ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್‌ನಲ್ಲಿ ಭಾನುವಾರ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಶಾಸಕ ರವಿಕುಮಾರ್ ಗಣಿಗ ಅವರು ಮಂಡ್ಯದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಆಲಿಸಿದ್ದಾರೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ರಸ್ತೆಗಳು, ಪಾದಚಾರಿ ಮಾರ್ಗ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೆಲಸಗಳಿಗೆ ನಾಗರಿಕರ ಬೆಂಬಲದ ಅಗತ್ಯವಿದೆ ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕರೊಂದಿಗೆ ಮಾತನಾಡಿದ ಸಾರ್ವಜನಿಕರು ಮಂಡ್ಯ ನಗರವನ್ನು ಅಭಿವೃದ್ಧಿ ಪಡಿಸಲು ಕೈಗೊಳ್ಳಬೇಕಾದ ಹಲವು ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಯುವ ಜನರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ನಿರುದ್ಯೋಗ. ಯುವ ಜನರನ್ನು ಸರಿದಾರಿಗೆ ತರಲು ಮಂಡ್ಯದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು. ಮಾದಕ ವಸ್ತುಗಳ ದಂಧೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ನಗರವಾಸಿಗಳ ಸಲಹೆ, ಸೂಚನೆಗಳನ್ನು ಆಲಿಸಿದ ಶಾಸಕರು, “ಮಂಡ್ಯ ನಗರದ ಸಮಸ್ಯೆಗಳು ಕುರಿತು ಸದನದಲ್ಲಿ ಚರ್ಚಿಸುತ್ತೆನೆ. ಶೀಘ್ರದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ನನ್ನ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಬಡಜನರು ಇಂದಿಗೂ ಸಹ ಸ್ವಂತ ನಿವೇಶನ ಹಾಗೂ ಮನೆ ಇಲ್ಲದೆ ಕಷ್ಟಪಡುತ್ತಿದ್ದಾರೆ. ಅದರೆ, ಬೇಕಾದಷ್ಟು ಸರ್ಕಾರಿ ಜಾಗಗಳು ದಾಖಲೆಗಳಲ್ಲಿ ಇದ್ದರೂ, ಹಲವೆಡೆ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯಾಗಿರುವ ಭೂಮಿಯನ್ನ ತೆರವುಗೊಳಿಸುವ ಬಗ್ಗೆ ಯೋಜಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಅಧಿಕಾರಾವಧಿಯ 5 ವರ್ಷಗಳಲ್ಲಿ ಕ್ಷೇತ್ರದ ಮತದಾರರಿಗೆ ಬೇಕಿರುವ ಸೌಲಭ್ಯಗಳಾದ ಶಿಕ್ಷಣ, ಆರೋಗ್ಯ ಹಾಗೂ ರೈತರು, ಕಾರ್ಮಿಕರು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ, ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ. ಮಂಡ್ಯ ನಗರವನ್ನು ಅಭಿವೃದ್ಧಿ ಪಡಿಸುವ ಹೊಣೆ ನನ್ನ ಮೇಲಿದೆ” ಎಂದರು.