ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಿ ಆಡಳಿತ ನಡೆಸುತ್ತಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮತ ಬ್ಯಾಂಕ್‌ಗಾಗಿ ಇನ್ನೂ ಕಾಮಗಾರಿ ನಡೆಯುತ್ತಿದ್ದರೂ ಕೂಡ ಹಲವಾರು ಕಟ್ಟಡಗಳು, ರಸ್ತೆಗಳು, ಸೇತುವೆಗಳನ್ನು ಉದ್ಘಾಟನೆ ಮಾಡಿ ದಿನವಿಡೀ ಜಾಹೀರಾತು ನೀಡುವುದು, ಹೋಗುವ ಹಾದಿಯಲೆಲ್ಲ ಬ್ಯಾನರ್ ಕಟ್ಟಿಸುವುದನ್ನು ಮೋದಿ ಅವರು ಮೈಗೂಡಿಸಿಕೊಂಡಿದ್ದಾರೆ. ಅಂತೆಯೇ, ಕರ್ನಾಟಕಕ್ಕೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದೌಡಾಯಿಸಿದ್ದ ಮೋದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ ಮಾಡಿದ್ದರು. ಆದರೆ, ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ಈ ಟರ್ಮಿನಲ್‌ನಲ್ಲಿ ಮಳೆನೀರು ಸೋರಿ ಅವಾಂತರ ಸೃಷ್ಟಿ ಮಾಡಿತ್ತು. ಜೊತೆಗೆ, ಬೆಂಗಳೂರಿನ ಐಟಿ ಕೇಂದ್ರವಾದ ವೈಟ್‌ಫೀಲ್ಡ್‌ಗೆ ಮೆಟ್ರೋ ಮಾರ್ಗವನ್ನೂ ಮೋದಿ ಉದ್ಘಾಟಿಸಿದ್ದರು. ಈ ಮೆಟ್ರೋ ನಿಲ್ದಾಣವೂ ಕೂಡ ಮಳೆ ಬಂದಾಗ ಸಂಪೂರ್ಣ ನೀರಿನಿಂದ ತುಂಬಿ ಅವಾಂತರ ಸೃಷ್ಟಿಸಿತ್ತು.
ಇನ್ನು ಲೋಕಸಭಾ ಚುನಾವಣೆಗೆ ಮುನ್ನ ಭಾರೀ ಜಾಹೀರಾತು ನೀಡಿ ಮುಂಬೈನಲ್ಲಿ ಅಟಲ್ ಸೇತುವನ್ನು ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಆದರೆ, ಅಟಲ್ ಸೇತು ಉದ್ಘಾಟನೆಯಾದ ಮೂರೇ ತಿಂಗಳಿಗೆ ಬಿರುಕು ಬಿಟ್ಟಿತ್ತು. ಇನ್ನು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿಯ ಪ್ರಮುಖ ಅಸ್ತ್ರವೆಂದು ಭಾವಿಸಿದ್ದ ಅಯೋಧ್ಯೆಯ ರಾಮಮಂದಿರ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಅರ್ಧಂಬರ್ಧ ನಿರ್ಮಾಣವಾಗಿದ್ದ ಅಯೋಧ್ಯೆಯ ರಾಮಮಂದಿರವನ್ನು ಮೋದಿ ಉದ್ಘಾಟಿಸಿದರು. ಆದರೆ, ಅಲ್ಲಿಯೂ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಇಷ್ಟೇ ಅಲ್ಲ, ಕಾಮಗಾರಿ ಮುಗಿಯುವುದಕ್ಕೂ ಮುನ್ನ ನರೇಂದ್ರ ಮೋದಿ ಅವರು ಹಲವಾರು ಕಟ್ಟಡಗಳನ್ನು, ಮಂದಿರಗಳನ್ನು, ರಸ್ತೆ, ಸೇತುವೆ, ಮೆಟ್ರೋ, ವಿಮಾನ ನಿಲ್ದಾಣ, ಪ್ರತಿಮೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಆದರೆ, ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಭ್ರಷ್ಟಾಚಾರ ನಡೆದಿವೆ ಎಂಬುದನ್ನು ಸಾರಿ ಹೇಳುತ್ತಿವೆ.
