ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!

Date:

Advertisements

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ಸರ್ಕಾರವನ್ನೇನೋ ರಚಿಸಲಿದೆ. ಆದರೆ ಈ ಸರ್ಕಾರಕ್ಕೆ ಪೂರ್ಣ ಅಧಿಕಾರಗಳು ಇರುವುದಿಲ್ಲ. ಬಹುಮುಖ್ಯವಾಗಿ ಜಮ್ಮು-ಕಾಶ್ಮೀರದ ಪೊಲೀಸ್ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಕಾರಣ ಈ ಅಧಿಕಾರ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರ ಕೈಯಲ್ಲಿರುತ್ತದೆ.

ಚುನಾವಣಾ ಪ್ರಕ್ರಿಯೆಯಿಂದ ಬಹುಕಾಲದಿಂದ ದೂರ ಉಳಿದಿದ್ದ ಕಾಶ್ಮೀರಿಗಳು ಪುನಃ ಮತಗಟ್ಟೆಯತ್ತ ದೊಡ್ಡ ಸಂಖ್ಯೆಯಲ್ಲಿ ತಲೆ ಹಾಕಿದ್ದಾರೆ. ಜಮ್ಮು-ಕಾಶ್ಮೀರ ಇಂಡಿಯಾ ಮೈತ್ರಿಕೂಟ ಸರ್ಕಾರವನ್ನು ಆರಿಸಿಕೊಂಡಿದೆ. ಸುಪ್ರೀಮ್ ಕೋರ್ಟಿನ ಈ  ನಿರ್ದೇಶನ ಇಲ್ಲದೆ ಹೋಗಿದ್ದಲ್ಲಿ ಮೋದಿ-ಶಾ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ಇಷ್ಟು ಬೇಗ ನಡೆಸುವುದು ಅನುಮಾನವಿತ್ತು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ರಾಜ್ಯದ ಸ್ಥಾನಮಾನವನ್ನೂ ಕಿತ್ತುಕೊಂಡ ಕೇಂದ್ರದ ಕ್ರಮವನ್ನು ಸುಪ್ರೀಮ್ ಕೋರ್ಟ್ ಎತ್ತಿ ಹಿಡಿದಿತ್ತು. 2024ರ ಸೆಪ್ಟಂಬರ್ ಹೊತ್ತಿಗೆ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

Advertisements

ಆದರೆ ರಾಜ್ಯದ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸುವ ಕುರಿತು ನ್ಯಾಯಾಲಯ ಯಾವುದೇ ಗಡುವು ವಿಧಿಸಿರಲಿಲ್ಲ. ಕಾಶ್ಮೀರ ಕಣಿವೆಯನ್ನು ಕದಗಳ ಹಿಂದೆ ಕೂಡಿ ಹಾಕಿ ಬೀಗ ಜಡಿದು, ಕಣ್ಣು ಕಟ್ಟಿ, ಕಿವಿ- ಬಾಯಿಗಳಿಗೆ ಬಿರಟೆ ಬಡಿದು ಅದರ ವಿಶೇಷ ಸ್ಥಾನಮಾನವನ್ನು ‘ಕಾಯಿದೆಬದ್ಧವಾಗಿ’ ಅಪಹರಿಸಿತ್ತು ಕೇಂದ್ರ ಸರ್ಕಾರ. ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನು ಪಳಗಿಸಿ ಮೂಗುದಾರ ತೊಡಿಸಿ ಹಿಂದು-ಹಿಂದಿ-ಹಿಂದುಸ್ತಾನದ ನೊಗಕ್ಕೆ ಬಿಗಿಯುವ ಸಂಘಪರಿವಾರದ ಏಳು ದಶಕಗಳ ಯೋಜನೆಯನ್ನು ಮೋದಿ-ಶಾ ಜೋಡಿ ಈಡೇರಿಸಿಕೊಟ್ಟಿತ್ತು.

