ರೂಪಾಯಿ ನೋಟುಗಳಲ್ಲಿ ಗಾಂಧೀಜಿ ಚಿತ್ರ ಮೊದಲ ಆಯ್ಕೆಯಾಗಿರಲಿಲ್ಲ; ಮತ್ಯಾರು?

Date:

Advertisements

ಇತರೆ ದೇಶಗಳ ಕರೆನ್ಸಿಗಳಂತೆ ಭಾರತದ ರೂಪಾಯಿ – ನೋಟು, ನಾಣ್ಯಗಳು ಕೂಡಾ ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಐತಿಹಾಸಿಕ ಘಟನೆಗಳನ್ನು ಮೆಲುಕು ಹಾಕುತ್ತದೆ. ನಾವೀಗ ಬಳಸುವ ನೋಟುಗಳ ಬಣ್ಣ ಬದಲಾದರೂ ಕೂಡಾ ಮಹಾತ್ಮ ಗಾಂಧೀಜಿ ಚಿತ್ರ ಹಾಗೆಯೇ ಇದೆ. ಆದರೆ, ಸ್ವಾತಂತ್ರ್ಯ ಭಾರತದಲ್ಲಿ ಹೊಸ ನೋಟು ಮುದ್ರಣದ ವೇಳೆ ರೂಪಾಯಿ ನೋಟುಗಳಲ್ಲಿ ಗಾಂಧೀ ಚಿತ್ರ ಮೊದಲ ಆಯ್ಕೆಯಾಗಿರಲಿಲ್ಲ. ಗಾಂಧೀಜಿ ಚಿತ್ರ ಬಳಕೆ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು ಎಂಬುದು ಹಲವರಿಗೆ ಗೊತ್ತಿಲ್ಲದ ವಿಚಾರ…!

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದತ್ತ ನಾವು ಮುಖ ಮಾಡಿದಾಗ, ಸ್ವಾತಂತ್ರ್ಯ ಭಾರತದ ಮೊದಲ ರೂಪಾಯಿ ನೋಟುಗಳಲ್ಲಿ ಗಾಂಧೀಜಿಯ ಚಿತ್ರಗಳನ್ನೇ ಸ್ವಾಭಾವಿಕವಾಗಿ ಆಯ್ಕೆ ಮಾಡಿಕೊಂಡಿರಬಹುದು ಎಂದುಕೊಳ್ಳುತ್ತೇವೆ. ಆದರೆ ವಾಸ್ತವವಾಗಿ ನಡೆದಿರುವುದೇ ಬೇರೆ.

ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಕೊಡುಗೆ ಅಭೂತಪೂರ್ವವಾದರೂ ಕೂಡಾ ನೋಟುಗಳಲ್ಲಿ ಯಾರ ಚಿತ್ರವನ್ನು ಹಾಕಬೇಕು ಎಂಬ ಪ್ರಶ್ನೆ ಬಂದಾಗ ಗಾಂಧೀಜಿ ಮೊದಲ ಆಯ್ಕೆಯಾಗಿರಲಿಲ್ಲ. ಮಾತ್ರವಲ್ಲ, ಅವರ ಚಿತ್ರವನ್ನು ನೋಟುಗಳಲ್ಲಿ ಅಳವಡಿಸಿಕೊಳ್ಳುವ ಪ್ರಸ್ತಾಪವನ್ನು ಕೂಡಾ ತಿರಸ್ಕರಿಸಲಾಗಿತ್ತು. ಕಾಲಕ್ರಮೇಣವಾಗಿ ನೋಟುಗಳ ಹೊಸ ಮುದ್ರಣವಾದಂತೆ ಗಾಂಧೀ ನಗು ಮುಖ ಛಾಪಲಾಯಿತು. ಹಾಗಾದರೆ, ರೂಪಾಯಿ ನೋಟುಗಳ ಮೇಲೆ ಗಾಂಧೀ ಚಿತ್ರ ಬಂದಿದ್ದು ಯಾವಾಗ? ಬೇರೆ ಯಾರ ಚಿತ್ರ ಮುದ್ರಣಕ್ಕೆ ಪ್ರಸ್ತಾಪಿಸಲಾಗಿತ್ತು ನೋಡೋಣ.

Advertisements

ರೂಪಾಯಿ ನೋಟುಗಳ ಮೇಲೆ ಗಾಂಧೀಜಿ ಚಿತ್ರ ಬಂದ ಕಥೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕರೆನ್ಸಿ ನೋಟುಗಳ ಮೇಲೆ ಹಾಕಬೇಕಾದ ಚಿತ್ರಗಳನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂಬುದನ್ನು ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದೆ.

