ಭಾನುವಾರ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು “ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ” ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ವೈದ್ಯ ಮತ್ತು ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸೋನಾಮಾರ್ಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಬಳಿ ಈ ದಾಳಿ ನಡೆದಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಬ್ದುಲ್ಲಾ, “ಇದು ಅತ್ಯಂತ ನೋವಿನ ದುರಂತ. ತಮ್ಮ ಜೀವನೋಪಾಯಕ್ಕಾಗಿ ಮತ್ತು ಅವರ ಕುಟುಂಬಗಳಿಗೆ ಹಣ ಕಳುಹಿಸಲೆಂದು ಕೆಲಸ ಮಾಡಲು ಇಲ್ಲಿಗೆ ಬಂದಿರುವ ಹಲವು ಬಡ ಕೂಲಿ ಕಾರ್ಮಿಕರನ್ನು ಈ ಭಯೋತ್ಪಾದಕರು ನಿರ್ದಯವಾಗಿ ಕೊಂದಿದ್ದಾರೆ. ಮೃತರಲ್ಲಿ ಒಬ್ಬರು ವೈದ್ಯರಾಗಿದ್ದರು. ಇಂತಹ ದಾಳಿಗಳು ಕಾಶ್ಮೀರವನ್ನು ಪಾಕಿಸ್ತಾನವನ್ನಾಗಿ ಮಾಡುತ್ತದೆ ಎಂದು ಈ ಭಯೋತ್ಪಾದಕರು ಭಾವಿಸುತ್ತಾರೆಯೇ” ಎಂದು ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಭಯೋತ್ಪಾದಕ ದಾಳಿ; ವೈದ್ಯ ಸೇರಿ 7 ಕಾರ್ಮಿಕರ ಸಾವು
“ನೆರೆಯ ರಾಷ್ಟ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ಯೆಗಳನ್ನು ನಿಲ್ಲಿಸುವವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮಾತುಕತೆ ಸಾಧ್ಯವಿಲ್ಲ. ಮಾತುಕತೆ ನಡೆಯುವುದು ಹೇಗೆ? ನೀವು ನಮ್ಮ ಅಮಾಯಕರನ್ನು ಕೊಂದು ಬಳಿಕ ಮಾತುಕತೆಗೆ ಕರೆಯುತ್ತೀರಿ. ಮೊದಲು ಹತ್ಯೆಗಳನ್ನು ನಿಲ್ಲಿಸಿ” ಎಂದು ಹೇಳಿದರು.
“ಪಾಕಿಸ್ತಾನವು ನಿಜವಾಗಿಯೂ ಭಾರತದೊಂದಿಗೆ ಸ್ನೇಹವನ್ನು ಬಯಸಿದರೆ, ಅವರು ಈ ಹಿಂಸಾಚಾರವನ್ನು ನಿಲ್ಲಿಸಬೇಕು. ಕಾಶ್ಮೀರವು ಎಂದಿಗೂ ಪಾಕಿಸ್ತಾನವಾಗುವುದಿಲ್ಲ. ನಾವು ಘನತೆಯಿಂದ ಬದುಕೋಣ ಮತ್ತು ಅಭಿವೃದ್ಧಿಯತ್ತ ಗಮನ ಹರಿಸೋಣ. ನೀವು ಇನ್ನೆಷ್ಟು ದಿನ ನಮಗೆ ತೊಂದರೆ ಕೊಡುತ್ತೀರಿ? ನೀವು 1947ರಲ್ಲಿ ಇಂತಹ ಕೃತ್ಯಗಳನ್ನು ಪ್ರಾರಂಭಿಸಿದ್ದೀರಿ. ಈ 75 ವರ್ಷಗಳಲ್ಲಿ ಕಾಶ್ಮೀರವು ಪಾಕಿಸ್ತಾನವಾಗಲಿಲ್ಲ. ಹಾಗಿರುವಾಗ ಈಗ ಹೇಗೆ ಕಾಶ್ಮೀರ ಪಾಕಿಸ್ತಾನವಾಗುತ್ತದೆ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ| ಭಯೋತ್ಪಾದಕ ದಾಳಿ; ಬಿಜೆಪಿಯ ಮಾಜಿ ಸರಪಂಚ ಹತ್ಯೆ, ಪ್ರವಾಸಿಗರಿಗೆ ಗಾಯ
ಬಡತನವನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಫಾರೂಕ್ ಅಬ್ದುಲ್ಲಾ ಅವರು “ಭಯೋತ್ಪಾದನೆ ಪರಿಹಾರವಲ್ಲ. ಇದು ಕೊನೆಯಾಗಬೇಕು. ಹೀಗೆಯೇ ಮುಂದುವರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಜಮ್ಮು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಗಗಂಗರ್, ಸೋನಮಾರ್ಗ್ ಮತ್ತು ಗಂದರ್‌ಬಾಲ್‌ನಲ್ಲಿ ಭದ್ರತಾ ಪಡೆಗಳು ಸುತ್ತುವರೆದಿದೆ. ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ.
