ಕಟಕಟೆಯಲ್ಲಿ ನಿಂತಿರುವುದು ನ್ಯಾಯ ವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ!

Date:

Advertisements

ಅಪರಾಧದ ಸ್ವರೂಪ ಯಾವುದೇ ಆಗಿರಲಿ, ಆರೋಪಿಗೆ ಜಾಮೀನನ್ನು ನಿರಾಕರಿಸುವಂತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಉಜ್ಜಲ್ ಭುಯಾಂ ಹೇಳಿದ್ದರು. ವಿಚಾರಣೆ ಆರಂಭಕ್ಕೆ ಮುನ್ನ ನಾಲ್ಕು ವರ್ಷಗಳ ಸೆರೆವಾಸ ಮೂಲಭೂತ ಹಕ್ಕುಗಳ ಉಲ್ಲಂಘನೆ.

ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು” ಎಂದು ಸಾರಿದ ದೇಶಪ್ರೇಮಿ ಯುವಕನೊಬ್ಬ ವಿಚಾರಣೆಯೇ ಇಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ.

ಅತ್ತ ವಿಚಾರಣೆಯೂ ಇಲ್ಲ, ಇತ್ತ ಜಾಮೀನೂ ನೀಡುತ್ತಿಲ್ಲ- ಉಮರ್ ಖಾಲಿದ್ ಎಂಬ 36ರ ಹರೆಯದ ವಿದ್ಯಾರ್ಥಿ ನಾಯಕನನ್ನು ಸೆರೆಮನೆಗೆ ತಳ್ಳಿ ಇಂದಿಗೆ ನಾಲ್ಕು ವರ್ಷಗಳಾದವು. ಮುಸ್ಲಿಮನಾಗಿ ಹುಟ್ಟಿದ್ದು ಆತನ ಮೊದಲ ‘ಅಪರಾಧ’. ಬಿಜೆಪಿಯ ಕಡುಕೋಮುವಾದಿ ನೀತಿಯನ್ನು ವಿರೋಧಿಸಿದ್ದು ಎರಡನೆಯ ‘ಪಾತಕ’. ದೆಹಲಿ ಜವಾಹರಲಾಲ್  ನೆಹರೂ ವಿಶ್ವವಿದ್ಯಾಲಯದ ಎಡಪಂಥೀಯ ವಿದ್ಯಾರ್ಥಿ ನಾಯಕನಾದದ್ದು ಮೂರನೆಯ ‘ದೇಶದ್ರೋಹ’.

ಬೇಲ್ (ಜಾಮೀನು) ಎಂಬುದು ಕಾನೂನು, ಜೈಲು ಎಂಬುದು ಅಪವಾದ (ವಿರಳ) (Bail is a rule, Jail is an exception)  ಆಗಬೇಕು ಎಂದು ಸುಪ್ರೀಮ್ ಕೋರ್ಟು ಮತ್ತೆ ಮತ್ತೆ ಹೇಳುತ್ತಿದೆ. ಯುಎಪಿಎ ಎಂಬ ಕರಾಳ ಕಾಯಿದೆ ಪ್ರಕಾರ ಬಂಧನಕ್ಕೆ ಒಳಗಾದವರಿಗೂ ಈ ಮಾತು ಅನ್ವಯಿಸುತ್ತದೆ ಎಂದೂ ಸಾರಿದೆ. ಆದರೆ ಉಮರ್ ಗೆ ಜಾಮೀನು ನಿರಾಕರಿಸುತ್ತಲೇ ಬರಲಾಗಿದೆ. ಅಧೀನ ನ್ಯಾಯಾಲಯಗಳು, ಹೈಕೋರ್ಟುಗಳು ಈ ಕಿವಿಮಾತಿಗೆ ಕಿವುಡಾಗಿವೆ. ಕಡೆಗೆ ಸುಪ್ರೀಮ್ ಕೋರ್ಟ್ ಕೂಡ ತನ್ನ ವಚನವನ್ನು ತಾನೇ ಕಡೆಗಣಿಸಿದಂತೆ ತೋರುತ್ತಿದೆ. ನಮ್ಮ ಕಣ್ಣೆದುರೇ ಜರುಗಿರುವ ಬಹುದೊಡ್ಡ ವಿಚಿತ್ರ ವಿಡಂಬನೆಯಿದು.

