ಸೌರವ್ಯೂಹ ರಚನೆಯಾದಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುತ್ತಲೇ ಇವೆ. 20 ಮತ್ತು 21ನೇ ಶತಮಾನದಲ್ಲಿ ಒಟ್ಟು 18 ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಅವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳು ತೀವ್ರ ಪರಿಣಾಮಕಾರಿಯಾಗಿರಲಿಲ್ಲ.1908ರ ಜೂನ್ 30ರಂದು ರಷ್ಯಾದ ಪೂರ್ವ ಸೈಬೀರಿಯಾದ ಟುಂಗುಸ್ಕಾ ನದಿತೀರದ ಕಾಡಿನ ಮೇಲೆ ಎರಡು ಅಂತಸ್ತಿನ ಮನೆಯ ಗಾತ್ರ ಹಾಗೂ ಎತ್ತರದಷ್ಟಿದ್ದ ಕ್ಷುದ್ರಗ್ರಹ ಅಪ್ಪಳಿಸಿ ಅಲ್ಲಿನ ಎರಡು ಸಾವಿರ ಚದರ ಕಿ.ಮೀನಷ್ಟು ವ್ಯಾಪ್ತಿಯ ಕಾಡನ್ನು ಕ್ಷಣಾರ್ಧದಲ್ಲಿ ನಾಶಪಡಿಸಿತ್ತು.
ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರವನ್ನು ಹೊಂದಿರುವ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯ ಕಡೆ ಶರವೇಗದಲ್ಲಿ ಧಾವಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ಮಾಹಿತಿ ನೀಡಿರುವುದು ವಿಜ್ಞಾನಿಗಳಲ್ಲಿ ಆತಂಕ ಸೃಷ್ಟಿಸಿದೆ. 2024 ಒಎನ್ ಎಂಬ ಹೆಸರಿನ ಕ್ಷುದ್ರಗ್ರಹ ಗಂಟೆಗೆ 40,235 ಕಿ.ಮೀ ವೇಗದಲ್ಲಿ ಭೂಗ್ರಹದತ್ತ ಧಾವಿಸುತ್ತಿದ್ದು, 2024ರ ಸೆಪ್ಟೆಂಬರ್ 15ರಂದು ಪೃಥ್ವಿಯ ಅತ್ಯಂತ ಸನಿಹದಲ್ಲಿ ಹಾದುಹೋಗಲಿದೆ. 2024ರ ಸೆಪ್ಟೆಂಬರ್ 5ರಂದು ಜಿ.ಬೊರಿಸೋವ್ ಎಂಬ ವಿಜ್ಞಾನಿ ಕಂಡುಹಿಡಿದಿರುವ 2024 ಒಎನ್ ಕ್ಷುದ್ರಗ್ರಹ ಭೂಮಿಯಿಂದ ಸುಮಾರು 6,20,000 ಮೈಲು ಸನಿಹದಲ್ಲಿ ಹಾದುಹೋಗಲಿದೆ. ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ ಕ್ಷುದ್ರಗ್ರಹದ ದಿಕ್ಕನ್ನು ನಿಕಟವಾಗಿ ಗಮನಿಸುತ್ತಿದೆ.
