ಕ್ರಿಸ್ಟಿಯಾನೊ ರೊನಾಲ್ಡೊ ಎಂಬ ದಾಖಲೆಗಳ ದಿಗ್ಗಜ; 900 ಗೋಲುಗಳ ಸರದಾರ

Date:

Advertisements
900 ಗೋಲುಗಳನ್ನು ಹೊಡೆದಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಫುಟ್‌ಬಾಲ್‌ ಲೋಕದ ಜನಪ್ರಿಯ ಆಟಗಾರ. ದಾಖಲೆಗಳ ವೀರ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರೀಡಾಪಟು. ಬಡವರ ಮಕ್ಕಳು ಇಂತಹ ಎತ್ತರಕ್ಕೆ ಏರಬೇಕು. ಆತನ ಆಟ ಮತ್ತು ಹಾದಿ- ಬಡಮಕ್ಕಳಿಗೆ ಸ್ಪೂರ್ತಿದಾಯಕವಾಗಬೇಕು.

“ಇದನ್ನು ನಾನು ಬಹಳ ದಿನಗಳಿಂದ ಸಾಧಿಸಲು ಬಯಸಿದ್ದೆ. ಈ ಸಂಖ್ಯೆಯನ್ನು ತಲುಪುತ್ತೇನೆ ಎಂಬ ನಂಬಿಕೆ ಇತ್ತು. ಏಕೆಂದರೆ ನಾನು ಆಟವಾಡುತ್ತಿರುವಾಗ ಅದು ಸಾಧ್ಯ ಎನಿಸಿತ್ತು. ಇದೊಂದು ಮೈಲಿಗಲ್ಲು ಆಗಿರುವುದರಿಂದ ಭಾವನಾತ್ಮಕವಾಗಿತ್ತು. ಆದರೆ 900 ಗೋಲುಗಳನ್ನು ಗಳಿಸುವುದು ಎಷ್ಟು ಕಷ್ಟ ಎಂದು ನನಗೆ ಮತ್ತು ನನ್ನ ಸುತ್ತಮುತ್ತಲಿನ ಜನರಿಗೆ ಮಾತ್ರ ತಿಳಿದಿದೆ” ಎಂದು ಪೋರ್ಚುಗಲ್‌ನ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ.

ಗುರುವಾರ ಲಿಸ್ಬನ್‌ನಲ್ಲಿ ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್ ಭರ್ಜರಿ ಗೆಲುವು ಸಾಧಿಸಿದೆ. ಪೋರ್ಚುಗಲ್ 2-1 ಗೋಲು ಅಂತರಗಳಿಂದ ಕ್ರೊಯೇಷಿಯಾವನ್ನು ಸೋಲಿಸಿದೆ.
ಈ ಪಂದ್ಯದಲ್ಲಿ ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇತಿಹಾಸ ನಿರ್ಮಿಸಿದ್ದಾರೆ. ರೊನಾಲ್ಡೊ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದ 900ನೇ ಗೋಲು ದಾಖಲಿಸಿ ಮೈಲಿಗಲ್ಲು ದಾಟಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು, ಫುಟ್‌ಬಾಲ್‌ ಪ್ರೇಮಿಗಳು, ಸೆಲೆಬ್ರಿಟಿಗಳು, ನಾನಾ ದೇಶಗಳ ರಾಜಕೀಯ ನಾಯಕರು ರೊನಾಲ್ಡೊಗೆ ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದು ಒಬ್ಬ ಆಟಗಾರನ ಬದುಕಿನಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಸಂದರ್ಭ.

Advertisements

ಈ ಐತಿಹಾಸಿಕ ಸಾಧನೆಯೊಂದಿಗೆ ರೊನಾಲ್ಡೊ ಫುಟ್‌ಬಾಲ್ ಇತಿಹಾಸದಲ್ಲಿ 900 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೊನಾಲ್ಡೊ ಗೋಲು ಗಳಿಸುತ್ತಿದ್ದಂತೆ ಮೈದಾನದಲ್ಲಿಯೇ ಭಾವುಕರಾದರು. ಆ ಭಾವುಕತೆಗೆ ಅಭಿಮಾನಿಗಳ ಅಭಿನಂದನೆಯೂ ಸೇರಿ, ಸಾರ್ಥಕ ಕ್ಷಣವನ್ನು ತಮ್ಮದಾಗಿಸಿಕೊಂಡರು.

ಅಂತಾರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪೈಕಿ ಪೋರ್ಚುಗಲ್ ಪರ ಆಡುವ ರೊನಾಲ್ಡೊ ಅವರದು 131ನೇ ಗೋಲು. ಇದರಲ್ಲೂ ಇವರೇ ನಂಬರ್ ಒನ್ ಆಟಗಾರರು. ಇದಲ್ಲದೆ, ಅತಿ ಹೆಚ್ಚು ಗೋಲ್ ಗಳಿಸಿದ ದಿಗ್ಗಜರ ಪೈಕಿ ರೊನಾಲ್ಡೊ 900 ಗೋಲುಗಳನ್ನು ಹೊಡೆದಿದ್ದಾರೆ. ಬಳಿಕ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 842 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೋರ್ಚುಗಲ್‌ನ ಮತ್ತೊಬ್ಬ ಆಟಗಾರ ರುಬೆಲ್ ಡಿಯಾಸ್ 769 ಗೋಲುಗಳನ್ನು ಗಳಸಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಫುಟ್‌ಬಾಲ್‌ ಲೋಕದ ದಂತಕಥೆ ಬ್ರೆಜಿಲ್‌ನ ಪೀಲೆ 765 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇದನ್ನು ಓದಿದ್ದೀರಾ?: KPSC ಎಡವಟ್ಟಿನಿಂದಾಗಿ ಮರುಪರೀಕ್ಷೆ; ಆದ ನಷ್ಟ ಭರಿಸುವವರು ಯಾರು?

ಪ್ರಪಂಚದ ಅತ್ಯಂತ ಜನಪ್ರಿಯ ಆಟಗಾರ ಎಂಬ ಖ್ಯಾತಿಗೆ ಒಳಗಾಗಿರುವ 39ರ ಹರೆಯದ ರೊನಾಲ್ಡೊ, ದಾಖಲೆಗಳನ್ನು ನಿರ್ಮಿಸುವುದರಲ್ಲಿಯೂ ಮುಂದೆ ಇದ್ದಾರೆ. ಜನಪ್ರಿಯತೆ ಮತ್ತು ದಾಖಲೆಗಳನ್ನೇ ಮುಂದಿಟ್ಟು ಹಣ ಮಾಡುವುದರಲ್ಲೂ ಅಗ್ರಪಂಕ್ತಿಯಲ್ಲಿದ್ದಾರೆ.

ಸಾಮಾನ್ಯವಾಗಿ ಫುಟ್‌ಬಾಲ್‌ ಆಟಗಾರರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿರುತ್ತಾರೆ. ಅಂತಹ ಆಟಗಾರರ ಪೈಕಿ ಒಬ್ಬರಾಗಿರುವ ರೊನಾಲ್ಡೊ ಮುಟ್ಟಿದ್ದೆಲ್ಲ ಮಣಗಟ್ಟಲೆ ಹಣ ತರುತ್ತಿದೆ. ತಲೆಗೆ ಹಾಕುವ ಕ್ಯಾಪ್‌ನಿಂದ ಹಿಡಿದು ಕಾಲಿಗೆ ಧರಿಸುವ ಶೂಸ್‌ವರೆಗೆ, ಪ್ರಪಂಚದ ಪ್ರತಿಷ್ಠಿತ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಇನ್ನು ಜಾಹೀರಾತುಗಳಿಂದ ಲೆಕ್ಕಕ್ಕೆ ಸಿಗದಷ್ಟು ದುಡ್ಡು ಸಿಗುತ್ತದೆ.

