ಕನಿಷ್ಠ ವೇತನ ಕಾಯ್ದೆ ಅನ್ವಯ ಮಾಸಿಕ ವೇತನ ಪಾವತಿ ಹಾಗೂ ಗುತ್ತಿಗೆ ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಾಗೂ ಪೌರಕಾರ್ಮಿಕರ ಸಂಘದ ವತಿಯಿಂದ ಹುಬ್ಬಳ್ಳಿ-ಧಾರವಾಡ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೇರವೇತನ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ 1948ರ ಅನ್ವಯ ಪ್ರತಿ ತಿಂಗಳು 7ನೇ ತಾರೀಖಿನ ಒಳಗಾಗಿ ಮಾಸಿಕ ವೇತನ ಕಡ್ಡಾಯವಾಗಿ ಪಾವತಿಸಬೇಕು. ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರಿಗೆ 3 ತಿಂಗಳಿಗೊಮ್ಮೆ ವೇತನ ಹಾಗೂ ನೇರವೇತನ ಪೌರಕಾರ್ಮಿಕರಿಗೆ 2 ತಿಂಗಳಿಗೊಮ್ಮೆ ವೇತನ ಪಾವತಿಸುವ ಮೂಲಕ ಶಾಸನಬದ್ಧ ಸೌಲಭ್ಯಗಳಿಂದ ಬಡ ದಲಿತ ಪೌರಕಾರ್ಮಿಕರಿಗೆ ಶೋಷಣೆ ಹಾಗೂ ವಂಚನೆ ಮಾಡಲಾಗುತ್ತಿದೆ ಎಂದು ಅರೋಪಿಸಿದರು.
ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆಯ ಗುತ್ತಿಗೆ ಕರಾರಿನಂತೆ ಗುತ್ತಿಗೆದಾರರು ಪ್ರತಿ ತಿಂಗಳು ತಪ್ಪದೇ ನಿಗಧಿತ ಸಮಯಕ್ಕೆ ವೇತನ ಪಾವತಿಸಿ ಪಾಲಿಕೆಗೆ ದಾಖಲೆಗಳನ್ನು ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿ ತಿಂಗಳು 7ನೇ ತಿಂಗಳಿನ ಒಳಗಾಗಿ ಪೌರಕಾರ್ಮಿಕರ ಮಾಸಿಕ ವೇತನ, ಇಎಸ್ಐ, ಪಿಎಫ್. ಮೊತ್ತಗಳನ್ನು ಪಾವತಿಸಿದ ನಂತರ ಅವರು ಸಲ್ಲಿಸಿದ ಗುತ್ತಿಗೆ ಬಿಲ್‌ಗಳನ್ನು ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯಿಂದ ಗುತ್ತಿಗೆ ಲೈಸೆನ್ಸ್ ನೋಂದಣಿ ಮೂಲ ಮಾಲಿಕರಿಂದ ನೋಂದಣಿ ಪ್ರಮಾಣ ಪತ್ರ, ಗುತ್ತಿಗೆ ಕಾರ್ಮಿಕ ಕಲ್ಯಾಣ ಮತ್ತು ಆರೋಗ್ಯ ಸೌಲಭ್ಯಗಳ ಅನುಷ್ಠಾನ, ಕ್ಯಾಂಟೀನ್, ವಿಶ್ರಾಂತಿ ಕೊಠಡಿಗಳು, ನಾಮಫಲಕ ಪ್ರಕಟಣೆ, ಪ್ರಥಮ ಚಿಕಿತ್ಸೆ ಸೌಲಭ್ಯಗಳು ಒದಗಿಸುವುದು ನಡೆಯಬೇಕು. ಶಾಸನಬದ್ಧ ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ದೊರಕಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸುವ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಆಧುನಿಕ ಯುಗದಲ್ಲಿ ಗ್ರಂಥಾಲಯ ಶಿಕ್ಷಣ ಅವಶ್ಯಕ: ಮೇಯರ್ ರಾಮಪ್ಪ ಬಡಿಗೇರ
ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ, ಶರಣಪ್ಪ ಅಮರಾವತಿ, ಪ್ರಕಾಶ ಕಡಕೋಳ, ಸತೀಶ ಹೂಗಾರ, ಆನಂದ ಸವಣೂರ ದೇವಪ್ಪ ಮುದಿಘಾಟ್ ಉಪಸ್ಥಿತರಿದ್ದರು.