ಶಿವಣ್ಣ ಪ್ರಚಾರಕ್ಕೆ ಹಣ ಪಡೆದಿರುವುದಾಗಿ ಆರೋಪಿಸಿದ್ದ ಸಂಬರಗಿ
ವಿವಾದಾತ್ಮಕ ಹೇಳಿಕೆ ಹಿಂಪಡೆಯುವಂತೆ ಆಗ್ರಹಿಸಿದ ಹಿರಿಯ ನಟ
ಶಿವರಾಜ್ ಕುಮಾರ್, ಹಣ ಪಡೆದು ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂಬ ಪ್ರಶಾಂತ್ ಸಂಬರಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಣ್ಣ ನನ್ನ ಬಳಿ ಹಣ ಇಲ್ಲವೇ? ನಿಮ್ಮ ಹೇಳಿಕೆಯನ್ನು ಮೊದಲು ಹಿಂಪಡೆಯಿರಿ ಎಂದು ತಿರುಗೇಟು ನೀಡಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪರ ಭರ್ಜರಿ ಪ್ರಚಾರ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ತಮ್ಮ ಬಗ್ಗೆ ಪ್ರಶಾಂತ್ ಸಂಬರಗಿ ಮಾಡಿದ ʼಫೇಸ್ಬುಕ್ ಪೋಸ್ಟ್ʼ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಹಣಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳುತ್ತಲೇ ಆಶ್ಚರ್ಯ ವ್ಯಕ್ತಪಡಿಸಿರುವ ಅವರು, “ನಮಗೆ ಹಣ ಮುಖ್ಯವಂತಾ? ಹಾಗಿದ್ದರೆ ನಮ್ಮ ಬಳಿ ದುಡ್ಡಿಲ್ಲವಾ? ದಯವಿಟ್ಟು ಈ ಹೇಳಿಕೆಯನ್ನು ವಾಪಾಸ್ ಪಡೆಯಿರಿ. ನಾನು ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ ಎಂಬ ಕಾರಣಕ್ಕೆ ಈ ರೀತಿ ಮಾತನಾಡುವುದು ತಪ್ಪು. ನಾನು ಹಣ ಪಡೆದುಕೊಂಡು ಯಾರ ಪರವೂ ಪ್ರಚಾರ ಮಾಡಲು ಬಂದಿಲ್ಲ. ಮನಸ್ಸಿನಿಂದ ಬಂದಿದ್ದೇನೆ. ಒಬ್ಬ ಮನುಷ್ಯನಾಗಿ ಬಂದಿದ್ದೇನೆಯೇ ಹೊರತು, ವ್ಯಾಪಾರಕ್ಕಾಗಿ ಅಲ್ಲ. ಬೇರೆ ಯಾರನ್ನೂ ಟೀಕಿಸುವುದಕ್ಕಾಗಿ ಕೂಡ ನಾನು ಬಂದಿಲ್ಲ. ನಾನು ಬೆಂಬಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಬೇರೆ ಯಾರ ಬಗ್ಗೆಯೂ ಮಾತನಾಡಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ನಾಲಿಗೆ ಹರಿಬಿಟ್ಟ ಪ್ರಶಾಂತ್ ಸಂಬರಗಿ
ಫೇಸ್ಬುಕ್ನಲ್ಲಿ ಶಿವರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಬರಹ ಹಂಚಿಕೊಂಡಿದ್ದ ಪ್ರಶಾಂತ್ ಸಂಬರಗಿ, “ಶಿವಣ್ಣ ಯಾವತ್ತೂ ʼಸ್ಕ್ರಿಪ್ಟ್ʼ ಕೇಳುವುದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ, ಒಪ್ಪಿಕೊಂಡಿದ್ದ ಸಿನಿಮಾ ಮಾಡುತ್ತಾರೆ. ತುಂಬಾ ಎಮೋಶನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತೆಗೆದುಕೊಂಡು ಇನ್ನೊಂದು ಫಿಲಂ ಸೈನ್ ಮಾಡಿಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ದರೇನು, ಸೋತರೇನು ಎಲ್ಲ ಒಂದೇ. ಬಂತಾ ಪ್ಯಾಕೇಟ್ ಸರಿ. ಆಲ್ ರೈಟ್ ಮುಂದೆ ಹೋಗೋಣ” ಎಂದು ಗಂಭೀರ ಆರೋಪ ಮಾಡಿದ್ದು, ಶಿವಣ್ಣನ ವಿರುದ್ಧ ಅಶ್ಲೀಲ ಪದ ಪ್ರಯೋಗವನ್ನು ಕೂಡ ಮಾಡಿದ್ದಾರೆ. ಈ ಫೇಸ್ಬುಕ್ ಪೋಸ್ಟ್ಗೆ ಶಿವಣ್ಣನ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಪ್ರಶಾಂತ್ ಸಂಬರಗಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.