- ಯಾತ್ರೆ ಪ್ರದೇಶದಲ್ಲಿ ಇನ್ನು 2-3 ದಿನ ಹಿಮಪಾತ
- ಹಿಮಪಾತ ಹಿನ್ನೆಲೆಯಲ್ಲಿ ಯಾತ್ರಿಕರ ನೋಂದಣಿ ಸ್ಥಗಿತ
ಭಾರೀ ಹಿಮಪಾತದ ಹಿನ್ನೆಲೆ ಕೇದಾರನಾಥ ಯಾತ್ರೆ ಬುಧವಾರ (ಮೇ 3) ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇದಾರನಾಥ ದೇಗುಲ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಯಾತ್ರೆ ರದ್ದುಗೊಳಿಸಲಾಗಿದೆ. ಇಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ (ಮೇ 4) ಹೇಳಿದರು.
ಕೇದಾರನಾಥ ಯಾತ್ರೆ ಸ್ಥಳದಲ್ಲಿ ಕಳೆದ ಎರಡು ದಿನಗಳಿಂದ ಹಿಮಪಾತ ಉಂಟಾಗುತ್ತಿದೆ. ಇದರಿಂದ ಚಳಿ ಹೆಚ್ಚಾಗಿದ್ದು ದೇಗುಲಕ್ಕೆ ಬಂದವರಿಗೂ ಅನೇಕ ಸಮಸ್ಯೆಗಳು ಉಂಟಾಗಿವೆ. ಹಿಮಪಾತ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಉಳಿದುಕೊಳ್ಳುವಂತೆ ಯಾತ್ರಾರ್ಥಿಗಳಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಹಿಂದೆ ಏಪ್ರಿಲ್ 30 ರವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಹಿಮಪಾತ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರಿಕರ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ರಿಷಿಕೇಶದಲ್ಲಿರುವ ಪ್ರಯಾಣಿಕರ ನೋಂದಣಿ ಕೇಂದ್ರದಲ್ಲಿ ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಮಾತ್ರ ಯಾತ್ರೆಗೆ ನೋಂದಣಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
“ಭೈರವ ಅಥವಾ ಕುಬೇರ ಹಸರಿನ ಹಿಮನದಿಯ ಒಂದು ಭಾಗ ಒಡೆದು ಹಿಮಾಲಯದ ದೇಗುಲದ ಕೆಳಗೆ ಸುಮಾರು 5 ಕಿ.ಮೀ ವರೆಗೆ ಜಾರಿದೆ” ಎಂದು ರುದ್ರಪ್ರಯಾಗದ ಜಿಲ್ಲಾ ವಿಪತ್ತು ನಿರ್ವಹಣೆ ಅಧಿಕಾರಿ ನಂದನ್ ಸಿಂಗ್ ರಾಜ್‌ವಾರ್ ಹೇಳಿದರು.
“ಯಾತ್ರೆ ಸ್ಥಳದಲ್ಲಿ ನಾಲ್ಕು ನೇಪಾಳಿ ಯಾತ್ರಿಕರು ಸಿಲುಕಿಕೊಂಡಿದ್ದರು. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ದಳದ (ಎಸ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಿಸಿದ್ದಾರೆ” ಎಂದು ದಳದ ಅಧಿಕಾರಿ ಸಂತೋಷ್ ರಾವತ್ ತಿಳಿಸಿದರು.
ನೇಪಾಳಿ ಯಾತ್ರಿಕರು ಲಿಂಚೋಳಿಯಿಂದ ಕೇದಾರನಾಥಕ್ಕೆ ತೆರಳುತ್ತಿದ್ದರು ಎಂದು ಸಂತೋಷ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಕೇದಾರನಾಥ ಯಾತ್ರೆ ಸಂದರ್ಭ ಮಂಗಳವಾರ (ಮೇ 2) ಭಾರೀ ಹಿಮಪಾತ ಉಂಟಾಗಿತ್ತು. ಯಾತ್ರಿಗಳನ್ನು ರಿಷಿಕೇಶ, ಶ್ರೀನಗರ, ಫಟಾ ಮತ್ತು ಸೋನ್‌ಪ್ರಯಾಗದಲ್ಲಿ ತಂಗುವಂತೆ ಸೂಚಿಸಲಾಗಿತ್ತು.
ಮುಂದಿನ 2-3 ದಿನಗಳ ಕಾಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.