ಕನ್ನಡ ಅಂದ್ರೆ ನಮ್ಮ ತಾಯಿ ಇದ್ದ ಹಾಗೆ. ತಾಯ್ನುಡಿಯ ಹೆಸರಲ್ಲಿ ಏನೆಲ್ಲಾ, ಎಷ್ಟೆಲ್ಲಾ ಅನಾಚಾರಗಳು ನಡೆಯುತ್ತಿವೆ. ಸ್ವಾರ್ಥ ಸಾಧನೆಗೆ ಸಾಹಿತ್ಯ ಸಮ್ಮೇಳನವೇ ಬೇಕೇ? ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತ್ಯೇತರರಿಗೇನು ಕೆಲಸ? ಇವರಿಗೆ ಬುದ್ಧಿ ಹೇಳುವವರು ಯಾರು?
ಈ ನೆಲದ ನುಡಿಯ ಆತಂಕ ಮತ್ತು ಅದರ ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕಿತ್ತು. ಮಂಡ್ಯದ ಸಮ್ಮೇಳನ ಸಾಗುತ್ತಿರುವ ರೀತಿ ನೋಡಿದರೆ ಈ ಯಾವ ಆಶಯಗಳೂ ಇರುವಂತೆ ಕಾಣುತ್ತಿಲ್ಲ. ಒಬ್ಬ ಸಾಹಿತ್ಯಾಸಕ್ತನಾಗಿ ದೊಡ್ಡವರ ಸ್ವಾರ್ಥ, ಕಾಲೆಳೆದಾಟ, ಸಮ್ಮೇಳನಾಧ್ಯಕ್ಷತೆಗಾಗಿ ಜಾತಿ ಲಾಬಿ, ಕಸಾಪ ಮೂಲ ಉದ್ದೇಶವನ್ನೇ ಮರೆತು ಸಾಹಿತ್ಯೇತರರನ್ನು ತಂದು ಕೂರಿಸಬೇಕೆನ್ನುವ ದಾರ್ಷ್ಟ್ಯ ಅಪಾರ ನೋವುಂಟು ಮಾಡಿದೆ. ಸಮ್ಮೇಳನಕ್ಕೆ ಸಾಹಿತ್ಯೇತರರು ಅತಿಥಿಗಳಾಗಿ ಬರಲಿ, ತಲೆಯಾಳಾಗಿ ಅಲ್ಲ.
ಯಾವುದೇ ದೇಶದಲ್ಲಿ ನಡೆಯುವ ನುಡಿಜಾತ್ರೆಯಲ್ಲಿ, ಆ ದೇಶದ ವರ್ತಮಾನದ ರಾಜಕೀಯಕ್ಕೆ, ಜ್ವಲಂತ ಸಮಸ್ಯೆಗಳಿಗೆ ಬೆನ್ನು ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ಅದೊಂದು ವೈಭವಯುತ ಭಜನೆ ಅಷ್ಟೇ. ಇವತ್ತು ದೇಶದಲ್ಲಿ ಪ್ರಭುತ್ವ, ಅಧಿಕಾರ ಗಳಿಕೆಗಾಗಿ ದೇವರು ಧರ್ಮ ಮತ್ತು ಮೌಢ್ಯವನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಜನರ ಆಹಾರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ. ಡಿಸೆಂಬರ್ 20-22ರವರೆಗೆ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ಈ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಬೇಕಿದೆ. ಆಳ್ವಿಕೆಯ ಮೇಲೆ ಒತ್ತಡ ಹಾಕಿ ಸರಿ ಮಾಡಿಸುವ ಕಡೆ ಹೆಜ್ಜೆ ಹಾಕಬೇಕಿದೆ.
