ಜಮ್ಮು ಕಾಶ್ಮೀರ ಭಾರತ ಇಲ್ಲವೇ ಪಾಕಿಸ್ತಾನಕ್ಕೆ ಸೇರದೆ ಸ್ವತಂತ್ರವಾಗಿ ಉಳಿಯಲು ಬಯಸುತ್ತದೆ. ಆ ಸಂದರ್ಭದಲ್ಲಿ ಅದರ ಮೇಲೆ ಪಾಕಿಸ್ತಾನ ಅಕ್ರಮಣ ಮಾಡಲು ಬರುತ್ತದೆ. ಆಗ ರಾಜ ಹರಿಸಿಂಗ್ ತಮ್ಮ ದೇಶವನ್ನು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ವಿಲೀನ ಮಾಡಿಕೊಳ್ಳುತ್ತಾರೆ. ಆ ದಿನವನ್ನು ನಾವು ಅಕ್ಟೋಬರ್ 26ರಂದು ವಿಲೀನ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಸಮರ್ಪಣಾ ಟ್ರಸ್ಟಿನ ಅಧ್ಯಕ್ಷ ಜಯಶಂಕರ್ ನೆನಪಿಸಿಕೊಂಡರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಡತನಾಳ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ 26ರಂದು ನಡೆದ ಜಮ್ಮು ಕಾಶ್ಮೀರ ವಿಲೀನ ದಿನ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಶಾಲತಾ ಪುಟ್ಟೆಗೌಡ ಹಾಗೂ ಮಾಲಾರ ಪುಟ್ಟಯ್ಯರಿಗೆ ವಿಶ್ವಜ್ಞಾನಿ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1947ರ ಅಕ್ಟೋಬರ್ 26ರಂದು ಮಹಾರಾಜ ಹರಿಸಿಂಗ್ ಭಾರತ ಒಕ್ಕೂಟ ಸೇರ್ಪಡೆಯ ಒಪ್ಪಂದಕ್ಕೆ ಸಹಿ ಹಾಕಿದಾಗ, ಜಮ್ಮು ಮತ್ತು ಕಾಶ್ಮೀರವು ಭಾರತದ ಡೊಮಿನಿಯನ್ ಸೇರಿದ ದಿನವನ್ನು ವಿಲೀನ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದು 2020ರಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕೃತ ಸಾರ್ವಜನಿಕ ರಜಾ ದಿನವಾಗಿ ಘೋಷಿಸಲಾಯಿತು.
2015ರ ಮೈಸೂರು ದಸರಾ ಉದ್ಘಾಟನೆ ಮಾಡಿದ ರೈತ ಮಾಲಾರ ಪುಟ್ಟಯ್ಯ ಮಾತನಾಡಿ, “ಎಲ್ಲಿಯ ಎಚ್ ಡಿ ಕೋಟೆ ಮಾಲಾರ, ಎಲ್ಲಿಯ ಶ್ರೀರಂಗಪಟ್ಟಣ ಕಡತನಾಳು. ನಾವು ಇಲ್ಲಿ ಬಂದು ವಿಶ್ವಜ್ಞಾನಿ ಅಂಬೇಡ್ಕರ್ ಪ್ರಶಸ್ತಿ ಪಡೆಯುತ್ತಿರುವುದು ನಮ್ಮ ಅದೃಷ್ಟ. ಇವತ್ತು ಎಲ್ಲ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಯಾವುದಾದರೂ ಸಣ್ಣ ಖಾಸಗಿ ಕೆಲಸಕ್ಕಾದರೂ ಹೋಗುತ್ತಿದ್ದಾರೆ. ರೈತರ ಮನೆಗೆ ಸೊಸೆಯಾಗಿ ಬರಲು ಒಪ್ಪುತಿಲ್ಲ. ಈ ಬೆಳವಣಿಗೆ ತಪ್ಪಬೇಕಿದೆ” ಎಂದು ರೈತರ ಕಷ್ಟವನ್ನು ತೋಡಿಕೊಂಡರು.
ರಂಗನಾಯಕಿ ಸಮಾಜದ ಆಶಾಲತಾ ಪುಟ್ಟೆಗೌಡ ಮಾತನಾಡಿ, “ವಿಶ್ವಜ್ಞಾನಿ ಅಂಬೇಡ್ಕರ್ ಪ್ರಶಸ್ತಿಗೆ ರೈತ ಕುಟುಂಬದ ನನ್ನನ್ನು ಪರಿಗಣಿಸಿರುವುದು ಖುಷಿಯ ವಿಚಾರ. ಮಾರುಕಟ್ಟೆಯಲ್ಲಿ ಕಾಳು, ಸೊಪ್ಪು ಮತ್ತು ತರಕಾರಿಗಳು ಉತ್ತಮ ಗುಣಮಟ್ಟದಲ್ಲಿ ಸಿಗುತಿಲ್ಲ. ಕಾಸು ಕೊಟ್ಟು ತಂದು ತಿನ್ನೋಣ ಅನ್ನುವ ಮನೋಭಾವ ಬಿಡಿ, ಮನೆಗೆ ಬೇಕಾದದನ್ನು ತಮ್ಮ ಹಿತ್ತಲಲ್ಲಿಯೇ ಒಂದಷ್ಟು ಬೆಳೆಯುವ ಖುಷಿಯೇ ಬೇರೆ. ನಿಮ್ಮ ಕೈಲಾದಷ್ಟು ಬೆಳೆದುಕೊಳ್ಳಿ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಭಿವೃದ್ಧಿ ದೃಷ್ಟಿಯಿಂದ ಕಾಂತರಾಜು ವರದಿ ಜಾರಿಯಾಗಬೇಕು: ಶೋಷಿತ ವರ್ಗಗಳ ಮುಖಂಡರಿಂದ ಸಭೆ
ಈ ಕಾರ್ಯಕ್ರಮದಲ್ಲಿ ವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಡಾ. ಕೆ ವೈ ಶ್ರೀನಿವಾಸ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಜಯಶಂಕರ್, ವಿಶ್ವಜ್ಞಾನಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ಎಚ್ ಡಿ ಕೋಟೆ ಎಂಜಿನಿಯರ್ ವಸಂತಕುಮಾರ್, ಕಾಳಪ್ಪ, ಚಂದ್ರು, ರಾಜಶೇಖರ್, ಮನೋಜ್, ಸಂತೋಷ್, ಸೂರ್ಯ ಕುಮಾರ್, ವಿಠ್ಠಲ್ ಸೇರಿದಂತೆ ಇತರರು ಇದ್ದರು