ತಮಿಳುನಾಡಿನ ಭಾಷಾಭಿಮಾನವನ್ನು, ಆಂಧ್ರಪ್ರದೇಶದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ. ಅದೀಗ ಉದಯನಿಧಿ-ಪವನ್ ಕಲ್ಯಾಣ್ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಇಬ್ಬರಿಗೂ ಸನಾತನ ಧರ್ಮವೇ ಸರಕಾಗಿದೆ... ಜನಕ್ಕೇನು ಸಿಕ್ಕಿದೆ?
ತಮಿಳುನಾಡಿನ ಉದಯನಿಧಿ ಮತ್ತು ಆಂಧ್ರಪ್ರದೇಶದ ಪವನ್ ಕಲ್ಯಾಣ್- ದಕ್ಷಿಣ ಭಾರತದ ರಾಜಕೀಯ ರಂಗದ ಇಬ್ಬರು ಉದಯೋನ್ಮುಖ ಯುವ ರಾಜಕಾರಣಿಗಳು. ಉದಯನಿಧಿಗೆ 46, ಪವನ್ ಕಲ್ಯಾಣ್ ಗೆ 53 ವರ್ಷ. ಇಬ್ಬರೂ ನಟರಾಗಿ ಜನಪ್ರಿಯತೆ ಗಳಿಸಿದವರು. ಆ ಜನಪ್ರಿಯತೆಯ ಜಗಲಿಯಿಂದ ರಾಜಕೀಯ ರಂಗಕ್ಕೆ ಜಿಗಿದವರು. ಉಪ ಮುಖ್ಯಮಂತ್ರಿಗಳಾಗಿ ಮೆರೆಯುತ್ತಿರುವವರು.
ಶೂದ್ರ ಸಮುದಾಯದ ಸಂಕೇತದಂತಿರುವ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಪ್ರತಿನಿಧಿಸುವ ಉದಯನಿಧಿ, ರಾಷ್ಟ್ರ ಮಟ್ಟದಲ್ಲಿ ಜಾತ್ಯತೀತ ನಿಲುವಿನ ‘ಇಂಡಿಯಾ’ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜನಸೇನಾ ಪಕ್ಷ ಕಟ್ಟಿ, ತೆಲುಗುದೇಶಂ ಪಕ್ಷದೊಂದಿಗೆ ಕೈ ಜೋಡಿಸಿರುವ ಪವನ್ ಕಲ್ಯಾಣ್, ರಾಷ್ಟ್ರ ಮಟ್ಟದಲ್ಲಿ ‘ಎನ್‌ಡಿಎ’ ಭಾಗವಾಗಿದ್ದಾರೆ. ಮೋದಿ ಮೆಚ್ಚುವ ಮೂಲಕ ಬಲಪಂಥೀಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಸನಾತನ ಧರ್ಮದ ಬಗ್ಗೆ ಭಿನ್ನ ಒಲವು-ನಿಲುವುಗಳನ್ನು ಹೊಂದಿದ್ದಾರೆ ಮತ್ತು ಆ ಕಾರಣಕ್ಕಾಗಿಯೇ ಸುದ್ದಿಯಲ್ಲಿದ್ದಾರೆ.
1984-85ರಲ್ಲಿ ದಕ್ಷಿಣ ಭಾರತದ ಇಬ್ಬರು ಜನಪ್ರಿಯ ನಾಯಕ ನಟರಾದ ಎಂಜಿ ರಾಮಚಂದ್ರನ್ ಮತ್ತು ಎನ್‌ಟಿ ರಾಮರಾವ್, ಕ್ರಮವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದ್ದರು.
ಸರಿ ಸುಮಾರು ನಲವತ್ತು ವರ್ಷಗಳ ನಂತರ, ಈ ಎರಡು ರಾಜ್ಯಗಳು ಮತ್ತೊಮ್ಮೆ ನಟ-ರಾಜಕಾರಣಿಗಳಿಂದಾಗಿ ಸುದ್ದಿಯಲ್ಲಿವೆ. ಉದಯನಿಧಿ ಸ್ಟಾಲಿನ್ ಮತ್ತು ಪವನ್ ಕಲ್ಯಾಣ್ – ತಾವು ಪ್ರತಿನಿಧಿಸುವ ಪಕ್ಷದಲ್ಲೂ, ಅಧಿಕಾರದ ಸ್ಥಾನದಲ್ಲೂ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಬೆಳೆಯುತ್ತ ಮುಖ್ಯಮಂತ್ರಿ ಸ್ಥಾನದ ಸಮೀಪದಲ್ಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನಲ್ಲಿ, ಉದಯನಿಧಿ ಸ್ಟಾಲಿನ್ ಅವರ ಡಿಎಂಕೆ ನೇತೃತ್ವದ ಮೈತ್ರಿಕೂಟವು ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡಿತು. ಅದಕ್ಕೆ ಪ್ರತಿಫಲವಾಗಿ ಅವರ ತಂದೆ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ಪುತ್ರ ಉದಯನಿಧಿ ಅವರಿಗೆ ಉಪಮುಖ್ಯಮಂತ್ರಿ ಪಟ್ಟವನ್ನು ಕಾಣಿಕೆಯಾಗಿ ಕೊಟ್ಟರು.