ಕಳೆದ ತಿಂಗಳಷ್ಟೇ (ಆಗಸ್ಟ್ 13) ಸುಪ್ರೀಮ್ ಕೋರ್ಟು ಇದೇ ಯುಎಪಿಎ ಆರೋಪಿಗೆ ಜಾಮೀನು ನೀಡಿತ್ತು. Bail is a rule and Jail is an exception ಎಂಬುದಾಗಿ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕ ಮತ್ತು ಆಗಸ್ಟಿನ್ ಜಾರ್ಜ್ ಮಾಸಿ ಅವರು ಸಾರಿದ್ದರು. ಯುಎಪಿಎ ಕೇಸುಗಳಿಗೂ ಈ ಮಾತು ಅನ್ವಯಿಸುತ್ತದೆ. ನ್ಯಾಯಾಲಯಗಳು ಅರ್ಹ ಕೇಸುಗಳಲ್ಲಿ ಕೂಡ ಜಾಮೀನು ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅವರು ಸ್ಪಷ್ಟಪಡಿಸಿದ್ದರು. ಅಪರಾಧದ ಸ್ವರೂಪ ಯಾವುದೇ ಆಗಿರಲಿ, ಆರೋಪಿಗೆ ಜಾಮೀನನ್ನು ನಿರಾಕರಿಸುವಂತಿಲ್ಲ ಎಂದು ಕಳೆದ ಜುಲೈ ತಿಂಗಳಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಉಜ್ಜಲ್ ಭುಯಾಂ ಹೇಳಿದ್ದರು. ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಅಪರಾಧಗಳ ಆರೋಪಿಗಳಿಗೆ ಜಾಮೀನು ಸಿಗುತ್ತದೆ. ವಿಚಾರಣೆಯೇ ಆರಂಭಕ್ಕೆ ಮುನ್ನ ನಾಲ್ಕು ವರ್ಷಗಳ ಸೆರೆವಾಸ ಮೂಲಭೂತ ಹಕ್ಕುಗಳ ಉಲ್ಲಂಘನೆ. ಉಮರ್ ವಿಚಾರಣೆ ಸದ್ಯದಲ್ಲಿ ಮುಗಿಯುವಂತಹುದಲ್ಲ. ಈ ಪ್ರಕರಣದಲ್ಲಿ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸುತ್ತಿರುವುದು ನಮ್ಮ ನ್ಯಾಯ ವ್ಯವಸ್ಥೆಯೇ ವಿನಾ ಉಮರ್ ಖಾಲಿದ್ ಅಲ್ಲ ಎನ್ನುತ್ತಾರೆ ಕಾನೂನು ತಜ್ಞರು.

Advertisements

2020ರ ಸೆಪ್ಟಂಬರ್ ನಲ್ಲಿ ದೆಹಲಿಯ ಕೋಮುಗಲಭೆಗಳು 53 ಪ್ರಾಣಬಲಿ ಪಡೆದವು. ಈ ಪೈಕಿ ಮುಸಲ್ಮಾನರದು ದೊಡ್ಡ ಸಂಖ್ಯೆ. ಈ ಸಂಬಂಧದ ಶಾಂತಿಯಾತ್ರೆಯಲ್ಲಿ ಉಮರ್ ಭಾಗವಹಿಸಿದ್ದರು. ಅದೇ ತಿಂಗಳ 14ರಂದು ಉಮರ್ ಅವರನ್ನು ಯುಎಪಿಎ ಎಂಬ ಮನುಷ್ಯತ್ವ ವಿರೋಧಿ ಕಾಯಿದೆಯಡಿ ಬಂಧಿಸಲಾಯಿತು. ನಾಲ್ಕು ವರ್ಷಗಳಲ್ಲಿ ಉಮರ್ ಹಲವಾರು ಕೋರ್ಟುಗಳ ಕದ ಬಡಿದಿದ್ದಾರೆ. ನ್ಯಾಯದೇವತೆಯ ಬಾಗಿಲುಗಳು- ಹೆಬ್ಬಾಗಿಲುಗಳು ಈತನ ಪಾಲಿಗೆ ಬಿಗಿಯಾಗಿ ಮುಚ್ಚಿ ಹೋಗಿವೆ. ದೆಹಲಿ ಕೋಮುಗಲಭೆಗಳ ತರುವಾಯ ಪೊಲೀಸರು 2,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ನಾಲ್ಕು ವರ್ಷಗಳ ‘ಹಿಯರಿಂಗ್’ ಗಳಲ್ಲಿ ನ್ಯಾಯಾಲಯಗಳು 2000ಕ್ಕೂ ಹೆಚ್ಚು ಮಂದಿ ಆರೋಪಿಗಳಿಗೆ ಜಾಮೀನು ನೀಡಿವೆ. ಬೇಕಾಬಿಟ್ಟಿ ಬೇಜವಾಬ್ದಾರಿ ತನಿಖೆಗಾಗಿ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿವೆ.‌