ಇದಷ್ಟೇ ಅಲ್ಲ, ಸ್ಟಾರ್ ಆಟಗಾರ ರೊನಾಲ್ಡೊ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಾರೆ. ಅದನ್ನು ಕೂಡ ಅವರು ಆದಾಯದ ಒಂದು ಮೂಲವೆಂದು ಪರಿಗಣಿಸುತ್ತಾರೆ. ಆಟದಷ್ಟೇ ಸಮಯವನ್ನು ಸೋಷಿಯಲ್ ಮೀಡಿಯಾಕ್ಕೂ ನೀಡಿ, ಅಲ್ಲೂ ಸ್ಪರ್ಧಾತ್ಮಕ ಪೈಪೋಟಿಗಿಳಿಯುತ್ತಾರೆ. ಇದೇ ಆಗಸ್ಟ್‌ನಲ್ಲಿ ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ಯುಟ್ಯೂಬ್‌ನಲ್ಲಿ ಯುಆರ್ ಕ್ರಿಸ್ಟಿಯಾನೋ (UR Cristiano) ಎಂಬ ಹೆಸರಿನ ಚಾನಲ್ ಶುರು ಮಾಡಿದರು. ಕೇವಲ 12 ಗಂಟೆಗಳಲ್ಲಿ ಹತ್ತು ಮಿಲಿಯನ್ ಚಂದಾದಾರರನ್ನು ಗಳಿಸಿದರು. ಆ ತಕ್ಷಣವೇ ಅವರಿಗೆ ಗೋಲ್ಡನ್ ಪ್ಲೇ ಬಟನ್ ಕೂಡ ಸಿಕ್ಕಿತು. ಅದರಲ್ಲೂ ರೊನಾಲ್ಡೊ ದಾಖಲೆ ಮುರಿದಿದ್ದಲ್ಲದೆ, ಅಪಾರ ಹಣವನ್ನು ಖಜಾನೆಗೆ ತುಂಬಿಕೊಂಡರು.

ರೊನಾಲ್ಡೊ ಫೇಸ್‌ಬುಕ್‌ನಲ್ಲಿ 170, ಟ್ವಿಟರ್‌ನಲ್ಲಿ 112 ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ರೊನಾಲ್ಡೊ ಯುಟ್ಯೂಬ್‌ಗೆ ಬಂದು ಸರಿಯಾಗಿ ತಿಂಗಳಾಗಿಲ್ಲ, ಆಗಲೇ ಅವರು 100 ಮಿಲಿಯನ್ ಯುರೊ ಹಣ ಗಳಿಸಿದ್ದಾರೆ. 28ಕ್ಕೂ ಹೆಚ್ಚು ವಿಡಿಯೋಗಳನ್ನು ಹಂಚಿಕೊಂಡಿರುವ ಅವರ ಯುಟ್ಯೂಬ್‌ನಲ್ಲಿ ಮಿಲಿಯನ್ಸ್ ಲೆಕ್ಕದಲ್ಲಿ ವ್ಯೂವ್ಸ್ ನೋಡಬಹುದಾಗಿದೆ. ಇದರಿಂದ ಥ್ರಿಲ್ ಆಗಿರುವ ರೊನಾಲ್ಡೊ, ಈಗಾಗಲೇ ಯೂಟ್ಯೂಬ್‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಮಿಸ್ಟರ್ ಬೀಸ್ಟ್ ಅವರನ್ನು ಹಿಂದಿಕ್ಕುವ ಬಗ್ಗೆ ಕಾದು ನೋಡಿ ಎಂದಿದ್ದಾರೆ.

ರೊನಾಲ್ಡೊ ಮೈದಾನಕ್ಕಿಳಿದರೆ ಆಟಕ್ಕೊಂದು ಕಳೆ ಬರುತ್ತದೆ. ಚೆಂಡಿಗೆ, ಕಾಲುಗಳಿಗೆ ಮಿಂಚಿನ ಸಂಚಾರವಾಗುತ್ತದೆ. ಅಭಿಮಾನಿಗಳು ಕೂತ ಕುರ್ಚಿಯಿಂದ ಮೇಲೆದ್ದು ಕುಣಿಯುವಂತಹ ಚಮತ್ಕಾರ ನಡೆದುಹೋಗುತ್ತದೆ. ಅವರು ಆಟವನ್ನು ಅಪಾರವಾಗಿ ಇಷ್ಟಪಡುತ್ತಾರೆ. ಆಟದಷ್ಟೇ ಅವರ ಸಾಮಾಜಿಕ ವ್ಯಕ್ತಿತ್ವವೂ ಕುತೂಹಲಕರವಾಗಿದೆ. ಮಡೈರಾ ಎಂಬ ದ್ವೀಪದಲ್ಲಿ ಕಡುಕಷ್ಟದ ಕುಟುಂಬದಲ್ಲಿ ಜನಿಸಿದ ರೊನಾಲ್ಡೊ ತಾಯಿ ಅಡುಗೆ ಮಾಡುವ ಕೆಲಸದಲ್ಲಿದ್ದರೆ, ತಂದೆ ಪೌರಕಾರ್ಮಿಕರಾಗಿದ್ದರು. ಮನೆತುಂಬಾ ಮಕ್ಕಳು. ಹಸಿದು ಹೊಟ್ಟೆಗಳು. ಮಲಗಲಿಕ್ಕೂ ಜಾಗವಿಲ್ಲದ ಪುಟ್ಟ ಮನೆ. ಇಂತಹ ಪರಿಸ್ಥಿತಿಯಿಂದ ಪುಟಿದೆದ್ದ ಪ್ರತಿಭೆ ರೊನಾಲ್ಡೊ.

