ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಟಾಸ್ ಕೂಡ ನಡೆಯದೆ ರದ್ದುಗೊಂಡಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆ ಮೊದಲ ಟೆಸ್ಟ್ ಪಂದ್ಯಕ್ಕೆ ಅಡ್ಡಿಯಾಗಿದ್ದು, ಇಂದೂ ಕೂಡ ಮಳೆ ಮುಂದುವರೆದಿತ್ತು. ಇಂದು ಬೆಳಗ್ಗೆ ಮಳೆ ನಿಂತು ಆಟ ಆರಂಭವಾಗುವ ವಿಶ್ವಾಸವಿತ್ತು. ಆದರೆ ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಸತತ ಮೂರನೇ ಬಾರಿಯ ಪರಿಶೀಲನೆ ಬಳಿಕ ಅಂಪೈರ್ಗಳು ಮೊದಲ ದಿನದಾಟವನ್ನು ರದ್ದು ಮಾಡಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಇಲ್ಲಿ ಅತ್ಯುತ್ತಮ ವಾಟರ್ ಡ್ರೈನ್ ವ್ಯವಸ್ಥೆ ಇದೆ. ಹೀಗಾಗಿ ಎಂತಹ ದೊಡ್ಡ ಮಳೆಯೇ ಬಂದರೂ ಮಳೆ ನಿಂತ ಕೇವಲ 7 ನಿಮಿಷದಲ್ಲಿ ಇಡೀ ಮೈದಾನವನ್ನು ಒಣಗಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ.
ಪಂದ್ಯದ ಐದು ದಿನವೂ ಮಳೆ
ಹವಾಮಾನ ವರದಿಯ ಪ್ರಕಾರ, ಭಾರತ- ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬುದು ಖಚಿತವಾಗಿತ್ತು. ಅದರಂತೆ ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಕೂಡ ನಡೆಯದೆ ರದ್ದಾಗಿದೆ. ಹೀಗಾಗಿ ನಾಳೆಯಾದರೂ ಪಂದ್ಯ ಆರಂಭವಾಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆದರೆ ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 20ರವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಪಂದ್ಯದ ಎರಡನೇ ದಿನದಂದು ಶೇ. 41 ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಮೂರನೇ ದಿನದಂದು ಮಳೆ ಇನ್ನಷ್ಟು ಹೆಚ್ಚಲಿದೆ. ಅದರಂತೆ ಶೇ. 67 ರಷ್ಟು ಮಳೆಯಾಗಲಿದೆ.
ನಾಲ್ಕು ಮತ್ತು ಐದನೇ ದಿನವೂ ಇದೆ ಕತೆ ಮುಂದುವರೆಯಲಿದೆ. ಆದರೆ ಮೊದಲ ಮೂರು ದಿನಗಳಿಗೆ ಹೋಲಿಸಿದರೆ, ನಾಲ್ಕನೇ ದಿನದಂದು ಮಳೆ ಕೊಂಚ ತಗ್ಗಲಿದ್ದು, ಈ ದಿನದಂದು ಶೇ.25 ರಷ್ಟು ಮಳೆಯಾಗಲಿದೆ. ಐದನೇ ದಿನ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ಶೇ.40 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ. ಈ ಪ್ರಕಾರ, ಉಭಯ ತಂಡಗಳ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ.