ಇದನ್ನು ಓದಿದ್ದೀರಾ? ಕೊಪ್ಪಳ | ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಎಲ್ಲರೂ ಪಾಲಿಸಬೇಕು: ಮಕoದರ್ ಖಾನ್

1947ರ ಆಗಸ್ಟ್ 14-15ರ ನಡುರಾತ್ರಿಯಂದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಘೋಷಿಸಲಾಯಿತು. 1950ರ ಜನವರಿ 26ರಂದು ಗಣರಾಜ್ಯವನ್ನು ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂ ಕ್ಆಫ್ ಇಂಡಿಯಾ ಅಸ್ತಿತ್ವದಲ್ಲಿರುವ ನೋಟುಗಳನ್ನೇ ಮುದ್ರಿಸಲು ಆರಂಭಿಸಿತು. ಬಳಿಕ 1949ರಲ್ಲಿ ಹೊಸ ವಿನ್ಯಾಸದ ಒಂದು ರೂಪಾಯಿಯ ನೋಟನ್ನು ಮುದ್ರಿಸಿತು.

ಆದರೆ, ಸ್ವತಂತ್ರ ಭಾರತದಲ್ಲಿ ರೂಪಾಯಿಯಲ್ಲಿ ಮುದ್ರಣವಾಗುವ ಚಿಹ್ನೆಯನ್ನು ಕೂಡಾ ಬದಲಾಯಿಸಬೇಕಾಗಿತ್ತು. ಆರಂಭದಲ್ಲಿ ರಾಜನ ಭಾವಚಿತ್ರದ ಬದಲಾಗಿ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ಆಯ್ಕೆ ಮಾಡುವ ಚಿಂತನೆ ನಡೆಸಲಾಗಿತ್ತು. ಅದಕ್ಕಾಗಿ ಎಲ್ಲ ವಿನ್ಯಾಸವನ್ನು ಕೂಡಾ ಸಿದ್ದಪಡಿಸಲಾಗಿತ್ತು. ಆದರೆ, ಬಳಿಕ ಗಾಂಧೀ ಚಿತ್ರದ ಬದಲಾಗಿ ಒಮ್ಮತದಲ್ಲಿ ಸಾರನಾಥ ಸ್ತಂಭವನ್ನು (ಅಶೋಕ ಸ್ತಂಭ) ಆಯ್ಕೆ ಮಾಡಲಾಯಿತು.

ಸ್ವಾತಂತ್ರ್ಯ ನಂತರ ಹಲವು ವರ್ಷಗಳವರೆಗೆ ನೋಟುಗಳಲ್ಲಿ ಭಾರತದ ಪರಂಪರೆ, ಇತಿಹಾಸದ ಕುರಿತಾದ ಚಿತ್ರಗಳನ್ನೇ ಮುದ್ರಿಸಲಾಯಿತು. ಬಳಿಕ, 1950 ಮತ್ತು 60ರಲ್ಲಿ ಹುಲಿಗಳು ಮತ್ತು ಜಿಂಕೆಗಳಂತಹ ಪ್ರಾಣಿಗಳ ಚಿತ್ರಗಳನ್ನೂ ಕೂಡಾ ಮುದ್ರಿಸಲಾಯಿತು. ಹಿರಾಕುಡ್ ಅಣೆಕಟ್ಟು, ಆರ್ಯಭಟ್ಟ ಉಪಗ್ರಹ, ಬೃಹದೀಶ್ವರ ದೇವಸ್ಥಾನ ಹೀಗೆ ಹಲವಾರು ಚಿತ್ರಗಳೊಂದಿಗೆ ನೋಟುಗಳ ವಿನ್ಯಾಸಗಳನ್ನು ಕಾಲಕ್ಕೆ ಅನುಗುಣವಾಗಿ ಬದಲಾಯಿಸಲಾಯಿತು.

ಇದನ್ನು ಓದಿದ್ದೀರಾ?: ಮಹಾತ್ಮ ಗಾಂಧೀಜಿ ಕುರಿತು ಹರಡಿದ ಸುಳ್ಳು ಸುದ್ದಿಗಳು

1969ರಲ್ಲಿ ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಅವರ ಚಿತ್ರವು ಮೊದಲ ಬಾರಿಗೆ ಕರೆನ್ಸಿ ನೋಟುಗಳಲ್ಲಿ ಕಾಣಿಸಿಕೊಂಡಿತು. ಈ ಹೊಸ ವಿನ್ಯಾಸದ ನೋಟುಗಳಲ್ಲಿ ಗಾಂಧೀಜಿ ಸೇವಾಗ್ರಾಮ ಆಶ್ರಮದಲ್ಲಿ ಕುಳಿತಿರುವುದು ಕಾಣಬಹುದು.

