ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಾಕಿ ವೇತನ ಪಾವತಿಸಲು ಸೇವಾ ಭದ್ರತೆ ಕೊಡಲು, ಕನಿಷ್ಠ 31 ಸಾವಿರ ವೇತನ ನಿಗದಿಪಡಿಸಲು, ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸ ಪಡೆಯಲು, ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರ ವರ್ಗಾವಣೆ ಮಾಡಲು ಒತ್ತಾಯಿಸಿ ಕೃಷ್ಣ ಬಾಜಪೇಯಿ, ಪ್ರಾದೇಶಿಕ ಆಯುಕ್ತರ ವಿಭಾಗ ಕಚೇರಿ ಎದುರುಗಡೆ ಧರಣೆ ಸತ್ಯಗ್ರಹ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ರಾಜ್ಯ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, “ಸರಕಾರಿ ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಇರುವುದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 2-3 ತಿಂಗಳ ವೇತನ ಪಾವತಿಸಿರುವುದಿಲ್ಲ” ಎಂದು ಆರೋಪಿಸಿದರು.
“ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 7-8 ತಿಂಗಳ ವೇತನ ಪಾವತಿಸಿರುವುದಿಲ್ಲ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ 1-2 ತಿಂಗಳ ವೇತನ ಪಾವತಿಸಿರುವುದಿಲ್ಲ. ಕ್ರೈಸ್ತ ವಸತಿ ನಿಲಯಗಳಲ್ಲಿ ಅನುದಾನವಿದ್ದರೂ ಕೂಡ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ವೇತನ ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕಾರಣ ನಾಡಹಬ್ಬ ದಸರಾ ಆಚರಣೆ ಹಣವಿಲ್ಲದೆ ಉಪವಾಸ ವನವಾಸ ಪರಿಸ್ಥಿತಿ ಬಂದೊದಗಿದೆ” ಎಂದರು.
“ಹೊರಗುತ್ತಿಗೆ ನೌಕರರು ಕಳೆದ 15-20 ವರ್ಷಗಳ ಕಾಲ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೂಡ ಖಾಯಂ ನೌಕರರು ಆ ಸ್ಥಳದಲ್ಲಿ ವರ್ಗಾವಣೆ ಆಗಿ ಬಂದರೆ ಅಲ್ಲಿ ಸೇವೆಯಲ್ಲಿದ್ದ ನೌಕರರ ಕೆಲಸ ಕಳೆದುಕೊಂಡು ಹುಚ್ಚರಂತೆ ಅಲೆದಾಡುವ ಪರಿಸ್ಥಿತಿ ನಡೆದಿದೆ. ಐದು ವರ್ಷಕ್ಕಿಂತ ಹೆಚ್ಚು ಸೇವೆಸಲ್ಲಿಸಿದ ಹೊರಗುತ್ತಿಗೆ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕ ಮಾಡಿ ಸೇವಾ ಭದ್ರತೆ ಕೊಡಬೆಕೆಂದು ಮತ್ತು ಖಾಯಂ ನೌಕರರ ಸ್ಥಳದಲ್ಲಿ ಮಾತ್ರ ಖಾಯಂ ನೌಕರರ ವರ್ಗಾವಣೆ ಮಾಡಬೇಕೆಂದು ವಿನಂತಿಸುತ್ತೇನೆ” ಎಂದರು.

ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆಗಗನಕ್ಕೇರಿವೆ. ಆದರೆ ನೌಕರರ ವೇತನ ಕಳೆದ ಮೂರು ವರ್ಷಗಳಿಂದ ಹೆಚ್ಚಳವಾಗದೆ ಇರುವುದರಿಂದ ಅತ್ಯಂತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಕನಿಷ್ಠ 31 ಸಾವಿರ ವೇತನ ಪಾವತಿಸಬೇಕು. ವಸತಿ ನಿಲಯಗಳಲ್ಲಿ ಸರಕಾರ ರೊಟ್ಟಿ ಮಾಡುವ ಯಂತ್ರಗಳು ಕೊಡುವ ನೆಪದಲ್ಲಿ ಸಿಬ್ಬಂದಿ ಕಡಿತ ಮಾಡಿದೆ. ಆದರೆ ಆ ರೊಟ್ಟಿ ಯಂತ್ರಗಳು ಎಲ್ಲಿಯೂ ರೊಟ್ಟಿ ಮಾಡದೇ ಕೆಟ್ಟು ಹೋಗಿದೆ. ಹೀಗಾಗಿ ಅಲ್ಲಿ ರೊಟ್ಟಿ ಚಪಾತಿ ಮಾಡುತ್ತಿರುವ ಅಡಿಗೆ ಸಿಬ್ಬಂದಿ ರಾತ್ರಿ 9. 10 ಗಂಟೆಯವರೆಗೆ ರೊಟ್ಟಿ ಮಾಡಿದರೂ ಸಾಕಾಗದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಅನಾರೋಗ್ಯದಿಂದ ಬಳಲಿದರೂ ಕೂಡಾ ಯಾರು ಕೇಳದಂತಾಗಿದೆ. ಈ ಹಿಂದೆ ಇದ್ದ ಮಕ್ಕಳ ಸಂಖ್ಯೆ ಅನುಗುಣವಾಗಿ 100 ಕ್ಕೆ 5ಜನ ಸಿಬ್ಬಂದಿಯಂತೆ ಮುಂದುವರೆಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಉತ್ತರ ಕರ್ನಾಟಕದ ವಸತಿ ನಿಲಯಗಳ ನೌಕರರ ಇಡೇರಿಸಬೇಕೆಂದು ಒತ್ತಾಯಿಸಿದರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದಿ, ಕಾಶಿನಾಥ ಬಂಡಿ, ಪರಶುರಾಮ ಹಡಲಗಿ, ದಾವಲ್ ಸಾಭ್ ನಧಾಫ್, ಗ್ಯಾನೇಶ್ ಕಡಗದ್, ಇಸಾಮುದ್ದೀನ್, ಮಹೇಶ ಕಾಟ್ಟೆ, ಮೇಘರಾಜ, ಮಲ್ಲಮ್ಮ ಕೂಡ್ಲಿ, ವಸಂತರಾಜ ಇನ್ನಿತರರು ಉಪಸ್ಥಿತರಿದ್ದರು.
ಬೇಡಿಕೆಗಳು
1) ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ನಿವೃತಿ ಭದ್ರತೆ ಕೊಡಬೇಕು.
2) ಎಲ್ಲಾ ಹೊರಗುತ್ತಿಗೆ ನೌಕರರ ಬಾಕಿ ವೇತನ ಕೊಡಲೇ ಪಾವತಿ ಮಾಡಬೇಕು.
3) ಕನಿಷ್ಠ 31 ಸಾವಿರ ವೇತನ ಕೊಡಬೇಕು,
4) ಸರಕಾರ ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಾಸ ಪಡೆಯಬೇಕು ಹಿಂದೆ ಇದ್ದ 100 ವಿದ್ಯಾರ್ಥಿಗಳಿಗೆ 5 ಜನರಂತೆ ಅಡಿಗೆ ಸಿಬ್ಬಂದಿಗಳು ನೇಮಿಸಬೇಕು
5) ಬೀದರ್ ಮಾದರಿಯಲ್ಲಿ ಸಹಕಾರಿ ಸಂಘದ ಮೂಲಕ ವೇತನ ಪಾವತಿಸಬೇಕು.
6) ಖಾಯಂ ನೌಕರರ ಸ್ಥಳಗಳಲ್ಲಿ ಮಾತ್ರ ಖಾಯಂ ನೌಕರರ ವಗಾವಣೆ ಮಾಡಬೇಕು
7) ಪ್ರತಿ ವಸತಿ ನಿಲಯಗಳಿಗೆ ಒಂದು ಸಿಬ್ಬಂದಿ ಹೆಚ್ಚುವರಿಗೆ ಕೊಟ್ಟು ಎಲ್ಲಾ ನೌಕರರಿಗೆ ವಾರಕ್ಕೊಂದು ರಜೆ ಕಡ್ಡಾಯವಗಿ ಕೊಡಬೇಕು.
8) 2014 ನಂತರ ಪ್ರಾರಂಭವಾದ ಕ್ರೈಸ್ ವಸತಿ ನಿಲಯಗಳಿಗೆ ಹಿಂದನಂತೆ 11 ಜನ ಸಿಬ್ಬಂದಿ ನೇಮಿಸಬೇಕು
9) 10 ವರ್ಷಗಳ ಕಾಲ ಸೇವೆಸಲ್ಲಿಸಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನ್ಯಯಲ್ಲಿ ನೇಮಕಾತಿ ಮಾಡಬೇಕು
10) ಜೋನ್ 1.2.3.4. ಎಂದು ವಿಂಗಡನೆ ಮಾಡಿ ಸಂಬಳ ಕಡಿತ ಮಾಡಿದ ಆದೇಶ ವಾಪಸ ಪಡೆದು ಕಳೆದ ವರ್ಷದ ವೇತನ ಪಾವತಿಸಿದಷ್ಟಾದರೂ ಪಾವತಿಸಬೇಕು.

