“ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 370ನೇ ವಿಧಿಯನ್ನು ಮರಳಿ ತರಲು ಬಯಸುತ್ತವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು ಕಾಂಗ್ರೆಸ್, ಎನ್‌ಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಕಾಂಗ್ರೆಸ್ ಮತ್ತು ಎನ್‌ಸಿ ಮುಸ್ಲಿಂ ಕೃಷಿ ಜನಾಂಗ (ಗುಜ್ಜರ್), ಪಹಾಡಿಯಾ (ಮುಸ್ಲಿಂ ಪರಿಶಿಷ್ಠ ಜನಾಂಗ), ಕಣಿವೆ ಪ್ರದೇಶದಲ್ಲಿ ಜೀವಿಸುವವರು, ಒಬಿಸಿಗಳು ಮತ್ತು ದಲಿತರಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಯಸುತ್ತವೆ” ಎಂದು ಆರೋಪಿಸಿದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಅಮಿತ್ ಶಾ, “ರಾಹುಲ್ ಬಾಬಾ ನಾನು ಏನು ಹೇಳುತ್ತಿದ್ದೇನೆ ಎಂದು ಎಚ್ಚರಿಕೆಯಿಂದ ಕೇಳಿ. ಗುಜ್ಜರ್, ಪಹಾಡಿಯಾ, ಕಣಿವೆ ಪ್ರದೇಶದ ಜನರು, ದಲಿತರಿಗೆ ಇರುವ ಮೀಸಲಾತಿಯನ್ನು ನೀವು ಮುಟ್ಟದ ಹಾಗೆ ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಅಮಿತ್ ಶಾ ಮಗ ಜಯ್ ಶಾಗೆ 35 ವರ್ಷಕ್ಕೇ 12 ಹುದ್ದೆ; ಪದವೀಧರರಿಗೆ ಪಕೋಡ!
ಇನ್ನು ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ವಿಚಾರವನ್ನು ಮಾತನಾಡಿದ ಅಮಿತ್ ಶಾ, “”ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳುತ್ತಿವೆ. ಯಾರು ರಾಜ್ಯ ಸ್ಥಾನಮಾನ ಕೊಡಬಹುದು ಹೇಳಿ? ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮಾತ್ರ ರಾಜ್ಯ ಸ್ಥಾನಮಾನ ನೀಡಬಹುದು. ಜಮ್ಮು ಮತ್ತು ಜನರನ್ನು ಕಾಂಗ್ರೆಸ್ ಮುರ್ಖರನ್ನಾಗಿಸುವುದು ಬೇಡ. ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ನಾವು ರಾಜ್ಯ ಸ್ಥಾನಮಾನ ನೀಡುತ್ತೇವೆ. ರಾಹುಲ್ ಗಾಂಧಿ ಇಲ್ಲಿಯ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಚುನಾವಣೆಗೂ ಮುನ್ನ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್, ಎನ್‌ಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಈ ನಡುವೆ ಬಿಜೆಪಿ ಚುನಾವಣೆ ಬಳಿಕ ರಾಜ್ಯ ಸ್ಥಾನಮಾನ ನೀಡುವುದಾಗಿ ಚುನಾವಣಾ ಪ್ರಚಾರ ನಡೆಸುತ್ತಿದೆ. ರಾಜ್ಯ ಸ್ಥಾನಮಾನ ನೀಡಲು ಚುನಾವಣೆ ಮುಗಿಯುವವರೆಗೆ ಯಾಕೆ ಕಾಯಬೇಕು ಎಂದು ವಿಪಕ್ಷಗಳು ಪ್ರಶ್ನಿಸಿದೆ.
Jammu: Union Home Minister Amit Shah says, "…Congress and National Conference want to bring back Article 370. Congress and NC want to take away reservations for Gujjars, Bakarwals, Pahadis, OBCs, and Dalits…Rahul Baba listen carefully to what I'm saying…We will ensure that… pic.twitter.com/ThitzYKmU2
— IANS (@ians_india) September 7, 2024
