದೇ ರೀತಿಯ ಗೌರವಧನ ನೀಡುವುದಿಲ್ಲ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಅವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಇತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು. ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗುವ ಎಲ್ಲ ಗರ್ಭಿಣಿಯರಿಗೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಎಲ್ಲ ತಾಯಂದಿರು ಹಾಲು ದಾನ ಮಾಡಿದರೆ, ಎದೆ ಹಾಲು ಕೊರತೆ ಇರುವ ಮಕ್ಕಳಿಗೆ ಫಲಕಾರಿಯಾಗಲಿದೆ,” ಎಂದು ವೈದ್ಯೆ ಸವಿತಾ ಹೇಳಿದರು.