ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಡಾ.ಅಂಬೇಡ್ಕರ್ ಕಲಾ, ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ, ಕನ್ನಡ ವಿಭಾಗ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ, ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ ಎರಡು ದಿನದ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಗಾಂಧಿ ಭವನದಲ್ಲಿ ನಡೆಯಿತು.
“ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು ಗುಲ್ಬರ್ಗಾ ವಿ.ವಿಯಲ್ಲಿ ಕಲ್ಯಾಣ ಕರ್ನಾಟಕದ ಬಯಲಾಟ ಸಂಶೋಧನ ಕೇಂದ್ರ ಮತ್ತು ಬಯಲಾಟ ರಂಗ ಮಂದಿರವನ್ನು ನಿರ್ಮಾಣ ಮಾಡಬೇಕಿದೆ. ಕಲ್ಯಾಣ ಕರ್ನಾಟಕದ ಹೊಸ ಪೀಳಿಗೆಯ ರಾಜಕಾರಣಿಯ ಸಾಂಸ್ಕೃತಿಕ ರಾಜಕಾರಣ ಮಾಡಬೇಕಾಗುತ್ತದೆ. ಕಲ್ಯಾಣ ಕರ್ನಾಟಕದ ತರುಣ ವಿದ್ವಾಂಸರು ಇಲ್ಲಿನ ಸಮಸ್ಯೆಗಳ ಬಗ್ಗೆ ಧನಿ ಎತ್ತುತ್ತಿಲ್ಲ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್ ಟಿ ಪೋತೆ ತಿಳಿಸಿದರು.
“ಗುಲ್ಬರ್ಗಾ ವಿ.ವಿಯಲ್ಲಿ ಕನ್ನಡ ಮತ್ತು ಜಾನಪದ ಎಂ.ಎ ಆರಂಭವಾಗಿ 44 ವರ್ಷಗಳಾದವು. ಪದವಿ ತರಗತಿಗಳಿಗೆ ಜಾನಪದ ವಿಶೇಷ ಪತ್ರಿಕೆಯನ್ನು ಅಳವಡಿಸಬೇಕು. ಪದವಿ ಓದುವ ಮಕ್ಕಳಿಗೆ ಜಾನಪದ ಬಯಲಾಟಗಳ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಪ್ರತ್ಯೇಕ ಬಯಲಾಟ ಸಂಶೋಧನ ಕೇಂದ್ರ ಆದರೆ, ಬಯಲಾಟದ ಬಗ್ಗೆ ಹೊಸ ತಲೆಮಾರು ಅಧ್ಯಯನ ಮಾಡುವುದಕ್ಕೆ ನೆರವಾಗುತ್ತದೆ” ಎಂದು ತಿಳಿಸಿದರು.

“ಜನರ ಇತಿಹಾಸವನ್ನು ಮರು ಶೋಧಿಸಬೇಕಿದೆ. ಸಮಾಜದ ಎಲ್ಲರೂ ಘನತೆಯಿಂದ ಬದುಕುತ್ತಿದ್ದಾರೆಯೇ ಎಂದು ಹುಡುಕಿದರೆ ನಿರಾಸೆಯಾಗುತ್ತದೆ. ಜನಪದ ಕಲೆಗಳು ಬೆವರಿನಿಂದ ಹುಟ್ಟಿದ ಕಲೆಗಳು. ಅದರಲ್ಲೂ ಜನರ ಬದುಕನ್ನು ಹಸನು ಮಾಡಲು ಇದ್ದ ಕಲೆ ಯಾವುದು? ಎನ್ನುವುದನ್ನು ಮರುಶೋಧಿಸಬೇಕಿದೆ. ನಮ್ಮ ನಾಡು ಅವೈದಿಕ ಪರಂಪರೆಯ ನಾಡು, ಹಾಗಾಗಿ ನಮ್ಮ ಜನಪದ ಕಲೆಗಳಲ್ಲಿ ಅವೈದಿಕ ಪರಂಪರೆಯ ಬೇರುಗಳನ್ನು ಹುಡುಕಬೇಕಾಗಿದೆ. ನಮ್ಮ ಭಾಗದಲ್ಲಿ ಬುದ್ಧ ಬಸವ ಅಂಬೇಡ್ಕರ್ ಬಗ್ಗೆ ವ್ಯಾಪಕವಾಗಿ ಜನಪದ ಹಾಡುಗಳು ಹುಟ್ಟಿವೆ. ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾಯಿತು. ಆದರೆ ಇಲ್ಲಿನ ಜನರ ಬದಲಾವಣೆಯಾಗಿಲ್ಲ” ಎಂದು ಚಿಂತಕಿ ಕೆ.ನೀಲಾ ತಿಳಿಸಿದರು.
ಇದನ್ನೂ ಓದಿದ್ದೀರಾ?ಈ ದಿನ ಸಂಪಾದಕೀಯ | ಬೇಲೆಕೇರಿ ಬಹುಕೋಟಿ ಹಗರಣದತ್ತ ಮಾಧ್ಯಮಗಳ ಮೌನವೇಕೆ?
“ಬಯಲಾಟ ಅಕಾಡೆಮಿಯಿಂದ ಜಿಲ್ಲಾವಾರು ಬಯಲಾಟ ಕಲಾವಿದರನ್ನು ಶೋಧಿಸಲು, ಬಯಲಾಟಗಳ ಹಸ್ತಪ್ರತಿಗಳನ್ನು ಸಂಗ್ರಹಿಸಲು ಜಿಲ್ಲೆಗೆ ಒಬ್ಬರಂತೆ ಸಂಶೋಧಕ ಸಹಾಯಕರನ್ನು ಆಯ್ದುಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳ ಬಯಲಾಟಗಳ ಪುನರಾವಲೋಕನ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಪ್ರೊ. ಕೆ ಆರ್ ದುರ್ಗಾದಾಸ್ ಅವರ ಅಧ್ಯಕ್ಷತೆಯಲ್ಲಿ ಬಯಲಾಟ ಅಕಾಡೆಮಿಯು ಹಿಂದಿನ ಅವಧಿಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ” ಎಂದು ಬಯಲಾಟ ಅಕಾಡೆಮಿಯ ಸದಸ್ಯರಾದ ಡಾ. ಅರುಣ್ ಜೋಳದಕೂಡ್ಲಿಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.