ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ರಾಜ್ಯ ಸರಕಾರ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಭೂ ಸುಧಾರಣೆ ತಿದ್ದುಪಡಿ ಕಾಯಿದೆ, ಜಾನುವಾರು ಹತ್ಯೆ ಹಾಗೂ ಸಂರಕ್ಷಣಾ ಕಾಯಿದೆಯನ್ನು ವಾಪಸ್ ಪಡೆಯಬೇಕು. ಎಪಿಎಂಸಿ. ಕಾಯಿದೆಯನ್ನು ಮತ್ತಷ್ಟು ರೈತಸ್ನೇಯಿಯಾಗಿ ರೂಪಿಸಬೇಕು ಎಂದು ರೈತ ಸಮಾವೇಶದಲ್ಲಿ ಯುವ ಮೋರ್ಜಾ ಕಾರ್ಯದರ್ಶಿ ಕರೆಪ್ಪ ಅಂಕಲಗಿ ಹೇಳಿದರು.
ಕಲಬುರಗಿ ಪಟ್ಟಣದ ಎಂ.ಎಸ್. ಪಂಡೀತ ರಂಗಮಂದಿರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ರೈತ ಸಮಾವೇಶದಲ್ಲಿ ನಿರ್ಣಯಗಳನ್ನು ತೆಗೆದುಕೊಂಡು, ಸಹಾಯಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಿ ಮಾತನಾಡಿದರು.
ಕೇಂದ್ರ ಸರಕಾರ ಮಾತು ಕೊಟ್ಟಂತೆ ಕೃಷಿ ಉತ್ಪನ್ನಗಳಿಗೆ ಡಾ. ಎಂ. ಎಸ್. ಸ್ವಾಮಿನಾಥನ್ ವರದಿಯ ಅನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಜಾರಿಗೊಳಿಸಬೇಕು. ಕುಲಾಂತರಿ ತಳಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುವುದನ್ನು ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀತಿಯನ್ನು ಮುಂದುವರೆಸಬೇಕು ಎಂದರು.
“ಪಡಿತರ ವ್ಯವಸ್ಥೆಯಲ್ಲಿ ಐದು ಕೆ.ಜಿ. ಅಕ್ಕಿಯ ಬದಲು ಹಣ ಬದಲಿಗೆ ಪ್ರತಿಯೊಂದು ಕುಟುಂಬಕ್ಕೂ ಜೋಳ, ರಾಗಿ, ಕಾಳು ಮತ್ತು ಅಡುಗೆ ಎಣ್ಣೆಯನ್ನು ನೀಡಬೇಕು. ವಿದ್ಯುತ್ ಸಂಪರ್ಕ ಪಡೆಯಲು ರೈತರೇ ವೆಚ್ಚ ಭರಿಸಬೇಕೆಂಬ ತೀರ್ಮಾನವನ್ನು ಕೂಡಲೇ ವಾಪಸ್ಸು ಪಡೆಯಬೇಕು. ಯಾವುದೇ ಕಾರಣಕ್ಕೂ ಕೇಂದ್ರ ಸರಕಾರ ತರಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು” ಎಂದು ಆಗ್ರಹಿಸಿದರು.
“ಕಲಬುರಗಿ ಜಿಲ್ಲೆಯ ಎಲ್ಲ ಬಡ ಕುಟುಂಬದವರಿಗೆ ನಿವೇಶನ ಮಂಜೂರು ಮಾಡಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಕಂಪನಿಗೆ ಮೂರು ಸಾವಿರಕ್ಕೂ ಹೆಚ್ಚು ಎಕರೆ ಜಮೀನನ್ನು ಮಾರಾಟ ಮಾಡಿರುವ ನೀರ್ಮಾಣವನ್ನು ವಾಪಸ್ ಪಡೆಯಬೇಕು. ದೇವದಾರಿ ಆರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ರೈತರು ದರಖಾಸ್ತು ಮಂಜೂರಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಾಗುವಳಿ ಪತ್ರ ನೀಡಬೇಕು” ಎಂದು ಕರೆಪ್ಪ ಅಂಕಲಗಿ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಎಡಿಜಿಪಿ ಚಂದ್ರಶೇಖರ್ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಮಲ್ಲಿಕಾರ್ಜುನ ಸತ್ಯಂಪೇಟೆ, ನಾಗೇಂದ್ರ ಆರ್. ಥಂಬೆ, ಉಮಾಪತಿ ಪಾಟೀಲ, ರಮೇಶ ಕೆ. ರಾಗಿ, ಮಂಜುಳಾ ಆರ್. ಭಜಂತ್ರಿ, ಸುನೀಲ ಕುಮಾರ್ ಮಠಪತಿ, ಶರಣಗೌಡ ಪಾಟೀಲ, ಸೈನಾಜಬಿ, ಕನ್ಯಾಕುಮಾರಿ, ವಿಜಯಕುಮಾರ್ ಹತ್ತರರ್ಕಿ, ಸುನೀಲಗೌಡ ಪಾಟೀಲ್, ಸಿದ್ದು ವೇದಶೆಟ್ಟಿ, ವೀರಣ್ಣಾ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.