– ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಬಿಜೆಪಿ ಸರ್ಕಾರ ನಿರ್ಧಾರ
– ದಲಿತವಿರೋಧಿ ಮಾತ್ರವಲ್ಲದೆ ಮೀಸಲಾತಿ ವಿರೋಧಿ ಕ್ರಮ: ಮಾಯಾವತಿ
ಹರಿಯಾಣದಲ್ಲಿ ಸತತ ಮೂರನೆಯ ಸಲ ಆಯ್ಕೆಯಾಗಿರುವ ಬಿಜೆಪಿ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸಿದೆ.
ನಾಯಬ್ ಸಿಂಗ್ ಸೈನಿ ನೇತೃತ್ವದ ರಾಜ್ಯ ಸರ್ಕಾರ ಶುಕ್ರವಾರ ಜರುಗಿದ ತನ್ನ ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ನಿರ್ಧಾರ ತೆಗೆದುಕೊಂಡಿದೆ.
ಒಳಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಮ್ ಕೋರ್ಟು ಕಳೆದ ಆಗಸ್ಟ್ ಒಂದರಂದು ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದಿರುವ ಮತ್ತು ಪ್ರಾತಿನಿಧ್ಯದ ಕೊರತೆ ಎದುರಿಸಿರುವ ಜಾತಿಗಳಿಗೆ ಮೀಸಲಾತಿಯ ನ್ಯಾಯ ದೊರೆಯಬೇಕೆಂಬುದು ತೀರ್ಪಿನ ಆಶಯವಾಗಿತ್ತು.
“ಸುಪ್ರೀಮ್ ಕೋರ್ಟಿನ ಆದೇಶವನ್ನು ನಮ್ಮ ಸರ್ಕಾರ ಗೌರವಿಸಿದೆ. ಆದೇಶವನ್ನು ಇಂದಿನಿಂದಲೇ ಜಾರಿಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ” ಎಂದು ನಾಯಬ್ ಸಿಂಗ್ ಸೈನಿ ತಿಳಿಸಿದ್ದಾರೆ.
ಹರಿಯಾಣದ ಪರಿಶಿಷ್ಟ ಜಾತಿಗಳ ಪೈಕಿ ಅತಿ ಹಿಂದುಳಿದಿರುವ ವಾಲ್ಮೀಕಿಗಳು, ಬಾಜೀಗಾರರು, ಸಾನ್ಸಿಗಳು, ದೇಹಾಸ್, ಧಾನುಕ್ ಹಾಗೂ ಸಪೇರಾ (ಹಾವಾಡಿಗರು) ಮುಂತಾದ 36 ಜಾತಿಗಳು ಈ ಒಳಮೀಸಲಾತಿ ಕ್ರಮದ ಲಾಭ ಪಡೆಯಲಿವೆ.
ಹರಿಯಾಣದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಜನರ ಪ್ರಮಾಣ ಸುಮಾರು ಶೇ.20ರಷ್ಟು. ಈ ಪೈಕಿ ಶೇ.11ರಷ್ಟು ಮಂದಿ ಈ 36 ಜಾತಿಗಳಿಗೆ ಸೇರಿದವರಾಗಿದ್ದಾರೆ.
ಮೊದಲಿನಿಂದಲೂ ಮೀಸಲಾತಿಯ ಲಾಭವನ್ನು ಹೆಚ್ಚು ಹೆಚ್ಚು ಪಡೆದು ಪರಿಶಿಷ್ಟರಲ್ಲಿಯೇ ಮುಂದುವರೆದ ಒಳಪಂಗಡ ಎಂದು ಜಾಟವರು ಅಥವಾ ಚಮ್ಮಾರರನ್ನು ಪರಿಗಣಿಸಲಾಗಿದೆ. ಜಾಟವರು ಹೆಚ್ಚು ಕಡಿಮೆ ಕಾಂಗ್ರೆಸ್ ಬೆಂಬಲಿಗರು. ನಡುವೆ ಮಾಯಾವತಿಯವರ ಬಿ.ಎಸ್.ಪಿ.ಯತ್ತ ಆಕರ್ಷಿತರಾಗಿದ್ದರು. ಆನಂತರ ಬಹುತೇಕರು ಪುನಃ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದ್ದಾರೆ. ಹೀಗಾಗಿ ಬಿಜೆಪಿ ಜಾಟವೇತರ ಪರಿಶಿಷ್ಟರನ್ನು ತನ್ನ ಪರವಾಗಿ ಸಂಘಟಿಸುತ್ತಲೇ ಬಂದಿದೆ.
