ಬಾಹ್ಯಾಕಾಶದಲ್ಲಿ ಸಿಲುಕಿರುವ ದಿಟ್ಟ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಯಾವಾಗ?

Date:

Advertisements

ಸುನಿತಾ ವಿಲಿಯಮ್ಸ್‌ ಅವರನ್ನು ಭೂಮಿಗೆ ತರಬೇಕಿದ್ದ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಜೊತೆಗೆ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳಂತಹ ತಾಂತ್ರಿಕ ದೋಷಗಳು ಕಂಡುಬಂದಿರುವ ಕಾರಣ ಇಬ್ಬರು ಗಗನಯಾತ್ರಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆಂದು ಮಾಧ್ಯಮಗಳು ಕಳವಳ ವ್ಯಕ್ತಪಡಿಸಿದ್ದವು. ಸ್ಟಾರ್‌ಲೈನರ್‌ ಇಂಧನ ಸೋರಿಕೆ ಅಂತಹ ಗಂಭೀರ ಸಮಸ್ಯೆಯಲ್ಲ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದಾಸ್ತಾನೂ ಸಾಕಷ್ಟಿರುವುದರಿಂದ ಆತಂಕಪಡುವ ಅಗತ್ಯವಿಲ್ಲವೆಂದು ನಾಸಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿ ಭಾರತೀಯ ಮೂಲದ 59 ವರ್ಷದ ಸುನಿತಾ ವಿಲಿಯಮ್ಸ್ ಅವರು ಕಳೆದ ಜೂನ್‌ 5ರಂದು ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್‌ ಬಾಹ್ಯಾಕಾಶ ಕೋಶ / ನೌಕೆಯ ಮೊದಲ ಮಾನವಸಹಿತ ಪರಿಕ್ಷಾರ್ಥ ಪ್ರಯಾಣದ ಭಾಗವಾಗಿ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆ 400 ಕಿ.ಮೀ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಿದ್ದರು. 8 ದಿನಗಳ ಯಾತ್ರೆಯ ಭಾಗವಾಗಿ ಜೂನ್‌ 14ರಂದು ಸ್ಟಾರ್‌ಲೈನರ್‌ ಮೂಲಕ ಭೂಮಿಗೆ ಮರಳಬೇಕಾಗಿತ್ತು. ಆದರೆ ಹಲವಾರು ತಾಂತ್ರಿಕ ದೋಷಗಳಿಂದಾಗಿ 100 ದಿನಗಳಿಂದ ಬಾಹ್ಯಾಕಾಶದಲ್ಲಿಯೇ ಉಳಿದುಕೊಂಡಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್‌ ದೋಷ ಸರಿಹೋಗದಿದ್ದರೆ ಸ್ಪೇಸ್ಎಕ್ಸ್‌ನ ‘ಡ್ರ್ಯಾಗನ್’ ಗಗನನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳನ್ನು 2025ರ ವರ್ಷ ಫೆಬ್ರುವರಿ ವೇಳೆಗೆ ಮರಳಿ ಭೂಮಿಗೆ ಕರೆತರಲಾಗುವುದು ಎಂದು ನಾಸಾ ಹೇಳಿದೆ.

ಭಾರತೀಯರಿಗೆ 59 ನಿವೃತ್ತಿ ಅಂಚಿನ ವಯಸ್ಸು. ಆದರೆ ಈ ವಯಸ್ಸಿನಲ್ಲಿ ಬಾಹ್ಯಾಕಾಶದಲ್ಲಿ ಹಲವು ದಿನಗಳನ್ನು ಕಳೆಯುವುದೆಂದರೆ ನಿಜಕ್ಕೂ ಸವಾಲೇ ಸರಿ. ಈಗಾಗಲೇ ಮೂರು ಬಾರಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿರುವ ಸುನಿತಾ ವಿಲಿಯಮ್ಸ್‌ 352ಕ್ಕೂ ಹೆಚ್ಚು ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದಾಗ ಸುನಿತಾ ವಿಲಿಯಮ್ಸ್‌ ಅವರು ಮ್ಯಾರಥಾನ್ ಕೈಗೊಂಡು ಗಮನ ಸೆಳೆದಿದ್ದರು. ಒಟ್ಟು 7 ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದಾರೆ. ಸುನಿತಾ ಅವರು ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಸೆ 19ರಂದು ಬಾಹ್ಯಾಕಾಶ ನಿಲ್ದಾಣದ ಮಹತ್ವದ ನಿರ್ವಹಣಾ ಕಾರ್ಯಗಳಲ್ಲಿ ಮತ್ತು ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಜನುಮದಿನವನ್ನು ಸಂಭ್ರಮಿಸಿದ್ದಾರೆ.   

