ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ ಅರ್ಧಕ್ಕೆ ಮುರಿದು ಬಾಗಿದ್ದು, ಹತ್ತು ಹದಿನೈದು ದಿನಗಳಾದರೂ ಈವರೆಗೆ ಅಧಿಕಾರಿಗಳು ತೆರವುಗೊಳಿಸದೆ ಇರುವುದು ಅಪಾಯಕ್ಕೆ ಎಡೆಮಾಡಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದ ಮಿನಿ ವಿಧಾನಸೌಧದ ಎದುರಿಗೆ ಇರುವ ಮುಖ್ಯ ರಸ್ತೆಯ ಡಿವೈಡರ್ ಮಧ್ಯೆಯಿರುವ ಬೀದಿದೀಪದ(ವಿದ್ಯುತ್ ಕಂಬ) ಕಂಬಕ್ಕೆ ಹದಿನೈದು ದಿನಗಳ ಹಿಂದೆ ಲಾರಿ ಡಿಕ್ಕಿ ಹೊಡೆದು, ರಸ್ತೆಗೆ ಬಾಗಿದೆ. ಅಪಾಯಕ್ಕೆ ಎಡೆ ಮಾಡಿಕೊತ್ತಿದ್ದರೂ ಕೂಡಾ ಇಲ್ಲಿಯ ಅಧಿಕಾರಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದು ದುರಂತ.
ಈ ಮುಖ್ಯ ರಸ್ತೆಯಲ್ಲಿ ಬಸ್, ಲಾರಿ ಸೇರಿದಂತೆ ದ್ವಿಚಕ್ರ ವಾಹನಗಳು ಅತಿಹೆಚ್ಚು ಓಡಾಡುತ್ತವೆ. ಹುಬ್ಬಳ್ಳಿ, ನರಗುಂದ, ಗದಗ ಬಸ್‌ಗಳೂ ಕೂಡಾ ಇದೇ ರಸ್ತೆಯಲ್ಲಿ ಹೆಚ್ಚು ಸಂಚರಿಸುತ್ತವೆ. ಈ ರಸ್ತೆಯ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಹೋಟೆಲ್‌ಗಳು, ಜೆರಾಕ್ಸ್ ಅಂಗಡಿಗಳೂ ಕೂಡ ಇವೆ. ಈ ರಸ್ತೆ ಪಕ್ಕದಲ್ಲಿಯೇ ತಹಶೀಲ್ದಾರ್ ಕಚೇರಿ ಮಿನಿ ವಿಧಾನಸೌಧ ಕೂಡ ಇದೆ. ಜನದಟ್ಟಣೆ ಇರುವ ರಸ್ತೆಯು ಆಗಿದೆ. ಸಂಚರಿಸುವ ಬಸ್ ಮತ್ತು ಲಾರಿಗಳು ಅಪಾಯ ಒಡ್ಡಿದ ಬೀದಿದೀಪದ ಕಂಬಕ್ಕೆ ತಾಗಿದರೆ ದೊಡ್ಡ ಅಪಘಾತ ಸಾವು ನೋವುಗಳಾಗುವ ಸಂಭವ ಹೆಚ್ಚಾಗಿದೆ.
ಸಮಸ್ಯೆ ಏನು?
ರೋಣ ಪಟ್ಟಣದ ಮುಲ್ಲಾನಾ ಭಾವಿ ಕ್ರಾಸ್‌ನಿಂದ ತಹಶೀಲ್ದಾರ್ ಕಚೇರಿವರೆಗೂ ಒಂದೇ ರಸ್ತೆಯಿದೆ. ತಹಶೀಲ್ದಾರ್ ಕಚೇರಿ ಹತ್ತಿರ ಬರುತ್ತಿದ್ದಂತೆಯೇ ರಸ್ತೆಯ ಮಧ್ಯದಿಂದ ಡಿವೈಡರ್ ರಸ್ತೆಗಳು ಆಗಿದ್ದು, ವೇಗವಾಗಿ ಬರುವ ಬಸ್ಸು ಮತ್ತು ಲಾರಿಗಳು, ಒಮ್ಮಿಂದೊಮ್ಮೆಲೆ ಮಗ್ಗಲು ರಸ್ತೆಗೆ ತೆಗೆದುಕೊಳ್ಳಲು ಆಗದೆ ಇರುವುದರಿಂದ ಕಂಬಕ್ಕೆ ಡಿಕ್ಕಿ ಹೊಡೆಯುವ ಸಂಭವ ಜಾಸ್ತಿ ಕಂಡುಬರುತ್ತದೆ. ರಾತ್ರಿ ವೇಳೆ ಲಾರಿ ಮತ್ತು ಬಸ್ ಚಾಲಾಯಿಸುವುದು ಸಾರ್ವಜನಿಕರಿಗೆ ಸವಾಲಾಗಿದೆ.

ಅಷ್ಟೇ ಅಲ್ಲದೇ ಈ ರಸ್ತೆ ಪಕ್ಕದಲ್ಲಿ ಹೋಟೆಲ್‌ಗಳಿಗೆ ಹೋಗುವವರು ದ್ವಿಚಕ್ರ ವಾಹನಗಳ ಬಳಸುವುದರಿಂದ ಬಸ್‌ಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ. ಇದರಿಂದ ಈ ರೀತಿಯ ಅಪಾಯಗಳಾಗುವ ಸಂಭವ ಹೆಚ್ಚು.
ಮಾದಿಗ ದಂಡೋರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬುರಡಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಬೀದಿದೀಪದ ಕಂಬಕ್ಕೆ ಬಸ್ಸೋ ಲಾರಿಯೋ ಡಿಕ್ಕಿ ಹೊಡೆದಿದ್ದು, ಸುಮಾರು ಹದಿನೈದು ದಿನಗಳಿಂದ ಈ ಕಂಬ ಬೀಳುವ ಹಂತದಲ್ಲಿದೆ. ನಿತ್ಯ ನೂರಾರು ಬಸ್‌ಗಳು, ದ್ವಿಚಕ್ರ ವಾಹನಗಳು, ಓಡಾಡುತ್ತವೆ. ಬಸ್‌ಗಳಿಗೆ ತಾಗಿ ದೊಡ್ಡ ಅನಾಹುತವಾಗುವ ಸಂಭವ ಹೆಚ್ಚು. ಹಾಗಾಗಿ ಕೂಡಲೇ ಕಂಬವನ್ನು ತೆರವುಗೊಳಿಸಿ, ಅಪಾಯ ತಪ್ಪಿಸಬೇಕು. ತಹಶೀಲ್ದಾರ್ ಇದೇ ರಸ್ತೆಯಲ್ಲಿಯೇ ನಿತ್ಯ ಓಡಾಡುತ್ತಾರೆ. ಆದರೂ ಗಮನ ಹರಿಸದೇ ಇರುವುದು ದುರಂತ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ನಿರ್ಮಾಣ ಜಾಗದಲ್ಲಿ ಅಕ್ರಮ ಶೆಡ್: ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಮನವಿ
ಈ ಕುರಿತು ಮಾಹಿತಿ ಪಡೆಯಲು ಈ ದಿನ.ಕಾಮ್ ಪುರಸಭೆ ಮುಖ್ಯ ಅಧಿಕಾರಿಗೆ ಸಂಪರ್ಕಿಸಿದ್ದು, ಅವರು ಕರೆಗೆ ಲಭ್ಯವಾಗಿಲ್ಲ.
“ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಬಾಗಿದ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಅಪಾಯ ಹಾಗೂ ಅಪಘಾತ ಆಗುವುದನ್ನು ತಪ್ಪಿಸಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.