ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೌಭಾಗ್ಯ ಉಮೇಶ್ ಅವರು ಗೆಲುವು ಸಾಧಿಸಿದ್ದು, ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಲ್ಪನಾ ಅವರು ಸ್ಪರ್ಧಿಸಿದ್ದರು. ಮತದಾನದ ಪ್ರಕ್ರಿಯೆಯಲ್ಲಿ ಸೌಭಾಗ್ಯ ಪರವಾಗಿ ಒಬ್ಬ ಪಕ್ಷೇತರ ಮತ್ತು ಮೂವರು ಜೆಡಿಎಸ್ ಸದಸ್ಯರು ಸೇರಿದಂತೆ 9 ಮಂದಿ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 13 ಮತಗಳನ್ನು ಪಡೆದರು. ಮತ್ತೊಂದೆಡೆ, ಕಲ್ಪನಾ ಅವರು 11 ಮತಗಳನ್ನು ಮಾತ್ರ ಪಡೆದ ಕಾರಣ, ಅವರು ಎರಡು ಮತಗಳ ಅಂತರದಿಂದ ಸೋಲನುಭವಿಸಿದರು.
ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಶಾಮಿಯಾನ ತಿಮ್ಮೇಗೌಡ ಕೂಡಾ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದರು. ಅಲ್ಲದೆ, ಜೆಡಿಎಸ್ ಶಾಸಕ ಮಂಜು ಅವರ ಕಟ್ಟಾ ಬೆಂಬಲಿಗರಾದ ಹೊಸಹೊಳಲು ಅಶೋಕ್, ಇಂದ್ರಾಣಿ ವಿಶ್ವನಾಥ್ ಮತ್ತು ಪದ್ಮಾರಾಜು ಆಪ್ತಮಿತ್ರರಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು. ಇದು ವಿಶೇಷವೆನಿಸಿತು.

ಚುನಾವಣೆ ಪ್ರಕ್ರಿಯೆಯಲ್ಲಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಡೆಯಾಜ್ಞೆ ಪಡೆದಿದ್ದ ಕಾಂಗ್ರೆಸ್ ಹಿರಿಯ ಸದಸ್ಯ ಕೆ ಸಿ ಮಂಜುನಾಥ್ ಕೂಡಾ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸೌಭಾಗ್ಯ ಪರವಾಗಿ ಮತ ಚಲಾಯಿಸಿದರು. ಆದರೆ ಅವರು ಚುನಾವಣಾ ಫಲಿತಾಂಶ ಸಂಭ್ರಮಾಚರಣೆಯಲ್ಲಿ ಭಾಗವಹಿಸದೆ ಸಭೆಯಿಂದ ಹೊರನಡೆದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪರಿಶಿಷ್ಟ ಸಮುದಾಯದವರ ಮೇಲೆ ದೌರ್ಜನ್ಯ; ಭೀಮಸೇನೆ ಕರ್ನಾಟಕ ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಆಗ್ರಹ
ಚುನಾವಣಾ ಕರ್ತವ್ಯವನ್ನು ತಹಶೀಲ್ದಾರ್ ಆದರ್ಶ್ ನಿರ್ವಹಿಸಿದ್ದು, ಚುನಾವಣಾ ಸಹಾಯಕರಾಗಿ ಚೀಫ್ ಆಫೀಸರ್ ರಾಜು ಕೆ ವಠಾರ ಮತ್ತು ಚುನಾವಣೆ ಶಾಖೆ ಶಿರಸ್ತೇದಾರ್ ಹರೀಶ್ ಕೆಲಸ ನಿರ್ವಹಿಸಿದರು. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ, ಮಾಜಿ ಶಾಸಕ ಕೆ ಬಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕಾಂಗ್ರೆಸ್ ನಾಯಕ ಬಿ ಎಲ್ ದೇವರಾಜು ಮತ್ತು ಪಕ್ಷದ ಅನೇಕ ಪ್ರಮುಖ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