ಕ್ಷುದ್ರಗ್ರಹದ ಮಾರ್ಗ ಸ್ವಲ್ಪಮಟ್ಟಿಗೆ ಬದಲಾದರೂ ಅದು ಭೂಮಿಯ ಕಡೆಗೆ ಹಿಂತಿರುಗುವ ಸಂಭವನೀಯತೆ ತುಂಬಾ ಕಡಿಮೆ. ಅಂದರೆ ಈ ಸಾಧ್ಯತೆ ಕೇವಲ ಶೇ. 5ರಷ್ಟು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ದುರಂತದ ಘರ್ಷಣೆಯ ಸಂಭವನೀಯತೆ 2 ಶತಕೋಟಿಯಲ್ಲಿ 1ಕ್ಕಿಂತ ಕಡಿಮೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಏಪ್ರಿಲ್ 13, 2029 ರಂದು ಭೂಮಿ ಸಮೀಪಿಸುವ ಮತ್ತೊಂದು ಕ್ಷುದ್ರಗ್ರಹ
9942 ಅಪೋಫಿಸ್ ಎಂಬ ಹೆಸರಿನ ಮತ್ತೊಂದು ಕ್ಷುದ್ರಗ್ರಹ ಏಪ್ರಿಲ್ 13, 2029ರಂದು ಭೂಮಿಯ ಮೂಲಕ ಹಾದುಹೋಗಲಿದೆ. ಈ ಕ್ಷುದ್ರಗ್ರಹ ಕೂಡ 60 ಅಂತಸ್ತಿನ ಕಟ್ಟಡದಷ್ಟು ಅಥವಾ ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರವನ್ನು ಹೊಂದಿದ್ದು ಗಂಟೆಗೆ 40,235 ಕಿ.ಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ. ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಣ್ಣ ಘರ್ಷಣೆ ಕೂಡ ಕ್ಷುದ್ರಗ್ರಹದ ಪಥವನ್ನು ಬದಲಾಯಿಸಬಹುದು ಎಂದು ಕೆನಡಾದ ಖಗೋಳಶಾಸ್ತ್ರಜ್ಞ ಪೊಲ್ಲಿ ವೀಗರ್ಟ್ ಅವರ ಹೊಸ ಅಧ್ಯಯನ ಹೇಳಿದೆ. 99942 ಅಪೋಫಿಸ್ ಅನ್ನು ‘ಗಾಡ್ ಆಫ್ ಚೋಸ್’ ಎಂದೂ ಕರೆಯುತ್ತಾರೆ. 99942 ಅಪೋಫಿಸ್ ಅನ್ನು ಮೊದಲು 2004 ರಲ್ಲಿ ಪತ್ತೆಹಚ್ಚಲಾಯಿತು. ಈ ಬೃಹತ್ ಬಾಹ್ಯಾಕಾಶ ಬಂಡೆಯು ಪ್ರತಿ 7,500 ವರ್ಷಗಳಿಗೊಮ್ಮೆ ಭೂಮಿಯ ಸಮೀಪ ಬರುತ್ತದೆ. ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಂಭವನೀಯತೆ ಶೇ. 2.7ರಷ್ಟು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಕ್ಷುದ್ರಗ್ರಹಗಳೆಂದರೇನು?
ಬಾಹ್ಯಾಕಾಶದಲ್ಲಿನ ತೇಲುವ ಬೃಹತ್ ಗಾತ್ರದ ಬಂಡೆಗಳನ್ನು ಕ್ಷುದ್ರಗ್ರಹಗಳು ಎನ್ನಲಾಗುತ್ತದೆ. ಅವುಗಳಲ್ಲಿ ಪ್ರತಿದಿನ ಸುಮಾರು 100 ಟನ್‌ಗಳಷ್ಟು ಕಲ್ಲುಗಳು ಭೂಮಿಯ ಕಡೆಗೆ ಅಪ್ಪಳಿಸುತ್ತವೆ. ಹೀಗೆ ಬಿದ್ದ ದೊಡ್ಡ ಬಂಡೆಗಳಲ್ಲಿ ಬಹುತೇಕ ಭೂಮಿಯನ್ನು ತಲುಪುವ ಮೊದಲೇ ಆಕಾಶದಲ್ಲಿಯೇ ಉರಿದು ಬೂದಿಯಾಗುತ್ತವೆ. ರಾತ್ರಿಯ ವೇಳೆ ಆಕಾಶದಲ್ಲಿ ಹಠಾತ್ತನೇ ಪ್ರಜ್ವಲಿಸುವ ವಸ್ತುವೊಂದು ಭೂಮಿಯ ಕಡೆಗೆ ವೇಗವಾಗಿ ಬರುವುದನ್ನು ನೀವು ಆಗಾಗ ನೋಡಿರಬಹುದು. ಇವು ಕ್ಷುದ್ರಗ್ರಹಗಳಾಗಿರುತ್ತವೆ. ಕುದ್ರಗ್ರಹಗಳು ಸೌರವ್ಯೂಹ ನಿರ್ಮಾಣದ ನಂತರದ ಶೇಷ ವಸ್ತುಗಳನ್ನು ಪ್ರತಿನಿಧಿಸುತ್ತವೆ. ಅವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡಿವೆ. ಒಂದು ಅಂದಾಜಿನ ಪ್ರಕಾರ ಇವೆರಡು ಗ್ರಹಗಳಲ್ಲಿ 20 ಲಕ್ಷ ಕ್ಷುದ್ರಗ್ರಹಗಳಿವೆ. ಹಲವು ಕ್ಷುದ್ರಗ್ರಹಗಳು ದೊಡ್ಡ ಗ್ರಹಗಳ ಸೆಳೆತಕ್ಕೆ ಸಿಕ್ಕು ಅದರ ಉಪಗ್ರಹಗಳಾಗಿ ಬದಲಾಗುತ್ತವೆ. ಅವುಗಳ ಸರಾಸರಿ ಉಷ್ಣಾಂಶ -73 ಡಿಗ್ರಿ ಸೆಲ್ಸಿಯಸ್. ತಮ್ಮೊಳಗೆ ಅಮೈನೋ ಆಮ್ಲಗಳನ್ನು ಹೊಂದಿರುವ ಕ್ಷುದ್ರಗ್ರಹಗಳು ಯಾವುದೋ ಒಂದು ಕಾಲದಲ್ಲಿ ಭೂಮಿಗೆ ಅಪ್ಪಳಿಸಿದ್ದಾಗ, ಬಿಸಿ ಆರಿದ ಮೇಲೆ ಭೂಮಿಯ ಮೇಲಿನ ಜೀವೋತ್ಪತ್ತಿಗೂ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಇವುಗಳು ಗಾತ್ರದಲ್ಲಿ 10 ಮೀಟರ್‌ನಿಂದ 1,000 ಕಿ.ಮೀ ಅಗಲ ಹೊಂದಿವೆ. 1801ರಲ್ಲಿ ಮೊಟ್ಟಮೊದಲಿಗೆ ಇಟಲಿಯ ಪಿಯಜ್ಜಿ ಎಂಬ ಖಗೋಳಶಾಸ್ತ್ರಜ್ಞ ‘ಸಿರಿಸ್’ ಎಂಬ ಕ್ಷುದ್ರಗ್ರಹವನ್ನು ಕಂಡುಹಿಡಿದಿದ್ದರು. ಇದು ಕ್ಷುದ್ರಗ್ರಹಗಳಲ್ಲೇ ಅತ್ಯಂತ ದೊಡ್ಡದು. ವಿಜ್ಞಾನಿಗಳು ಇಂದಿನವರೆಗೆ ಸುಮಾರು 7,000 ಕ್ಷುದ್ರಗ್ರಹಗಳನ್ನು ಗುರುತಿಸಿದ್ದಾರೆ. ವರದಿಗಳ ಪ್ರಕಾರ ಸೂರ್ಯನ ಸುತ್ತ ತಿರುಗುವ ಕ್ಷುದ್ರಗ್ರಹಗಳ ಸಂಖ್ಯೆ ಸುಮಾರು 40,000ಕ್ಕಿಂತ ಹೆಚ್ಚಾಗಿದೆ. ಬಾಹ್ಯಾಕಾಶದಲ್ಲಿ ಎಲ್ಲೆಂದರಲ್ಲಿ ನೆಲೆಸಿರುವ ಕ್ಷುದ್ರಗ್ರಹಗಳಿಗೆ ಇತರ ಗ್ರಹಗಳಂತೆ ನಿರ್ದಿಷ್ಟ ಕಕ್ಷೆಯಿಲ್ಲ. ಇವುಗಳು ಯಾವ ಆಕಾಶಕಾಯಕ್ಕೂ ಡಿಕ್ಕಿ ಹೊಡೆಯಬಹುದು.
ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿದರೆ ಏನಾಗುತ್ತದೆ?
ಸೌರವ್ಯೂಹ ರಚನೆಯಾದಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುತ್ತಲೇ ಇವೆ. 20 ಮತ್ತು 21ನೇ ಶತಮಾನದಲ್ಲಿ ಒಟ್ಟು 18 ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿವೆ. ಅವುಗಳಲ್ಲಿ ಬಹುತೇಕ ಕ್ಷುದ್ರಗ್ರಹಗಳು ತೀವ್ರ ಪರಿಣಾಮಕಾರಿಯಾಗಿರಲಿಲ್ಲ.