ಅದೇ ರೀತಿ, ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಭಾಗವಾಗಿ ಅವರ ಜನಸೇನಾ ಪಕ್ಷವು ಸ್ಪರ್ಧಿಸಿದ ಲೋಕಸಭಾ ಸ್ಥಾನಗಳು ಮತ್ತು ಎಲ್ಲಾ 21 ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡರು. ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರೊಂದಿಗೆ ಸೇರಿ ಸರ್ಕಾರ ರಚಿಸಿದರು. ಚುನಾವಣೆಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿ, ಬಹುಮತ ಗಳಿಸಿದ್ದಕ್ಕಾಗಿ ನಾಯ್ಡು, ಪವನ್ ಕಲ್ಯಾಣ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿದರು.

ಉದಯನಿಧಿ ಮತ್ತು ಪವನ್- ಇವರಿಬ್ಬರ ನಡುವೆ ಹಲವು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ.
ತಮಿಳುನಾಡಿನ ಉದಯನಿಧಿ ವಿಷಯಕ್ಕೆ ಬರುವುದಾದರೆ, ಅವರ ಅಜ್ಜ ಎಂ. ಕರುಣಾನಿಧಿ, 1969ರಲ್ಲಿಯೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ಶೂದ್ರ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಕರುಣಾನಿಧಿ, ತಮಿಳು ಚಿತ್ರಗಳಿಗೆ ಕತೆ, ಸಂಭಾಷಣೆ, ಗೀತರಚನೆ ರಚಿಸುತ್ತಿದ್ದರು. ಹಿಂದಿ ಹೇರಿಕೆ ಹಾಗೂ ಮನುವಾದದ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡು, ಜನರಲ್ಲಿ ಜಾಗೃತಿ ಉಂಟುಮಾಡಿದ್ದರು. ಆ ಮೂಲಕ ರಾಜಕೀಯ ರಂಗಕ್ಕೆ ಧುಮುಕಿದ ಕರುಣಾನಿಧಿ, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾದರು. ಅವರ ಮಗ ಸ್ಟಾಲಿನ್ ಕೂಡ ರಾಜಕಾರಣಕ್ಕಿಳಿದು ಶಾಸಕನಾಗಿ, ಮುಖ್ಯಮಂತ್ರಿಯಾಗಿ, ತಂದೆಯ ಪರಂಪರೆಯನ್ನು ಮುಂದುವರೆಸಿದ್ದಾರೆ. ತಾತ ಮತ್ತು ತಂದೆ ಮುಖ್ಯಮಂತ್ರಿಗಳಾಗಿದ್ದಾಗಲೇ, ಚಿತ್ರರಂಗ ಪ್ರವೇಶಿಸಿದ ಉದಯನಿಧಿ, ನಟನಾಗಿ ನಿರ್ಮಾಪಕನಾಗಿ ಹೆಸರು ಮಾಡಿದ್ದಾರೆ. ರಾಜಕಾರಣದಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳಲು ಚಿತ್ರರಂಗದ ಜನಪ್ರಿಯತೆಯನ್ನೇ ಮೆಟ್ಟಿಲನ್ನಾಗಿ ಬಳಸಿಕೊಂಡಿದ್ದಾರೆ. ತಂದೆ ಸ್ಟಾಲಿನ್ ನೆರವಿಗೆ ನಿಂತದ್ದರಿಂದ, ಇಂದು ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಆಂಧ್ರದ ಪವನ್, ಚಿತ್ರರಂಗಕ್ಕೆ ಕಾಲಿಟ್ಟು, ಅಪಾರ ಅಭಿಮಾನಿಗಳನ್ನು ಹೊಂದುವ ಮೂಲಕ ಜನಪ್ರಿಯ ನಟನಾಗಿ ರೂಪುಗೊಂಡವರು. ಸಹೋದರ ಚಿರಂಜೀವಿ, 2008ರಲ್ಲಿ ರಾಜಕಾರಣಕ್ಕೆ ಕಾಲಿಟ್ಟಾಗ, ಅವರ ಪ್ರಜಾರಾಜ್ಯಂ ಪಕ್ಷವನ್ನು ಬೆಂಬಲಿಸಿದರು. ಮತ್ತೊಬ್ಬ ಎನ್‌ಟಿಆರ್ ಆಗುತ್ತಾರೆಂದು ಭ್ರಮಿಸಿದರು. ಆದರೆ ಆಸೆ ಕೈಗೂಡಲಿಲ್ಲ. ಚಿರಂಜೀವಿಯವರ ಸೋಲು, ಪವನ್‌ಗೆ ಪಾಠವಾಯಿತು. ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿರುವ ಪವನ್, ರಾಜಕಾರಣವನ್ನು ಕೂಡ ಭಿನ್ನವಾಗಿಯೇ ಯೋಜಿಸಿ ಜನಸೇನಾ ಪಕ್ಷ ಕಟ್ಟಿದರು. 2014ರ ಚುನಾವಣೆಯಿಂದ ದೂರವಿದ್ದು, 2019ರ ಚುನಾವಣೆಯಲ್ಲಿ ಧೂಳೆಬ್ಬಿಸಿ, 2024ರ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿದೇಬಿಟ್ಟರು. ಇವರ ರಾಜಕಾರಣದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅಪಹಾಸ್ಯ, ವೈಯಕ್ತಿಕ ದಾಳಿ ಮತ್ತು ಉಗ್ರಪ್ರತಾಪಗಳಿಂದ ಕೂಡಿತ್ತು. ಸಿನೆಮಾ ಶೈಲಿಯನ್ನೇ ರಾಜಕಾರಣಕ್ಕೂ ಅಳವಡಿಸಿಕೊಳ್ಳಲಾಗಿತ್ತು. ಅಲ್ಲಿ ಸೀಮಿತ-ಸುರಕ್ಷಿತ ವಲಯದಲ್ಲಿನ ನಟನೆಯಾದರೆ; ಇಲ್ಲಿ ಸಾವಿರಾರು ಕ್ಯಾಮರಾ ಮತ್ತು ಕಣ್ಣುಗಳ ಮುಂದೆ ಬಣ್ಣವಿಲ್ಲದ ನಾಟಕ ನಡೆದಿತ್ತು. ಆ ನಾಟಕಕ್ಕೆ ಜನ ಮರುಳಾದರು, ಮತ ಚಲಾಯಿಸಿದರು, ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರು.
ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ತಮಿಳುನಾಡಿನ ರಾಜಕಾರಣದಲ್ಲಿ ಧೂಳೆಬ್ಬಿಸಲಿದ್ದಾರೆಯೇ ದಳಪತಿ ವಿಜಯ್?
ಉದಯನಿಧಿ ತುಳಿದದ್ದು ಪೆರಿಯಾರ್, ಕರಣಾನಿಧಿಗಳ ಹಾದಿಯನ್ನು. ಮೈಗೂಡಿಸಿಕೊಂಡಿದ್ದು ವೈದಿಕ ವಿರೋಧಿ ಗುಣವನ್ನು. ವಿರೋಧಿಸಿದ್ದು ಹಿಂದಿ ಹೇರಿಕೆಯನ್ನು. ನಡೆ ಮತ್ತು ನುಡಿಯಲ್ಲಿರುವಂತೆ ನೋಡಿಕೊಂಡದ್ದು ಪ್ರಾದೇಶಿಕ ಅಸ್ಮಿತೆಯನ್ನು. ಸಹಜವಾಗಿಯೇ ಜಾತ್ಯತೀತ ‘ಇಂಡಿಯಾ’ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರ ಒಲವು-ನಿಲುವುಗಳಿಗೆ ತಕ್ಕಂತೆಯೇ 2023ರ ಸೆಪ್ಟೆಂಬರ್‌ನಲ್ಲಿ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದರು. ಮಲೇರಿಯಾ ಮತ್ತು ಡೆಂಗ್ಯೂ ರೋಗಗಳಿಗೆ ಹೋಲಿಸಿದ್ದರು. ಅದು ಭಾರೀ ವಿವಾದಕ್ಕೆ ಕಾರಣವಾಗಿ, ದೇಶದ ನಾನಾ ಭಾಗಗಳಲ್ಲಿ ಅವರ ಮೇಲೆ ದೂರು ದಾಖಲಾದವು. ಆ ಕೇಸುಗಳಿಗೆ ಅಲೆಯುತ್ತಿರುವಾಗಲೇ ಅಕ್ಟೋಬರ್ 5, 2024ರಂದು ಸನಾತನ ಧರ್ಮದ ಬಗ್ಗೆ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಸುದ್ದಿಯಲ್ಲಿದ್ದಾರೆ.