ಜನತಾ ಪಕ್ಷವು ಅಧಿಕ ಮೌಲ್ಯದ ನೋಟುಗಳ ಅಮಾನ್ಯೀಕರಣ ಮಾಡಿದ ಸುಮಾರು ಒಂಬತ್ತು ವರ್ಷಗಳ ನಂತರ 1987ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರವು 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿತು. ಈ 500 ರೂಪಾಯಿ ಮೌಲ್ಯದ ನೋಟುಗಳಲ್ಲಿ ಮೊದಲ ಬಾರಿಗೆ ಗಾಂಧೀಜಿ ಚಿತ್ರವನ್ನು ಮುದ್ರಿಸಲಾಗಿದೆ.

1996ರಲ್ಲಿ ಆರ್‌ಬಿಐ ಮಹಾತ್ಮ ಗಾಂಧೀಜಿ ಭಾವಚಿತ್ರಗಳನ್ನು ಒಳಗೊಂಡ ನೋಟುಗಳ ಸರಣಿಯನ್ನು ಪ್ರಾರಂಭಿಸಿತು. ಈ ಸಂದರ್ಭದಲ್ಲೇ ನೋಟಿನಲ್ಲಿ ವಾಟರ್‌ಮಾರ್ಕ್‌ ಸೇರಿದಂತೆ ನಕಲಿ ನೋಟು ಮುದ್ರಣಕ್ಕೆ ತಡೆಯೊಡ್ಡುವ ಕೆಲವು ಭದ್ರತೆಗಳನ್ನೂ ಪರಿಚಯಿಸಲಾಗಿತ್ತು. ಇದಾದ ಬಳಿಕ ಭಾರತದ ಎಲ್ಲ ಮುಖಬೆಲೆಯ ನೋಟುಗಳಲ್ಲಿಯೂ ಗಾಂಧೀಜಿ ಚಿತ್ರವು ಶಾಶ್ವತವಾಯಿತು.

ಗಾಂಧೀಜಿ ಚಿತ್ರ ಬದಲಾವಣೆಗೆ ಆಗ್ರಹ!

ಭಾರತೀಯ ರೂಪಾಯಿ ನೋಟುಗಳಲ್ಲಿ ಹಲವಾರು ವರ್ಷಗಳಿಂದ ಗಾಂಧೀಜಿ ಚಿತ್ರವಿದೆ. ಇದನ್ನು ಬದಲಾಯಿಸಬೇಕು ಎಂಬ ಒತ್ತಾಯ ಕೂಡಾ ಕೇಳಿಬಂದಿದೆ. ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಕೂಡಾ ನೋಟುಗಳಲ್ಲಿ ಮುದ್ರಿಸುವ ಬೇಡಿಕೆಯನ್ನೂ ಕೆಲ ಮತೀಯವಾದಿ ಗುಂಪುಗಳು ಮುಂದಿಟ್ಟಿವೆ. ಡಾ. ಬಿ.ಆರ್‌ ಅಂಬೇಡ್ಕರ್, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಸೇರಿದಂತೆ ಹಲವು ನಾಯಕರುಗಳ ಚಿತ್ರವನ್ನು ಮುದ್ರಿಸುವಂತೆ ಆಗ್ರಹಿಸಲಾಗುತ್ತಿದೆ.

ಈ ಪೈಕಿ ಡಾ. ಬಿಆರ್‌ ಅಂಬೇಡ್ಕರ್ ಅವರ ಚಿತ್ರವುಳ್ಳ ನೋಟು ಮುದ್ರಣವಾಗದಿದ್ದರೂ, ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ 2015ರ ಡಿಸೆಂಬರ್ 6ರಂದು 125 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನು ಓದಿದ್ದೀರಾ? ಮಹಾತ್ಮಾ ಗಾಂಧಿ ಬಗ್ಗೆ ಸಿನಿಮಾ ಬರುವವರೆಗೆ ಜಗತ್ತಿಗೆ ಅವರು ಯಾರೆಂಬುದೇ ಗೊತ್ತಿರಲಿಲ್ಲ: ಪ್ರಧಾನಿ ಮೋದಿ ವಿಚಿತ್ರ ಹೇಳಿಕೆ

