- ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ ಡಿ ಕೆ
- ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನೆಂದ ಕುಮಾರಸ್ವಾಮಿ
ರಾಜ್ಯದ ಜನರು ನೆರೆ, ಬರದಂತಹ ಕಷ್ಟಗಳಲ್ಲಿ ಇದ್ದಾಗ ಬಾರದ ಪ್ರಧಾನಿ ಮೋದಿ ಚುನಾವಣಾ ಹೊತ್ತಿನಲ್ಲಿ ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಚುನಾವಣೆ ಬಂದಿದೆ ಹಾಗಾಗಿ ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯದ ಜನರ ಕಷ್ಟದ ಸಮಯದಲ್ಲಿ ಮೋದಿ ಬರಬೇಕಿತ್ತು” ಎಂದು ಹರಿಹಾಯ್ದಿದ್ದಾರೆ.
“ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು? ಕೃಷ್ಣಾ ನ್ಯಾಯಧೀಕರಣದ ತೀರ್ಪು ಬಂದು ಹತ್ತು ವರ್ಷ ಆಗಿದೆ. ಈ ಭಾಗಕ್ಕೆ ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ? ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು, ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
“ಇಷ್ಟು ದಿನಗಳ ಕಾಲ ಸುಮ್ಮನಿದ್ದ ಮೋದಿ ಈಗ ನೀರು ಕೊಡುತ್ತೇವೆ ಎನ್ನುತ್ತಿದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ? ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ” ಎಂದಿದ್ದಾರೆ.
ಭಜರಂಗದಳದ ನಿಷೇದದ ಕುರಿತ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಾತನಾಡಿ, “ನಿಷೇಧ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತಾ? ಎರಡೂ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆರ್‌ಎಸ್‌ಎಸ್‌ನ ಯುವಕರ ಭಾಗ ಭಜರಂಗದಳ, ತಾಕತ್ತಿದ್ದರೆ ನಿಷೇಧಿಸಿ: ಶೋಭಾ ಕರಂದ್ಲಾಜೆ
“ಭಜರಂಗದಳದಲ್ಲಿ ಅಮಾಯಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೇನೋ ತುಂಬಿ ಅವರನ್ನ ಹಾಳು ಮಾಡ್ತಿದ್ದಾರೆ. ಅಮಾಯಕರನ್ನು ಚಿತಾವಣೆ ಮಾಡೋರನ್ನು ಮೊದಲು ಮಟ್ಟಹಾಕಬೇಕು. ಅದು ಬಿಟ್ಟು ಬ್ಯಾನ್ ಮಾಡ್ತಿನಿ ಅಂದ್ರೆ ಉಪಯೋಗ ಏನು?” ಎಂದು ಪ್ರಶ್ನಿಸಿದ್ದಾರೆ.
“ಮೋದಿಯವರು ನಮ್ಮನ್ನು ಟೀಕೆ ಮಾಡ್ತಿದ್ದಾರೆ. ನಮಗೆ ಸಿದ್ಧಾಂತ ಇಲ್ಲ ಎನ್ನುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಸಿದ್ಧಾಂತ ಸರಿಹೋಗುತ್ತಾ? ಕಾಂಗ್ರೆಸ್ ಜತೆ ಹೋದರೆ ಸರಿ ಇರಲ್ಲಾ?” ಎಂದು ಪ್ರಧಾನಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.