ಸಿಎಎ ಹೋರಾಟದಲ್ಲಿ ಉಮರ್
ಪೌರತ್ವ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಬಂಧನ…

ಉಮರ್ ಅವರನ್ನು ವ್ಯಾಪಕ ಪಿತೂರಿಯ ಕೇಸಿನಲ್ಲಿ ಇರುಕಿಸಿ ಇತರೆ 17 ಮಂದಿಯ ಜೊತೆಗೆ ದಸ್ತಗಿರಿ ಮಾಡಲಾಗಿತ್ತು. ಈ ಪೈಕಿ ಹಲವರು ಜಾಮೀನಿನ ಮೇಲೆ ಹೊರಬಿದ್ದಿದ್ದಾರೆ. ಮೊದಲ ಸಲ ಕಡಕಡಡೂಮಾ ನ್ಯಾಯಾಲಯದಲ್ಲಿ ಉಮರ್ ಜಾಮೀನು ಕೇಳಿದ್ದು 2022ರ ಮಾರ್ಚ್ ತಿಂಗಳಲ್ಲಿ. ಅಲ್ಲಿಗೆ ಆತನ ಬಂಧನವಾಗಿ ಒಂದೂವರೆ ವರ್ಷ ಕಳೆದಿತ್ತು. ಜಾಮೀನು ನಿರಾಕರಿಸಲಾಯಿತು. ಆನಂತರ 2022ರ ಅಕ್ಟೋಬರ್ ತಿಂಗಳಿನಲ್ಲಿ ಡೆಲ್ಲಿ ಹೈಕೋರ್ಟ್ ಕೂಡ ಜಾಮೀನು ನೀಡಲಿಲ್ಲ. ತದನಂತರ 2024ರ ಫೆಬ್ರವರಿಯಲ್ಲಿ ಸುಪ್ರೀಮ್ ಕೋರ್ಟಿಗೆ ಮೊರೆ ಹೋದರು. ಈತನ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಮ್ ಕೋರ್ಟು 11 ತಿಂಗಳಲ್ಲಿ 14 ಸಲ ಮುಂದೂಡಿದೆ. ಎರಡೂ ಕಡೆಯ ನ್ಯಾಯವಾದಿಗಳ ಗೈರು ಹಾಜರಿಯಿಂದಾಗಿ ಇಲ್ಲವೇ ಪ್ರಾಸಿಕ್ಯೂಷನ್ ನ ಮನವಿಯ ಮೇರೆಗೆ ಈ ಮುಂದೂಡಿಕೆಗಳು ಜರುಗಿವೆ.