2022ರಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ರಾಷ್ಟ್ರಕ್ಕೆ ಸಮೃದ್ಧಿಯನ್ನು ತರಲು ಭಾರತೀಯ ನೋಟುಗಳಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಹಾಕಬೇಕು ಎಂಬ ಹೇಳಿಕೆ ನೀಡಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೋಮು ಸೌಹಾರ್ದ ದೇಶದಲ್ಲಿ ಒಂದು ಧರ್ಮದ ದೇವರುಗಳ ಚಿತ್ರವನ್ನು ನೋಟುಗಳಲ್ಲಿ ಮುದ್ರಿಸುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಅಭಿಪ್ರಾಯಪಟ್ಟಿದ್ದವು. ಹಾಗೆಯೇ, ಎಎಪಿ ನಿಲುವನ್ನು ಕೆಲವು ಬಿಜೆಪಿ ನಾಯಕರು ಸೇರಿದಂತೆ ವಿಪಕ್ಷ ನಾಯಕರು ಟೀಕಿಸಿದ್ದರು.

ನೋಟಿನಿಂದ ಗಾಂಧೀಜಿ ಚಿತ್ರ ಮಾಯವಾಗುತ್ತಾ?

ಸದ್ಯ, ಡಿಜಿಟಲ್ ರೂಪಾಯಿ ಚಾಲ್ತಿಯಲ್ಲಿದೆ. ಆದರೆ, ಇದರಲ್ಲಿ ಗಾಂಧೀಜಿ ಚಿತ್ರವಿಲ್ಲ. ಎರಡು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಡಿಜಿಟಲ್ ರೂಪಾಯಿ ವಿನ್ಯಾಸದಲ್ಲಿ ಗಾಂಧೀಜಿ ಚಿತ್ರ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಡಿಜಿಟಲ್ ಕರೆನ್ಸಿಯ ವಿನ್ಯಾಸದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಕಡೆಗಣಿಸಿರುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದಕ್ಕೂ ಮುನ್ನವೇ ನೋಟುಗಳಿಂದ ಗಾಂಧೀಜಿ ಚಿತ್ರವು ಶೀಘ್ರದಲ್ಲೇ ಮಾಯವಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ 2016ರಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ, “ಯುಪಿಎ ಅವಧಿಯಲ್ಲಿ ರಚಿಸಲಾದ ಸಮಿತಿಯು ಈಗಾಗಲೇ ನೋಟಿನಲ್ಲಿ ಚಿತ್ರ ಬದಲಾವಣೆಯ ಅಗತ್ಯವಿಲ್ಲ ಎಂದು ಹೇಳಿದೆ. ಕಾಲಕಾಲಕ್ಕೆ ಆರ್‌ಬಿಐ ಜೊತೆ ಚರ್ಚಿಸಿ ಸರ್ಕಾರ ಯಾವ ನೋಟು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ನಿರ್ಧರಿಸುತ್ತದೆ” ಎಂದು ತಿಳಿಸಿದ್ದರು.

ಆದರೆ, ಇಂದಿಗೂ ಕೂಡಾ ನೋಟಿನಲ್ಲಿರುವ ಗಾಂಧೀಜಿ ಚಿತ್ರ ಬದಲಾವಣೆಯ ಬಗ್ಗೆ ಮಿಶ್ರ ಅಭಿಪ್ರಾಯವಿದೆ. ಡಿಜಿಟಲ್ ರೂಪಾಯಿಯಲ್ಲಿ ಗಾಂಧೀಜಿ ಚಿತ್ರ ಮಾಯವಾದಂತೆ ಕ್ರಮೇಣವಾಗಿ ನೋಟುಗಳಿಂದಲೂ ಗಾಂಧೀಜಿ ಚಿತ್ರವೂ ಮಾಯವಾಗಬಹುದು. ಕೇಂದ್ರ ಬಿಜೆಪಿ ಸರ್ಕಾರ ತಮ್ಮ ಸಿದ್ಧಾಂತಕ್ಕೆ ತಕ್ಕುದಾದ ನಾಯಕರುಗಳ ಚಿತ್ರವನ್ನು ಮುದ್ರಿಸಬಹುದು, ಈ ಮೂಲಕ ನೋಟಿನಲ್ಲಿಯೂ ತಮ್ಮ ಅಜೆಂಡಾ ಪ್ರಚಾರ ಮಾಡಬಹುದು ಎಂಬ ಅಭಿಪ್ರಾಯವೂ ಇದೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X