ಇನ್ನೊಂದೆಡೆ, ಮಣಿಪುರ ಹಿಂಸಾಚಾರ, ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟ, ರೈತ ಪ್ರತಿಭಟನೆಗಳು ನಡೆದಾಗ ಮೋದಿ ಅವರು ತುಟಿ ಬಿಚ್ಚಲಿಲ್ಲ. ನ್ಯಾಯ ಒದಗಿಸುವ ಭರವಸೆ ನೀಡಲಿಲ್ಲ. ಆದರೆ, ಚುನಾವಣೆಗಳು ಎದುರಾಗುತ್ತಿದ್ದಂತೆ ಮೋದಿ ಅವರು ಎಲ್ಲೆಡೆ ಹಾರಾಡಲಾರಂಭಿಸಿದರು. ಆಗಲೂ ಅವರು ಮಣಿಪುರಕ್ಕೆ ಕಾಲಿಡಲಿಲ್ಲ. ಆದರೆ, ಹಲವಾರು ಸ್ಮಾರಕ, ಕಟ್ಟಡ, ಹೆದ್ದಾರಿಗಳನ್ನು ಕಾಮಗಾರಿ ಪೂರ್ಣಗೊಳ್ಳದೆಯೇ, ಕಳಪೆ ಕಾಮಗಾರಿ ನಡೆದಿದ್ದರೂ ಅವುಗಳನ್ನು ಉದ್ಘಾಟನೆ ಮಾಡಿ ಜನರ ಕಣ್ಣಿಗೆ ಮಂಕುಬೂದಿ ಎರಚಿದರು. ಇದು ಅವರಿಗೆ ಕರಗತವಾಗಿರುವ ಅಭ್ಯಾಸ.
ಇದೀಗ, ಇಂತಹದ್ದೇ ಮತ್ತೊಂದು ಪ್ರಸಂಗ ನಡೆದಿದೆ. ಮಹಾರಾಷ್ಟ್ರದ ಸಿಂಧುದುರ್ಗ ಬಳಿಯ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿಯ 35 ಅಡಿ ಎತ್ತರದ ಪ್ರತಿಮೆ ಕುಸಿದುಬಿದ್ದಿದೆ. ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆಯನ್ನ ಉದ್ಘಾಟಿಸಿದ್ದರು. ಕಳೆಪೆ ಕಾಮಗಾರಿ ಮತ್ತು ಭ್ರಷ್ಟಾಚಾರದಿಂದಲೇ ಪ್ರತಿಮೆ ಕುಸಿದು ಬಿದ್ದಿದೆ ಎಂದು ವಿಪಕ್ಷಗಳ ಇಂಡಿಯಾ ಒಕ್ಕೂಟ ಆರೋಪಿಸಿದೆ.

ಆ ಪ್ರತಿಮೆಯೂ ಚುನಾವಣಾ ಗಿಮಿಕ್‌ನ ಭಾಗವಾಗಿ ನಿರ್ಮಿಸಿ, ಉದ್ಘಾಟಿಸಲಾಗಿದೆ ಎಂಬ ಆರೋಪಗಳಿವೆ. ಛತ್ರಪತಿ ಶಿವಾಜಿ ಮರಾಠರ ಪ್ರೀತಿಯ ರಾಜ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠರನ್ನು ಸೆಳೆಯುವುದು ಪ್ರತಿಮೆಯ ಹಿಂದಿನ ತಂತ್ರ ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ಮುನ್ನವೇ ಪ್ರತಿಮೆ ಕುಸಿದು ಬಿದ್ದಿದ್ದು, ಬಿಜೆಪಿ ವಿರುದ್ಧ ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಿದೆ. ಹೀಗಾಗಿ, ಮಹಾರಾಷ್ಟ್ರದ ಜನರಲ್ಲಿ ಮೋದಿ ಕ್ಷಮೆಯಾಚಿಸಿದ್ದಾರೆ. ಆದರೆ, ಮಣಿಪುರ ಹಿಂಸಾಚಾರ, ವಿಮಾನ ನಿಲ್ದಾಣಗಳಲ್ಲಿ ನೀರು ಸೋರಿಕೆ, ಸೇತುವೆಗಳು ಕುಸಿದು ಬಿದ್ದಾಗ, ಈ ಘಟನೆಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಾಗ ಇದೇ ಪ್ರಧಾನಿ ಮೋದಿ ಕ್ಷಮೆ ಯಾಚಿಸುವುದಿರಲಿ, ತುಟಿ ಬಿಚ್ಚಿ ಒಂದು ಮಾತನ್ನೂ ಆಡಿರಲಿಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ.
