ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಡಿ ಕೆಂಪಣ್ಣ: ಈ ಚುನಾವಣೆಯ ಹೀರೋ

Date:

Advertisements
ಬಿಜೆಪಿಯ ಭ್ರಷ್ಟಾಚಾರದ ವಿರಾಟ್ ರೂಪವನ್ನು ಬಹಿರಂಗಗೊಳಿಸಿದ್ದೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ. ಮೋದಿ ಮುಂತಾದವರ ನಾಮಬಲದೊಂದಿಗೆ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ಅತೀವ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ಚುನಾವಣೆಯಲ್ಲಿ ಸೋತು ಮುಖಭಂಗಕ್ಕೀಡಾಗಿದ್ದರ ಹಿಂದೆ ಕೆಂಪಣ್ಣರ ಮೌನಕ್ರಾಂತಿ ಇದೆ; ಅವರ ಭ್ರಷ್ಟಾಚಾರ ವಿರೋಧಿ ಹೋರಾಟವಿದೆ. 80 ವರ್ಷದ ದಿಟ್ಟ ಹೋರಾಟಗಾರ ಕೆಂಪಣ್ಣ ಈ ಚುನಾವಣೆಯ ನಿಜವಾದ ಹೀರೋ 

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವೇ ಬಂದಿದೆ. ಕಾಂಗ್ರೆಸ್‌ ಮ್ಯಾಜಿಕ್ ಅಂಕಿಯನ್ನು ದಾಟಿ ನಿಚ್ಚಳ ಬಹುಮತ ಪಡೆಯುವ ಮೂಲಕ ದಶಕಗಳ ಹಿಂದಿನ ಫಲಿತಾಂಶವನ್ನು ಪುನರಾವರ್ತಿಸಿದೆ. ಕಾಂಗ್ರೆಸ್ 135ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 65 ಸ್ಥಾನಗಳನ್ನು ಪಡೆದಿದ್ದರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ 19 ಕ್ಷೇತ್ರಗಳಲ್ಲಿ ಪ್ರಯಾಸದ ಗೆಲುವು ದಾಖಲಿಸಿದೆ.

ಬಿಜೆಪಿಯ ಸೋಲಿಗೆ ಮುಖ್ಯ ಕಾರಣವಾಗಿದ್ದು ಆಡಳಿತ ವಿರೋಧಿ ಅಲೆ. ಹಿಂದೆಂದೂ ಕಾಣದ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿಯಾಗಿ ವರ್ತಿಸತೊಡಗಿದ್ದವು. ಜನ ರಸ್ತೆಗುಂಡಿಗಳಲ್ಲಿ ಬಿದ್ದು ಸಾಯುತ್ತಿದ್ದರೆ, ಕೋವಿಡ್‌ ಸೋಂಕಿಗೆ ತುತ್ತಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದರೆ, ಬೆಲೆ ಏರಿಕೆಯಿಂದ ತತ್ತರಿಸಿಹೋಗುತ್ತಿದ್ದರೆ ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರು ಹಿಜಾಬ್, ಹಲಾಲ್, ದಿ ಕಾಶ್ಮೀರ್ ಫೈಲ್ಸ್ ಎಂದು ಹಿಂದುತ್ವದ ಭಜನೆ ಮಾಡುತ್ತಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇವೆಲ್ಲವನ್ನೂ ಸಮರ್ಥವಾಗಿ ಆಗಿಂದಾಗ್ಗೆ ಜನರ ಮುಂದಿಡುತ್ತಿತ್ತು.