ಇದೇ ಫೆಬ್ರವರಿ 14ರಂದು ಜಾಮೀನು ಕೋರಿಕೆ ಅರ್ಜಿಯನ್ನು ಉಮರ್ ವಾಪಸು ಪಡೆದರು. ಅಧೀನ ನ್ಯಾಯಾಲಯದ ಮುಂದೆ ಪುನಃ ಅರ್ಜಿ ಸಲ್ಲಿಸಿದರು. ವಿಚಾರಣೆ ಆರಂಭದಲ್ಲಿ ಆಗಿರುವ ದೀರ್ಘ ವಿಳಂಬ ಮತ್ತು ಇದೇ ಕೇಸಿನ ಇತರೆ ಆರೋಪಿಗಳಿಗೆ ಜಾಮೀನು ನೀಡಿರುವಂತೆ ತಮಗೂ ನೀಡಬೇಕೆಂದು ಕೋರಿದರು. ಮೇ.28 ರಂದು ಜಾಮೀನು ನಿರಾಕರಿಸಿದ ಆದೇಶ ಹೊರಬಿತ್ತು. ಇದೀಗ ಜಾಮೀನು ಅರ್ಜಿ ಡೆಲ್ಲಿ ಹೈಕೋರ್ಟಿನ ಮುಂದಿದೆ. ಉಮರ್‌ಗೆ ಜಾಮೀನು ನೀಡಿಕೆ ಕುರಿತು ನಿಮ್ಮ ನಿಲುವನ್ನು ತಿಳಿಸಿ ಎಂದು ಜುಲೈ ತಿಂಗಳ ‘ಹಿಯರಿಂಗ್’ ನಲ್ಲಿ ಡೆಲ್ಲಿ ಪೊಲೀಸರನ್ನು ಕೇಳಿದೆ ನ್ಯಾಯಾಲಯ.

ಕಟ್ಟರ್ ಕೋಮುವಾದಿಗಳಿಂದ ಉಮರ್ ಹತ್ಯೆಯ ಪ್ರಯತ್ನವೂ ನಡೆಯಿತು. ಮೋದಿಯವರ ಮಡಿಲಲ್ಲಿ ಆಡುವ, ಆಳುವವರ ಬೂಟು ನೆಕ್ಕುವ ಗೋದಿ ಮೀಡಿಯಾ 2016ರಲ್ಲೇ ಉಮರ್ ಅವರ ವಿಚಾರಣೆ ನಡೆಸಿ ಅವರಿಗೆ ‘’ದೇಶದ್ರೋಹಿ ಪಟ್ಟ ಕಟ್ಟಿತ್ತು. ಜೆ.ಎನ್.ಯು.ಕೇಸಿನಲ್ಲಿ ಉಮರ್ ಅವರನ್ನು ಇರುಕಿಸಿ ದ್ವೇಷ, ಅಪಪ್ರಚಾರ, ಸುಳ್ಳು ಮಾಹಿತಿಯ ಹೊಳೆಯನ್ನೇ ಹರಿಸಿತ್ತು. ಜನಮಾನಸದಲ್ಲಿ ಹಸೀ ಸುಳ್ಳುಗಳನ್ನು ಬಿತ್ತಿತ್ತು. ಟಿ.ಆರ್.ಪಿ. ಜೊತೆಗೆ ಆಳುವವರ ಕೃಪಾಶ್ರಯದ ಧಾರಾಳ ಫಸಲನ್ನು ಕಟಾವು ಮಾಡಿಕೊಂಡಿತ್ತು.