ಮೊನ್ನೆ ಜರುಗಿದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಈ ಸಂಘಟನೆ ಸೋರಿ ಹೋಗದಂತೆ ಮತ್ತಷ್ಟು ಭದ್ರಪಡಿಸಿಕೊಂಡಿತ್ತು. ಸುಪ್ರೀಮ್ ಕೋರ್ಟ್ ಆದೇಶದಂತೆ ಒಳಮೀಸಲಾತಿಯನ್ನು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿತ್ತು. ಮಾಯಾವತಿ ಮತ್ತು ಚಂದ್ರಶೇಖರ ಆಜಾದ್ ರಾವಣ ಅವರು ಜಾಟವ ಅಥವಾ ಚಮ್ಮಾರ ಜಾತಿಗೆ ಸೇರಿದವರು. ಉತ್ತರಪ್ರದೇಶ, ಹರಿಯಾಣ, ಪಂಜಾಬ್ ರಾಜ್ಯಗಳ ದಲಿತರ ಪೈಕಿ ಜಾಟವರ ಜನಸಂಖ್ಯೆ ದೊಡ್ಡದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಶಯ ಪರಿಹರಿಸಿ, ನ್ಯಾಯಾಂಗದ ಘನತೆ ಎತ್ತಿ ಹಿಡಿದ ನ್ಯಾಯಮೂರ್ತಿ
ಮಾಯಾವತಿ ಮತ್ತು ಚಂದ್ರಶೇಖರ್ ಆಜಾದ್ ಅವರು ಸುಪ್ರೀಮ್ ಕೋರ್ಟಿನ ಒಳಮೀಸಲಾತಿ ತೀರ್ಪನ್ನು ವಿರೋಧಿಸಿದ್ದಾರೆ. ದಲಿತರನ್ನು ಒಡೆಯುವ ಕುತಂತ್ರ ಎಂದು ಪ್ರತಿಭಟಿಸಿದ್ದಾರೆ.
ಹರಿಯಾಣದಲ್ಲಿ ‘ದಲಿತ್ ಎ ಮಹಾಪಂಚಾಯತ್’ ಎಂಬ ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ನಡೆಸಿದೆ. ದೇವಿದಾಸ್ ವಾಲ್ಮೀಕಿ ಈ ಸಂಘಟನೆಯ ಮುಖ್ಯಸ್ಥರು. ಸಾಕಷ್ಟು ತಡವಾಗಿಯಾದರೂ ಕೈಗೊಂಡಿರುವ ಹರಿಯಾಣ ಸರ್ಕಾರದ ಒಳಮೀಸಲಾತಿ ಜಾರಿ ನಿರ್ಧಾರ ಸ್ವಾಗತಾರ್ಹ. 2009 ಮತ್ತು 2014ರ ವಿಧಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಒಳಮೀಸಲಾತಿ ಜಾರಿಗೆ ತರುವ ಆಶ್ವಾಸನೆ ನೀಡಿತ್ತು. ಹೀಗಾಗಿ ಈ ಮೊದಲೇ ಜಾರಿಗೆ ಬರಬೇಕಿದ್ದ ಕ್ರಮವಿದು. ಕಳೆದ ಸೆಪ್ಟಂಬರ್‍ನಲ್ಲಿ ಜೀಂದ್‌ನಲ್ಲಿ ಜರುಗಿದ ದಲಿತ್ ಎ ಮಹಾಪಂಚಾಯತ್‌ನಲ್ಲಿ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಲಾಗಿತ್ತು. ಈ ತೀರ್ಮಾನ ಬಿಜೆಪಿಯ ವಿಜಯಕ್ಕೆ ನೆರವಾಗಿದೆ ಎಂದು ವಾಲ್ಮೀಕಿ ಹೇಳಿದ್ದಾರೆ.