Advertisements

ಸುನಿತಾ ವಿಲಿಯಮ್ಸ್‌ ಅವರನ್ನು ಭೂಮಿಗೆ ತರಬೇಕಿದ್ದ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಜೊತೆಗೆ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳಂತಹ ತಾಂತ್ರಿಕ ದೋಷಗಳು ಕಂಡುಬಂದಿರುವ ಕಾರಣ ಇಬ್ಬರು ಗಗನಯಾತ್ರಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆಂದು ಮಾಧ್ಯಮಗಳು ಕಳವಳ ವ್ಯಕ್ತಪಡಿಸಿದ್ದವು. ಸ್ಟಾರ್‌ಲೈನರ್‌ ಇಂಧನ ಸೋರಿಕೆ ಅಂತಹ ಗಂಭೀರ ಸಮಸ್ಯೆಯಲ್ಲ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ದಾಸ್ತಾನೂ ಸಾಕಷ್ಟಿರುವುದರಿಂದ ಆತಂಕಪಡುವ ಅಗತ್ಯವಿಲ್ಲವೆಂದು ನಾಸಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಗಗನಯಾತ್ರಿಗಳು ನಿಲ್ದಾಣದಲ್ಲಿ ಅಧಿಕ ದಿನ ಇದ್ದಷ್ಟೂ ತಂತ್ರಜ್ಞಾನ, ವೈದ್ಯಕೀಯ ಮತ್ತು ಮನೋವಿಜ್ಞಾನಕ್ಕೆ ಹೆಚ್ಚು ಸಹಕಾರಿಯಾಗುತ್ತದೆ.

ಬಾಹ್ಯಾಕಾಶಕ್ಕೆ ರವಾನಿಸುವ ಎಲ್ಲ ಯಂತ್ರಗಳ ಆರೋಗ್ಯ ವೀಕ್ಷಣೆಗೆಂದು ಅವುಗಳದ್ದೇ ಪ್ರತಿರೂಪಗಳನ್ನು ನಾಸಾ ಮುಖ್ಯ ಕೇಂದ್ರದಿಂದ ವೀಕ್ಷಣೆ ಮಾಡಲಾಗುತ್ತದೆ. ಹಾಗೆಯೇ ಬಾಹ್ಯಾಕಾಶದಲ್ಲಿ ವಾಸವಿದ್ದವರ ಆರೋಗ್ಯ ವೀಕ್ಷಣೆಗೆಂದು ‘ಡಿಜಿಟಲ್ ಜವಳಿ’ಗಳನ್ನೂ ಸೃಷ್ಟಿ ಮಾಡಲಾಗುತ್ತಿದೆ. ಕಕ್ಷೆಯಲ್ಲಿದ್ದವರು ದಿನಕ್ಕೆರಡು ಬಾರಿ ಅಲ್ಲಿರುವ ಸಲಕರಣೆಗಳಿಗೆ ಮೈಯೊಡ್ಡಿ ನಿಂತರೆ ಸಾಕು. ಇಡೀ ದೇಹ ಸ್ಕ್ಯಾನಿಂಗ್ ಆಗಿ ಇಲ್ಲಿರುವ ಪ್ರತಿರೂಪದಲ್ಲಿ ಅವೆಲ್ಲ ದಾಖಲಾಗುತ್ತವೆ. ಇದರ ಜ್ಞಾನ ವಿಕಾಸದ ಫಲ ಮುಂದಿನ ದಿನಗಳಲ್ಲಿ ವಿಶ್ವದ ಹಲವು ದೇಶಗಳ ಆಧುನಿಕ ಆಸ್ಪತ್ರೆಗಳಿಗೂ ದೊರಕಲಿದೆ. ಹಲವು ರೋಗಗಳಿಂದ ಬಳಲುತ್ತಿರುವವರು ಅತ್ಯುನ್ನತ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಪಡೆಯಬಹುದು.

ವೈದ್ಯರ ಪುತ್ರಿ ಸುನಿತಾ

ಸುನಿತಾ ವಿಲಿಯಮ್ಸ್‌ ಹಿನ್ನೆಲೆ ಗಮನಿಸಿದರೆ ಅವರ ತಂದೆ ಡಾ.ದೀಪಕ್ ಪಾಂಡ್ಯಾ ಅವರು ಗುಜರಾತ್‌ನ ಮೆಹಸನಾ ಜಿಲ್ಲೆಯವರು. ಉದ್ಯೋಗದ ನಿಮಿತ್ತ 1950ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ ವೈದ್ಯರಾಗಿ ಅಲ್ಲಿಯೇ ಬದುಕು ಕಟ್ಟಿಕೊಂಡರು. ಅಮೆರಿಕದ ಪ್ರಜೆ ಬೋನಿ ಝಲೋಕರ್‌ ಅವರನ್ನು ವಿವಾಹವಾದರು. ಸುನಿತಾ ಜನಿಸಿದ್ದು 1965ರ ಸೆ.19ರಂದು ಅಮೆರಿಕದ ಒಹಿಯೊದಲ್ಲಿ. 1983ರಲ್ಲಿ ಪದವಿ, 1987ರಲ್ಲಿ ಯುಎಸ್‌ಎನ್‌ ಅಕಾಡೆಮಿಯಿಂದ ಭೌತಿಕ ವಿಜ್ಞಾನದಲ್ಲಿ ಬಿಎಸ್‌ಸಿ ಪದವಿ ಹಾಗೂ 1995 ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ ಅಮೆರಿಕದ ನೌಕಾಪಡೆಯಲ್ಲಿ ಕ್ಯಾಪ್ಟನ್‌ ಆಗಿ ಸೇವೆ ಸಲ್ಲಿಸಿದ್ದರು. 1998ರಲ್ಲಿ ನಾಸಾವು ಸುನಿತಾ ಅವರ ಸೇವೆಯನ್ನು ಗುರುತಿಸಿ ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತು. ಆ ನಂತರ 2007 ಹಾಗೂ 2012ರಲ್ಲಿ ಗಗನಯಾತ್ರಿಯಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಮೈಕಲ್‌ ಜೆ ವಿಲಿಯಮ್ಸ್‌ ಅವರನ್ನು ಸುನಿತಾ ವಿವಾಹವಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭೂಮಿಯತ್ತ ಧಾವಿಸುತ್ತಿರುವ ಬೃಹತ್‌ ಗಾತ್ರದ ಕ್ಷುದ್ರಗ್ರಹಗಳು; ಪೃಥ್ವಿಗೆ ಕಾದಿದೆಯಾ ಗಂಡಾಂತರ?

ಐಎಸ್‌ಎಸ್‌ನ ಜಾಗ, ವಾತಾವರಣ, ಗಗನಯಾತ್ರಿಗಳ ಆಹಾರ ಹೇಗಿರುತ್ತದೆ?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌) ಭೂಮಿಯ ಸ್ಥಳಾವಕಾಶಕ್ಕೆ ಹೋಲಿಸಿ ನೋಡುವುದಾದರೆ, ಬಾಹ್ಯಾಕಾಶ ನಿಲ್ದಾಣದ ವಾಸಿಸುವ ಮತ್ತು ಕಾರ್ಯನಿರ್ವಹಿಸುವ ಸ್ಥಳ 6 ಕೋಣೆಗಳ ಮನೆಗಿಂತಲೂ ಹೆಚ್ಚು ಜಾಗ ಹೊಂದಿರುತ್ತದೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳಿವೆ. ಭೂಮಿಯಿಂದ ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ನಾಲ್ಕು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಬಲ್ಲದು. ಏಕಕಾಲದಲ್ಲಿ ಐಎಸ್ಎಸ್ ಎಂಟು ಬಾಹ್ಯಾಕಾಶ ನೌಕೆಗಳ ನಿಲುಗಡೆಗೆ ಅವಕಾಶ ನೀಡಬಲ್ಲದು.

