ಜಿಂಬಾಬ್ವೆ ತಂಡವು ಕೀನ್ಯಾದ ನೈರೋಬಿಯಲ್ಲಿ ನಡೆದ ಟಿ20 ವಿಶ್ವಕಪ್ ಸಬ್ರೀಜನಲ್ ಆಫ್ರಿಕಾ ಕ್ವಾಲಿಫೈಯರ್ ಗ್ರೂಪ್ ಬಿ ಪಂದ್ಯದ ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ಒಂದೇ ಪಂದ್ಯದಲ್ಲಿ ಜಿಂಬಾಬ್ವೆ ತಂಡ 7 ವಿಶ್ವದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.
ದಾಖಲೆ 1: ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 344 ರನ್ ಗಳಿಸಿತು. ಇದು ಟಿ20 ಕ್ರಿಕೆಟ್ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜಿಂಬಾಬ್ವೆ ಟಿ20ಯಲ್ಲಿ ಗರಿಷ್ಠ ರನ್ ದಾಖಲೆ ಬರೆದಿದ್ದ ನೇಪಾಳದ ವಿಶ್ವದಾಖಲೆಯನ್ನು ಮುರಿದಿದೆ.
ದಾಖಲೆ 2: ಈ ಮೊದಲು ನೇಪಾಳ 2023ರಲ್ಲಿ ಮಂಗೋಲಿಯಾ ವಿರುದ್ಧ ಮೂರು ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತ್ತು. 3ನೇ ಸ್ಥಾನದಲ್ಲಿ ಭಾರತ ತಂಡವಿದ್ದು, ಬಾಂಗ್ಲಾದೇಶದ ವಿರುದ್ಧ ಇತ್ತೀಚೆಗೆ 297 ರನ್ಗಳಿಸಿತ್ತು. ನಂತರ ಅಫ್ಘಾನಿಸ್ತಾನ (278/3 ವಿರುದ್ಧ ಐರ್ಲೆಂಡ್) ಮತ್ತು ಜೆಕ್ ರಿಪಬ್ಲಿಕ್ (278/4 ವಿರುದ್ಧ ಟರ್ಕಿ) 4 ಮತ್ತು 5ನೇ ಸ್ಥಾನಗಳಿಸಿವೆ.
ದಾಖಲೆ 3: ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕಲೆಹಾಕಿದ 344 ರನ್ಗಳಲ್ಲಿ 282 ರನ್ಗಳು ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ಬಂದವು. ಈ ಮೂಲಕ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳ ಮೂಲಕ ದೊಡ್ಡ ಮೊತ್ತದ ರನ್ ಕಲೆಹಾಕಿದ ಮೊದಲ ತಂಡ ಎಂಬ ವಿಶ್ವದಾಖಲೆ ಸಹ ಜಿಂಬಾಬ್ವೆ ಪಾಲಾಗಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಬೌಂಡರಿಗಳ ನೆರವಿನಿಂದ 232 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಈ ದಾಖಲೆ ಇತ್ತು.
ದಾಖಲೆ 4: ಈ ಪಂದ್ಯದಲ್ಲಿ ಬರೋಬ್ಬರಿ 27 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಿಂಬಾಬ್ವೆ ತಂಡ, ಟಿ20 ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ತಂಡವೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಹಿಂದೆ ಈ ದಾಖಲೆ 26 ಸಿಕ್ಸರ್ ಬಾರಿಸಿದ್ದ ನೇಪಾಳ ತಂಡದ ಹೆಸರಿನಲ್ಲಿತ್ತು.
ಈ ಸುದ್ದಿ ಓದಿದ್ದೀರಾ? ಮಹಿಳೆಯರ ಟಿ20 ವಿಶ್ವಕಪ್: ನ್ಯೂಜಿಲೆಂಡ್ ಚೊಚ್ಚಲ ಚಾಂಪಿಯನ್
ದಾಖಲೆ 5: ಗ್ಯಾಂಬಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೇವಲ 12.5 ಓವರ್‌ಗಳಲ್ಲಿ 200 ರನ್ ಪೂರೈಸಿತು. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 200 ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೂ ಜಿಂಬಾಬ್ವೆ ಪಾತ್ರವಾಗಿದೆ. ಈ ಹಿಂದೆ 13.5 ಓವರ್‌ಗಳಲ್ಲಿ ಈ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾ ಹೆಸರಲ್ಲಿ ಈ ದಾಖಲೆ ಇತ್ತು.
ದಾಖಲೆ 6: ಇನ್ನು ಜಿಂಬಾಬ್ವೆ ನೀಡಿದ 344 ರನ್‌ಗಳ ಗುರಿ ಬೆನ್ನಟ್ಟಿದ ಗ್ಯಾಂಬಿಯಾ ತಂಡ ಕೇವಲ 54 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಜಿಂಬಾಬ್ವೆ ತಂಡ ಬರೋಬ್ಬರಿ 290 ರನ್‌ಗಳ ಅಂತರದ ಜಯ ಸಾಧಿಸಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಅಂತರದ ಗೆಲುವು ದಾಖಲಿಸಿದ ದಾಖಲೆಯೂ ಜಿಂಬಾಬ್ವೆ ಪಾಲಾಗಿದೆ.
ದಾಖಲೆ 7: ಒಂದು ಪಂದ್ಯದಲ್ಲಿ 30 ಬೌಂಡರಿಗಳು ಹರಿದು ಬಂದಿದ್ದು ಕೂಡ ವಿಶ್ವ ದಾಖಲೆಗಾಗಿದೆ. ಅದೇ ರೀತಿ ಮೂವರು ಅರ್ಧ ಶತಕ ಗಳಿಸಿದ್ದು ಕೂಡ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿತು.
ತಂಡದ ವೈಯಕ್ತಿಕ ದಾಖಲೆ: ಜಿಂಬಾಬ್ವೆಯ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಸಿಕಂದರ್ ರಾಝಾ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದರು. ಇದರೊಂದಿಗೆ ಐಸಿಸಿಯ ಪೂರ್ಣ ಸದಸ್ಯ ತಂಡದ ಆಟಗಾರನೊಬ್ಬ ಸಿಡಿಸಿದ ವೇಗದ ಶತಕ ಎಂಬ ದಾಖಲೆ ರಾಝಾ ಅವರ ಪಾಲಾಯಿತು. ಇದಲ್ಲದೆ ಅವರು 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಮುರಿದರು. ಸಿಕಂದರ್ ರಾಝಾ ತಮ್ಮ ಬ್ಯಾಟಿಂಗ್‌ನಲ್ಲಿ 43 ಚೆಂಡುಗಳಲ್ಲಿ 15 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು.
ಜಿಂಬಾಬ್ವೆಯ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‌ಗಳಿಗೆ ಕುಸಿಯಿತು. ಆಂಡ್ರೆ ಜಾರ್ಜು (12) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಜಿಂಬಾಬ್ವೆ ಬೌಲರ್‌ಗಳಲ್ಲಿ ರಿಚರ್ಡ್ ಮತ್ತು ಬ್ರಾಂಡನ್ ತಲಾ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
