- 13 ಭಾಷೆಗಳಲ್ಲಿ 720 ಅಂಕಗಳಿಗೆ ಪರೀಕ್ಷೆಯಿತ್ತು
- ನಿಗದಿತ ಅವಧಿ ಮೀರಿ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ
ವೈದ್ಯಕೀಯ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕೆ ಮಣಿಪುರ ರಾಜ್ಯ ಹೊರತು ಪಡಿಸಿ, ಉಳಿದೆಲ್ಲ ರಾಜ್ಯಗಳ 400ಕ್ಕೂ ಹೆಚ್ಚು ನಗರಗಳಲ್ಲಿ ನೀಟ್ (ಪರೀಕ್ಷೆ) ನಡೆದಿದೆ. 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ನಡೆಯುತ್ತಿದ್ದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಗೊಂದಲಗಳ ನಡುವೆಯೂ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ, ಪರೀಕ್ಷೆ ಬರೆದಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಪಶುವೈದ್ಯಕೀಯ, ಹೋಮಿಯೊಪಥಿ ಕೋರ್ಸ್‌ಗಳ ಪ್ರವೇಶಕ್ಕೆ ಪರೀಕ್ಷೆ ನಡೆಸಿತು. ಎಲ್ಲ ಕೇಂದ್ರಗಳ ಬಳಿ ಪೊಲೀಸ್ ಭದ್ರತೆ ಇತ್ತು. ವಿದ್ಯಾರ್ಥಿಗಳು ಧರಿಸಿ ಬಂದಿದ್ದ ಶೂ, ಆಭರಣಗಳನ್ನು ತೆಗೆಸಿ ಕೇಂದ್ರಕ್ಕೆ ಪ್ರವೇಶ ನೀಡಲಾಗಿತ್ತು.
ನೀಟ್ ಬರೆಯಲು 20,87,499 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನೀಟ್‌ಗೆ ದೇಶದಲ್ಲೇ ಹೆಚ್ಚು ವಿದ್ಯಾರ್ಥಿಗಳು ನೋಂದಾಣಿ ಮಾಡಿಕೊಂಡಿದ್ದ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. 245 ಕೇಂದ್ರಗಳಲ್ಲಿ 1,47,581 ಅಭ್ಯರ್ಥಿಗಳು ಪರೀಕ್ಷೆಗೆ ನಡೆದಿದ್ದು, ಕಳೆದ ವರ್ಷಕ್ಕಿಂತ 5,295 ಹೆಚ್ಚು ಮಂದಿ ತಮಿಳುನಾಡಿನಲ್ಲಿ ಪರೀಕ್ಷೆ ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಐಐಟಿಗಳಲ್ಲಿ ನೆಪಕ್ಕಷ್ಟೇ ಇರುವ ಎಸ್‌ಸಿ, ಎಸ್‌ಟಿ ವಿಭಾಗಗಳು
ಪರೀಕ್ಷೆಯಿಂದ ಹೊರಗುಳಿದ ಮಣಿಪುರ
ಮಣಿಪುರದಲ್ಲಿ 5,751 ವಿದ್ಯಾರ್ಥಿಗಳು ಹಾಜರಾಗಲು ಸಿದ್ಧರಾಗಿದ್ದರು. ಆದರೆ, ಅಲ್ಲಿ ಹಿಂಸಾಚಾರ ಕೈ ಮೀರಿದ್ದರಿಂದ ಗೃಹ ಸಚಿವಾಲಯದ ಮನವಿ ಮೇರೆಗೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಅಲ್ಲಿನ 22 ಕೇಂದ್ರಗಳನ್ನು ಹೊರತುಪಡಿಸಿ ಭಾರತದಾದ್ಯಂತ 4,075 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.