ಜಮ್ಮು-ಕಾಶ್ಮೀರ ಮತ್ತು ಲದ್ದಾಖ್ ನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿಸಿತ್ತು. ಜಮ್ಮು-ಕಾಶ್ಮೀರವನ್ನು ವಿಧಾನಸಭೆಸಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರೆ, ಲದ್ದಾಖ್ ಗೆ ಈ ಸವಲತ್ತನ್ನೂ ನೀಡಲಾಗಿಲ್ಲ. ಈ ಬೌದ್ಧ ಧರ್ಮೀಯ ಸೀಮೆ ತಬ್ಬಲಿಯಾಗಿದೆ. ಸೋನಮ್ ವಾಂಗ್ ಚುಕ್ ನೇತೃತ್ವದ ಲದ್ದಾಖ್ ತನಗೆ ಬಗೆಯಲಾಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಿದೆ. ದೆಹಲಿಯ ಬಾಗಿಲನ್ನೂ ಬಡಿದಿದೆ. ಆದರೆ ಅದರ ಫಿರ್ಯಾದನ್ನು ಆಲಿಸುವ ಹೃದಯ ಕೇಂದ್ರ ಸರ್ಕಾರಕ್ಕೆ ಇಲ್ಲ.

ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸಿತು. ಈ ಸೀಮೆಯ ಚುನಾವಣಾ ನಕಾಶೆಯನ್ನು ಬದಲಿಸಿತು. ಲದ್ದಾಖ್ ಹೊರತುಪಡಿಸಿ ಜಮ್ಮು-ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 83ರಿಂದ 90ಕ್ಕೆ ಏರಿತು. ಏಳು ಹೆಚ್ಚುವರಿ ಕ್ಷೇತ್ರಗಳ ಪೈಕಿ ಆರು ಹಿಂದೂ ಬಹುಸಂಖ್ಯಾತ ಪ್ರದೇಶವಾದ ಜಮ್ಮುವಿನ ಪಾಲಾದವು. ಈ ಆರು ಕ್ಷೇತ್ರಗಳು ಜಮ್ಮುವಿನಲ್ಲಿಯೂ ವಿಶೇಷವಾಗಿ ಹಿಂದು ಬಾಹುಳ್ಯದ ಕ್ಷೇತ್ರಗಳು. ಮರುವಿಂಗಡಣೆಯ ನಂತರ ಜಮ್ಮುವಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 43ಕ್ಕೆ ಏರಿತು. ಕಾಶ್ಮೀರದ ವಿಧಾನಸಭಾ ಸೀಟುಗಳ ಸಂಖ್ಯೆ 46ರಿಂದ 47ಕ್ಕೆ ಹೆಚ್ಚಿತು.

ಅಧಿಕಾರದ ತಕ್ಕಡಿಯ ಕೇಂದ್ರವನ್ನು ಮುಸ್ಲಿಮ್ ಬಾಹುಳ್ಯದ ಕಾಶ್ಮೀರದಿಂದ ಕಿತ್ತುಕೊಳ್ಳುವುದು ಈ ಮರುವಿಂಗಡಣೆಯ ಮೂಲ ಉದ್ದೇಶವಾಗಿತ್ತು. ಈ ಉದ್ದೇಶ ಯಾವುದೇ ಕಾರಣಕ್ಕೆ ವಿಫಲ ಆಗಬಾರದೆಂಬ ಕಾರಣಕ್ಕಾಗೇ ವಿಧಾನಸಭೆಗೆ ಐವರು ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರವನ್ನು ಹಾಲಿ ಚುನಾವಣೆಗೆ ಮುನ್ನ ಉಪರಾಜ್ಯಪಾಲರಿಗೆ ನೀಡಲಾಯಿತು. ಮತದಾನಕ್ಕೆ ಮುನ್ನವೇ ಉಪರಾಜ್ಯಪಾಲರು ಐವರನ್ನು ನಾಮಕರಣ ಮಾಡಿಯೂ ಆಯಿತು.

