ಸ್ಮೃತಿ ಮಂಧಾನರ ವಿಶೇಷತೆ ಇರುವುದೇ, ಆಟದೊಂದಿಗೇ ಆಸಕ್ತಿಗಳನ್ನು ಮಿಳಿತಗೊಳಿಸಿರುವ ಬಗೆಯಲ್ಲಿ. ಒಂದಕ್ಕೊಂದು ಪ್ರೇರಕಶಕ್ತಿಯಂತೆ ಸಂಚಯಿಸಿಕೊಳ್ಳುವ ವಿಧಾನದಲ್ಲಿ. ಆ ಕಾರಣಕ್ಕಾಗಿಯೇ ಇಂದು ಇಷ್ಟು ಎತ್ತರದ ಕ್ರಿಕೆಟ್ ಪಟುವಾಗಿ ಬೆಳೆಯಲು ಮತ್ತು ಉಳಿಯಲು ಸಾಧ್ಯವಾಗಿರುವುದು.
ನಿನ್ನೆ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ ಮಂಧಾನ, ಇಂದಿನ ಸುದ್ದಿ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹಾಗೆಯೇ ಆಕೆಯ ಅಭಿಮಾನಿಗಳು, ಆಕೆಯ ಹತ್ತು ಹಲವು ಕುತೂಹಲಕರ ಸಂಗತಿಗಳನ್ನೂ ಮೆರೆಸುತ್ತಿದ್ದಾರೆ.
28ರ ಹರೆಯದ ಸ್ಮೃತಿ, ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಸಿಕ್ಕಾಪಟ್ಟೆ ಆಸೆ, ಆಸಕ್ತಿ ಬೆಳೆಸಿಕೊಂಡವರು. ಅದಕ್ಕೆ ತಕ್ಕಂತೆ ಮನೆಯಲ್ಲಿಯೇ ಅಪ್ಪ ಮತ್ತು ಅಣ್ಣ ಕ್ರಿಕೆಟರ್‍ಗಳಾಗಿ, ಆಕೆಯ ಕಣ್ಣಮುಂದಿನ ಹೀರೋಗಳಾಗಿದ್ದರು. ಕ್ರಿಕೆಟ್ ಕುರಿತು ಚರ್ಚಿಸುತ್ತಿದ್ದರು. ಅದು ಆಕೆಯಲ್ಲಿ ಅಭಿರುಚಿಯಾಗಿ ಬೀಜ ಬಿತ್ತುವಲ್ಲಿ, ಬೆಳೆಯುವಲ್ಲಿ ನೆರವಾಗಿದ್ದರು.
ಸ್ಮೃತಿಯವರ ತಂದೆ ಕೆಮಿಕಲ್ ಸರಬರಾಜುದಾರರು. ಅಮ್ಮ ಮನೆಯ ಜವಾಬ್ದಾರಿ ಹೊತ್ತವರು. ಸಾಧಾರಣ ಮಾರ್ವಾರಿ ಮಧ್ಯಮ ವರ್ಗದ ಕುಟುಂಬ. ಸ್ಮೃತಿ ಜನಿಸಿದ್ದು ಮುಂಬೈನಲ್ಲಿ. ಆ ನಂತರ ಅವರ ಕುಟುಂಬ ಮುಂಬೈ ಹೊರವಲಯದ ಸಾಂಗ್ಲಿಯ ಮಾಧವನಗರಕ್ಕೆ ವಾಸ ಬದಲಿಸುತ್ತದೆ. ಅಲ್ಲಿಯೇ ಸ್ಮೃತಿಯವರ ಬಾಲ್ಯ, ಪದವಿ ಶಿಕ್ಷಣವೆಲ್ಲ ಮುಗಿಯುತ್ತದೆ.