ನೂರಾರು, ಸಾವಿರಾರು ಜನರು ಜೀವತೆತ್ತಾಗಲೇ ಕ್ಷಮೆ ಕೇಳದ ಮೋದಿ, ಈಗ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದ್ದಕ್ಕೆ ತಲೆಬಾಗಿ ಕ್ಷಮೆಯಾಚಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಕುಸಿದು ಬಿದ್ದಿರುವ ವಿಚಾರ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂಬುದನ್ನ ಮೋದಿ ಅರಿತಿದ್ದಾರೆ. ಅವರ ಕ್ಷಮೆ ಕೂಡ ಚುನಾವಣಾ ಗಿಮಿಕ್ ಅಲ್ಲದೆ, ಬೇರೆ ಏನೂ ಅಲ್ಲ ಎಂಬುವುದು ಸ್ಪಷ್ಟವಾಗುತ್ತದೆ.
”ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಪಾಲಿಗೆ ಕೇವಲ ಒಂದು ಹೆಸರು ಅಥವಾ ರಾಜನಲ್ಲ. ಅವರು ನಮಗೆ ದೇವರು, ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಆದರೆ, ‘ಪ್ರತಿಮೆ ಕುಸಿದು ಬಿದ್ದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸಿದ್ದನ್ನು ತಿರಸ್ಕರಿಸುತ್ತೇವೆ’ ಎಂದು ವಿಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿ (ಎಂವಿಎ) ನಾಯಕರು ಹೇಳಿದ್ದಾರೆ. ಅಲ್ಲದೆ, ಆಡಳಿತಾರೂಢ ‘ಮಹಾಯುತಿ’ ನಾಯಕರ ಭಾವಚಿತ್ರಗಳಿದ್ದ ಪೋಸ್ಟರ್‌ಗಳಿಗೆ ಚಪ್ಪಲಿಯಿಂದ ಹೊಡೆದು (ಜೋಡೆ ಮಾರಾ) ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ, ಪ್ರತಿಮೆ ಕುಸಿದು ಬಿದ್ದ ವಿಚಾರವಾಗಿ ಮಹಾ ವಿಕಾಸ ಅಘಾಡಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ, ರಾಜ್ಯದಾದ್ಯಂತ ಬಿಜೆಪಿಯೂ ಪ್ರತಿಭಟನೆ ನಡೆಸುತ್ತಿದೆ. ಮತ್ತೆ, ಪ್ರತಿಮೆ ರಾಜಕಾರಣಕ್ಕೂ ನೆಹರೂ ಅವರನ್ನು ಬಿಜೆಪಿ ಎಳೆದು ತಂದಿದೆ.