ಜಮ್ಮು-ಕಾಶ್ಮೀರದ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಸೀಟುಗಳ ಭಾರೀ ಗೆಲುವು ಸಾಧಿಸಿದೆ. ಕೂಸುಮರಿಯಂತೆ ಅದರ ಬೆನ್ನೇರಿ ಸ್ಪರ್ಧಿಸಿದ್ದ ಕಾಂಗ್ರೆಸ್ ಸಾಧನೆ ನಿರಾಶಾದಾಯಕ. ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಹಿಂದೂ ಬಾಹುಳ್ಯದ ಜಮ್ಮುವಿನ 43 ಸೀಟುಗಳಲ್ಲಿ 29ನ್ನು ಗೆದ್ದುಕೊಂಡು ಬಿಜೆಪಿ ಜಯಭೇರಿ ಬಾರಿಸಿದೆ. ಕಳೆದ ಸಲ (ಕ್ಷೇತ್ರ ಮರುವಿಂಗಡಣೆಗೆ ಮುನ್ನ) 25 ಸ್ಥಾನಗಳನ್ನು ಗೆದ್ದಿತ್ತು. ಹಿಂದೂ ಬಹುಳ ಕ್ಷೇತ್ರಗಳಲ್ಲಿ ಬಿಜೆಪಿ ಶೇ.54.3ರಷ್ಟು ಮತಗಳನ್ನು ಪಡೆದರೆ, ಇಂಡಿಯಾ ಮೈತ್ರಿಕೂಟಕ್ಕೆ ಶೇ.28.4ರಷ್ಟು ಮತಗಳು ದೊರೆತಿವೆ. ಈ ಹಿಂದೆ ಬಿಜೆಪಿ ಜೊತೆ ಸರ್ಕಾರ ರಚಿಸಿದ್ದ ಮೆಹಬೂಬಾ ಮುಫ್ತಿ ಅವರ ಪಿ.ಡಿ.ಪಿ. ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಪಕ್ಷೇತರರು ಏಳು ಸ್ಥಾನಗಳನ್ನು ಗೆದ್ದಿರುವುದು ವಿಶೇಷ. ಏಳರ ಪೈಕಿ ಆರು ಮಂದಿ ಮುಖ್ಯವಾಹಿನಿ ಪಕ್ಷಗಳ ಬಂಡಾಯ ಅಭ್ಯರ್ಥಿಗಳು. ಜಮ್ಮು ಕಾಶ್ಮೀರದ ಬಶೋಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಾಲ್ ಸಿಂಗ್ ಚೌಧರಿ ಸೋತಿದ್ದಾರೆ. ಕಠುವಾದ ಕಂದಮ್ಮನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪಾತಕಿಗಳ ಪರವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಾಲ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿತ್ತು ಕಾಂಗ್ರೆಸ್ ಪಕ್ಷ.

ಜಮ್ಮು-ಕಾಶ್ಮೀರದಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ಖಾತೆ ತೆರೆದಿರುವುದು ವಿಶೇಷ. ಜಮ್ಮುವಿನ ದೋಡಾ ಕ್ಷೇತ್ರದಲ್ಲಿ ಆಪ್ ಹುರಿಯಾಳು ಮೆಹ್ರಾಜ್ ಮಾಲಿಕ್ ಅವರು ಬಿಜೆಪಿ ಎದುರಾಳಿ ಗಾಜೇಸಿಂಗ್ ರಾಣಾ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಒಟ್ಟು 90 ಸೀಟುಗಳ ಪೈಕಿ ಏಳರಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು ಕೇಜ್ರೀವಾಲ್.

ಅತಂತ್ರ ವಿಧಾನಸಭೆಯ ಫಲಿತಾಂಶ ಬಂದು ತಾನೇ ಸರ್ಕಾರ ಸರ್ಕಾರ ರಚಿಸಬೇಕೆಂಬ ಬಿಜೆಪಿಯ ಉದ್ದೇಶ ಈಡೇರಿಲ್ಲ ಹಿಂದೂ ಬಾಹುಳ್ಯದ ಜಮ್ಮುವಿನಲ್ಲಿ 29 ಸೀಟು ಗೆದ್ದು ತನ್ನ ಮೇಲುಗೈಯನ್ನು ಮುಂದುವರೆಸಿದೆ ಬಿಜೆಪಿ. ಆದರೆ ಕಾಶ್ಮೀರದ ಜನ ಬಿಜೆಪಿಯನ್ನು ಸಾರಾಸಗಟಾಗಿ ದೂರ ಇಟ್ಟಿದ್ದಾರೆ. ವಿಶೇಷ ಸಾಂವಿಧಾನಿಕ ಸ್ಥಾನಮಾನ ಮತ್ತು ರಾಜ್ಯದ ಸ್ಥಾನಮಾನ ಕಿತ್ತುಕೊಂಡಿರುವ ಕ್ರಮಕ್ಕೆ ತನ್ನ ವಿರೋಧವನ್ನು ಈ ಜನಾದೇಶದ ಮೂಲಕ ಪ್ರಕಟಿಸಿದೆ.