ಇದನ್ನೂ ಓದಿ ಮಂಡ್ಯ ಸಮ್ಮೇಳನ | ಅಧ್ಯಕ್ಷರ ಆಯ್ಕೆ ವಿಚಾರ; ಪ್ರಜಾಪ್ರಭುತ್ವವಾದಿಗಳೆಲ್ಲ ಚಿಂತಿಸಬೇಕಾದ ಗಂಭೀರ ಸಂಗತಿ
ಜನಪರ ವಕೀಲರಾದ ಬಿ ಟಿ ವಿಶ್ವನಾಥ್ ಮಾತನಾಡಿ, “ಈ ದೇಶದ ಚುನಾವಣೆಗಳು ಭ್ರಷ್ಟಗೊಂಡಿವೆ. ಚುನಾವಣೆಗಳು ದೇಶದ ಅಡಿಗಲ್ಲು, ಪ್ರಜಾಪ್ರಭುತ್ವದ ಬುನಾದಿ. ಭ್ರಷ್ಟಾಚಾರ ಮುಕ್ತ ಚುನಾವಣೆಗಳ ಬಗ್ಗೆ ಸಾಹಿತ್ಯ ವಿಮರ್ಶೆ ಮಾಡಬೇಕಿದೆ. ಮಾಧ್ಯಮಗಳಲ್ಲಿ ಸಾಹಿತ್ಯೇತರ ವ್ಯಕ್ತಿಗಳನ್ನು ಸಮ್ಮೇಳನ ಅಧ್ಯಕ್ಷರನ್ನಾಗಿಸುವ ಪಿತೂರಿ ನಡೆದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವುದನ್ನು ನೋಡಿದ್ದೇನೆ. ಕಬ್ಬು ಬೆಳೆಯುವ ಕಬ್ಬಿಗರ ಸಿಹಿ ಹೃದಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಗೊತ್ತಿದೆ. ಇಂಥ ಪಿತೂರಿಗಳನ್ನು ಚಳವಳಿಗಳ ನಾಡಿನ ಜನಕ್ಕೆ ಸಮರ್ಥವಾಗಿ ತಡೆಯುವುದು ಗೊತ್ತಿದೆ ಎಂದು ತಿಳಿದಿರಲಿ” ಎಂದರು.
ಕನ್ನಡ ಹೋರಾಟಗಾರರಾದ ಎಂ ಬಿ ನಾಗಣ್ಣ ಮಾತನಾಡಿ, “ಕನ್ನಡ ನುಡಿಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ಕನ್ನಡ ಹೊತ್ತಿಗೆಗಳ ಓದು, ಕನ್ನಡ ಮಾಧ್ಯಮದಲ್ಲಿ ಕಲಿಕೆ, ನಾಡು ನುಡಿಗೆ ಪೂರಕವಾದ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ನುಡಿ ಎದುರಿಸುತ್ತಿರುವ ತೊಡುಕುಗಳ ಕುರಿತು ಮಾತುಕತೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿ ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ನುಡಿಯ ಆತಂಕವನ್ನು ದೂರಮಾಡಬೇಕಾದ ಹೊಣೆ ಈಗ ನಮ್ಮೆಲ್ಲರ ಮೇಲಿದೆ” ಎಂದರು.
ಮಂಡ್ಯ ಸಾಹಿತ್ಯ ಸಮ್ಮೇಳನ | ಯಾರು ಬೇಕಾದರೂ ಅಧ್ಯಕ್ಷರಾದರೆ ಅದು ʼಸಾಹಿತ್ಯ ಸಮ್ಮೇಳನʼ ಹೇಗಾಗುತ್ತದೆ?