ಅದೇ ಸಂದರ್ಭದಲ್ಲಿ ಅಪ್ಪ, ಸಾಂಗ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ತಂಡದ ಆಟಗಾರರಾಗಿ ಆಡಿ, ಹೆಸರು ಪಡೆದಿದ್ದರು. ಸ್ಮೃತಿಯ ಅಣ್ಣ ಕೂಡ ಮಹಾರಾಷ್ಟ್ರ ಅಂಡರ್-16 ತಂಡಕ್ಕೆ ಆಯ್ಕೆಯಾಗಿ ಆಡಿದ್ದನ್ನು ನೋಡಿದ್ದರು. ಅದು ಆಕೆಯಲ್ಲಿ ಕ್ರಿಕೆಟ್‌ನತ್ತ ಒಲವು ಮೂಡಿಸಿ, ಮೈದಾನವೇ ಮನೆಯಾಯಿತು. ಅದಕ್ಕೆ ಅಪ್ಪ-ಅಣ್ಣ ಆಸರೆಯಾಗಿ ನಿಂತರೆ, ನಿನಗಿಷ್ಟ ಬಂದದ್ದನ್ನು ಮಾಡು ಎಂದ ಅಮ್ಮನ ಮಾತು ಪ್ರೇರಣೆ ನೀಡಿತು. ತಂದೆ ಶ್ರೀನಿವಾಸ್ ಮಂಧಾನ ಆಕೆಯ ಕ್ರಿಕೆಟ್ ಆಸಕ್ತಿಯನ್ನು ಮೈದಾನದಲ್ಲಿ ನಿರ್ವಹಿಸಿದರೆ, ತಾಯಿ ಸ್ಮಿತಾ ಮಂಧಾನ ಅವರ ಆಹಾರಕ್ರಮ ಮತ್ತು ಇತರ ಸಾಂಸ್ಥಿಕ ಅಂಶಗಳನ್ನು ನೋಡಿಕೊಂಡರು. ಈ ಬೆಂಬಲ ಅವಳನ್ನು ಮೈದಾನದಲ್ಲಿ ಮತ್ತು ಅಧ್ಯಯನದಲ್ಲಿ ಎರಡನ್ನೂ ನಿಭಾಯಿಸುವಲ್ಲಿ ಅನುವು ಮಾಡಿಕೊಟ್ಟಿತು.
ಸ್ಮೃತಿ ಒಂಬತ್ತು ವರ್ಷದವಳಾಗಿದ್ದಾಗಲೇ, ಮಹಾರಾಷ್ಟ್ರ ಅಂಡರ್-15 ತಂಡಕ್ಕೆ ಆಯ್ಕೆಯಾದಳು. 11 ವರ್ಷದವಳಾದಾಗ ಅಂಡರ್-19ರ ತಂಡದಲ್ಲಿದ್ದಳು. 2013, ಸ್ಮೃತಿ ಕ್ರಿಕೆಟ್ ಬದುಕಿನಲ್ಲಿ ಮರೆಯಲಾರದ ವರ್ಷವಾಗಿತ್ತು. ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ, ಏಕದಿನ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದು, ಆಕೆಯ ಹಣೆಬರಹವನ್ನು ಬದಲಿಸಿತು. ಮೊತ್ತ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆ ಬರೆಯಿತು. ಕ್ರಿಕೆಟ್ ಲೋಕದಲ್ಲಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿತ್ತು. ಆನಂತರ, ಮಹಾರಾಷ್ಟ್ರ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ 150 ಬಾಲ್ ಗಳಲ್ಲಿ 224 ರನ್ ಬಾರಿಸಿ, ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿತ್ತು.
ಇದನ್ನು ಓದಿದ್ದೀರಾ?: ಸ್ಮೃತಿ ಮಂದಾನ ಶತಕದ ದಾಖಲೆ: ಟಿ20 ಚಾಂಪಿಯನ್ನರನ್ನು ಮಣಿಸಿದ ಭಾರತದ ವನಿತೆಯರು
2013ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಪಾದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಎನಿಸಿಕೊಂಡ ಸ್ಮೃತಿಗೆ ಆಗ ವಯಸ್ಸು ಕೇವಲ 17. 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ತಂಡಕ್ಕೂ ಆಯ್ಕೆಯಾದರು. ಬಲಗೈ ಬೌಲರ್ ಆಗಿ, ಎಡಗೈ ಬ್ಯಾಟರ್ ಆಗಿ, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ವಿಶೇಷ ಸ್ಥಾನ ಪಡೆದಿರುವ ಸ್ಮೃತಿ, ದಾಖಲೆಗಳನ್ನು ಪೇರಿಸುತ್ತಲೇ ಸಾಗಿದರು. ಇಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಐಸಿಸಿ ಮಹಿಳಾ ಟಿ20 ತಂಡದಲ್ಲಿ ಎರಡು ಸಲ- 2018 ಮತ್ತು 2019ರಲ್ಲಿ- ಸ್ಥಾನ ಪಡೆಯುವ ಮೂಲಕ ಭಾರತದ ಏಕಮಾತ್ರ ಮಹಿಳಾ ಕ್ರಿಕೆಟ್ ಪಟು ಎನಿಸಿಕೊಂಡಿದ್ದಾರೆ.
