ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯ ಸುರಂಗದಲ್ಲಿ ಆರು ಇಸ್ರೇಲಿ ಒತ್ತೆಯಾಳುಗಳ ಶವಗಳು ಪತ್ತೆಯಾಗಿದ್ದು, ಅವರ ಜೀವ ಉಳಿಸಲು ಸಾಧ್ಯವಾಗದ ಕಾರಣಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಪ್ರಜೆಗಳಲ್ಲಿ ಕ್ಷಮೆ ಕೋರಿದ್ದಾರೆ.
ದಕ್ಷಿಣ ಗಾಜಾದ ರಾಫಾ ಪ್ರದೇಶದಲ್ಲಿರುವ ಭೂಗತ ಸುರಂಗದಲ್ಲಿ ಆರು ಒತ್ತೆಯಾಳುಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಶನಿವಾರ ಹೇಳಿದೆ.
ಮೃತದೇಹಗಳು ಗಾಜಾ ಗಡಿಯ ಸಮೀಪದಲ್ಲಿರುವ ಕಿಬ್ಬುಟ್ಜ್ ಪ್ರದೇಶದ ನಿವಾಸಿಗಳದ್ದು ಎಂದು ಗುರುತಿಸಲಾಗಿದೆ. ಅವರನ್ನು ಸಂಗೀತ ಉತ್ಸವ ಕಾರ್ಯಕ್ರಮದ ವೇಳೆ ಅಪಹರಿಸಲಾಗಿತ್ತು ಎಂದು ವರದಿಯಾಗಿದೆ.
ಮೃತದೇಹಗಳು ಪತ್ತೆಯಾದ ಬಗ್ಗೆ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿರುವ ಪ್ರಧಾನಿ ನೆತನ್ಯಾಹು, “ಅವರನ್ನು ಜೀವಂತವಾಗಿ ಮರಳಿ ತರದಿದ್ದಕ್ಕಾಗಿ ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ” ಎಂದು ಇಸ್ರೇಲಿ ಜನರಿಗೆ ತಿಳಿಸಿದ್ದಾರೆ. “ನಾವು ಅವರನ್ನು ರಕ್ಷಿಸಲು ಹತ್ತಿರದಲ್ಲಿದ್ದೆವು. ಆದರೆ, ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಅವರ ಸಾವಿಗೆ ಹಮಾಸ್ ಭಾರೀ ಬೆಲೆ ತೆರಬೇಕಾಗುತ್ತದೆ” ಎಂದು ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ, “ಎಲ್ಲ ಆರು ಮಂದಿಯನ್ನು ಅಕ್ಟೋಬರ್ 7ರ ಬೆಳಿಗ್ಗೆ ಜೀವಂತವಾಗಿ ಅಪಹರಿಸಲಾಗಿತ್ತು. ನಾವು ಅವರಿದ್ದ ಸ್ಥಳವನ್ನು ತಲುಪುವ ಸ್ವಲ್ಪ ಸಮಯದ ಮೊದಲು ಅವರನ್ನು ಹಮಾಸ್ ಬರ್ಬರವಾಗಿ ಹತ್ಯೆಗೈದಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ರಾಜಕೀಯ ಲಾಭಕ್ಕಾಗಿ ಯುದ್ಧವನ್ನು ವಿಸ್ತರಿಸುತ್ತಿದ್ದಾರೆ ಎಂದು ಇಸ್ರೇಲ್‌ನ ವಿಮರ್ಶಕರು ಆರೋಪಿಸಿದ್ದಾರೆ. ಯುದ್ಧವನ್ನು ಅಂತ್ಯಗೊಳಿಸುವಂತೆ ಸಾವಿರಾರು ಇಸ್ರೇಲಿಗರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ‘ಇದು ಯುದ್ಧ ಕೊನೆಗೊಳ್ಳುವ ಸಮಯ’ ಎಂದು ಹೇಳಿದ್ದಾರೆ. ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸಲು ಅಮೆರಿಕಾ ಪ್ರಯತ್ನಿಸುತ್ತಿದೆ.
ಕಳೆದ 11 ತಿಂಗಳಿನಿಂದ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, 40,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಕೊಂದಿದೆ ಎಂದು ವರದಿಯಾಗಿದೆ. ಮಾತ್ರವಲ್ಲದೆ, ಗಾಜಾ ಪಟ್ಟಿಯ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಲಕ್ಷಾಂತರ ಪ್ಯಾಲೆಸ್ತೀನಿಯರು ನಿರಾಶ್ರಿತರಾಗಿದ್ದಾರೆ. ತಮ್ಮ ಬದುಕು ಮತ್ತು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.