- ಪಾರದರ್ಶಕ ಚುನಾವಣೆ ಸಲುವಾಗಿ ಮರುಚುನಾವಣೆ ನಡೆಸಿ ಎಂದ ವಾಟಾಳ್ ನಾಗರಾಜ್
- ಭ್ರಷ್ಟಾಚಾರದಲ್ಲಿ ತೊಡಗಿದ ಜನಪ್ರತಿನಿಧಿಗಳನ್ನು ವಜಾಗೊಳಿಸಲು ನಾಗರಾಜ್ ಆಗ್ರಹ
ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ 2023ರ ಸಾಲಿನ ವಿಧಾನಸೌಧ ಚುನಾವಣೆ ರದ್ದುಗೊಳಿಸಿ, ಮರು ಚುನಾವಣೆ ನಡೆಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸೋಲಿಗೆ ಎಂದೂ ಹೆದರಿದವನಲ್ಲ. ಭ್ರಷ್ಟಾಚಾರದ ಚುನಾವಣೆ ಮಾಡಿದ ಆಯೋಗಕ್ಕೆ ನನ್ನ ಧಿಕ್ಕಾರ. ಚುನಾವಣಾ ಆಯೋಗ ಭ್ರಷ್ಟಾಚಾರದ ಚುನಾವಣೆ ನಡೆಸಿದೆ. ಇದರ ವಿರುದ್ದ ಚಳವಳಿ ನಡೆಸುತ್ತೇನೆ ಎಂದು ಅವರು ಹೇಳಿದರು.
ಎಲ್ಲ ಪಕ್ಷಗಳೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿವೆ. ಹಣ ಹಂಚಿ ಚುನಾವಣೆ ಮಾಡಿವೆ. ಈ ರೀತಿಯ ಚುನಾವಣೆಗೆ ಅವಕಾಶ ನೀಡಿದ ಆಯೋಗ ನಿಜಕ್ಕೂ ಹೊಣೆಗೇಡಿ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ಜನರ ಒತ್ತಾಯದ ಮೇರೆಗೆ ನಾನು ಚಾಮರಾಜನಗರದಲ್ಲಿ ಕಣಕ್ಕಿಳಿದಿದ್ದೆ. ತತ್ವ ಸಿದ್ದಾಂತದ ಪರ ನಾನು ಎಂದಿಗೂ ಹೋರಾಟ ನಡೆಸಿದ್ದೆ. ಇದಕ್ಕೆ ಜನ ಮನ್ನಣೆ ಕೊಡಲಿಲ್ಲ. ಹೀಗಾಗಿ ನಾನು ಇನ್ನುಮಂದೆ ಈ ಜಿಲ್ಲೆಯಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಪಕ್ಷವೊಂದರ ಪರ ಪ್ರಚಾರ ಮಾಡಲು ಸರ್ಕಾರಿ ಆದಾಯ ವಿನಿಯೋಗ ಮಾಡಿದ್ದು, ಸಾರ್ವಜನಿಕ ಸೇವಾ ವಲಯದ ಇಲಾಖೆಗಳನ್ನ ತಮ್ಮ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಇವರ ಮೇಲೂ ಕ್ರಮ ಜರುಗಿಸುವಂತಾಗಬೇಕು ಎಂದು ಅವರು ಹೇಳಿದರು.
ಪಕ್ಷದ ಪರ ಪ್ರಚಾರ ಮಾಡಲು ಬರುವ ಇವರುಗಳು ರಾಜೀನಾಮೆ ನೀಡಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿತ್ತು ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?:ರಾಜ್ಯದಲ್ಲಿ ಅತಂತ್ರ ಅಲ್ಲ, ಕಾಂಗ್ರೆಸ್‌ನ ಸ್ವತಂತ್ರ ಸರ್ಕಾರ: ಸಿದ್ದರಾಮಯ್ಯ–ಡಿಕೆಶಿ ವಿಶ್ವಾಸ
ಭ್ರಷ್ಟಾಚಾರಯುಕ್ತ ಚುನಾವಣೆಯನ್ನು ರದ್ದು ಮಾಡಬೇಕು. ಇದು ಭ್ರಷ್ಟಾಚಾರದ ಪರಮಾವಧಿ. ಈ ದೃಷ್ಟಿಯಿಂದ ಚುನಾವಣೆ ರದ್ದು ಮಾಡಿ ಪ್ರಾಮಾಣಿಕ ಪಾರದರ್ಶಕ ಚುನಾವಣೆ ನಡೆಸಲಿ ಎಂದು ಒತ್ತಾಯಿಸಿದರು.
ಹಿಂದೆ ಟಿ ಎನ್ ಶೇಷನ್ ಎನ್ನುವ ಚುನಾವಣಾಧಿಕಾರಿ ಇದ್ದರು. ಅವರ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಚುನಾವಣೆ ನಡೆದಿತ್ತು. ಅಂತಹ ಚುನಾವಣೆಗಳು ಈಗ ನಡೆಯುವಂತಾಗಬೇಕು. ಜನ ಮತ್ತು ಮಾಧ್ಯಮಗಳು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ವಾಟಾಳ್ ಕರೆನೀಡಿದರು