ಸತೀಶ್ ಜವರೇಗೌಡ ಮತನಾಡಿ, “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಉದ್ದೇಶ ವಿವಾದ ಮಾಡಿ ಬರಿ ಪ್ರಚಾರ ಪಡೆಯುವುದು ಅಷ್ಟೇ. ಸಂವಾದಕ್ಕೆ ಕರೆಯುತ್ತಿರುವವರಲ್ಲಿ 25% ಜನ ಮಾತ್ರ ಅರ್ಹರು. ಮಿಕ್ಕವರಿಗೆ ಸಾಹಿತ್ಯ ಸಮ್ಮೇಳನದ ಆಳ ಅಗಲವೇ ಗೊತ್ತಿಲ್ಲ. ಸಮ್ಮೇಳನದ ಪ್ರಭಾವ, ಉದ್ದೇಶ, ಆಳ ಅಗಲದ ಬಗ್ಗೆ ಮಾತನಾಡಬೇಕು ಅದು ಬಿಟ್ಟು ಅನಗತ್ಯವಾಗಿ ಯಾರು ಅಧ್ಯಕ್ಷರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಇಲ್ಲಿನ ಸಂವಾದಕ್ಕೆ ಯುವಕರಿಗೆ ಅವಕಾಶವನ್ನೇ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿಗಳಾದ ಜೆ ಎಂ ರಾಜಶೇಖರ್ ಮಾತನಾಡಿ, “ಶಿಫಾರಸ್ಸು ಬರೆಸಿಕೊಂಡು ಕಂಡ ಕಂಡವರ ಮನೆ ಬಾಗಿಲಿಗೆ ಓಡಾಡಿ ಕೈಕಟ್ಟಿ ನಿಂತುಕೊಂಡು ಪಡೆದುಕೊಂಡ ಶಿಫಾರಸ್ಸುಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ತಲುಪಿಸುವ ಕೆಲಸ ಮಾಡುವವರು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹೇಗೆ ಮೆರೆಯಲು ಸಾಧ್ಯ? ಶಿಫಾರಸ್ಸು ಪತ್ರಗಳನ್ನು ಹಿಡಿದು ಸಮ್ಮೇಳನ ಅಧ್ಯಕ್ಷ ನಾನಾಗಬೇಕೆಂದು ಹೋದವರು ಕನ್ನಡ ನಾಡಿಗೆ ಮಾಡಿದ ಅವಮಾನ. ಕನ್ನಡಿಗರಿಗೆ ಮಾಡಿದ ಅವಮಾನ. ಅರ್ಹತೆ, ಯೋಗ್ಯತೆ ಇಲ್ಲದವರು ಶಿಫಾರಸ್ಸು ಪತ್ರಗಳನ್ನು ಅರಸಿಕೊಂಡು ಓಡಾಡುತ್ತಾರೆ. ಧೈರ್ಯದಿಂದ, ಸ್ವಾಭಿಮಾನದಿಂದ ನನಗೆ ಅರ್ಹತೆ ಇದೆ ಎಂದು ಹೇಳಿಕೊಳ್ಳುವ ಧೈರ್ಯವನ್ನು ಇಲ್ಲಿಯವರೆಗೂ ಯಾರು ಪ್ರದರ್ಶನ ಮಾಡಿಲ್ಲ” ಎಂದರು.
ಮಂಡ್ಯ ಸಮ್ಮೇಳನ | ಜೋಶಿಯವರು ಸಾಹಿತ್ಯ ವೇದಿಕೆಯನ್ನು ರಾಡಿ ಎಬ್ಬಿಸಲು ಹೊರಟಿದ್ದಾರೆಯೇ?
ಕನ್ನಡ ಅಂದ್ರೆ ನಮ್ಮ ತಾಯಿ ಇದ್ದ ಹಾಗೆ. ತಾಯ್ನುಡಿಯ ಹೆಸರಲ್ಲಿ ಏನೆಲ್ಲಾ, ಎಷ್ಟೆಲ್ಲಾ ಅನಾಚಾರಗಳು ನಡೆಯುತ್ತಿವೆ. ಸ್ವಾರ್ಥ ಸಾಧನೆಗೆ ಸಾಹಿತ್ಯ ಸಮ್ಮೇಳನವೇ ಬೇಕೆ? ಸಾಹಿತಿಗಳ ಸಮ್ಮೇಳನದಲ್ಲಿ ಸಾಹಿತ್ಯೇತರರಿಗೇನು ಕೆಲಸ? ಇವರಿಗೆ ಬುದ್ಧಿ ಹೇಳುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ತಪ್ಪುಗಳನ್ನು ಸರಿಪಡಿಸಬೇಕು ಎಂಬುದು ಮಂಡ್ಯ ಜನರ ಒತ್ತಾಯ.