ಬಿಜಯ್ ಲಾಹಿರಿ
ಸಂಗಾತಿ ಬನಜ್ಯೋತ್ಸ್ನಾ ಲಾಹಿರಿ ಜೊತೆ ಖುಷಿಯ ಕ್ಷಣ…

2020ರ ಅಕ್ಟೋಬರ್ ನಲ್ಲಿ ಉಮರ್ ಗೆಳೆಯರು ಜೈಲಿನಲ್ಲಿದ್ದ ಮಿತ್ರನಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದರು. ದೇಶದ ಅಂತಸ್ಸಾಕ್ಷಿಯನ್ನು ಬಡಿದೆಬ್ಬಿಸುವ ಒಕ್ಕಣೆ ಆ ಪತ್ರದಲ್ಲಿ ನಿಗಿನಿಗಿಸಿತ್ತು. ಇಂದಿಗೂ ಮುಂದಿಗೂ ಪ್ರಸ್ತುತ ಒಕ್ಕಣೆಯದು. ಆಯ್ದ ಕೆಲ ಭಾಗಗಳು ಹೀಗಿವೆ-
“ದೆಹಲಿ ಕೋಮುಗಲಭೆಗಳ ನೈಜ ಅಪರಾಧಿಗಳನ್ನು ಬಿಟ್ಟು, ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಶಾಂತಿಯುತ ಆಂದೋಲನ ನಡೆಸಿದ್ದವರ ಹೆಸರಿಗೆ ಮಸಿ ಬಳಿಯಬೇಕಿತ್ತು. ಉಮರ್ ಅವರಿಗೆ ಕೋಮು ಗಲಭೆಗಳ ‘ಮಾಸ್ಟರ್ ಮೈಂಡ್’ ಎಂಬ ಹಣೆಪಟ್ಟಿ ಹಚ್ಚಿ ಸೆರೆಗೆ ತಳ್ಳಬೇಕಿತ್ತು. ಸಾಮರಸ್ಯ ಮತ್ತು ಸಮಾನತೆ ಕುರಿತು ಮಾತಾಡುತ್ತಿದ್ದರೂ ನಿನ್ನತ್ತ ಗುರಿ ತಿರುಗಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ನೀನಿಲ್ಲದ ವಾತಾವರಣಕ್ಕೆ ಕಾಲಕ್ರಮೇಣ ಒಗ್ಗಿ ಹೋಗುತ್ತಿದ್ದೇವೆಯೇ ಎಂಬ ಕಳವಳ ನಮ್ಮನ್ನು ಕಾಡುತ್ತಿದೆ. ಸಂವಿಧಾನವು ದಯಪಾಲಿಸಿರುವ ಸಮಾನ ಪೌರತ್ವಕ್ಕಾಗಿ ಕೊರಳೆತ್ತಿದ ಯುವಪ್ರತಿಭೆಗಳನ್ನು ಜೈಲಿಗೆ ಹಾಕಿರುವುದಕ್ಕೆ ನಾವು ಒಗ್ಗಿ ಹೋಗಿದ್ದೇವೆ. ನಮ್ಮ ಹಕ್ಕುಗಳಿಗಾಗಿ ಹೋರಾಡಿದ ಅತ್ಯುತ್ತಮ ಆಂದೋಲನಕಾರರನ್ನು ಕಲ್ಪಿತ ಆರೋಪಗಳ ಮೇರೆಗೆ ಸೆರೆಗೆ ತಳ್ಳಿರುವ ಕೃತ್ಯಕ್ಕೆ ನಾವು ಒಗ್ಗಿ ಹೋಗಿದ್ದೇವೆ. ಪ್ರೈಮ್ ಟೈಮ್ ಟೆಲಿವಿಷನ್ ಪರದೆಗಳ ಮೇಲೆ ನಿತ್ಯ ನಲಿದಾಡುವ ಸ್ತ್ರೀದ್ವೇಷ, ಹುಸಿದೇಶಭಕ್ತಿಯ ಅಬ್ಬರ, ದ್ವೇಷ ಬಿತ್ತನೆಗೆ ಹೊಂದಿಕೊಂಡು ಬಿಟ್ಟಿದ್ದೇವೆ. ಹೊಂಚು ಹಾಕಿರುವ ಭಯದ ಭಾವನೆಗೆ, ಮಧ್ಯರಾತ್ರಿಯ ಕದಬಡಿತಗಳಿಗೆ, ಸ್ವಯಂ ಸೆನ್ಸಾರ್‌ಶಿಪ್‌ಗಳಿಗೆ ಒಗ್ಗಿ ಹೋಗಿದ್ದೇವೆ. ಹಾಥರಸ್ ನ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಮತ್ತು ಆನಂತರದ ವಿಕೃತ ನ್ಯಾಯವು ನಮ್ಮ ಸಾರ್ವಜನಿಕ ಬದುಕಿನಲ್ಲಿ ಆಳಕ್ಕೆ ಇಳಿದಿರುವ ಕೊಳೆತದತ್ತ ಬೆರಳು ಮಾಡಿದೆ. ಇಂತಹುದು ಯಾವುದೂ ನಮ್ಮ ಆತ್ಮಸಾಕ್ಷಿಗಳನ್ನು ಕಲಕುತ್ತಿಲ್ಲ. ಎಂತಹ ಘೋರ ನಂಜನ್ನೂ ನಾವು ಅರಗಿಸಿಕೊಂಡು ಆರಾಮಾಗಿದ್ದೇವೆ ಎಂಬುದನ್ನು ತೋರುತ್ತಿದೆ.

