ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕನಿಷ್ಠವೆಂದರೂ 50 ಕೋಟಿ ಖರ್ಚು ಮಾಡುತ್ತಿದ್ದಾರೆ. ಇಂತಹವರನ್ನು ಗೆಲ್ಲಿಸಿಕೊಳ್ಳಲು ಮೋದಿಯವರು ಹಗಲುರಾತ್ರಿ ಶ್ರಮ ಸುರಿಯುತ್ತಿದ್ದಾರೆ. ರೋಡ್ ಶೋಗಳ ಮೇಲೆ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ಫಕೀರ, ಚೌಕಿದಾರ್, ಸೇವಕ್ ಎನ್ನುತ್ತಾರೆ.
ಮೇ 6, 7ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ನಡೆಯಲಿದೆ. ಮೊದಲು ನಿಗದಿಯಾದಂತೆ ಮೋದಿಯವರ ರೋಡ್ ಶೋ ಶನಿವಾರಕ್ಕಷ್ಟೇ ಸೀಮಿತವಾಗಿತ್ತು. ಆದರೆ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ರೋಡ್ ಶೋ ಇರುವುದರಿಂದ, ನಗರದ ನಾಗರಿಕರು ಮೋದಿಯವರನ್ನು ಮರೆಯಬಾರದೆಂದು, ಭಾನುವಾರವೂ ನಗರದ ನಾಗರಿಕರತ್ತ ಕೈ ಬೀಸಲು ಮುಂದಾಗಿದ್ದಾರೆ.
`ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಇದನ್ನು ವ್ಯಾಖ್ಯಾನಿಸಿದ್ದಾರೆ.
ಇತ್ತೀಚೆಗಷ್ಟೇ, ಏ. 29ರಂದು ನಗರದ ಮಾಗಡಿ ರಸ್ತೆಯಲ್ಲಿ 6 ಕಿ.ಮೀವರೆಗೆ ಪ್ರಧಾನಿ ಮೋದಿಯವರು ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದರು. ಕೇವಲ 45 ನಿಮಿಷಗಳ ಈ ರೋಡ್ ಶೋಗೆ ಸುಮಾರು 3 ಸಾವಿರಕ್ಕೂ ಅಧಿಕ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ರಸ್ತೆಯ ಉದ್ದಗಲಕ್ಕೂ ಖಾಕಿಧಾರಿಗಳ ಜಗತ್ತು ನಿರ್ಮಾಣವಾಗಿತ್ತು. 5 ಗಂಟೆ ಕಾಲ ಸುತ್ತಮುತ್ತಲ ಪ್ರದೇಶಗಳ ಸಂಚಾರವನ್ನು ಸ್ತಬ್ಧಗೊಳಿಸಲಾಗಿತ್ತು. ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಲಾಗಿತ್ತು.
ಈ ನಮ್ಮ ಪ್ರಧಾನಿಗಳ 45 ನಿಮಿಷಗಳ ರೋಡ್ ಶೋಗೆ ಖರ್ಚಾಗಿದ್ದು ಕೇವಲ 3 ಕೋಟಿ. ಅದೂ ಕೂಡ ಭದ್ರತೆಗಾಗಿ. ಚುನಾವಣಾ ಪ್ರಚಾರಕ್ಕಾಗಿ ಖರ್ಚಾಗಿದ್ದು ಲೆಕ್ಕವಿಲ್ಲ. ಈ ರೋಡ್ ಶೋಗೆ ಚುನಾವಣಾ ಆಯೋಗದಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿಗದಿಪಡಿಸಿದ ಶುಲ್ಕವನ್ನೂ ಬಿಜೆಪಿ ಪಾವತಿಸಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದರೂ, ಚುನಾವಣಾ ಆಯೋಗಕ್ಕೆ ಪ್ರಧಾನಿಗಳನ್ನು ಪ್ರಶ್ನಿಸುವ ಧೈರ್ಯ ಬರುವುದು ಸಾಧ್ಯವೇ ಇಲ್ಲ.