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ಸರ್ಕಾರವನ್ನೇನೋ ರಚಿಸಲಿದೆ. ನಿಚ್ಚಳ ಬಹುಮತ ಇರುವ ಕಾರಣ ಅದನ್ನು ತಪ್ಪಿಸುವುದು ಬಿಜೆಪಿಯಿಂದ ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಈ ಸರ್ಕಾರಕ್ಕೆ ಪೂರ್ಣ ಅಧಿಕಾರಗಳು ಇರುವುದಿಲ್ಲ. ಬಹುಮುಖ್ಯವಾಗಿ ಜಮ್ಮು-ಕಾಶ್ಮೀರದ ಪೊಲೀಸ್ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಕಾರಣ ಈ ಅಧಿಕಾರ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರ ಕೈಯಲ್ಲಿರುತ್ತದೆ. ದೆಹಲಿ ಕೂಡ ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶವೇ. ದೆಹಲಿಯ ಪೊಲೀಸ್ ವ್ಯವಸ್ಥೆ ಮತ್ತು ಜಮೀನಿನ ಮೇಲೆಯೂ ಕೇಜ್ರೀವಾಲ್ ಸರ್ಕಾರಕ್ಕೆ ಯಾವ ಅಧಿಕಾರವೂ ಇಲ್ಲ. ದಿಲ್ಲಿ ಪೊಲೀಸ್ ಕೇಂದ್ರ ಗೃಹಮಂತ್ರಾಲಯಕ್ಕೆ ವರದಿ ಮಾಡಿಕೊಂಡರೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಧೀನದಲ್ಲಿದೆ. ವರ್ಗಾವಣೆಯೂ ಸೇರಿದಂತೆ ನೌಕರಶಾಹಿಯ ಸಂಪೂರ್ಣ ನಿಯಂತ್ರಣವನ್ನು ದೆಹಲಿಯ ಉಪರಾಜ್ಯಪಾಲರಿಗೆ ನೀಡಲಾಗಿದೆ. ಕೇಜ್ರೀವಾಲ್ ಸರ್ಕಾರ ಒಂದು ಮಾಮೂಲಿ ಸಭೆ ನಡೆಸಬೇಕಾದರೂ ಎಲ್ಲ ಐ.ಎ.ಎಸ್., ಐ.ಪಿ.ಎಸ್., ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ, ಅಮಾನತು, ಶಿಸ್ತುಕ್ರಮದ ಎಲ್ಲ ಅಧಿಕಾರ ಕೇಂದ್ರ ಸರ್ಕಾರದ್ದು. ಹೀಗಾಗಿ ಒಂದು ಸಭೆ ನಡೆಸಲೂ  ಐ.ಎ.ಎಸ್. ಅಧಿಕಾರಿಗಳ ಮುಂದೆ ಅಂಗಲಾಚಿ ಅವರ ಸಮಯಾನುಕೂಲವನ್ನು ಕೇಳಬೇಕಾದ ಶೋಚನೀಯ ಪರಿಸ್ಥಿತಿ ಕೇಜ್ರೀವಾಲ್ ಸರ್ಕಾರದ್ದು.

ಈ ಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ದೆಹಲಿ ಸರ್ಕಾರದ ಮಂತ್ರಿಗಳು ದಿನ ನಿತ್ಯದ ಆಡಳಿತದಲ್ಲಿ ಕೈಗೊಳ್ಳುವ ಎಲ್ಲ ತೀರ್ಮಾನಗಳಿಗೂ ಉಪರಾಜ್ಯಪಾಲರ ಅಭಿಪ್ರಾಯ ಪಡೆಯುವುದು ಕಡ್ಡಾಯ. ದೆಹಲಿ ಪೂರ್ಣ ಪ್ರಮಾಣದ ರಾಜ್ಯ ಅಲ್ಲ, ಆದರೆ ಉಪರಾಜ್ಯಪಾಲರು ಜನಾದೇಶದ ಸವಾರಿ ಮಾಡುವಂತಿಲ್ಲ ಎಂಬುದು ಸುಪ್ರೀಮ್ ಕೋರ್ಟು 2018ರಲ್ಲಿ ನೀಡಿದ್ದ ತೀರ್ಪಿನ ತಿರುಳು. ಈ ತೀರ್ಪಿಗೆ ಲವಲೇಶವೂ ಸೊಪ್ಪು ಹಾಕಿಲ್ಲ ಕೇಂದ್ರ ಸರ್ಕಾರ. 2021ರದೆಹಲಿ ರಾಷ್ಟ್ರೀಯ ರಾಜಧಾನಿ ಕ್ಷೇತ್ರ (ತಿದ್ದುಪಡಿ) ವಿಧೇಯಕವನ್ನು ಸಂಸತ್ತಿನಲ್ಲಿ ಪಾಸು ಮಾಡಿಸಿಕೊಂಡು ಚುನಾಯಿತ ಸರ್ಕಾರದ ಎಲ್ಲ ಅಧಿಕಾರಗಳಿಗೆ ಕತ್ತರಿ ಹಾಕಿತು.