ಮುಸಲ್ಮಾನರು, ದಲಿತರು ಹಾಗೂ ಆದಿವಾಸಿಗಳ ದೊಂಬಿಹತ್ಯೆಗಳನ್ನು ನಡೆಸಿ ಅವುಗಳನ್ನು ನೇರಪ್ರಸಾರ ಮಾಡಿ, ಸೆಲ್ ಫೋನುಗಳಲ್ಲಿ ಸೆರೆ ಹಿಡಿದು, ಸೆಲ್ಫಿಗಳನ್ನು ತೆಗೆದು,  ಹಂಚಿಕೊಂಡು ಸಂಭ್ರಮಿಸುತ್ತಿರುವುದಕ್ಕೆ ನಾವು ಹೇಗೆ ಒಗ್ಗಿ ಹೋಗಿದ್ದೇವೆಯೋ ಹಾಗೆ ನಿನ್ನ ಗೈರು ಹಾಜರಿಗೂ ಒಗ್ಗಿ ಹೋಗುತ್ತೇವೆಯೇ ಎಂಬ ಸಂಕಟ ನಮ್ಮನ್ನು ಚುಚ್ಚಿದೆ. ಇಂತಹ ವಿಷಮ ಕೃತ್ಯಗಳ ಕಟುವಾಸ್ತವಗಳಿಗೆ ಒಗ್ಗಿಕೊಳ್ಳುವುದಿಲ್ಲ ಎಂದು ಎದೆಸೆಟಿಸಿದ ಹಿಡಿಯಷ್ಟು ವ್ಯಕ್ತಿಗಳಲ್ಲಿ ನೀನೂ ಒಬ್ಬನಾಗಿದ್ದೆ. ಭಯಕ್ಕೆ ಶರಣಾಗಿ ಪಾರ್ಶ್ವವಾಯು ಪೀಡಿತನಾಗಲು ನೀನು ಒಪ್ಪಲಿಲ್ಲ. ನಿನ್ನನ್ನು ಹತ್ಯೆ ಮಾಡುವ ಪ್ರಯತ್ನ ನಡೆಯಿತು, ದೇಶದ್ರೋಹದ ಪಟ್ಟ ಕಟ್ಟಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಯಿತು. ‘ಮೀಡಿಯಾ’ ತನ್ನದೇ ಅನ್ಯಾಯದ ವಿಚಾರಣೆ ನಡೆಸಿತು. ಇಂತಹ ಸಾಕಷ್ಟು ‘ಮುನ್ನೆಚ್ಚರಿಕೆಗಳನ್ನು’ ನಿನಗೆ ನೀಡಲಾಗಿತ್ತು.  ಅವುಗಳನ್ನು ನೀನು ಲೆಕ್ಕಿಸಲಿಲ್ಲ. ಪರಮ ಹಠಮಾರಿ ನೀನು, ಆತ್ಮಘನತೆಗಾಗಿ ಹಲ್ಲುಕಚ್ಚಿ ಹೋರಾಡಿದ ಶಾಹೀನ್ ಬಾಗ್ ನಂತೆ, ಬಿಲ್ಕಿಸ್ ಬಾನೋ ಅಕ್ಕನಂತೆ. ದೇಶ ಎಂದರೆ ಜನ, ಆ ಜನಕ್ಕಾಗಿ ದನಿಯೆತ್ತಿದ್ದೇ ನೀನು ಮಾಡಿದ ಪರಮಪಾತಕ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬುಲ್ಡೋಜರ್‌, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!

