ಹತ್ತು ಹಲವು ಅಕ್ರಮಗಳಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಒಳಗಾಗಿರುವ ನೈಸ್ ಕಂಪನಿ ಪರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಕಾಲತ್ತು ರೈತ ದ್ರೋಹ ಹಾಗೂ ಅಕ್ರಮ ಕೂಟದ ಬಹಿರಂಗ ಪ್ರದರ್ಶನ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೂಲ ಒಪ್ಪಂದ ಚೌಕಟ್ಟು ಉಲ್ಲಂಘನೆ, ಒಪ್ಪಂದ ವ್ಯಾಪ್ತಿ ಮೀರಿ ಭೂ ಕಬಳಿಕೆ, ಬಿಎಂಐಸಿ ಕ್ರಿಯಾ ಒಪ್ಪಂದದ ಉಲ್ಲಂಘನೆ, ಹೆಚ್ಚುವರಿ ಭೂಮಿ ಕಬಳಿಕೆ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಪಡೆದ ಭೂಮಿಗಳ ರಿಯಲ್ ಎಸ್ಟೇಟ್ ಮಾರಾಟ, ಕಾನೂನು ಬಾಹಿರ ಕ್ರಮ, ದೌರ್ಜನ್ಯ, ದಬ್ಬಾಳಿಕೆ ಭ್ರಷ್ಟಾಚಾರದ ಮೂಲಕ ರೈತರ ಭೂ ಸ್ವಾಧೀನ ಮುಂತಾದ ಕೃತ್ಯಗಳು ನಡೆದಿವೆ ಎಂದರು.
ಬೆಂಗಳೂರು ಮೈಸೂರು ಮಧ್ಯೆ ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ನೈಸ್ ಯೋಜನೆ ಅಪ್ರಸ್ತುತವಾಗಿದೆ. ಯೋಜನೆ ಕಾರ್ಯಗತ ಆಗದೇ ಇದ್ದರೂ ಮೂವತ್ತು ವರ್ಷಗಳ ಹಿಂದಿನ ಕೆಐಎಡಿಬಿ ಭೂ ಸ್ವಾಧೀನವನ್ನು ಉಳಿಸಿಕೊಂಡು ಬರುತ್ತಿರುವುದು ಅನ್ಯಾಯದ ಪರಮಾವಧಿ. ನೈಸ್ ಕಂಪನಿಯ ಭೂ ಸ್ವಾಧೀನದಿಂದ ಈ ಯೋಜನೆ ವ್ಯಾಪ್ತಿಯ ರೈತರು ಅಪಾರ ಯಾತನೆ ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ. ಅನ್ಯಾಯದ ಭೂ ಕಬಳಿಕೆ ವಿರುದ್ಧ ರಕ್ಷಣೆಗಾಗಿ ಕೋರ್ಟ್ ಕಛೇರಿಗಳಿಗೆ ಅಲೆದು ಲಕ್ಷಾಂತರ ರೂ.ಹಣವನ್ನು ಕಳೆದುಕೊಂಡಿದ್ದಾರೆ ಎಂದರು.
ರೈತರ ನೆರವಿಗೆ ನ್ಯಾಯವಾಗಿ ನಿಲ್ಲಬೇಕಾದ ಸರ್ಕಾರದ ಉಪ ಮುಖ್ಯಮಂತ್ರಿಗಳು ಕಪ್ಪು ಪಟ್ಟಿಯಲ್ಲಿ ಇರಬೇಕಾದ ಹಗರಣ -ಭ್ರಷ್ಟಾಚಾರದ ಕುಖ್ಯಾತಿಗೆ ಒಳಗಾದ ನೈಸ್ ಕಂಪನಿ ಪರವಾಗಿ ವಕಾಲತ್ತು ವಹಿಸುವುದು ಬೇಜವಾಬ್ದಾರಿ ಮತ್ತು ಅವರ ಹುದ್ದೆಗೆ ಯೋಗ್ಯವಲ್ಲದ್ದು. ಮಾತ್ರವಲ್ಲ, ಸರ್ಕಾರದ ಕಾರ್ಪೊರೇಟ್ ಲೂಟಿ ಪರ ನೀತಿಗಳಿಗಿಂತ ತಾನು ಮತ್ತಷ್ಟು ಮುಂದೆ ಇದ್ದೇನೆ ಎಂದು ತನ್ನನ್ನು ಬಿಂಬಿಸಿಕೊಳ್ಳುವ ಹೇಳಿಕೆಯೂ ಕೂಡ ಆಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಮಾತನಾಡಿ, ತಮ್ಮ ಮಾತನ್ನು ಕೂಡಲೇ ವಾಪಸ್ಸು ಪಡೆದು ರೈತ ಸಮುದಾಯದ ಕ್ಷಮೆ ಕೋರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರರಿಗೆ ಸಿಎಂ ಸೂಚಿಸಬೇಕು. ಟಿ ಬಿ ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು, ಬಿಎಂಐಸಿ ಯೋಜನೆ ರದ್ದುಪಡಿಸಿ ನೈಸ್ ಕಂಪನಿಯ ಹಗರಣ, ಭ್ರಷ್ಟಾಚಾರ, ಅಕ್ರಮಗಳನ್ನು ಶಿಕ್ಷೆಗೆ ಒಳಪಡಿಸಬೇಕು, ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ವಾಪಸ್ಸು ಪಡೆಯುವ ಸುಪ್ರೀಂ ಕೋರ್ಟ್ ತೀರ್ಪು ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದರು.
ಉಪ ಮುಖ್ಯಮಂತ್ರಿ ರೈತ ದ್ರೋಹ ಹೇಳಿಕೆ ಖಂಡಿಸಿ ಡಿಕೆ ಶಿವಕುಮಾರ್ ಪ್ರತಿಕೃತಿ ಸುಟ್ಟು ಪ್ರತಿಭಟಿಸಲು ನೈಸ್ ಸಂತ್ರಸ್ಥ ರೈತರಿಗೆ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡುತ್ತದೆ ಎಂದರು.
