ಈವೆಂಟ್ ಮ್ಯಾನೆಜ್‌ಮೆಂಟ್ ಹೆಸರಲ್ಲಿ ಕಮಿಷನ್ ಆಸೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸುತ್ತಿರುವ ಮಂಡ್ಯ ಜಿಲ್ಲಾಡಳಿತದ ನಡೆ ಸರಿಯಲ್ಲ ಎಂದು ಕಲಾವಿದರ ಸಂಘದ ಸಂಚಾಲಕ ಕಾರಸವಾಡಿ ಮಹದೇವ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಸ್ಥಳೀಯ ಕಲಾವಿದರು ಮತ್ತು ಕಲೆಗಳಿಗೆ ಗಗನಚುಕ್ಕಿ ಜಲಪಾತೋತ್ಸವ ಸಮಿತಿ ಹಾಗೂ ಶ್ರೀರಂಗಪಟ್ಟಣ ದಸರಾ ಉತ್ಸವ ಸಮಿತಿಗಳು ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಮಾತನಾಡಿದರು. ಬಳಿಕ ಜಿಲ್ಲೆಯ ಎಲ್ಲಾ ಕಲಾವಿದರಿಂದ ಸೆಪ್ಟೆಂಬರ್ 9 ಸೋಮವಾರ ಕಾವೇರಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಮಂಡ್ಯ ಜಿಲ್ಲೆ ಸಾಕಷ್ಟು ಕಲೆ ಹಾಗೂ ಕಲಾವಿದರಿಗೆ ಮೂಲಸ್ಥಾನವಾಗಿದೆ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ಜಿಲ್ಲೆಯ ಕಲೆ, ಕಲಾವಿದರಿಗೆ ದೊಡ್ಡ ಸ್ಥಾನಮಾನವಿದೆ. ಆದರೆ ಜಿಲ್ಲಾಡಳಿತ ಈ ಪ್ರತಿಭೆಗಳಿಗೆ ಬೆಲೆ ಕೊಡದೆ ನಡೆದುಕೊಳ್ಳುತ್ತಿದೆ” ಎಂದು ಆರೋಪಿಸಿದರು.
ಸಂತೆಕಸಲಗೆರೆ ಬಸವರಾಜು ಮಾತನಾಡಿ, “ಸಾವಿರಾರು ಕಲಾವಿದರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಹಲವು ವರ್ಷಗಳಿಂದ ಕಲೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದೆ, ಸರ್ಕಾರ ಅನ್ಯಾಯ ಮಾಡುತ್ತಿದೆ” ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಸಿ ಕುಮಾರಿ ಮಾತನಾಡಿ, “ಜಿಲ್ಲೆಯ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ತಾರತಮ್ಯ ನಿಲ್ಲಿಸಿ, 15 ದಿನಗಳೊಳಗಾಗಿ ಸಂಭಾವನೆ ನೀಡಬೇಕು ಮತ್ತು ಕಲಾಪ್ರದರ್ಶನ ನಡೆಯುವಾಗ ನೀರು, ಊಟ, ವಸತಿ ಹಾಗೂ ವಸ್ತ್ರಾಲಂಕಾರಕ್ಕೆ ಸ್ಥಳಾವಕಾಶ ಏರ್ಪಾಡು ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಮಹಿಳಾ ಮುನ್ನಡೆಯ ಪೂರ್ಣಿಮಾ ಮಾತನಾಡಿ, “ಕೀಳು ಅಭಿರುಚಿಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿ ತಂಡದಂತಹ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ನೇರವಾಗಿ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಬೇಕು. ಸ್ಥಳೀಯ ಕಲಾವಿದರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಿಯೋಜಿಸಲು ಶಿಫಾರಸು ಮಾಡಬೇಕು” ಎಂದರು.
“ಜಿಲ್ಲೆಯಲ್ಲಿ ಸಾಕಷ್ಟು ಜನ ಡ್ರಾಮ ಸೀನರಿ ಮಾಲೀಕರು, ನಾಟಕ ಕಲಾವಿದರು, ವಾದ್ಯಗೋಷ್ಠಿ ಕಲಾವಿದರು, ಶಾಮಿಯಾನ, ಧ್ವನಿವರ್ಧಕ, ಬೆಳಕು ದೀಪ ಅಲಂಕಾರ, ವಸ್ತ್ರಾಲಂಕಾರದವರಿಗೆ ಜೀವನ ಭದ್ರತೆ ಇಲ್ಲದಿರುವುದರಿಂದ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು” ಎಂದು ಕಲಾವಿದರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸಮಗ್ರ ಅಭಿವೃದ್ಧಿ ಕುರಿತು ಅ.20ರಂದು ಬೃಹತ್ ವಿಚಾರ ಸಂಕಿರಣ
ಕಲಾವಿದರ ಮನವಿ ಸ್ವೀಕರಿಸಿದ ಸ್ಥಾನಿಕ ತಹಶೀಲ್ದಾರ್ ರೋಹಿಣಿ ಮಾತನಾಡಿ, “ನಿಮ್ಮ ಮನವಿಯನ್ನು ಜಿಲ್ಲಾಧಿಕಾರಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ನ್ಯಾಯ ಕೊಡಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಾಂಸ್ಕೃತಿಕ ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಶಿಲ್ಪ, ಕರ್ನಾಟಕ ಜನಶಕ್ತಿ ಸಿದ್ದರಾಜು, ರಾಹುಲ್ ಮಂಡ್ಯ, ಕಲಾವಿದರಾದ ಹುರುಗಲವಾಡಿ ರಾಮಯ್ಯ, ಮಂಗಲ ಲಂಕೇಶ್, ವೈರಮುಡಿ, ಯೋಗೇಶ್, ಬಸವರಾಜು, ಹನಿಯಂಬಾಡಿ ಶೇಖರ್ ಸೇರಿದಂತೆ ಬಹುತೇಕ ಕಲಾವಿದರು ಇದ್ದರು.