ಎಡ್ವರ್ಡೋ ಗಲಿಯಾನೋ (ಲ್ಯಾಟಿನ್ ಅಮೆರಿಕನ್ ಸಾಹಿತಿ) ಮಾತಿನಲ್ಲಿ ಹೇಳುವುದಾದರೆ ಈ ಪ್ರಪಂಚ ತಲೆಕೆಳಗಾಗಿ ಹೋಗಿದೆ. ದ್ವೇಷಬಿತ್ತುವವರು ಗಹಗಹಿಸಿ ಮೆರೆದಾಡುತ್ತಿದ್ದಾರೆ.  ಪ್ರೀತಿ ಸಹಾನುಭೂತಿ, ಕಾರುಣ್ಯ, ನ್ಯಾಯದ ಪಕ್ಷಪಾತಿಗಳನ್ನು ಖಳನಾಯಕರೆಂದೂ ರಕ್ಕಸರೆಂದೂ ಬಿಂಬಿಸಲಾಗುತ್ತಿದೆ”.
“ನಿನ್ನ ವಿರುದ್ಧ 11,000 ಪುಟಗಳ ಆಪಾದನಾಪಟ್ಟಿ ಸಲ್ಲಿಸಲಾಗಿದೆ. ಜಗತ್ತು ಕಂಡಿರುವ ಅತಿ ದೀರ್ಘ ಕಲ್ಪನೆಯ ಕತೆಯಿದು. ಸರ್ಕಾರವನ್ನು ವಿರೋಧಿಸುವುದು ಮತ್ತು ಮುಸಲ್ಮಾನನಾಗಿ ಹುಟ್ಟುವುದು ದೊಡ್ಡ ಅಪರಾಧವಾಗಿ ಹೋಗಿದೆ. ನೀನು ಮುಸಲ್ಮಾನನೋ ಅಥವಾ ನಿರೀಶ್ವರವಾದಿಯೋ ಎಂದು ಕೆಲವು ವಲಯಗಳಲ್ಲಿ ಚರ್ಚೆ ನಡೆಯುತ್ತಿರುವುದು ತಮಾಷೆಯ ವಿಷಯವಾಗಿ ತೋರುತ್ತದೆ. ಯಾಕೆಂದರೆ ನೀನು ಈ ಜಗತ್ತಿನ ವಿಶ್ಲೇಷಣೆಗೆ ಬಳಸಿರುವ ಸಾಧನ ಚಲನಶೀಲ ಮಾರ್ಕ್ಸ್ ವಾದ. ನೀನು ಮುಸಲ್ಮಾನನಾಗಿ ಹುಟ್ಟಿದ್ದೀ ಎಂದು ಹೆಜ್ಜೆ ಹೆಜ್ಜೆಗೆ ನಿನಗೆ ನೆನಪು ಮಾಡಿಕೊಡಲಾಗುತ್ತಿದೆ. ಜೈಶ್ ಎ ಮೊಹಮ್ಮದ್ ಗುಂಪಿಗೆ ಸೇರಿದವನೆಂದೂ ದೇಶದ್ರೋಹಿಯೆಂದೂ ಮುಸಲ್ಮಾನನೆಂದೂ ಕರೆದು ನಿನ್ನ ಬೇಟೆಯಾಡಲಾಗುತ್ತಿದೆ. ಆದರೆ ನೀನು ಇದ್ಯಾವುದೂ ಆಗಿರಲಿಲ್ಲ”.

ಇದನ್ನೂ ಓದಿ ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?

ತೀವ್ರ ದಾಳಿಗೆ ತುತ್ತಾಗಿರುವ ಜನತಂತ್ರದ ಹಲವು ಶಕ್ತಿಗಳಲ್ಲಿ ನಾನಾ ಚಹರೆಗಳಲ್ಲಿ ಉಮರ್ ಕೂಡ ಒಬ್ಬರು. ಆಸೆಯನ್ನು ಕಳೆದುಕೊಂಡಿಲ್ಲ ನಾವು. ಆದರೆ ಆಸೆಯನ್ನು ಜೀವಂತ ಇರಿಸಿಕೊಳ್ಳುವುದು ಕೂಡ ಒಂದು ದೊಡ್ಡ ಸಂಘರ್ಷ ಎನ್ನುತ್ತಾರೆ ಉಮರ್  ಅವರ ಆತ್ಮಸಂಗಾತಿ ಬನಜ್ಯೋತ್ಸ್ನಾ ಲಾಹಿರಿ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X