2004ರಲ್ಲಿ ಅಪೋಫಿಸ್ ಎಂಬ ಕ್ಷುದ್ರಗ್ರಹವನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದು 2068ರಲ್ಲಿ ಭೂಮಿಯತ್ತ ಬರಲಿದೆಯಂತೆ. ಇದು ಲಕ್ಷದಲ್ಲಿ ಒಂದರಷ್ಟು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 2001 ಎಫ್.ಒ.32 ಹೆಸರಿನ ಕ್ಷುದ್ರಗ್ರಹವೊಂದು 2021ರ ಮಾರ್ಚ್‌ನಲ್ಲಿ ಭೂಮಿಯ ಸಮೀಪ ಹಾದು ಹೋಯಿತು. ಆದರೆ ಅದು ಯಾವುದೇ ಹಾನಿಯನ್ನುಂಟು ಮಾಡಲಿಲ್ಲ. ಕ್ಷುದ್ರಗ್ರಹದ ದ್ರವ್ಯರಾಶಿಯನ್ನು ಆಧರಿಸಿ ವೇಗದಲ್ಲಿ ಬದಲಾವಣೆಗಳಿರುತ್ತವೆ. ಕ್ಷುದ್ರಗ್ರಹಗಳು ಭೂ ವಾತಾವರಣದಲ್ಲಿ ಗಂಟೆಗೆ ಸುಮಾರು 30,000 ಕಿ.ಮೀ. ವೇಗದಲ್ಲಿ ಭೂಮಿಗೆ ಅಪ್ಪಳಿಸುತ್ತವೆ. ಇದು ಒಂದು ಮಿಲಿಯನ್ ಮೆಗಾಟನ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಒಂದು ಮಿಲಿಯನ್ ಮೆಗಾಟನ್ ಎಂದರೆ 1945ರಲ್ಲಿ ಹಿರೋಶಿಮಾದ ಮೇಲೆ ಅಮೆರಿಕ ಹಾಕಿದ ಲಿಟ್ಸ್‌ಬಾಯ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ.
ಕ್ಷುದ್ರಗ್ರಹವು ಇಷ್ಟೊಂದು ವೇಗದಲ್ಲಿ ಭೂಮಿಗೆ ಅಪ್ಪಳಿದರೆ ದೊಡ್ಡ ಅಪಾಯವೇ ಸಂಭವಿಸುತ್ತದೆ. ನೂರಾರು ಗಗನಚುಂಬಿ ಕಟ್ಟಡಗಳು ನೆಲಸಮವಾಗುತ್ತವೆ. ವಾತಾವರಣದಲ್ಲಿ ಧೂಳಿನ ಪ್ರಮಾಣ ಹೆಚ್ಚುತ್ತದೆ. ಈ ಧೂಳು ಸೂರ್ಯನ ಶಾಖವು ಭೂಮಿಗೆ ತಲುಪುವುದನ್ನು ತಡೆಯುತ್ತದೆ. ಇದರಿಂದ ಭೂಮಿಯ ತಾಪಮಾನ ಕಡಿಮೆಯಾಗುತ್ತದೆ. ತಾಪಮಾನ ಕಡಿಮೆಯಾದರೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯಲು ಅಡ್ಡಿಯಾಗುತ್ತದೆ. ಈ ಘಟನೆಯಿಂದ ಭೂಮಿಯಲ್ಲಿ ವಾಸಿಸುವ ಜೀವಿಗಳಿಗೆ ಆಹಾರ ಮತ್ತು ಆಮ್ಲಜನಕದ ಕೊರತೆ ಉಂಟಾಗುತ್ತದೆ. ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದರಿಂದ ಭೂಮಿಯ ಅಂತರಾಳದ ಶಾಖದಲ್ಲಿ ವ್ಯತ್ಯಾಸವಾಗುತ್ತದೆ. ಭೂಕಂಪ ಸಂಭವಿಸಬಹುದು. ಭೂಮಿಯ ಅಂತರಾಳದ ಉಷ್ಣತೆಯ ಹೆಚ್ಚಳದಿಂದ ಜ್ವಾಲಾಮುಖಿಗಳ ಸಂಖ್ಯೆ ಹೆಚ್ಚಾಗುತ್ತವೆ.