ಕೆಲವು ಮಾಧ್ಯಮಗಳ ಪ್ರಕಾರ ಈಗ ಸ್ಮೃತಿ ಮಂಧಾನರ ಆಸ್ತಿ ಸುಮಾರು 33 ಕೋಟಿ ರೂಪಾಯಿಗಳು. ಅಂತಾರಾಷ್ಟ್ರಿಯ ಮಟ್ಟದ ಮಹಿಳಾ ಕ್ರಿಕೆಟ್ ಪಟುಗಳ ಪೈಕಿ, ಈಕೆಯೇ ಸದ್ಯಕ್ಕೆ ಅತಿ ಶ್ರೀಮಂತೆ. ಬಿಸಿಸಿಐ ಒಪ್ಪಂದಕ್ಕೆ ಸಹಿ ಹಾಕಿ, ವರ್ಷಕ್ಕೆ 50 ಲಕ್ಷ ಸಂಬಳ ಪಡೆಯುವ ಸ್ಮೃತಿ, ಭಾರತೀಯ ಮೊದಲ ಮಹಿಳಾ ಕ್ರಿಕೆಟ್ ಪಟು.
ಸ್ಮೃತಿಗೆ ಕಂಪ್ಯೂಟರ್ ಗೇಮ್ ತುಂಬಾ ಇಷ್ಟದ ಆಟ. ಮೈದಾನದಲ್ಲಿ ದೈಹಿಕ ಕಸರತ್ತಿನ ಕ್ರಿಕೆಟ್ ಆಟ ಮುಗಿದ ನಂತರ, ರಿಲ್ಯಾಕ್ಸ್‌ಗಾಗಿ ಆಕೆ ಆಯ್ಕೆ ಮಾಡಿಕೊಳ್ಳುವುದು ಕಂಪ್ಯೂಟರ್ ಗೇಮ್ ಅನ್ನು. ಅದೇಕೆಂದರೆ, ಆ ಆಟದಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಬೇಕಿರುತ್ತದೆ ಮತ್ತು ವೇಗಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕಾಗಿರುತ್ತದೆ. ಇದು ಬುದ್ಧಿಯನ್ನು ಬೇಡುತ್ತದೆ, ಮಿದುಳನ್ನು ಚುರುಕುಗೊಳಿಸುತ್ತದೆ ಮತ್ತು ತನ್ನನ್ನು ತಾನು ಸದಾ ಸಿದ್ಧಳಾಗಿರುವಂತೆ ಪ್ರೇರೇಪಿಸುತ್ತದೆ ಎನ್ನುತ್ತಾರೆ.

ಸ್ಮೃತಿಯ ಮತ್ತೊಂದು ಮುಖ್ಯ ಆಸಕ್ತಿಕರ ಅಭ್ಯಾಸವೆಂದರೆ ಅಡುಗೆ. ಆಕೆ ಈಗಲೂ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿಯೇ ಕಳೆಯುವುದು. ಪಂಜಾಬಿ ಶೈಲಿಯ ಅಡುಗೆ ಎಂದರೆ ಬಹಳ ಇಷ್ಟ- ಅದರಲ್ಲೂ ಪನ್ನೀರ್ ಟಿಕ್ಕಾ ಮಸಾಲ ಆಕೆಯ ಫೇವರಿಟ್ ಡಿಷ್. ಈಗಲೂ ಹಲವರಿಗೆ ಆನ್‌ಲೈನ್ ಅಡುಗೆ ಕ್ಲಾಸ್ ತೆಗೆದುಕೊಳ್ಳುವ ಸ್ಮೃತಿ, ಹೊಸ ಹೊಸ ಖಾದ್ಯಗಳ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ ಉಳಿಸಿಕೊಂಡವರು. ಅಡುಗೆ ಮಾಡುವುದು ಸಹನೆ, ತಾಳ್ಮೆ ಬೇಡುವ ಕೆಲಸ. ಅದು ಅವರಿಗೆ ಪಿಚ್‌ನಲ್ಲಿ ಸಹನೆಯಿಂದ ನಿಲ್ಲುವ ಪಾಠ ಕಲಿಸಿದೆ ಎನ್ನುತ್ತಾರೆ.
