ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನಕಲಿ ಶಾಖೆ ಗ್ರಾಮವೊಂದರ ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಸಣ್ಣ ಗ್ರಾಮವೊಂದರಲ್ಲಿ ನಡೆದಿದೆ.
ಸೆಪ್ಟೆಂಬರ್ 18ರಂದು ಛತ್ತೀಸ್‌ಗಢದ ಛಪೋರಾ ಗ್ರಾಮದಲ್ಲಿ ರಾತ್ರಿ ಬೆಳಗಾಗುತ್ತಿದ್ದಂತೆ ಎಸ್‌ಬಿಐ ಶಾಖೆಯೊಂದು ತೆರೆದಿತ್ತು. ಎಸ್‌ಬಿಐ ಲೋಗೋ, ಕ್ಯಾಷಿಯರ್‌ಗಳು, ಮ್ಯಾನೇಜರ್‌ಗಳು ಸಿಬ್ಬಂದಿಗಳು ಎಲ್ಲರೂ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಈ ಜಾಗವನ್ನು ಬಾಡಿಗೆಗೆ ನೀಡಿದ ಮಾಲೀಕರಿಗೂ ಇದು ನಕಲಿ ಎಸ್‌ಬಿಐ ಶಾಖೆ ಎಂಬ ಸುಳಿವು ಕೂಡಾ ಇರಲಿಲ್ಲ.
ಗ್ರಾಮವೊಂದರಲ್ಲಿ ಬ್ಯಾಂಕ್ ಶಾಖೆ ಇದ್ದರೆ ಜನರಿಗೆ ಹಣಕಾಸು ಕಾರ್ಯಕ್ಕೆ ಪಟ್ಟಣಕ್ಕೆ ಅಲೆದಾಡುವ ಸಮಸ್ಯೆ ತಪ್ಪಿತು ಎಂಬ ಸಂತೋಷವೂ ಆಗಿತ್ತು. ಇಷ್ಟು ಮಾತ್ರವಲ್ಲದೆ ಕೆಲವೊಂದು ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಉದ್ಯೋಗಕ್ಕಾಗಿ 2ರಿಂದ 5 ಲಕ್ಷ ರೂಪಾಯಿವರೆಗೆ ಹಣವನ್ನು ನೀಡಿದ್ದಾರೆ. ಈ ಅಭ್ಯರ್ಥಿಗಳಿಗೆ ತರಬೇತಿಯನ್ನು ಕೂಡಾ ನೀಡಲಾಗುತ್ತಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು | ನಕಲಿ ದಾಖಲೆ ನೀಡಿದ್ದವರಿಗೆ ಸಾಲ ಮಂಜೂರು; ಮೂವರು ಬ್ಯಾಂಕ್ ಮ್ಯಾನೇಜರ್‌ಗಳ ಬಂಧನ
ಆದರೆ ಇದು ನಕಲಿ ಶಾಖೆ ಎಂದು ಎಲ್ಲರಿಗೂ ತಿಳಿಯುವಷ್ಟರಲ್ಲಿ ಬ್ಯಾಂಕ್ ತೆರೆದು ಒಂದು ವಾರ ಕಳೆದಿತ್ತು. ಈ ಜಾಲದ ಬಗ್ಗೆ ತಿಳಿಯದ ಯುವಕರು ಹೊಸ ಬ್ಯಾಂಕ್ ಉದ್ಯೋಗ ಎಂಬ ಖುಷಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳೊಬ್ಬರು, “ಎಲ್ಲಾ ವಹಿವಾಟುಗಳನ್ನು ಯುಪಿಐ ಮೂಲಕ ಮಾಡಲಾಗಿದೆ. ನಾವು ವಂಚಕರ ಹುಡುಕಾಟ ನಡೆಸುತ್ತಿದ್ದೇವೆ. ಅವರ ಫೋನ್ ಸಂಖ್ಯೆ ಪತ್ತೆಯಾಗಿಲ್ಲ. ಅವರು ಇಲ್ಲಿ ಕಟ್ಟಡ ಬಾಡಿಗೆಗೆ ಪಡೆದಾಗ ನೀಡಿದ ವಿಳಾಸವೂ ಕೂಡಾ ನಕಲಿಯಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಮಾರ್ಗಸೂಚಿ ಬಗ್ಗೆ ಆರ್‌ಟಿಐ ಮಾಹಿತಿ ನೀಡಲು ಎಸ್‌ಬಿಐ ನಕಾರ
“ಯಾವುದೇ ಖಾಲಿ ಹುದ್ದೆಯ ಜಾಹೀರಾತು ನೀಡಿರಲಿಲ್ಲ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಆದರೆ ರುದ್ಯೋಗಿ ಯುವಕರ ಸಂದರ್ಶನ ನಡೆಸಿ ಅವರಿಗೆ ಉದ್ಯೋಗ ಲಭಿಸಿರುವುದಾಗಿ ಕರೆಗಳು ಬಂದಿದೆ. ಕಬೀರ್ಧಾಮ್, ಕೊರ್ಬಾ, ಬಲೋದ್ ಮತ್ತು ಶಕ್ತಿ ಜಿಲ್ಲೆಗಳ ಯುವಕರಿಗೆ 30,000-35,000 ರೂಪಾಯಿ ವೇತನದ ಉದ್ಯೋಗ ಲಭಿಸುವ ಭರವಸೆಯಲ್ಲಿದ್ದರು. ಅದಕ್ಕಾಗಿ 5 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದಾರೆ” ಎಂದು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಈ ವಂಚನೆ ಬಗ್ಗೆ ತಿಳಿಯುವಷ್ಟರಲ್ಲಿ ರೇಖಾ ಸಾಹು, ಮಂದಿರ್ ದಾಸ್ ಮತ್ತು ಪಂಕಜ್ ಎಂದು ಹೇಳಿಕೊಂಡ ಈ ನಕಲಿ ಎಸ್‌ಬಿಐ ಶಾಖೆ ತೆರೆದ ವಂಚಕರು ನಾಪತ್ತೆಯಾಗಿದ್ದಾರೆ. ಸದ್ಯ ಶಕ್ತಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
