ಮಹಿಳೆ ಮೇಲೆ ಪುರುಷರ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯರ ರಕ್ಷಣೆ ವಿಚಾರವಾಗಿ ಮಮತಾ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ, ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಟ್ರೈನಿ ವೈದ್ಯರು ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವಾರವಷ್ಟೇ ವೈದ್ಯರ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು, ಪ್ರತಿಭಟನೆಯ ಕಾವು ಕಡಿಮೆಯಾಗಿತ್ತು. ಇದೇ ಸಮಯದಲ್ಲಿ, ಮಹಿಳೆ ಮೇಲೆ ಗುಂಪೊಂದು ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪುಂಡ ಪುರುಷರು ಮಹಿಳೆಯ ಮೇಲೆ ರಸ್ತೆಯಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ಸಂದರ್ಭದಲ್ಲಿ ಹಲವು ಮಂದಿ ರಸ್ತೆ ಬದಿಯಲ್ಲಿ ನೆರೆದಿದ್ದು, ಘಟನೆಯನ್ನು ವೀಕ್ಷಿಸುತ್ತಾ ನಿಂತಿರುವುದು ಕಂಡುಬಂದಿದೆ. ಆದರೆ, ಯಾರೊಬ್ಬರೂ ಮಹಿಳೆಯ ರಕ್ಷಣೆಗೆ ಬಂದಿಲ್ಲ ಎಂಬುದು ವಿಡಿಯೋದಲ್ಲಿ ಕಾಣಿಸುತ್ತದೆ.
ಸಂತ್ರಸ್ತ ಮಹಿಳೆ ಮತ್ತು ಅವರ ನೆರೆಹೊರೆಯವರೊಂದಿಗೆ ಬಹಳ ವರ್ಷಗಳಿಂದ ಜಮೀನು ವಿವಾದವಿತ್ತು. ಆದೇ ಕಾರಣಕ್ಕಾಗಿ ಜಗಳ ನಡೆದಿದೆ. ಗಲಾಟೆ ವೇಳೆ ಸಂತ್ರಸ್ತೆಯ ಪತಿಯ ಮೇಲೆ ಗುಂಪು ಹಲ್ಲೆ ನಡೆಸಿದ್ದಾರೆ. ತನ್ನ ಪತಿಯನ್ನು ರಕ್ಷಿಸಲು ಮುಂದಾದ ಸಂತ್ರಸ್ತೆಯ ಮೇಲೂ ಪುಂಡರು ಹಲ್ಲೆ ನಡೆಸಿದ್ದಾರೆ.
ಮಹಿಳೆಯ ಮೋತಾಬರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ವಿರುದ್ಧವೂ ಹಲ್ಲೆಗೈದವರೇ ದೂರು ದಾಖಲಿಸಿದ್ದಾರೆ. ಇಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.