ಕ್ಷುದ್ರಗ್ರಹಗಳು ಸಾಗರದಲ್ಲಿ ಬಿದ್ದರೆ, ನೂರಾರು ಅಡಿ ಎತ್ತರದ ಬೃಹತ್ ಅಲೆಗಳು ಸೃಷ್ಟಿಯಾಗುತ್ತವೆ. ಬೃಹತ್ ಅಲೆಗಳ ಸುನಾಮಿಯನ್ನು ಸೃಷ್ಟಿಸಬಹುದು. ಇದರಿಂದ ಸಾಕಷ್ಟು ಪ್ರಮಾಣದ ಸಾವುನೋವುಗಳು ಸಂಭವಿಸಬಹುದು. ಕರಾವಳಿ ತೀರಗಳಿಗೂ ನಷ್ಟವುಂಟಾಗಬಹುದು. ಸಾಗರಗಳ ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟ ಏರಿಕೆಯಾಗಿ ಈಗಿರುವ ಕರಾವಳಿ ತೀರ ಪ್ರದೇಶಗಳು ಸಮುದ್ರದ ಪಾಲಾಗುತ್ತವೆ. ಭೂಮಿಯ ಮೇಲೆ ನೀರಿನ ಪ್ರಮಾಣ ಈಗಿನ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ. ಅತೀ ದೊಡ್ಡ ಗಾತ್ರದ ಅಂದರೆ ಒಂದು ಕಿಲೋ ಮೀಟರ್‌ನಷ್ಟು ಗಾತ್ರದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಭೂಗ್ರಹದಲ್ಲಿರುವ ಜೀವಿ, ಸಸ್ಯ, ಪ್ರಾಣಿವರ್ಗ ಸೇರಿದಂತೆ ಎಲ್ಲವೂ ನಾಶವಾಗುತ್ತದೆ. ಈ ಘಟನೆಯು ಮತ್ತೊಂದು ಪೆರ್ಮಿಯನ್ ಟ್ರಯಾಸಿಸ್ ದುರಂತಕ್ಕೆ ಕಾರಣವಾಗುತ್ತದೆ. ಪೆರ್ಮಿಯನ್ ಟ್ರಯಾಸಿಸ್ ದುರಂತ ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ್ದು, ಭೂಮಿಯ ಮೇಲಿದ್ದ ಡೈನೋಸಾರ್ ಸೇರಿದಂತೆ ಶೇಕಡಾ 90ರಷ್ಟು ಜೀವಿಗಳ ನಾಶಕ್ಕೆ ಕಾರಣವಾಗಿತ್ತು. ನಂತರ ಭೂಮಿ ಚೇತರಿಸಿಕೊಳ್ಳಲು 30 ದಶಲಕ್ಷ ವರ್ಷಗಳು ಬೇಕಾಗಿತ್ತು.
ಎಲ್ಲ ಕ್ಷುದ್ರಗ್ರಹಗಳು ನೇರವಾಗಿ ಭೂಮಿಯ ಮೇಲೆ ಅಪ್ಪಳಿಸಿದರೆ ಚಂದ್ರನ ಮೇಲಿದ್ದಂತೆ ಭೂಮಿಯ ಮೇಲೆಯೂ ಕುಳಿಗಳ ಸಂಖ್ಯೆ ಹೆಚ್ಚಾಗುತ್ತವೆ. ಮಣ್ಣಿನ ಫಲವತ್ತತೆ ಕಳೆದುಕೊಂಡು ಬರಡು ಭೂಮಿಯಾಗುತ್ತದೆ. ಬಹುತೇಕ ನದಿಗಳು ಬತ್ತಿ ಹೋಗಿ ಬರ ಆವರಿಸುತ್ತದೆ. ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾಗಿ ಭೂಮಿಯ ಮೇಲೆ ಅತಿನೇರಳೆ ಕಿರಣಗಳು ಬಿದ್ದು, ವಾತಾವರಣ ಸಂಪೂರ್ಣ ನಾಶವಾಗುತ್ತದೆ.
1908ರ ಜೂನ್ 30ರಂದು ರಷ್ಯಾದ ಪೂರ್ವ ಸೈಬೀರಿಯಾದ ಟುಂಗುಸ್ಕಾ ನದಿತೀರದ ಕಾಡಿನ ಮೇಲೆ ಎರಡು ಅಂತಸ್ತಿನ ಮನೆಯ ಗಾತ್ರ ಹಾಗೂ ಎತ್ತರದಷ್ಟಿದ್ದ ಕ್ಷುದ್ರಗ್ರಹ ಅಪ್ಪಳಿಸಿ ಅಲ್ಲಿನ ಎರಡು ಸಾವಿರ ಚದರ ಕಿ.ಮೀನಷ್ಟು ವ್ಯಾಪ್ತಿಯ ಕಾಡನ್ನು ಕ್ಷಣಾರ್ಧದಲ್ಲಿ ನಾಶಪಡಿಸಿತ್ತು. 80 ಲಕ್ಷ ಪೈನ್ ಮರಗಳು ಹಾಳಾಗುವುದರ ಜೊತೆ ಲಕ್ಷಾಂತರ ವನ್ಯಮೃಗಗಳು ಮೃತಪಟ್ಟಿದ್ದವು. ಗಂಟೆಗೆ 33.500 ಕಿ.ಮೀ. ವೇಗದಲ್ಲಿ ನುಗ್ಗಿದ ಕುದ್ರಗ್ರಹ ಭೂಮಿಯ ವಾತಾವರಣ ಪ್ರವೇಶಿಸುವ ವೇಳೆಗೆ ಸ್ಫೋಟಗೊಂಡು 44,500 ಡಿಗ್ರಿ ಉಷ್ಣಾಂಶವನ್ನು ಹೊಮ್ಮಿಸಿತ್ತು.