ನಾಸಾ ಐಎಸ್‌ಎಸ್‌ಅನ್ನು ನಿರಂತರವಾಗಿ ಗಮನಿಸುತ್ತಾ, ಅಲ್ಲಿನ ವಾಯು ಒತ್ತಡವನ್ನು ಭೂಮಿಯ ಒತ್ತಡವಾದ 14.7 ಪೌಂಡ್‌ಪರ್ ಸ್ಕ್ವೇರ್ ಇಂಚ್ (ಪಿಎಸ್ಐ) ಅಥವಾ 1 ಅಟ್ಮಾಸ್ಫಿಯರ್ ಮಟ್ಟದಲ್ಲಿ ಇಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ತಾಪಮಾನವನ್ನು ಸಾಮಾನ್ಯವಾಗಿ 18.3 ಡಿಗ್ರಿ ಸೆಲ್ಸಿಯಸ್‌ನಿಂದ 26.7 ಡಿಗ್ರಿ ಸೆಲ್ಸಿಯಸ್ ನಡುವೆ ಇಡಲಾಗುತ್ತದೆ. ಐಎಸ್ಎಸ್ ಇರುವ ಸ್ಥಳಕ್ಕೆ ಅನುಗುಣವಾಗಿ ಈ ತಾಪಮಾನ ಬದಲಾಗುತ್ತಿರುತ್ತದೆ. ಬಾಹ್ಯಾಕಾಶವು ನಿಲ್ದಾಣದ ಹೊರಭಾಗದಲ್ಲಿ, ಸೂರ್ಯನಿಗೆ ಎದುರಾಗಿರುವ ಬದಿ ಅಂದಾಜು 121 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಹೊಂದಿದ್ದರೆ, ನೆರಳಿಗೆ ಎದುರಾಗಿರುವ ಬದಿ ಅಂದಾಜು -157 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಹೊಂದಿರುತ್ತದೆ.

ಆಹಾರ, ನೀರು, ಆಮ್ಲಜನಕ

ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಬಹುತೇಕ ಭೂಮಿಯಲ್ಲಿ ಸೇವಿಸುವಂತಹ ಆಹಾರವನ್ನೇ ಸೇವಿಸುತ್ತಾರೆ. ಹಣ್ಣುಗಳು, ತರಕಾರಿಗಳು, ಮೊದಲೇ ಸಿದ್ಧಪಡಿಸಿರುವ ಆಹಾರ ಪದಾರ್ಥಗಳು, ಸಿಹಿ ತಿನಿಸುಗಳು, ಕೆಚಪ್ ಮತ್ತು ಸಾಸಿವೆಯಂತಹ ವಸ್ತುಗಳೂ ಸೇರಿವೆ. ಅವರು ಪ್ರತಿದಿನವೂ ಮೂರು ಬಾರಿ ಆಹಾರ ಸೇವಿಸುತ್ತಾರೆ. ಅದರೊಡನೆ ಹೆಚ್ಚುವರಿ ಕ್ಯಾಲರಿಗಾಗಿ ಇತರ ತಿನಿಸುಗಳನ್ನೂ ತಿನ್ನುತ್ತಾರೆ. ಅವರ ಆಹಾರ ಆಯ್ಕೆಗಳನ್ನು ಖುದ್ದಾಗಿ ಯೋಜನಾ ತಂಡ ಮತ್ತು ಗಗನಯಾತ್ರಿಗಳೇ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡು ರೂಪಿಸುತ್ತಾರೆ. ಸುದೀರ್ಘ ಅವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳು ಉಳಿಯುವ ಸಲುವಾಗಿ ವಿಜ್ಞಾನಿಗಳು ಆಹಾರ ತಯಾರಿ ಮತ್ತು ಪ್ಯಾಕೇಜಿಂಗ್ ಕ್ರಮವನ್ನು ವಿಶಿಷ್ಟವಾಗಿಸಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸುವ ಆಹಾರ ವಸ್ತುಗಳನ್ನು ಆರಿಸುವಾಗ, ಕಡಿಮೆ ತೂಕ, ಹೆಚ್ಚು ಪೋಷಕಾಂಶ ಹೊಂದಿರುವ, ತಿನ್ನಲು ಸುಲಭ ಮತ್ತು ರುಚಿಕರವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸುನಿತಾ ವಿಲಿಯಮ್ಸ್1