ಮತ್ತೊಂದೆಡೆ ಪವನ್ ಕಲ್ಯಾಣ್, ತಿರುಮಲ ದೇವಸ್ಥಾನದ ಲಡ್ಡು ಪ್ರಸಾದ ಕಲಬೆರಕೆ ವಿವಾದದ ಹಿನ್ನೆಲೆಯಲ್ಲಿ, ಸನಾತನ ಧರ್ಮದ ರಕ್ಷಣೆಗಾಗಿ ಉಗ್ರ ಉಪವಾಸ ವ್ರತ ಕೈಗೊಂಡಿದ್ದಾರೆ. ಬೆಟ್ಟದ ಕಲ್ಲಿಗೆ ಕುಂಕುಮ ಬಳಿದು ಸಾಮೂಹಿಕ ಹೋರಾಟಕ್ಕೆ ಕರೆ ನೀಡಿದ್ದಾರೆ. ಸನಾತನ ಧರ್ಮ ಅಪವಿತ್ರವಾಗದಂತೆ ರಕ್ಷಿಸಲು ರಾಷ್ಟ್ರ ಮಟ್ಟದಲ್ಲಿ ಧರ್ಮ ರಕ್ಷಣಾ ಮಂಡಳಿಯನ್ನು ರಚಿಸುವ ಚಿಂತನೆ ತೇಲಿಬಿಟ್ಟಿದ್ದಾರೆ. ಹಿಂದೂ ದೇವಾಲಯದ ಆಸ್ತಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಸನಾತನ ಧರ್ಮದ ವಿರುದ್ಧ ಸೊಲ್ಲೆತ್ತುವವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಎಲ್ಲವನ್ನು ಸಿನಿಮೀಯ ಶೈಲಿಯಲ್ಲಿಯೇ- ರೀಲ್ ಮತ್ತು ರಿಯಲ್‌ನ ಗೆರೆ ಅಳಿಸಿಹೋಗುವಂತೆ ಅಭಿನಯಿಸುತ್ತಿದ್ದಾರೆ. ಸುದ್ದಿಯಲ್ಲಿದ್ದಾರೆ.
ಉದಯನಿಧಿ ಭಾಷಣಗಳು ಸಂವಾದಕ್ಕೆ ಎಳೆಸುವಂತಿದ್ದು, ಹಾಸ್ಯ, ಬುದ್ಧಿವಂತಿಕೆ ಮತ್ತು ವ್ಯಂಗ್ಯದಿಂದ ಕೂಡಿದ್ದರೆ; ಪವನ್ ಕಲ್ಯಾಣ್ ಮಾತುಗಳು ಭಾವನೆಗಳನ್ನು ಕೆರಳಿಸುವಂತಿದ್ದು, ಉಗ್ರ, ಉನ್ಮಾದ, ಉತ್ಕಟಕ್ಕೆ ಎಳೆಸುವಂತಿವೆ.
ಎಂಕೆ ಸ್ಟಾಲಿನ್ ಅವರ ರಾಜಕೀಯ ಉತ್ತರಾಧಿಕಾರಿಯಾಗಿ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಉದಯನಿಧಿ ಉಸ್ತುವಾರಿಯಲ್ಲಿ ಮುನ್ನಡೆಸುವ ನಿರೀಕ್ಷೆಯಿದೆ. ಡಿಎಂಕೆಯ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಎಐಎಡಿಎಂಕೆ ಹೊರತುಪಡಿಸಿ, ಉದಯನಿಧಿ ಕಠಿಣ ಸವಾಲನ್ನು ಎದುರಿಸಲಿರುವುದು, ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಲಿರುವ ಸೂಪರ್ ಸ್ಟಾರ್ ವಿಜಯ್‌ರಿಂದ. ಅವರನ್ನು ಎದುರಿಸಿ ಮುಖ್ಯಮಂತ್ರಿ ಸ್ಥಾನಕ್ಕೇರುವುದು ಅವರ ಆಸೆಯಾಗಿದೆ.