ಸ್ಮೃತಿಯ ಬಹು ಪ್ರಿಯವಾದ ಮತ್ತೊಂದು ಹವ್ಯಾಸವೆಂದರೆ ಪ್ರವಾಸ. ಅದರಲ್ಲೂ ಆಕೆ ಬಹಳವಾಗಿ ಇಷ್ಟಪಡುವ ದೇಶವೆಂದರೆ ಸ್ವಿಟ್ಜರ್‍ಲೆಂಡ್ ಮತ್ತು ಆಸ್ಟ್ರೇಲಿಯಾ. ಕಾಡು ಸುತ್ತುವುದು, ಬೆಟ್ಟ ಹತ್ತುವುದು ಎಂದರೆ ಸದಾ ಸಿದ್ಧ.
ಸ್ಮೃತಿ ಮೈದಾನದಲ್ಲಿ ನಿಂತು ಕ್ರಿಕೆಟ್ ಆಡುತ್ತಿಲ್ಲವೆಂದರೆ, ಅಡುಗೆ ಮನೆಯಲ್ಲಿದ್ದಾರೆಂದು ಅರ್ಥ. ಅಲ್ಲೂ ಇಲ್ಲವೆಂದರೆ, ಆಕೆಯ ಮತ್ತೊಂದು ಪ್ರಿಯವಾದದ್ದು ನಿದ್ರೆ ಮಾಡುವುದು. ಸಮಯ ಸಿಕ್ಕಾಗ ಸಿನೆಮಾ ನೋಡುವುದು. ಸ್ಮೃತಿಯ ವಿಶೇಷತೆ ಇರುವುದೇ, ಆಟದೊಂದಿಗೇ ಆಸಕ್ತಿಗಳನ್ನು ಮಿಳಿತಗೊಳಿಸಿರುವ ಬಗೆಯಲ್ಲಿ. ಒಂದಕ್ಕೊಂದು ಪ್ರೇರಕಶಕ್ತಿಯಂತೆ ಸಂಚಯಿಸಿಕೊಳ್ಳುವ ವಿಧಾನದಲ್ಲಿ. ಆ ಕಾರಣಕ್ಕಾಗಿಯೇ ಇಂದು ಇಷ್ಟು ಎತ್ತರದ ಕ್ರಿಕೆಟ್ ಪಟುವಾಗಿ ಬೆಳೆಯಲು ಮತ್ತು ಉಳಿಯಲು ಸಾಧ್ಯವಾಗಿರುವುದು. ಇನ್ನು ಆಕೆಯನ್ನು ಅರಸಿ ಬಂದಿರುವ ಪ್ರಶಸ್ತಿಗಳು, ಅವುಗಳ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ ಎಂದೇ ಹೇಳಬೇಕು.
ಹೆಣ್ಣುಮಕ್ಕಳು ಎಂದಾಕ್ಷಣ, ಅದು ಬೇಡ, ಇದು ಬೇಡ ಎಂದು ಕಟ್ಟಿಹಾಕುವ; ಸಂಗೀತ-ನೃತ್ಯವೇ ಸಾಕು ಎನ್ನುವ; ಮದುವೆ-ಮನೆ-ಮಕ್ಕಳಿಗೆ ಸೀಮಿತವಾಗುವುದೇ ಸಾರ್ಥಕ್ಯ ಬದುಕೆನ್ನುವ, ಎಷ್ಟೇ ಸಾಧನೆ ಮಾಡಿದರೂ ಸರಿಸಮಾನವಾಗಿ ಕಾಣದ, ಗೌರವಿಸದ, ಪುರಸ್ಕರಿಸದ ಕಾಲದಲ್ಲಿ- ಸ್ಮೃತಿ ಮಂಧಾನರ ಪೋಷಕರು, ಆಕೆಯ ಇಷ್ಟದಂತೆ ಆಡಲು ಬಿಟ್ಟು ನೋಡುತ್ತಾ ಕೂತಿದ್ದಾರಲ್ಲ- ಅದೇ ಒಂದು ಚಂದದ ಕತೆ.

ಲೇಖಕ, ಪತ್ರಕರ್ತ