ಅದಕ್ಕಿಂತಲೂ ಹೆಚ್ಚಾಗಿ ನಾಡಿನ ಅನೇಕ ಜನಪರ ಸಂಘಟನೆಗಳು, ಲೇಖಕರು, ಚಿಂತಕರು ರಾಜ್ಯ ಸಾಗುತ್ತಿರುವ ಹಾದಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಇದ್ದರು. ‘ಎದ್ದೇಳು ಕರ್ನಾಟಕ’ ಸಂಘಟನೆ ರಾಜ್ಯದ ನೂರಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿಯ ದುರಾಡಳಿತವನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪ್ರೇರೇಪಿಸುವ ಮೂಲಕ ಒತ್ತಡ ಗುಂಪಾಗಿ ಕೆಲಸ ಮಾಡಿತ್ತು. ಇಂಥ ಹಲವು ಸಂಘಟನೆಗಳ, ಒತ್ತಡ ಗುಂಪುಗಳ ಶ್ರಮದ ಫಲ ಈ ಚುನಾವಣಾ ಫಲಿತಾಂಶ.

Advertisements

ಈ ಸಂದರ್ಭದಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಲೇಬೇಕಾದ ವ್ಯಕ್ತಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ. ಬಿಜೆಪಿಯ ಭ್ರಷ್ಟಾಚಾರದ ವಿರಾಟ್ ರೂಪವನ್ನು ಬಹಿರಂಗಗೊಳಿಸಿದ್ದೇ ಡಿ ಕೆಂಪಣ್ಣ. ಇದುವರೆಗೆ ಜನ ಗುತ್ತಿಗೆದಾರರು ಕೂಡ ಭ್ರಷ್ಟಾಚಾರದ ಪಾಲುದಾರರು ಎಂದೇ ನಂಬಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಗುತ್ತಿಗೆದಾರರ ಸಂಘ ನೇರವಾಗಿ ಸರ್ಕಾರದ ವಿರುದ್ಧ ಬೀದಿಗಿಳಿದಿತ್ತು. ‘ಶಾಸಕರು ಹಾಗೂ ಸಚಿವರು ಎಲ್ಲ ಗುತ್ತಿಗೆಗಳಲ್ಲಿ 40% ಮತ್ತು ಅದಕ್ಕೂ ಹೆಚ್ಚಿನ ಪಾಲನ್ನು ಪಡೆಯುತ್ತಿದ್ದಾರೆ. ಉಳಿಕೆ ಹಣದಲ್ಲಿ ತಾವು ತಮಗೆ ವಹಿಸಿದ ಕೆಲಸವನ್ನು ಕನಿಷ್ಠ ಗುಣಮಟ್ಟದೊಂದಿಗೆ ಮಾಡಲೂ ಕೂಡ ಸಾಧ್ಯವಾಗುತ್ತಿಲ್ಲ’ ಎಂದು ಕೆಂಪಣ್ಣ ನೋವು ತೋಡಿಕೊಂಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದು, ತಮ್ಮ ಅಳಲು ತೋಡಿಕೊಂಡಿದ್ದರು.

ವಿಚಿತ್ರ ಅಂದರೆ, ಡಿ ಕೆಂಪಣ್ಣ ಅಂಥ ಗಂಭೀರ ಆರೋಪ ಮಾಡಿದ ಮೇಲೂ ಅದು ಯಾರಿಗೂ ತಟ್ಟಿರಲಿಲ್ಲ. ಕಾಂಗ್ರೆಸ್ ಯಥಾಪ್ರಕಾರ ತಟಸ್ಥ ನಿಲುವು ಪ್ರಕಟಿಸಿತ್ತು. ಆಗ ಆ ಇಶ್ಯೂವನ್ನು ಕೈಗೆತ್ತಿಕೊಂಡದ್ದು ‘ಜಾಗೃತ ಕರ್ನಾಟಕ’. ‘40% ಕಮಿಷನ್ – ಯಾರಿಗೂ ಆಘಾತ ತರದ ಭಾರೀ ಹಗರಣ, ಕರ್ನಾಟಕಕ್ಕೆ ಏನು ಕಾದಿದೆ’ ಎಂಬ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ‘ಜಾಗೃತ ಕರ್ನಾಟಕ’ವನ್ನು ಪ್ರಜ್ಞಾವಂತರನ್ನು, ವಿರೋಧ ಪಕ್ಷಗಳನ್ನು ಎಚ್ಚರಿಸಿತು. ನಂತರವೇ ಕಾಂಗ್ರೆಸ್ ಪೇಸಿಎಂ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದು.    