ಹೀಗಾಗಿ, ನೆಹರೂ ನಿರ್ಮಿಸಿದ ಪ್ರತಿಮೆಗಳ ಬಗ್ಗೆ ಚರ್ಚೆಯಾಗುತ್ತಿದೆ. ನೆಹರೂ ನಿರ್ಮಿಸಿದ ಪ್ರತಿಮೆಗಳು ಇನ್ನೂ ಗಟ್ಟಿಯಾಗಿ ನಿಂತಿವೆ ಎಂದು ಕಾಂಗ್ರೆಸ್ ಅಬ್ಬರಿಸುತ್ತಿದೆ. ಏಳು ದಶಕಗಳ ಹಿಂದೆ ನೆಹರೂ ಅವರು ಗೋಧ್ರಾದಲ್ಲಿ ಸರ್ದಾರ್ ಪಟೇಲ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. 1957ರಲ್ಲಿ, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರದ ಪ್ರತಾಪಗಢ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನೂ ನೆಹರೂ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು. ಆ ಪ್ರತಿಮೆಯನ್ನು ಸ್ವತಃ ನೆಹರೂ ಅವರೇ ಉದ್ಘಾಟನೆ ಮಾಡಿದ್ದರು. ಆ ಪ್ರತಿಮೆ ನಿರ್ಮಾಣಗೊಂಡು 67 ವರ್ಷಗಳು ಕಳೆದಿವೆ. ಈಗಲೂ ಕೂಡ ನೆಹರು ಅವರು ನಿರ್ಮಾಣ ಮಾಡಿದ ಶಿವಾಜಿ ಪ್ರತಿಮೆ ಹೆಮ್ಮೆಯಿಂದ ನಿಂತಿದೆ.
ಈ ವರದಿ ಓದಿದ್ದೀರಾ?: ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?
ಆದರೆ, 8 ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿದೆ. ಚುನಾವಣೆ ಹಿನ್ನೆಲೆ, ತರಾತುರಿಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಏಕೆಂದರೆ ನಮ್ಮ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ರೆಡಿಟ್ ಮತ್ತು ಸ್ಥಾನಗಳನ್ನು ಪ್ರಧಾನ ಮಂತ್ರಿಗಳು ಬಯಸುತ್ತಾರೆ. ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ.
67 ವರ್ಷಗಳ ಹಿಂದೆ ನೆಹರೂ ಅವರು ಉದ್ಘಾಟನೆ ಮಾಡಿದ್ದ ಪ್ರತಿಮೆ ಇನ್ನು ಕೂಡ ಗಟ್ಟಿಯಾಗಿ ನಿಂತಿದೆ. ಆದರೆ, ಕಳೆದ ಎಂಟು ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಇದೀಗ ಕುಸಿದು ಬಿದ್ದಿದೆ. 50ರ ದಶಕದಲ್ಲಿ ತಂತ್ರಜ್ಞಾನದ ಬಳಕೆ ಕಡಿಮೆ ಇದ್ದರೂ, ಆಗ ನಿರ್ಮಿಸಿದ್ದ ಪ್ರತಿಮೆಗಳು, ಸೇತುವೆಗಳು ಗಟ್ಟಿಯಾಗಿವೆ. ಈಗಲೂ ಜನರನ್ನು ಸೆಳೆಯುತ್ತಿವೆ. ಜನರಿಗಾಗಿ ಬಳಕೆಯಾಗುತ್ತಿವೆ. ಆದರೆ, ತಂತ್ರಜ್ಞಾನ ಮುಂದುವರೆದು, 5ಜಿ ನೆಟ್‌ವರ್ಕ್ ಬಳಕೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿಯೂ ನಿರ್ಮಾಣವಾದ ಪ್ರತಿಮೆ ಎಂಟೇ ತಿಂಗಳಲ್ಲಿ ಕುಸಿದು ಬಿದ್ದಿದೆ. ಅಂದರೆ, ಮೋದಿ ನೇತೃತ್ವದ ಭಾರತದಲ್ಲಿ ಭ್ರಷ್ಟಾಚಾರವು ಎಷ್ಟು ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದನ್ನು ಕುಸಿದು ಬಿದ್ದ ಶಿವಾಜಿ ಪ್ರತಿಮೆ ಬಟಾಬಯಲು ಮಾಡಿದೆ. ನೆಹರೂ ಏನು ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವ ಮೋದಿ ಭಕ್ತರು, 8 ತಿಂಗಳ ಹಿಂದೆಯಷ್ಟೇ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿರುವ ವಿಚಾರದಲ್ಲಿ ಮೌನವಾಗಿದ್ದಾರೆ.