ಕ್ಷುದ್ರಗ್ರಹಗಳ ಮೇಲೆ ವಿಜ್ಞಾನಿಗಳ ಹದ್ದಿನ ಕಣ್ಣು
ಇತ್ತೀಚಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಚಲನೆಯ ಮೇಲೆ ವಿಜ್ಞಾನಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಕ್ಷುದ್ರಗ್ರಹಗಳ ಅಧ್ಯಯನ ಒಂದು ಹೊಸ ವಿಷಯವಾಗಿ ಮಾರ್ಪಟ್ಟಿದೆ. ಹವ್ಯಾಸಿಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಈ ಚಟುವಟಿಕೆಯಲ್ಲಿ ತಾಳ್ಮೆಯಿಂದ ಕ್ಷುದ್ರಗ್ರಹಗಳ ಸೂಕ್ಷ್ಮಕಾಯಗಳನ್ನು ಅಭ್ಯಸಿಸಲಾಗುತ್ತದೆ. ಇದಕ್ಕೆ ನೀಟ್ (ನಿಯರ್ ಅರ್ತ್ ಅಸ್ವರಾಯ್ ಟ್ರಾಕಿಂಗ್) ಎಂಬ ಹೆಸರಿದೆ. ಇಂದಿನ ಸುಧಾರಿತ ತಂತ್ರಜ್ಞಾನದಿಂದ ಕ್ಷುದ್ರಗ್ರಹಗಳು ಭೂಮಿಯನ್ನು ಅಪ್ಪಳಿಸದಂತೆ ತಡೆಯುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅದಲ್ಲದೆ ಮ್ಯಾಡ್ರಿಡ್ ತಾಂತ್ರಿಕ ವಿಶ್ವವಿದ್ಯಾಲಯದ ಸಿ. ಬಾಂಬ್ರಡೆಲ್ಲಿ ಹಾಗೂ ಜಿ. ಪಿಲೇಜ್ ಎಂಬ ವಿಜ್ಞಾನಿಗಳು ಒಂದು ಹೊಸ ತಂತ್ರ ರೂಪಿಸಿದ್ದಾರೆ.
ಈ ಸಂಶೋಧನೆಯ ಪ್ರಕಾರ ಸುಳಿದಾಡುವ ಗಗನನೌಕೆಯಲ್ಲಿ ‘ಐಯಾನ್ ಥೈಸ್ಟರ್’ ಎಂಬ ಉಪಕರಣವಿರಿಸುವುದು. ವಿನಾಶಕಾರಿ ಕ್ಷುದ್ರಗ್ರಹವನ್ನು ಗುರಿಯಾಗಿಸಿ ಅದರ ಮೇಲ್ಮೈನಲ್ಲಿ ನೂಕು ಬಲ ಸೃಷ್ಟಿಸುವುದರ ಮೂಲಕ ಕ್ಷುದ್ರಗ್ರಹದ ದಿಕ್ಕು ತಪ್ಪಿಸುವುದು. ಸೌರಶಕ್ತಿಯನ್ನು ಬಳಸಿಕೊಂಡು ಆಗಂತುಕ ಕಾಯಗಳಿಗೆ ನೂಕು ಬಲ ಒದಗಿಸುವ ಚಿಂತನೆಯೂ ನಡೆದಿದೆ. ಲೇಸರ್ ಬಳಸಿ ಕ್ಷುದ್ರಗ್ರಹವನ್ನೇ ಕರಕಲಾಗಿಸುವ ಆಲೋಚನೆ ಕೂಡ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪ್ರತಿ ವರ್ಷ ಜೂನ್ 30 ರಂದು ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನಾಚರಣೆಯನ್ನಾಗಿ ಕಳೆದ 9 ವರ್ಷಗಳಿಂದ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಕ್ಷುದ್ರಗ್ರಹಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ಒದಗಿಸುವುದೇ ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.