ಹರಿಯಾಣದಲ್ಲಿ ಪರಿಶಿಷ್ಟರ ಪ್ರಮಾಣ ಶೇ.20ರಷ್ಟಿದ್ದರೂ, ಹರಿಯಾಣ ರಾಜ್ಯ ರಚನೆಯಾದಾಗಿನಿಂದ (1966) ಇಂದಿನ ತನಕ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಸೇರಿದ ಒಬ್ಬ ಅಭ್ಯರ್ಥಿಯೂ ಲೋಕಸಭೆಗೆ ಆಯ್ಕೆಯಾಗಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎರಡು ಮೀಸಲು ಕ್ಷೇತ್ರಗಳಿಂದ ಜಾಟವ (ಚಮ್ಮಾರರು) ಅಭ್ಯರ್ಥಿಗಳನ್ನೇ ಹೂಡಿದ್ದವು. ಈ ಎರಡೂ ಸೀಟುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು.
ಈ ಅನ್ಯಾಯವನ್ನು ಸರಿಪಡಿಸಲು ಈ ಸಲ ಬಿಜೆಪಿಯು ಜಾಟವೇತರ ಪರಿಶಿಷ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆರಿಸಿ ಕಳಿಸಬೇಕು ಎಂದು ವಾಲ್ಮೀಕಿ ಆಗ್ರಹಪಡಿಸಿದ್ದಾರೆ.
ಮಾಯಾವತಿ ವಿರೋಧ
ಹರಿಯಾಣ ಸರ್ಕಾರದ ಒಳಮೀಸಲಾತಿ ಜಾರಿ ಕ್ರಮವನ್ನು ಬಿ.ಎಸ್.ಪಿ. ಮುಖ್ಯಸ್ಥೆ ಕುಮಾರಿ ಮಾಯಾವತಿ ಅವರು ಖಂಡಿಸಿದ್ದಾರೆ. ದಲಿತರನ್ನು ಪರಸ್ಪರ ವಿರುದ್ಧ ಹೋರಾಡಿಸುವ ಷಡ್ಯಂತ್ರವಿದು. ದಲಿತವಿರೋಧಿ ಮಾತ್ರವಲ್ಲದೆ ಮೀಸಲಾತಿ ವಿರೋಧಿ ಕ್ರಮ. ಹರಿಯಾಣ ಬಿಜೆಪಿ ಸರ್ಕಾರದ ಈ ಕ್ರಮವನ್ನು ಬಿಜೆಪಿಯ ಕೇಂದ್ರ ನೇತೃತ್ವ ತಡೆಯಬೇಕಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮೀಸಲಾತಿಯನ್ನು ನಿಷ್ಕ್ರಿಯಗೊಳಿಸಿ ಸಮಾಪ್ತಗೊಳಿಸುವ ಕುತಂತ್ರ ಹೂಡಿವೆ. ಈ ಹುನ್ನಾರವನ್ನು ಬಿ.ಎಸ್.ಪಿ. ಘೋರವಾಗಿ ನಿಂದಿಸುತ್ತದೆ. ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಹಿಂದುಳಿದ ವರ್ಗಗಳನ್ನು ಒಡೆದು ಆಳುವುದು ಮೀಸಲಾತಿ ವಿರೋಧಿ ಷಡ್ಯಂತ್ರ. ಈ ಮಸಲತ್ತಿನ ವಿರುದ್ಧದ ಹೋರಾಟದ ಹೆಸರೇ ಬಿ.ಎಸ್.ಪಿ. ಈ ವರ್ಗಗಳನ್ನು ಸಂಘಟಿಸಿ ಆಳುವ ವರ್ಗಗಳನ್ನಾಗಿಸುವ ನಮ್ಮ ಸಂಘರ್ಷ ನಿರಂತರ ಜಾರಿಯಲ್ಲಿರುತ್ತದೆ ಎಂದು ಮಾಯಾವತಿ ಅವರು ಹೇಳಿದ್ದಾರೆ.