ಮತ್ತೊಂದೆಡೆ ತಿರುಪತಿ ವಿವಾದದ ಬೆನ್ನಲ್ಲೇ ಪವನ್, ಈಗ ಧೋತಿ-ಕುರ್ತಾ ತೊಡುವ ಮೂಲಕ ಸನಾತನ ಧರ್ಮದ ವಕ್ತಾರರಾಗಿದ್ದಾರೆ. ಅವರ ಮಾತು, ಕಾಲ್ನಡಿಗೆ, ವ್ರತ, ತಪಸ್ಸು, ಪ್ರಾಯಶ್ಚಿತ್ತಗಳೆಲ್ಲ ರಾಜಕೀಯ ಮತ್ತು ನಾಟಕೀಯ ರೂಪ ಪಡೆಯುತ್ತಿವೆ. ಅವರು ಹಿಂದುತ್ವದ ರಾಯಭಾರಿಯಾಗಲು ತವಕಿಸುತ್ತಿದ್ದಾರೆ. ಆ ಮೂಲಕ ಮೋದಿಗೆ ಹತ್ತಿರವಾಗುತ್ತಿದ್ದಾರೆ. ಅದು ಮುಂದೆ, ತೆಲುಗುದೇಶಂನ ಚಂದ್ರಬಾಬು ನಾಯ್ಡು ಕುರ್ಚಿಗೆ ಕಂಟಕವಾದರೂ; ಆಂಧ್ರದಲ್ಲಿ ಬಿಜೆಪಿ ನೆಲೆಯೂರಿಸುವ ಮೋದಿಯ ದೂರಾಲೋಚನೆಯಾಗಿದ್ದರೂ ಆಶ್ಚರ್ಯವಿಲ್ಲ. ಅದು ಪವನ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಆಸೆಗೆ ನೀರೆರೆಯಲೂಬಹುದು.

ತೆಲುಗು ಚಿತ್ರರಂಗದ ಪವರ್‌ಸ್ಟಾರ್ ಹೆಸರಿಗೆ ತಕ್ಕಂತೆ ಬದುಕಲು ನಿರ್ಧರಿಸಿದ್ದಾರೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ, ಪವನ್‌ರನ್ನು ‘ಆಂಧಿ'(ಚಂಡಮಾರುತ) ಎಂದು ಶ್ಲಾಘಿಸಿ ಉಬ್ಬಿಸುತ್ತಿದ್ದಾರೆ. ಜೊತೆಗೆ ಸಹೋದರರಾದ ಚಿರಂಜೀವಿ, ನಾಗಬಾಬು ಮುಖ್ಯಮಂತ್ರಿ ಮಹತ್ವಾಕಾಂಕ್ಷೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಉದಯನಿಧಿಗೆ ಅವರ ಕುಟುಂಬವೇ ಬಲವಾಗಿ ಬೆನ್ನಿಗೆ ನಿಂತಿದೆ. ತಾತ-ತಂದೆಯಿಂದ ಬಂದ ಪರಂಪರೆ ಜೊತೆಗಿದೆ. ಅಧಿಕಾರ-ಹಣ ಕೈಯಲ್ಲಿದೆ. ತಮಿಳುನಾಡಿನ ಶೂದ್ರ ಶಕ್ತಿ, ಪ್ರಾದೇಶಿಕ ಅಸ್ಮಿತೆ ಜೊತೆಗೂಡಿದೆ.
ತಮಿಳುನಾಡಿನ ಭಾಷಾಭಿಮಾನವನ್ನು, ಆಂಧ್ರಪ್ರದೇಶದ ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ.
ಅದೀಗ ಉದಯನಿಧಿ-ಪವನ್ ಕಲ್ಯಾಣ್ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಒಬ್ಬರು ಸನಾತನ ಧರ್ಮದ ವಿರುದ್ಧ, ಇನ್ನೊಬ್ಬರು ಸನಾತನ ಧರ್ಮದ ಪರ. ಇಬ್ಬರೂ ನಟರು, ಯುವಕರು, ಬಲಾಢ್ಯರು, ಪ್ರಚಾರಪ್ರಿಯರು. ಇವರ ರಾಜಕಾರಣದಿಂದ, ಸನಾತನ ಧರ್ಮದಿಂದ ಜನರಿಗೆ ಅನುಕೂಲ ಆಗಿದೆಯೇ? ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಬೆಲೆ ಬಂದಿದೆಯೇ? ಜನರೇ ಹೇಳಬೇಕು.

ಲೇಖಕ, ಪತ್ರಕರ್ತ
ಒಳ್ಳೆಯ ಲೇಖನ. ಅಭಿನಂದನೆಗಳು.