ಪ್ರತಿಯೊಬ್ಬ ಗಗನಯಾತ್ರಿಗೂ ದಿನಕ್ಕೆ ಅಂದಾಜು 3.79 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಈ ನೀರನ್ನು ಅವರು ಕುಡಿಯಲು, ಅಡುಗೆ ಮಾಡಲು, ಹಲ್ಲುಜ್ಜುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಬಳಸುತ್ತಾರೆ. ಒಂದು ವೇಳೆ ಗಗನಯಾತ್ರಿಗಳು ತಿಂಗಳಾನುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುತ್ತರೆಂದರೆ, ತಮ್ಮೊಡನೆ ತಂದ ಶೇ. 98 ನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾರೆ. ಇದರಲ್ಲಿ ಗಗನಯಾತ್ರಿಗಳ ಮೂತ್ರ ಮತ್ತು ಬೆವರೂ ಸೇರಿದ್ದು, ಅದನ್ನು ಮರಳಿ ಶುದ್ಧ ನೀರನ್ನಾಗಿ ಪರಿವರ್ತಿಸಲಾಗುತ್ತದೆ.

ಎನ್ವಿರಾನ್‌ಮೆಂಟಲ್‌ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಎಂಬ ವ್ಯವಸ್ಥೆಯನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ನೀರಿನ ಮರುಬಳಕೆ ನಡೆಸಲೆಂದೇ ಅಳವಡಿಸಲಾಗಿದೆ. ಇದು ಸ್ವಚ್ಛ ನೀರು ಒದಗಿಸಲು ಕೆಲಸ ಮಾಡುತ್ತದೆ. ಈ ಯಂತ್ರ ಕೇವಲ ಗಗನಯಾತ್ರಿಗಳ ಮೂತ್ರವನ್ನು ಮಾತ್ರವೇ ಶುದ್ಧ ನೀರನ್ನಾಗಿ ಪರಿವರ್ತಿಸುವುದಲ್ಲ. ಅದರೊಡನೆ, ಗಗನಯಾತ್ರಿಗಳ ಉಸಿರಿನ ತೇವಾಂಶ, ಬೆವರಿನ ತೇವಾಂಶವನ್ನೂ ಸಂಗ್ರಹಿಸಿ, ಮರುಬಳಕೆಗೆ ಶುದ್ಧ ನೀರನ್ನಾಗಿ ಪರಿವರ್ತಿಸುತ್ತದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 500 ಗ್ಯಾಲನ್‌ಗಳ (1,893 ಲೀಟರ್) ಒಂದು ನೀರಿನ ಟ್ಯಾಂಕ್ ಇರುತ್ತದೆ. ಇದರಿಂದ 6-8 ಜನರಿಗೆ ಅಂದಾಜು 80 ದಿನಗಳಿಗೆ ಬೇಕಾದ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ, ಇನ್ನೊಂದು ಹೆಚ್ಚುವರಿ ಆಮ್ಲಜನಕದ ಟ್ಯಾಂಕ್ ವ್ಯವಸ್ಥೆಯೂ ಇದೆ. ಅದರಲ್ಲೂ ಏನಾದರೂ ಸಮಸ್ಯೆ ಉಂಟಾದರೆ, ರಾಸಾಯನಿಕವಾಗಿ ಆಮ್ಲಜನಕ ಉತ್ಪಾದಿಸುವ ಇನ್ನೊಂದು ಘಟಕ ಕೂಡ ಬಾಹ್ಯಾಕಾಶ ನಿಲ್ದಾಣದಲ್ಲಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

Download Eedina App Android / iOS

X