cristiano ronaldo portugal 3480161

ಬಾಲಕ ರೊನಾಲ್ಡೊಗೆ ತಲೆತುಂಬಾ ಫುಟ್‌ಬಾಲ್‌ ತುಂಬಿಹೋಗಿತ್ತು. ಅಪ್ಪ ಕಿಟ್ ಮ್ಯಾನ್ ಆಗಿದ್ದರು. ಅವರೊಂದಿಗೆ ಆಗಾಗ ಮೈದಾನಕ್ಕೆ ಹೋಗುತ್ತಿದ್ದ ರೊನಾಲ್ಡೊಗೆ ಆಡುವ ಆಸೆಯಾದರೂ, ಅದಕ್ಕೆ ಬೇಕಾದ ತರಬೇತಿ, ಸಿದ್ಧತೆ ಇರಲಿ, ಕಾಲಿಗೆ ಧರಿಸುವ ಶೂ ಕೂಡ ಇರಲಿಲ್ಲ. ನಿರಾಶೆಯಿಂದ ಬರಿಗಾಲಿನಿಂದ ಮಣ್ಣನ್ನು ಒದ್ದು ಹೊಟ್ಟೆಯೊಳಗಿನ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದ. ಅದಕ್ಕೆ ತಕ್ಕಂತೆ, ಸ್ಕೂಲಿನಲ್ಲಿ ಓದುತ್ತಿರುವಾಗ ಶಿಕ್ಷಕರ ಮೇಲೆ ಸ್ಟೂಲ್ ಎತ್ತಿಹಾಕಿದ್ದಕ್ಕೆ ಸ್ಕೂಲಿನಿಂದಲೇ ಹೊರಹಾಕಿಸಿಕೊಂಡಿದ್ದ. ಆನಂತರ ಶಸ್ತ್ರಚಿಕಿತ್ಸೆಗೊಳಗಾಗಿ, ಫುಟ್‌ಬಾಲ್‌ ಆಡುವಂತಿಲ್ಲ ಎಂದು ವೈದ್ಯರ ಕಟ್ಟಪ್ಪಣೆಗೂ ಗುರಿಯಾಗಿದ್ದ.   

ಆದರೂ ಫುಟ್‌ಬಾಲ್‌ ಆಟದ ಒಳಗುದಿ ಮೈದಾನಕ್ಕೆಳೆಸುತ್ತಿತ್ತು. ಕಷ್ಟಪಟ್ಟು ಮುಂದೊಂದು ದಿನ ಅಂಡರ್ 15 ತಂಡಕ್ಕೆ ಆಯ್ಕೆಯಾದ. ಅಲ್ಲಿಂದ ಮುಂದಕ್ಕೆ ದಾಖಲೆಗಳೆಲ್ಲ ರೊನಾಲ್ಡೊ ಹೆಸರಿಗೆ ವರ್ಗವಾಯಿತು. ಈಗ 900 ಗೋಲುಗಳನ್ನು ಹೊಡೆದಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಫುಟ್‌ಬಾಲ್‌ ಲೋಕದ ಜನಪ್ರಿಯ ಆಟಗಾರ. ದಾಖಲೆಗಳ ವೀರ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರೀಡಾಪಟು. ಬಡವರ ಮಕ್ಕಳು ಇಂತಹ ಎತ್ತರಕ್ಕೆ ಏರಬೇಕು. ಆತನ ಆಟ ಮತ್ತು ಹಾದಿ- ಬಡಮಕ್ಕಳಿಗೆ ಸ್ಪೂರ್ತಿದಾಯಕವಾಗಬೇಕು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

Download Eedina App Android / iOS

X