ಉಪರಾಜ್ಯಪಾಲರನ್ನೇ ದೆಹಲಿ ಸರ್ಕಾರವೆಂದು ತಿದ್ದುಪಡಿಯಲ್ಲಿ ಇಂಗಿತಪಡಿಸಲಾಗಿದೆ. ಪೊಲೀಸು, ಜಮೀನು, ಕಾನೂನು-ಸುವ್ಯವಸ್ಥೆಯ ಹೊರತಾಗಿ ನೆರವಾಗಿ ತಮ್ಮ ಅಧಿಕಾರ ವ್ಯಾಪ್ತಿಗೆ ಬಾರದಿರುವ ಇತರೆ ವಿಷಯಗಳಲ್ಲೂ ಮೂಗು ತೂರಿಸುವ ಅಧಿಕಾರವನ್ನು ಉಪರಾಜ್ಯಪಾಲರಿಗೆ ನೀಡಲಾಗಿದೆ.

ಇದನ್ನೂ ಓದಿ ಹರಿಯಾಣ ಫಲಿತಾಂಶ | ಕೊಟ್ಟ ಕುದುರೆ ಏರದ ಕಾಂಗ್ರೆಸ್

ಹೀಗಾಗಿಯೇ ದೆಹಲಿಯ ಉಪರಾಜ್ಯಪಾಲರು ಮತ್ತು ಕೇಜ್ರೀವಾಲ್ ಸರ್ಕಾರದ ನಡುವೆ ನಿತ್ಯ ನಿರಂತರ ಘರ್ಷಣೆ ಏರ್ಪಟ್ಟಿದೆ.  ದೆಹಲಿ ವಿಧಾನಸಭೆಗೆ ಬಿಜೆಪಿ ಆರಿಸಿ ಬಂದು ಸರ್ಕಾರ ರಚಿಸಿದ್ದ ಪಕ್ಷದಲ್ಲಿ ಇಂತಹ ದಮನ ದಬ್ಬಾಳಿಕೆಯನ್ನು ಮೋಶಾ ಸರ್ಕಾರ ನಡೆಸುತ್ತಿರಲಿಲ್ಲ. ದೇಶದ ರಾಜಧಾನಿಯಲ್ಲಿ ತನ್ನ ಮೂಗಿನ ಕೆಳಗೇ ಬಿಜೆಪಿಯನ್ನು ಮತ್ತೆ ಮತ್ತೆ ಸೋಲಿಸಿ ಕೇಜ್ರೀವಾಲ್ ಅಧಿಕಾರ ಹಿಡಿಯುತ್ತಿರುವುದು ಮೋಶಾ ಸರ್ಕಾರಕ್ಕೆ ಸಹನೆಯಾಗುತ್ತಿಲ್ಲ.

ಇದೇ ಅಸಹನೆಯು ಕಾಶ್ಮೀರಕ್ಕೆ ವಿಸ್ತರಣೆಯಾದರೆ ಯಾವ ಆಶ್ಚರ್ಯವೂ ಇಲ್ಲ. ಕಾಶ್ಮೀರ ಕಣಿವೆಯು ಮುಸಲ್ಮಾನ ಬಾಹುಳ್ಯದ ಸೀಮೆ. ಮೋಶಾ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಆದಷ್ಟು ಶೀಘ್ರವಾಗಿ ರಾಜ್ಯದ ಸ್ಥಾನಮಾನ ನೀಡಬೇಕು. ಲದ್ದಾಖ್ ಗೆ ನ್ಯಾಯ ಸಲ್ಲಿಸಬೇಕು. ಜನಾದೇಶವನ್ನು ಗೌರವಿಸಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X