ಮಂಡ್ಯ ಜಿಲ್ಲಾಡಳಿತ ಕಬ್ಬು ಕಟಾವಿಗೆ ಕಾರ್ಖಾನೆಯ ಎಲ್ಲೆಯನ್ನು ಗುರುತಿಸಿರುವುದು ಸರಿಯಾದ ಕ್ರಮವಲ್ಲ. ಕಬ್ಬು ಕಟಾವಿಗೆ ಸೂಕ್ತ ಕ್ರಮದ ಅಗತ್ಯ ಕೈಗೊಳ್ಳಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, “ಮೊದಲು ಕಟಾವಿಗೆ ಬಂದಿರುವ ಕಬ್ಬನ್ನು ಯಾವ ಕಾರ್ಖಾನೆಗಾದರೂ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಬೇಕು. ಇದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿ ಆದೇಶ ಹಿಂಪಡೆಯುವಂತೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ಕಬ್ಬು ಕಟಾವು ಮಾಡುವುದು 16, 17 ತಿಂಗಳು ವಿಳಂಬವಾಗುತ್ತಿದೆ. ಹೀಗೆ ಹೊತ್ತುಮೀರಿ ಕಡಿಯುವ ಕಬ್ಬಿನ ಮಾಹಿತಿ ಪಡೆದು ರೈತರಿಗೆ ಪರಿಹಾರ ಕೊಡಿಸುವ ಬಗ್ಗೆ ಆಳಿಕೆಯ ಗಮನಕ್ಕೆ ತರಲಾಗುವುದು” ಎಂದರು.
“ಕಟಾವಿಗೆ ಬಂದಿರುವ ಕಬ್ಬನ್ನು ಒಪ್ಪಂದದ ಹೊತ್ತಿನಲ್ಲಿ ಕಟಾವು ಮಾಡಿಕೊಳ್ಳಬೇಕು. ಅದು ಸಾಧ್ಯವಾಗದೇ ಇದ್ದರೆ ಅಂತಹ ಕಬ್ಬುಗಳನ್ನು ಕಟಾವು ಮಾಡಿಕೊಂಡು ಬೇರೆ ಕಾರ್ಖಾನೆಗೆ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಬೇಕು. ಇದು ಕಬ್ಬು ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಪರಿಗಣಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುತ್ತೇನೆ” ಎಂದರು.
“ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆಯಾ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ. ಏಳಿಗೆಗೆ ಇದರಿಂದ ತೊಡಕು ಇದಿಯಾ ಅಥವಾ ಇಲ್ಲವೇ ಎಂಬ ಅಂಶವನ್ನು ತಿಳಿದುಕೊಂಡು ಅದನ್ನು ಮರುಪರಿಶೀಲನೆ ನಡೆಸಿದರೆ ಒಳಿತಾಗುತ್ತದೆ. ಏಳಿಗೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೆಲಸ ನಡೆಯಬೇಕೆಂದು ಕೆಲವು ಜನರು ಹೇಳುತ್ತಿದ್ದಾರೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕೆ ನಿಜಾಮುದ್ದೀನ್ ಒತ್ತಾಯ
“ಭ್ರೂಣಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಎಲ್ಲಿಯೂ ಇದು ನಡೆಯಬಾರದು. ಎಲ್ಲರಿಗೂ ಬದುಕುವ ಹಕ್ಕಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಭ್ರೂಣಹತ್ಯೆ ನಡೆಯುವುದನ್ನು ಎಲ್ಲರು ಹೊಣೆಗಾರಿಕೆಯಿಂದ ತಡೆಯಬೇಕು. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಹೆಚ್ಚು ನಿಗಾವಣೆ ಮಾಡಬೇಕು” ಎಂದು ತಿಳಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ ಎಲ್ ಕೆಂಪೂಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಶಿವಳ್ಳಿ ಇದ್ದರು.