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಸತ್ಯವಾಯಿತು ಈದಿನದ ಸಮೀಕ್ಷೆ; ಇದು ಜನರ ಗೆಲುವು

40% ಕಮಿಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದ ನಂತರ ಡಿ ಕೆಂಪಣ್ಣ ಅವರ ಸಮಸ್ಯೆಗಳು ಪರಿಹಾರವಾಗುವ ಬದಲು ಮತ್ತಷ್ಟು ಹೆಚ್ಚಾದವು. ಅದರಲ್ಲೂ ಅವರು ‘ಭ್ರಷ್ಟಾಚಾರದ ರಾಜ’ ಎಂದು ಕರೆದಿದ್ದ ಆರೋಗ್ಯ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಸಚಿವ ಮುನಿರತ್ನ ಕೆಂಪಣ್ಣನವರ ವಿರುದ್ಧ ತೀವ್ರ ಟೀಕಾಪ್ರಹಾರಕ್ಕಿಳಿದರು. ಸುಧಾಕರ್ ಕೇಸು ಹಾಕುವುದಾಗಿ ಬೆದರಿಸಿದರೆ, ಮುನಿರತ್ನ ಕೆಂಪಣ್ಣ ಹಾಗೂ ಇತರ 18 ಮಂದಿಯ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದರು. ಅದರ ಫಲವಾಗಿ ಕೆಂಪಣ್ಣ ಅವರ ಬಂಧನವೂ ಆಗಿ, 80 ವರ್ಷ ವಯಸ್ಸಿನ ಅವರು ಜೈಲಿಗೆ ಹೋದರು.

ಕೆಂಪಣ್ಣ ಅಸಾಧಾರಣ ನೈತಿಕ ಸ್ಥೈರ್ಯದ ವ್ಯಕ್ತಿ. ಬಿಜೆಪಿ ಮುಖಂಡರ ಬೆದರಿಕೆಗಳಿಗೆ, ಕೇಸುಗಳಿಗೆ, ಜೈಲು ವಾಸಕ್ಕೆ ಅವರು ಹೆದರಲಿಲ್ಲ. ತಮ್ಮ ಬಳಿ ಇದ್ದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಕೋರ್ಟ್‌ ಮುಂದಿಟ್ಟು ಹೋರಾಡತೊಡಗಿದರು. ಸತ್ಯ ಏನು ಅನ್ನುವುದನ್ನು ನಿರ್ಭೀತಿಯಿಂದ ಮಾಧ್ಯಮಗಳ ಮುಂದೆ, ಜನರ ಮುಂದೆ ಇಡತೊಡಗಿದರು.

ಮೋದಿ ಮುಂತಾದವರ ನಾಮಬಲದೊಂದಿಗೆ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ಅತೀವ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ಚುನಾವಣೆಯಲ್ಲಿ ಸೋತು ಮುಖಭಂಗಕ್ಕೀಡಾಗಿದ್ದರ ಹಿಂದೆ ಡಿ ಕೆಂಪಣ್ಣ ಅವರ ಮೌನಕ್ರಾಂತಿ ಇದೆ; ಅವರ ಭ್ರಷ್ಟಾಚಾರ ವಿರೋಧಿ ಹೋರಾಟವಿದೆ. 80 ವರ್ಷದ ದಿಟ್ಟ ಹೋರಾಟಗಾರ ಡಿ ಕೆಂಪಣ್ಣ ಈ ಚುನಾವಣೆಯ ಹೀರೋ ಎಂದರೆ ತಪ್ಪಾಗಲಾರದು.                

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X