ಇನ್ನು ಜೀವ ಬೆದರಿಕೆ ಇರುವ ಕಾರಣದಿಂದ ಪ್ರಧಾನಿ ಅವರಿಗೆ ಜೆಡ್+ ಭದ್ರತೆ ಕಲ್ಪಿಸಲಾಗಿದೆ. ಇದು ದೇಶದ ಅತ್ಯಂತ ಬಲಿಷ್ಠ ಭದ್ರತಾ ಕವಚ. ಪ್ರಧಾನಿ ಅವರ ಒಂದು ದಿನದ ಭದ್ರತೆಗಾಗಿ 1.17 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. 2020-21ರ ಬಜೆಟ್ನಲ್ಲಿ ಎಸ್ಪಿಜಿಗೆ 592.55 ಕೋಟಿ ರೂ. ಮೀಸಲಿಡಲಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಒಟ್ಟು 100 ಯೋಧರು ಬೆಂಗಾವಲು ಕಾರುಗಳಲ್ಲಿರುತ್ತಾರೆ. ಪ್ರಧಾನಿಗಳ ರೋಡ್ ಶೋಗೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸ್ಪೆಷಲ್ ಬುಲೆಟ್ ಪ್ರೂಫ್ ಟಾಟಾ 709 ವಾಹನವನ್ನು ಬಳಸಲಾಗುತ್ತದೆ. ಆ ವಾಹನವನ್ನು ದೆಹಲಿಯಲ್ಲೇ ಸಿದ್ಧಪಡಿಸಲಾಗಿದ್ದು, ಬೆಂಗಳೂರಿಗೆ ಏರ್ ಲಿಫ್ಟ್ ಮೂಲಕ ತರಿಸಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮೇ 6 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ರೋಡ್ ಶೋ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಕಾರಣ, ಬಿಜೆಪಿ ಅಭ್ಯರ್ಥಿ ವಿರುದ್ಧ ಹಲವಾರು ಪ್ರಕರಣಗಳಿದ್ದು, ಕಳ್ಳತನದ ಆರೋಪವೊಂದು ಸಾಬೀತಾಗಿತ್ತು. ಕಳ್ಳನ ಪರ ಪ್ರಧಾನಿಗಳು ಮತಯಾಚಿಸಲಾಗುವುದೇ ಎಂದು ರೋಡ್ ಶೋ ರದ್ದುಗೊಳಿಸಲಾಯಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮೋದಿಯವರ ಮನದ ಮಾತು
ಮಣಿಕಂಠ ಅಂಗನವಾಡಿ ಮಕ್ಕಳ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಶಿಕ್ಷೆಗೆ ಗುರಿಯಾಗಿದ್ದ. ಆತನನ್ನು ಅಭ್ಯರ್ಥಿ ಎಂದು ಘೋಷಿಸುವಾಗ ಇಲ್ಲದಿದ್ದ ಎಚ್ಚರ, ನೈತಿಕತೆ; ಆತನ ಪರ ಮತಯಾಚನೆ ಮಾಡುವಾಗ ಜಾಗೃತವಾಗಿದ್ದು, ಅದಕ್ಕೆ ಪ್ರಧಾನಿಗಳ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು- ಬಿಜೆಪಿಗರ ಸೋಗಲಾಡಿತನವನ್ನು ಬಟಾಬಯಲುಗೊಳಿಸಿದೆ.
ಮಣಿಕಂಠ ರಾಠೋಡ್ ರೌಡಿ ಎನ್ನುವುದು ಯಾರಿಗೂ ಗೊತ್ತಿಲ್ಲವೇ? ಹಾಗೆಯೇ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕನಿಷ್ಠವೆಂದರೂ 50 ಕೋಟಿ ಖರ್ಚು ಮಾಡುತ್ತಿರುವುದು, ಯಾರ ಗಮನಕ್ಕೂ ಬಂದಿಲ್ಲವೇ? ಒಬ್ಬೊಬ್ಬ ಅಭ್ಯರ್ಥಿ 50 ಕೋಟಿ ಖರ್ಚು ಮಾಡುತ್ತಾನೆಂದರೆ, 224 ಅಭ್ಯರ್ಥಿಗಳು ಮಾಡುತ್ತಿರುವ ಒಟ್ಟು ಮೊತ್ತವೆಷ್ಟು? ಇದು ಅವರು ಬೆವರು ಸುರಿಸಿ ದುಡಿದ ಹಣವೇ?
ಇಂತಹವರನ್ನು ಗೆಲ್ಲಿಸಿಕೊಳ್ಳಲು ಮೋದಿಯವರು ಹಗಲುರಾತ್ರಿ ಶ್ರಮ ಸುರಿಯುತ್ತಿದ್ದಾರೆ. ರೋಡ್ ಶೋಗಳ ಮೇಲೆ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ನಿದ್ರಾಹಾರಗಳನ್ನು ತ್ಯಜಿಸಿದ್ದಾರೆ. ಸಮಯದ ಪರಿವೆಯೇ ಇಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಶ್ನಿಸಿದರೆ, ಫಕೀರ, ಚೌಕಿದಾರ್, ಸೇವಕ್ ಎನ್ನುತ್ತಾರೆ.
ಇದು ಕೇವಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಷ್ಟೇ ಅಲ್ಲ… ಇದರ ಹಿಂದೆ ಲೆಕ್ಕವಿಲ್ಲದಷ್ಟು ಲೆಕ್ಕಾಚಾರಗಳಿವೆ. ನಾಡಿನ ಜನತೆ ಅರಿತು ಆಯ್ಕೆ ಮಾಡಿಕೊಳ್ಳಬೇಕಿದೆ.

ಬಹಳ ಜನರ ಕಣ್ಣು ತೆರೆಸಿದ ಲೇಖನ. ಅದರಲ್ಲಿ ನಾನೂ ಒಬ್ಬ